ತೆಳ್ಳಾರು: 2ನೇ ಅಡ್ಡ ರಸ್ತೆ ಬದಿ ಅಪಾಯಕಾರಿ ಗುಂಡಿ!
ಪೈಪ್ ಸೋರಿಕೆ ತಡೆಯಲು ದುರಸ್ತಿಗೆ ತೆಗೆದಿಟ್ಟ ಹೊಂಡ
Team Udayavani, Mar 17, 2021, 4:40 AM IST
ಕಾರ್ಕಳ: ಪುರಸಭೆ ವ್ಯಾಪ್ತಿಯ ತೆಳ್ಳಾರು ರಸ್ತೆಯ ಎರಡನೇ ಅಡ್ಡರಸ್ತೆಯಲ್ಲಿ ಕುಡಿಯುವ ನೀರಿನ ಮುಖ್ಯ ಪೈಪ್ ಸೋರಿಕೆ ತಡೆಯಲೆಂದು ದುರಸ್ತಿಗಾಗಿ ತೆಗೆದಿಟ್ಟ ಹೊಂಡವನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದು, ಇದು ಸಂಚಾರಕ್ಕೆ ಅಪಾಯ ಉಂಟಾಗಿದೆ.
ರಸ್ತೆ ಬದಿಯಲ್ಲೇ ಹೊಂಡ ತೆಗೆಯಲಾಗಿದ್ದು ಪೈಪ್‌ನಿಂದ ನೀರು ಸೋರಿಕೆಯಾಗಿ ಗುಂಡಿಯಲ್ಲಿ ತುಂಬಿದೆ. ಇದು ರಸ್ತೆ ಅಂಚಿನಲ್ಲೇ ಕಳೆದ ಒಂದು ತಿಂಗಳಿಂದಲೂ ಇದೇ ಸ್ಥಿತಿಯಲ್ಲಿ ಇದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕುಡಿಯುವ ನೀರಿನ ಪೈಪ್ ಸೋರಿಕೆಯಾಗುತಿದ್ದ ವೇಳೆ ಸೋರಿಕೆ ತಪ್ಪಿಸಲು ದುರಸ್ತಿ ಮಾಡಲಾಗಿತ್ತು. ಒಂದು ತಿಂಗಳ ಹಿಂದೆಯೇ ಕಾಮಗಾರಿ ನಡೆಸಲಾಗಿದ್ದು. ಅನಂತರ ಗುಂಡಿ ಮುಚ್ಚದೆ ಹಾಗೆಯೇ ಬಿಡಲಾಗಿದೆ. ಸೋರಿಕೆ ಪೈಪ್ ರಿಪೇರಿ ಮಾಡದೆ ಹಾಗೆಯೇ ಬಿಟ್ಟಿದ್ದಾರೋ ಇಲ್ಲವೇ ದುರಸ್ತಿಪಡಿಸಿದ ಬಳಿಕ ಮುಚ್ಚಲು ಮರೆತಿದ್ದಾರೋ ಎನ್ನುವ ಬಗ್ಗೆ ಸ್ಥಳಿಯರಲ್ಲೂ ಮಾಹಿತಿಯಿಲ್ಲ. ಇದೇ ಮಾರ್ಗವಾಗಿ ದ್ವಿಚಕ್ರ ವಾಹನ ಸವಾರರು, ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳು ಎಲ್ಲರೂ ಈ ಗುಂಡಿ ಬದಿಯಲ್ಲೇ ತೆರಳುತ್ತಿದ್ದು, ಈ ವೇಳೆ ನೀರು ತುಂಬಿದ ಗುಂಡಿಗೆ ಅರಿವಿಲ್ಲದೆ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆಯಿದೆ. ಈ ಗುಂಡಿ ಶೀಘ್ರ ಮುಚ್ಚುವುದು ಅಗತ್ಯ.