ಕಲಬುರಗಿಗೆ ಬಾರದ ಡಿಸಿಎಂ ಗೋವಿಂದ ಕಾರಜೋಳ

Team Udayavani, Jan 25, 2020, 3:10 AM IST

ಕಲಬುರಗಿ: 32 ವರ್ಷಗಳ ನಂತರ ಕಲಬುರಗಿಯಲ್ಲಿ ನಡೆಯಲಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇವಲ 11 ದಿನ ಬಾಕಿ ಉಳಿದಿದ್ದು, ಸಮ್ಮೇಳನದ ಸಿದ್ಧತೆ ಬಹಳಷ್ಟಾಗಬೇಕಿದೆ. ಕಲಬುರಗಿ ಮಹಾನಗರ ಹಾಗೂ ಜಿಲ್ಲೆಯಲ್ಲಿ ಸಮ್ಮೇಳನ ಕುರಿತು ಇನ್ನೂ ಹಬ್ಬದ ವಾತಾವರಣ ಮೂಡಿಲ್ಲ. ಹಿಂದಿನ ಎಲ್ಲ ಸಮ್ಮೇಳನ ದಾಖಲೆ ಮುರಿಯುವಂತೆ ಪ್ರಸ್ತುತ ಸಮ್ಮೇಳನಕ್ಕೆ 20 ಸಾವಿರ ಪ್ರತಿನಿಧಿಗಳ ನೋಂದಣಿಯಾಗಿದೆ.

ಇವರಿಗೆಲ್ಲ ಅಗತ್ಯ ವಸತಿ, ಸಾರಿಗೆ ಸೌಕರ್ಯ ಕಲ್ಪಿಸುವುದು ಸೇರಿ ನಾಡಿನಾದ್ಯಂತ ಬರುವ ಲಕ್ಷಕ್ಕೂ ಅಧಿಕ ಜನರಿಗೆ ಆತಿಥ್ಯ ಕಲ್ಪಿಸುವುದು ಸವಾಲಾಗಿದೆ. ಹೀಗಾಗಿ ಸಿದ್ಧತೆ ಸಮರೋಪಾದಿಯಲ್ಲಿ ಸಾಗಬೇಕಿದೆ. ಆದರೆ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಮ್ಮೇಳನ ನಡೆಯುವ ಗುಲ್ಬರ್ಗ ವಿವಿ ಆವರಣದ ಸ್ಥಳವನ್ನೇ ಇಂದಿಗೂ ವೀಕ್ಷಿಸಿಲ್ಲ.

ಸಮ್ಮೇಳನಕ್ಕೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಸಿದ್ಧತೆಗೆ ಹೊಡೆತ ಬಿದ್ದಿದೆ. ಜಿಲ್ಲೆಯ ಶಾಸಕರು ತಲಾ 10 ಲಕ್ಷ ರೂ. ನೀಡುವಂತೆ ಆಂತರಿಕವಾಗಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಯಾರೊಬ್ಬ ಶಾಸಕರೂ ಹಣ ನೀಡಲು ಮುಂದೆ ಬಂದಿಲ್ಲ. ಬದಲಾಗಿ ತಿಂಗಳ ಗೌರವ ಧನ ಘೋಷಣೆ ಮಾಡಿದ್ದಾರೆ.

ಸಮ್ಮೇಳನದ ಸಂಚಾಲಕರಾಗಿರುವ ಜಿಲ್ಲಾಧಿಕಾರಿ ಬಿ.ಶರತ್‌ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಶ್ರಮಿಸುತ್ತಿದ್ದಾರೆ. ಮೊದಲು ಅಂದಾಜು 18 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ನಂತರ 14 ಕೋಟಿ ರೂ.ಗೆ ಇಳಿಕೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ಸಮ್ಮೇಳನಕ್ಕೆ ದೇಣಿಗೆ ನೀಡುವಂತೆ ಜಿಲ್ಲಾಧಿಕಾರಿಗಳು ಸಂಘ-ಸಂಸ್ಥೆಗಳಿಗೆ ಹಾಗೂ ಸರ್ಕಾರಿ ನೌಕರರಿಗೆ ಮನವಿ ಮಾಡಿದ್ದಾರೆ. ಮೂರು ದಿನಗಳ ಹಿಂದೆ ಅನುದಾನ ಬಿಡುಗಡೆ ನಿಟ್ಟಿನಲ್ಲಿ ಬೆಂಗಳೂರಿಗೆ ಹೋಗಿ ಬಂದಿದ್ದಾರೆ.

ಕೇವಲ ಎರಡು ಸಭೆ ನಡೆಸಿದ ಡಿಸಿಎಂ: ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಡಿಸಿಎಂ ಗೋವಿಂದ ಕಾರಜೋಳ ಸಮ್ಮೇಳನ ಸಂಬಂಧ ಕೇವಲ ಎರಡು ಸಭೆ ನಡೆಸಿದ್ದಾರೆ. ಒಂದು ಸ್ವಾಗತ ಸಮಿತಿ ರಚನಾ ಸಭೆ, ಮತ್ತೂಂದು ಉಪಸಮಿತಿ ಸಭೆ ನಡೆಸಿದ್ದನ್ನು ಬಿಟ್ಟರೆ, ನಂತರ ಯಾವುದೇ ಸಭೆ ನಡೆಸಿಲ್ಲ. ಆಶ್ಚರ್ಯಕರ ಸಂಗತಿ ಎಂದರೆ ಸಮ್ಮೇಳನವನ್ನು ಮೊದಲು ಗುಲ್ಬರ್ಗ ವಿವಿ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ನಂತರ ವಿವಿ ಪರೀಕ್ಷಾ ಭವನ ಹಿಂದುಗಡೆ ಪ್ರದೇಶ ಅಂತಿಮ ಮಾಡಲಾಯಿತು. ಆದರೆ ಈ ಸ್ಥಳವನ್ನು ಡಿಸಿಎಂ ಒಮ್ಮೆಯೂ ಅವಲೋಕಿಸಿಲ್ಲ. ಸಾಹಿತಿಗಳು, ಸಾಹಿತ್ಯಾಸಕ್ತರು “ಕಲಬುರಗಿ ಕಡೆ ಕಾರಜೋಳ ಸಾಹೇಬ್ರು ಕಾಲಿಡುವುದು ಯಾವಾಗ’ ಎಂದು ಪ್ರಶ್ನಿಸುತ್ತಿದ್ದಾರೆ.

ಮೆರವಣಿಗೆ 6 ಕಿ.ಮೀ. ಅಲ್ಲ, 3 ಕಿ.ಮೀ.!: ಸಮ್ಮೇಳನಾಧ್ಯಕ್ಷರಾಗಿ ಡಾ| ಎಚ್‌.ಎಸ್‌. ವೆಂಕಟೇಶಮೂರ್ತಿ ಆಯ್ಕೆಯಾದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಾಹಿತಿಗಳು ಸಮ್ಮೇಳನಾಧ್ಯಕ್ಷರಾಗಬೇಕಿತ್ತು ಎನ್ನುವ ಸಣ್ಣ ಅಪಸ್ವರ ಹಾಗೂ ಅಸಮಾಧಾನ ಉಂಟಾಗಿತ್ತು. ಒಂದು ಹಂತದಲ್ಲಿ ಸಮ್ಮೇಳನಾಧ್ಯಕ್ಷರ ಬದಲಾವಣೆಯಾದರೆ ಒಳಿತು ಎನ್ನುವ ಸಲಹೆಯೂ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಕೇಳಿ ಬಂದಿತ್ತು. ಈಗ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಎಲ್ಲಿಂದ ಪ್ರಾರಂಭವಾಗಬೇಕೆಂಬ ಗೊಂದಲ ಆರಂಭವಾಗಿದೆ.

ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕಲಬುರಗಿ ನಗರದ ಸಾರ್ವಜನಿಕ ಉದ್ಯಾನವನದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಿಂದ ಆರಂಭವಾಗುವುದು ಎಂದು ಪ್ರಕಟವಾಗಿದೆ. ಆದರೆ ಸಮ್ಮೇಳನದ ಮೆರವಣಿಗೆ ಆರು ಕಿ.ಮೀ. ದೂರವಾಗುವುದರಿಂದ ಕಡಿತ ಮಾಡಿ ನಗರದ ಸೇಡಂ ರಸ್ತೆಯ ಚಂದ್ರಕಾಂತ ಪಾಟೀಲ ಶಾಲೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೊರಡಬೇಕೆಂಬ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಆರು ಕಿ.ಮೀ. ದೂರವನ್ನು 3 ಕಿ.ಮೀ. ಸೀಮಿತಗೊಳಿಸಬೇಕೆಂಬ ಚರ್ಚೆ ಬಲವಾಗಿದೆ.

ನೌಕರರ ದೇಣಿಗೆಯೂ ಗೊಂದಲದಲ್ಲಿ: ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಮ್ಮೇಳನಕ್ಕೆ ನೀಡಲಿರುವ ಮೂರು ಕೋಟಿ ರೂ.ಗೂ ಅಧಿಕ ದೇಣಿಗೆ ಗೊಂದಲದಲ್ಲಿ ಮುಳುಗಿದೆ. ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಮೂರು ಕೋಟಿ ರೂ. ದೇಣಿಗೆ ಚೆಕ್‌ನ್ನು ಜಿಲ್ಲಾಧಿಕಾರಿ ಬಿ. ಶರತ್‌ ಅವರಿಗೆ ನೀಡಲು ಮುಂದಾಗುತ್ತಿದ್ದಂತೆ ಸಂಘದ ರಾಜ್ಯಾಧ್ಯಕ್ಷರು ಇದಕ್ಕೆ ತಡೆಯೊಡ್ಡಿದ್ದಾರೆ. ಸಮ್ಮೇಳನ ಸಂಬಂಧ ತಮ್ಮನ್ನು ವಿಶ್ವಾಸಕ್ಕೆ ತೆಗೆದು ಕೊಂಡಿಲ್ಲ. ಸಮ್ಮೇಳನದುದ್ದಕ್ಕೂ ಎಲ್ಲೂ ತಮ್ಮ ಹೆಸರು ಪ್ರಸ್ತಾಪಿಸಿಲ್ಲ. ನಮ್ಮನ್ನೇ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದಾದ ಮೇಲೆ ದೇಣಿಗೆ ನೀಡುವುದನ್ನು ಕಾಯ್ದು ನೋಡೋಣ ಎಂದಿದ್ದಾರಂತೆ. ಹೀಗಾಗಿ ಜ.24ರಂದು ಸಲ್ಲಿಸಬೇಕೆಂ ದಿರುವ ದೇಣಿಗೆ ಚೆಕ್‌ ಮುಂದಕ್ಕೆ ಹೋಗಿದೆ.

* ಹಣಮಂತರಾವ ಭೈರಾಮಡಗಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ