ಕಾಪಾಡು ತಾಯೆ.., ಮಹಾಮ್ಮಾಯೆ..

Team Udayavani, Nov 9, 2019, 3:09 AM IST

ಮೈಸೂರು/ಮಂಡ್ಯ: ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಟೆಂಪಲ್‌ ರನ್‌ ನಡೆಸಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌, ಶುಕ್ರವಾರ ಮೈಸೂರು, ಮಂಡ್ಯ ಭಾಗದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿದರು. ಮೊದಲಿಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ, ಸುತ್ತೂರು ಕ್ಷೇತ್ರಕ್ಕೆ ಆಗಮಿಸಿದ ಡಿಕೆಶಿ, ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಭಗವತ್ಪಾದರ ಗದ್ದಿಗೆಗೆ ಪೂಜೆ ಸಲ್ಲಿಸಿ, ಅರ್ಧಗಂಟೆಗೂ ಹೆಚ್ಚು ಕಾಲ ಧ್ಯಾನಾಸಕ್ತರಾದರು. ನಂತರ, ಆದಿಚುಂಚನಗಿರಿಯ ಮೈಸೂರು ಶಾಖಾ ಮಠ, ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ, ನಿಮಿಷಾಂಬ ದೇಗುಲ, ಮಂಡ್ಯದ ಶ್ರೀ ಕಾಳಿಕಾಂಬ ದೇವಾಲಯ, ಮದ್ದೂರಿನ ಮದ್ದೂರಮ್ಮ ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿ ಹಲವು ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.

* ಯಡಿಯೂರಪ್ಪನವರು ನೇರ ನುಡಿಯ ಮನುಷ್ಯ. ಯಾವುದೇ ವಿಚಾರವನ್ನೂ ಮುಚ್ಚು ಮರೆ ಮಾಡಲ್ಲ. ಆಡಿಯೋದಲ್ಲಿನ ಧ್ವನಿ ನನ್ನದೇ ಎಂದು ಅವರೇ ಹೇಳಿ ದ್ದಾರೆ. ಆದರೆ, ಕೆಲ ಸಂದರ್ಭದಲ್ಲಿ ಯಾಕಾಗಿ ಅವರು ತಮ್ಮ ಮಾತುಗಳನ್ನು ವಾಪಸ್‌ ಪಡೆಯುತ್ತಿದ್ದಾರೋ ಗೊತ್ತಿಲ್ಲ.

* ಅನರ್ಹ ಶಾಸಕರ ಕುರಿತ ಯಡಿಯೂರಪ್ಪ ಅವರ ಆಡಿಯೋ ವಿಚಾರವಾಗಿ ರಾಷ್ಟ್ರಪತಿಗೆ ಕಾಂಗ್ರೆಸ್‌ನಿಂದ ದೂರು ನೀಡುವ ಸಂಬಂಧ ಹೈಕಮಾಂಡ್‌ನಿಂದ ಮಾಹಿತಿ ಬಂದಿದೆ. ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ, ದಿನೇಶ್‌ ಗುಂಡೂರಾವ್‌ ಅವರೆಲ್ಲ ಈ ಪ್ರಕರಣದ ಅರ್ಜಿದಾರರಾಗಿದ್ದಾರೆ. ರಾಷ್ಟ್ರಪತಿಗಳು ಸಮಯ ಕೊಟ್ಟರೆ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ದೆಹಲಿಗೆ ಹೋಗಿ, ಭೇಟಿ ಮಾಡುತ್ತೇವೆ.

* ಜೈಲಿಂದ ಬಿಡುಗಡೆಯಾದ ಮೇಲೆ ಬಿಜೆಪಿಯ ಸಚಿವರು, ಶಾಸಕರು ನನ್ನ ಜೊತೆ ಮಾತನಾಡಿದ್ದಾರೆ. ರಾಜಕಾರಣ ಬೇರೆ- ಸ್ನೇಹ ಬೇರೆ. ಎಸ್‌.ಎಂ.ಕೃಷ್ಣ ನಮ್ಮ ಗುರುಗಳು. ಅವರು ಬೇರೆ ಪಾರ್ಟಿಯಲ್ಲಿದ್ದರೂ ಭೇಟಿ ಮಾಡಿ ಮಾತುಕತೆ ನಡೆಸಿದೆ.

* ಇ.ಡಿಯವರಂತೆ ಸಿಬಿಐನವರು ವರ್ತಿಸುವುದಿಲ್ಲ. ಕಾನೂನು ಪ್ರಕಾರನೇ ನಡೆಯುವ ಸಿಬಿಐ, ಒಂದು ಒಳ್ಳೆಯ ಸಂಸ್ಥೆ. ಆದರೆ, ಅದನ್ನು ಹೇಗೆ ದುರುಪಯೋಗ ಮಾಡಿಕೊಳ್ಳಲಾಗುತ್ತೆ ಅನ್ನೋದನ್ನು ನಾನು ಮಾತನಾಡಲ್ಲ. ನನಗೆ ನನ್ನ ಬಗ್ಗೆ ಸ್ಪಷ್ಟತೆ ಇರುವಾಗ ತನಿಖೆ ಬಗ್ಗೆ ನನಗೇಕೆ ಭಯ?.

* ನಾನೀಗ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ. ಈಗ ಪ್ರಬಲ ಮುಖ್ಯಮಂತ್ರಿಗಳಿದ್ದಾರೆ. ಮುಂಬರುವ ದಿನಗಳಲ್ಲಿ ನೋಡೋಣ.

* ಸದ್ಯ ನಾನು ಯಾವುದೇ ಸ್ಥಾನಮಾನದ ಬಗ್ಗೆ ಆಲೋಚನೆ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಈಗ ಚರ್ಚೆ ಮಾಡುವುದು ಬೇಡ. ಉಪ ಚುನಾವಣೆಯಲ್ಲಿ ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ಧನಿದ್ದೇನೆ. ವಿಧಾನಸಭಾ ಚುನಾವಣೆಗೆ ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ. ರಾಜ್ಯದಲ್ಲಿ ನಾನೊಬ್ಬನೇ ಟ್ರಬಲ್‌ ಶೂಟರ್‌ ಅಲ್ಲ. ಮೂರು ಪಕ್ಷಗಳಲ್ಲಿಯೂ ಅನುಭವಿ ರಾಜಕಾರಣಿಗಳಿದ್ದಾರೆ.

* ವಿಧಾನಸೌಧದಲ್ಲೂ ತಕ್ಕಡಿ ತೂಗುತ್ತಿರುತ್ತದೆ. ನ್ಯಾಯ ಯಾವ ಕಡೆ ಇದೆಯೋ ಆ ಕಡೆ ತೂಗುತ್ತದೆ. ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಸಿಗುತ್ತೆ. ಕಾಲಚಕ್ರ ತಿರುಗಿಸುತ್ತೇನೆ.

* ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ನಮ್ಮ ನಾಯಕರು. ನಾನೊಬ್ಬ ಶಾಸಕ. ಅವರ ಕೈ ಕೆಳಗೆ ನಾವು ಸದಸ್ಯರಾಗಿ ಕೆಲಸ ಮಾಡುತ್ತಿದ್ದೇವೆ.

* ನಾನು ಜೈಲಿನಲ್ಲಿದ್ದಾಗ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಮನೆಗೆ ಪ್ರಸಾದ ಕಳುಹಿಸಿ ಕೊಟ್ಟಿದ್ದರು. ಸುತ್ತೂರು ಶ್ರೀಗಳು, ನನ್ನ ಆರೋಗ್ಯ ಸರಿ ಇಲ್ಲದಿದ್ದಾಗ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಜೈಲಿನಿಂದ ಹೊರ ಬಂದಾಗ ವಿವಿಧ ದೇವಸ್ಥಾನಗಳಿಗೆ ಹರಕೆ ತೀರಿಸುವುದಾಗಿ ನನ್ನ ಪತ್ನಿ ಹರಕೆ ಹೊತ್ತುಕೊಂಡಿ ದ್ದಳು. ಅದರಂತೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೇನೆ.

* ನನ್ನ, ಜೆಡಿಎಸ್‌ ನಡುವಿನ ಪ್ರೀತಿ ವೈಯಕ್ತಿಕ ವಿಚಾರ.

ಒಟ್ಟಿಗೆ ಹಾರಾಡಿದ ಕೈ-ತೆನೆ ಬಾವುಟ: ಮಂಡ್ಯದಲ್ಲಿ ಡಿಕೆ ಶಿಗೆ ಕಾಂಗ್ರೆಸ್‌ ಮುಖಂಡರು ಪ್ರತ್ಯೇಕ ಸ್ವಾಗತ ನೀಡುವ ಮೂಲಕ ಪಕ್ಷ ದೊಳಗೆ ಒಗ್ಗಟ್ಟಿಲ್ಲದಿರುವುದನ್ನು ಸಾಬೀತುಪಡಿಸಿದರು. ಆದರೆ, ಎಲ್ಲೆಡೆ ಬೃಹತ್‌ ಸೇಬಿನ ಹಾರ ಹಾಕಿ, ಭವ್ಯ ಸ್ವಾಗತ ಕೋರಲಾಯಿತು. ಇದೇ ವೇಳೆ, ಜೆಡಿಎಸ್‌ ಮುಖಂಡರಿಂದಲೂ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಮೆರವಣಿಗೆಯುದ್ದಕ್ಕೂ ಕೈ-ತೆನೆ ಬಾವುಟಗಳು ಒಟ್ಟಿಗೆ ಹಾರಾಡಿದವು.

ಶಾಸಕ ರವೀಂದ್ರ ಶ್ರೀಕಂಠ ಯ್ಯನವರು ತಾವೇ ಕಾರು ಚಾಲನೆ ಮಾಡಿ, ಶ್ರೀರಂಗಪಟ್ಟಣದ ಟಿಪ್ಪು ಶವ ಸಿಕ್ಕ ಸ್ಥಳಕ್ಕೆ ಕರೆದೊಯ್ದರು. ಅಲ್ಲಿಂದ ಗುಂಬಜ್‌ಗೆ ತೆರಳಿ ಡಿಕೆಶಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ಹೊರಟು ಕಾವೇರಿ ನದಿಯಲ್ಲಿ ಕೈ ಕಾಲು, ಮುಖ ತೊಳೆದುಕೊಳ್ಳಲು ಹೋದಾಗ ಮುಖಂಡನೊಬ್ಬ ಜಾರಿ ನೀರೊಳಗೆ ಬಿದ್ದ ಘಟನೆಯೂ ನಡೆಯಿತು. ಅಲ್ಲದೆ, ಶ್ರೀರಂಗನಾಥ ಸ್ವಾಮಿ ದೇವಾಲಯದ ಬಳಿ ಜೆಡಿಎಸ್‌, ಕಾಂಗ್ರೆಸ್‌ ಕಾರ್ಯಕರ್ತರು ಪರಸ್ಪರ ನಾಯಕರ ಪರ ಜೈಕಾರ ಕೂಗಿದಾಗ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

ಎಚ್‌.ಡಿ. ದೇವೇಗೌಡರ ಆಶೀರ್ವಾದ ಪಡೆದ ಡಿಕೆಶಿ: ಡಿ.ಕೆ.ಶಿವಕುಮಾರ್‌ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ, ಕಾರ್ತಿಕ ಮಾಸದ ಶುಕ್ರವಾರದ ಹಿನ್ನೆಲೆಯಲ್ಲಿ ಪತ್ನಿ ಚೆನ್ನಮ್ಮ ಅವರೊಂದಿಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ದೇವೇಗೌಡರು, ದೇವಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಬಳಿಕ, ಡಿಕೆಶಿಯವರ ಹೆಗಲ ಮೇಲೆ ಕೈಹಾಕಿ ಆತ್ಮೀಯತೆಯಿಂದ ಮಾತನಾಡಿಸಿದರು. ಈ ವೇಳೆ, ಡಿ.ಕೆ.ಶಿವಕುಮಾರ್‌ ಅವರು, ದೇವೇಗೌಡರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದರು. ಆದರೆ, ಡಿ.ಕೆ.ಶಿವಕುಮಾರ್‌ ಜತೆಗಿದ್ದ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು, ದೇವೇಗೌಡ ದಂಪತಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ಭೇಟಿ ಮಾಡದೆ ಹೊರ ನಡೆದರು.

ಚಾಮುಂಡಿ ಬೆಟ್ಟ, ನಂಜನಗೂಡಿಗೆ ಗಣ್ಯರ ಭೇಟಿ: ಡಿಕೆಶಿ ಜತೆ ಜಿ.ಟಿ.ದೇವೇಗೌಡ ಕೂಡ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಮಧ್ಯೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ದಂಪತಿ ಸಹಿತ ಮೈಸೂರಿನ ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ನಂಜನಗೂಡಿಗೆ ತೆರಳಿ, ಹಕೀಂ ನಂಜುಂಡನಿಗೆ ಪೂಜೆ ಸಲ್ಲಿಸಿ ವಾಪಸ್ಸಾದರು. ಇದೇ ವೇಳೆ, ಅನರ್ಹ ಶಾಸಕರಾದ ಮಹೇಶ ಕುಮಟಳ್ಳಿ ಹಾಗೂ ರಮೇಶ ಜಾರಕಿಹೊಳಿ ಕೂಡ ಚಾಮುಂಡೇಶ್ವರಿಗೆ, ನಂಜನಗೂಡಿನ ಶ್ರೀಕಂಠನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಡಿಕೆಶಿ-ಸಾ.ರಾ.ಸಮಾಲೋಚನೆ: ವಿಜಯನಗರದಲ್ಲಿರುವ ಆದಿಚುಂಚನಗಿರಿ ಮೈಸೂರು ಶಾಖಾ ಮಠದಲ್ಲಿ ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್‌-ಸಾ.ರಾ.ಮಹೇಶ್‌ ಭೇಟಿಯಾಗಿ ರಹಸ್ಯ ಸಮಾಲೋಚನೆ ನಡೆಸಿದರು. ಸೋಮನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ, ಇಬ್ಬರೂ ಪ್ರತ್ಯೇಕವಾಗಿ ಕೊಠಡಿಯೊಳಗೆ ಸಮಾಲೋಚನೆ ನಡೆಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ