ಜೆಡಿಎಸ್‌ ಜತೆ ಸಖ್ಯಕ್ಕೆ ಡಿಕೆಶಿ ಆಸಕ್ತಿ

Team Udayavani, Nov 12, 2019, 3:09 AM IST

ಬೆಂಗಳೂರು: ಹದಿನೈದು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದವರನ್ನು ಮಣಿಸಲು ಜೆಡಿಎಸ್‌ ಜತೆ ಮೈತ್ರಿ ಅಥವಾ ಒಪ್ಪಂದಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಆಸಕ್ತರಾಗಿದ್ದು, ಹೈಕಮಾಂಡ್‌ಗೂ ಮಾಹಿತಿ ರವಾನಿಸಿದ್ದಾರೆ.

15 ಕ್ಷೇತ್ರಗಳ ಪೈಕಿ ಹಳೇ ಮೈಸೂರು ಭಾಗದ ಏಳು ಕ್ಷೇತ್ರಗಳಲ್ಲಿ ಒಕ್ಕಲಿಗ ಪ್ರಾಬಲ್ಯವಿದ್ದು ಅಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದರೆ ಬಿಜೆಪಿಗೆ ಅನುಕೂಲ. ಇದನ್ನು ತಪ್ಪಿಸಲು ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಂಡರೆ ಸೂಕ್ತ ಎಂಬುದು ಡಿ.ಕೆ.ಶಿವಕುಮಾರ್‌ ಲೆಕ್ಕಾಚಾರ ಎಂದು ಹೇಳಲಾಗಿದೆ.

ಈ ಬಗ್ಗೆ ಡಿ.ಕೆ.ಶಿವಕುಮಾರ್‌ ಅವರು ಕೆಲವು ನಾಯಕರ ಮೂಲಕ ಮಾಜಿ ಪ್ರಧಾನಿ ಎಚ್‌.ಡಿ. ದೇವೇ ಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ಸಂದೇಶ ರವಾನಿಸಿದ್ದು, ಕಾಂಗ್ರೆಸ್‌ ಹೈಕಮಾಂಡ್‌ನಿಂದ ಖುದ್ದು ಆಹ್ವಾನ ಬಂದರೆ ಪರಿಶೀಲಿಸಲಾಗುವುದು. ಆದರೆ, ರಾಜ್ಯ ನಾಯಕರ ಮಟ್ಟದಲ್ಲಿ ಮಾತುಕತೆ ಸಾಧ್ಯವಿಲ್ಲ ಎಂದು ಖಡಕ್‌ ಆಗಿ ಹೇಳಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ಗೂ 15 ಕಡೆ ಸಮರ್ಥ ಅಭ್ಯರ್ಥಿಗಳ ಕೊರತೆ ಇರುವುದರಿಂದ ನಾಲ್ಕು ಕ್ಷೇತ್ರ ಗಳಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಿದರೆ ಉಳಿದ 11 ಕ್ಷೇತ್ರ ಗಳಲ್ಲಿ ಕಾಂಗ್ರೆಸ್‌ ಬೆಂಬಲ ಪಡೆಯಬಹುದು. ಸೀಟು ಹೊಂದಾಣಿಕೆ ಸಾಧ್ಯವೇ ಇಲ್ಲ ಎಂದಾದರೆ ಜೆಡಿಎಸ್‌ ಸ್ಪರ್ಧೆ ಮಾಡದ ಕಡೆಯಾದರೂ ಕಾಂಗ್ರೆ ಸ್‌ಗೆ ಬೆಂಬಲ ಪಡೆಯಬಹುದು. ಆದರೆ, ಈ ಬಗ್ಗೆ ಅಧಿಕೃತವಾಗಿ ಜೆಡಿಎಸ್‌ ಜತೆ ಮಾತುಕತೆ ನಡೆಸಿದರೆ ಸಾಧ್ಯವಾಗಬಹುದು ಎಂದು ಡಿ.ಕೆ.ಶಿವಕುಮಾರ್‌ ಎಐಸಿಸಿ ಮಟ್ಟದಲ್ಲಿ ಪ್ರಸ್ತಾಪ ಮಾಡಿದ್ದಾರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರು ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಅವರ ಆಪ್ತ ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷ ರಾಗಿದ್ದಾರೆ. ಹೀಗಿರುವಾಗ ಜೆಡಿಎಸ್‌ ಜತೆ ಮೈತ್ರಿ ಮಾತು ಆಗುವುದಿಲ್ಲ. ಆದರೆ, ಹೈಕಮಾಂಡ್‌ ಸೂಚಿಸಿದರೆ ಒಪ್ಪಂದ ಆಗಬಹುದು. ಯಶವಂತಪುರ, ಹುಣಸೂರು, ಕೆ.ಆರ್‌.ಪೇಟೆ, ಚಿಕ್ಕಬಳ್ಳಾಪುರ, ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರಗಳಲ್ಲಿ ಜೆಡಿಎಸ್‌ ಪ್ರಬಲವಾಗಿದೆ.

ಉಳಿದಂತೆ ಜೆಡಿಎಸ್‌ಗೆ ಸಮರ್ಥ ಅಭ್ಯರ್ಥಿಗಳ ಕೊರತೆ ಇದೆ. ಇಲ್ಲಿಯೂ ಎರಡೂ ಪಕ್ಷಗಳು ಒಮ್ಮತದ ಅಭ್ಯರ್ಥಿ ಹಾಕಿದರೆ ಬಿಜೆಪಿಯನ್ನು ಎದುರಿಸ ಬಹುದು. ಜತೆಗೆ, ಕಾಗವಾಡ, ಅಥಣಿ, ಗೋಕಾಕ್‌, ರಾಣಿಬೆನ್ನೂರು, ವಿಜಯನಗರ, ಹಿರೇಕೆರೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಬೆಂಬಲ ಪಡೆಯಬಹುದು ಎಂದು ಸಂದೇಶ ರವಾನಿ ಸಿದ್ದಾರೆ. ಇದಕ್ಕೆ ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರ ಬೆಂಬಲವೂ ಇದೆ ಎಂದು ಹೇಳಲಾಗಿದೆ.

ಜೆಡಿಎಸ್‌ನಿಂದ ಕಾಂಗ್ರೆಸ್‌ ಅಂತರ ಕಾಯ್ದು ಕೊಂಡರೆ ಬಿಜೆಪಿಯವರು ಜೆಡಿಎಸ್‌ಗೆ ಹತ್ತಿರ ವಾಗಬಹುದು. ಆಗ, ಬಿಜೆಪಿ ಬೆಳೆಯಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅದರ ಬದಲು ತೀರಾ ಸೀಟು ಹಂಚಿಕೆ ಇಲ್ಲದಿ ದ್ದರೂ ಮೌಖೀಕ ಹೊಂದಾಣಿಕೆಯಡಿ ಹೋದರೆ ಬಿಜೆಪಿ ಕಟ್ಟಿ ಹಾಕಬಹುದು ಎಂಬುದು ಇವರ ಲೆಕ್ಕಾಚಾರ. ಉಪ ಚುನಾವಣೆಯಲ್ಲಿ ಒಂದೊಮ್ಮೆ ಬಿಜೆಪಿ ಕಡಿಮೆ ಸ್ಥಾನ ಗೆದ್ದರೆ ಮತ್ತೆ ಜೆಡಿಎಸ್‌-ಕಾಂಗ್ರೆಸ್‌ ಒಂದಾಗಬಹುದು ಎಂಬ ಆಸೆಯೂ ಕೆಲವು ಕಾಂಗ್ರೆಸ್‌ ನಾಯಕರಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಇದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಎಷ್ಟರ ಮಟ್ಟಿಗೆ ಸ್ಪಂದಿಸುತ್ತದೆ ಎಂದು ನೋಡಬೇಕಾಗಿದೆ.

ರಾಜಕೀಯ ಕಾರ್ಯತಂತ್ರ ಏನು?: ಯಶವಂತಪುರದಲ್ಲಿ ಎಸ್‌.ಟಿ.ಸೋಮೇಶರ್‌, ಗೋಕಾಕ್‌ನಲ್ಲಿ ರಮೇಶ್‌ ಜಾರಕಿಹೊಳಿ, ಅಥಣಿಯಲ್ಲಿ ಮಹೇಶ್‌ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್‌, ಹುಣಸೂರಿನಲ್ಲಿ ಎಚ್‌.ವಿಶ್ವನಾಥ್‌, ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್‌, ಹೊಸಕೋಟೆಯಲ್ಲಿ ಎಂ.ಟಿ.ಬಿ.ನಾಗರಾಜ್‌, ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ಗೋಪಾಲಯ್ಯ, ವಿಜಯನಗರದಲ್ಲಿ ಆನಂದ್‌ಸಿಂಗ್‌ ಕ್ಷೇತ್ರಗಳಲ್ಲಿ ಅನರ್ಹತೆಗೊಂಡವರಿಗೆ “ಟಕ್ಕರ್‌’ ನೀಡುವುದು ವೈಯಕ್ತಿಕವಾಗಿ ಡಿ.ಕೆ.ಶಿವಕುಮಾರ್‌ ಅವರಿಗೆ ಪ್ರತಿಷ್ಠೆಯ ಪ್ರಶ್ನೆ. ಇಲ್ಲಿ ಜೆಡಿಎಸ್‌ನ ಸಹಕಾರ ಪಡೆದರೆ ತಮ್ಮ ಗುರಿ ಸಾಧನೆ ಸುಲಭ ಎಂಬುದು ಅವರ ಕಾರ್ಯತಂತ್ರ. ಹೀಗಾಗಿಯೇ ಈ ಕುರಿತು ಜೆಡಿಎಸ್‌ನ ಮಾಜಿ ಸಚಿವರ ಜತೆ ರಹಸ್ಯ ಮಾತುಕತೆ ನಡೆಸಿ ಅಲ್ಲಿಂದಲೇ ದೇವೇಗೌಡರು ಹಾಗೂ ಕುಮಾರಸ್ವಾಮಿಯವರನ್ನು ಸಂಪರ್ಕಿಸಿದ್ದಾರೆಂದು ಹೇಳಲಾಗಿದೆ.

ಜೆಡಿಎಸ್‌ ಜತೆ ಮೈತ್ರಿಗೆ ಆಕ್ಷೇಪವಿಲ್ಲ
ಬೆಂಗಳೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳಲು ತೀರ್ಮಾನ ಮಾಡಿದರೆ ಆಕ್ಷೇಪವಿಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆಯಾಗಿಲ್ಲ. ಆ ಬಗ್ಗೆ ಪಕ್ಷದ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ಈಗಾಗಲೇ ಮೈತ್ರಿ ಮಾಡಿಕೊಂಡಾಗ ಆಗಿರುವ ಬೆಳವಣಿಗೆಗಳನ್ನು ಪಕ್ಷದ ಹೈಕಮಾಂಡ್‌ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡುತ್ತದೆ.

ಹೀಗಾಗಿ ಈ ಬಗ್ಗೆ ನನ್ನ ವೈಯಕ್ತಿಯ ಅಭಿಪ್ರಾಯ ಮುಖ್ಯವಾಗುವುದಿಲ್ಲ ಎಂದು ಹೇಳಿದರು. ಇದೇ ವೇಳೆ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ತಾವು ಬಿಜೆಪಿ ಸೇರುವ ಬಗ್ಗೆ ಪ್ರಸ್ತಾಪ ಮಾಡಿರುವುದನ್ನು ತಳ್ಳಿ ಹಾಕಿರುವ ಅವರು, ಗಾಳಿ ಸುದ್ದಿಗಳನ್ನು ನಂಬುವುದು ಬೇಡ. ಯೋಗೇಶ್ವರ್‌ ಜತೆ ಸ್ನೇಹ ಇರುವುದು ನಿಜ. ಅವರ ಜೊತೆ ಚಹಾ, ತಿಂಡಿ ತಿಂದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ನಾವು ಕಾಂಗ್ರೆಸ್‌ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ.

ಕಾಂಗ್ರೆಸ್‌ ಸಿದ್ಧಾಂತ ಒಪ್ಪಿ ಯಾರಾದರೂ ಬಂದರೆ ಸ್ವಾಗತಿಸುತ್ತೇವೆ ಎಂದರು. ಉಪ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವರ ಬೆಂಬಲ ಕೋರುತ್ತೇವೆ. ಮಂಡ್ಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನ ಎಲ್ಲ ಕಾರ್ಯಕರ್ತರು ಸುಮಲತಾ ಪರವಾಗಿ ಕೆಲಸ ಮಾಡಿದ್ದಾರೆ. ಈಗ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲಿಸುವಂತೆ ಕೇಳುತ್ತೇವೆಂದು ಹೇಳಿದರು.

* ಎಸ್‌. ಲಕ್ಷ್ಮಿನಾರಾಯಣ


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ‌ ಕನಿಷ್ಟ 13 ಸ್ಥಾನಗಳಲ್ಲಿ ಜಯಗಳಿಸಲಿದೆ. ಕಾಂಗ್ರೆಸ್ ಜೆಡಿಎಸ್ ತಲಾ ಒಂದು ಸ್ಥಾನದಲ್ಲಿ ಗೆಲ್ಲಬಹುದು. ಮುಂದಿನ ಮೂರೂವರೆ...

  • ಕಾಂಗ್ರೆಸ್‌ಗೆ 5ಕ್ಕಿಂತ ಕಡಿಮೆ ಸ್ಥಾನ ಬಂದರೆ ಸಿದ್ದು ನಾಯಕತ್ವಕ್ಕೆ ಕುತ್ತು? ಉ.ಕ. ಭಾಗದಲ್ಲಿ ಬಿಜೆಪಿ ಹೆಚ್ಚು ಗೆಲ್ಲದಿದ್ದರೆ ಬಿಎಸ್‌ವೈಗೆ ವೈಯಕ್ತಿಕ ಹಿನ್ನಡೆ ಬೆಂಗಳೂರು:...

  • ಬೆಂಗಳೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿ ಗಳಿಗೆ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳ ದರ್ಶನ ಮಾಡಿಸುವ "ಕರ್ನಾಟಕ ದರ್ಶನ'ಕ್ಕೆ ಎಲ್ಲ ಸಮುದಾಯದವರಿಗೂ ಅವಕಾಶ ಕಲ್ಪಿಸಲು...

  • ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಮೂರೂ ರಾಜಕೀಯ ಪಕ್ಷಗಳ...

  • ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆ ಮೂಲಕ ಮಹಿಳೆಯರಿಗೆ ಸ್ವಯಂ ರಕ್ಷಣಾ ತರಬೇತಿ ನೀಡಲು ನಿರ್ಧರಿಸಲಾಗಿದೆ...

ಹೊಸ ಸೇರ್ಪಡೆ