13ರ ಬಳಗ ಪ್ರಕಟಿಸಿದ ಇಂಗ್ಲೆಂಡ್: ಡಾಮ್ ಬೆಸ್ ಏಕೈಕ ಸ್ಪಿನ್ ಬೌಲರ್
Team Udayavani, Jul 6, 2020, 5:29 AM IST
ಲಂಡನ್: ಪ್ರವಾಸಿ ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ 13 ಆಟಗಾರರ ತಂಡವನ್ನು ಪ್ರಕಟಿಸಿದೆ. ಡಾಮ್ ಬೆಸ್ ಏಕೈಕ ಸ್ಪಿನ್ನರ್ ಆಗಿದ್ದಾರೆ.
ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜಾನಿ ಬೇರ್ಸ್ಟೊ ಮತ್ತು ಆಲ್ ರೌಂಡರ್ ಮೊಯಿನ್ ಅಲಿ ಅವರನ್ನು ಕೈಬಿಡಲಾಗಿದೆ.
ನಾಯಕ ಜೋ ರೂಟ್ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಬೆನ್ ಸ್ಟೋಕ್ಸ್ ಅವರಿಗೆ ಮೊದಲ ಸಲ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ ಒಲಿದು ಬಂದಿದೆ.
ಈ ಟೆಸ್ಟ್ ಪಂದ್ಯ ಜು. 8ರಿಂದ ಸೌತಾಂಪ್ಟನ್ನಲ್ಲಿ ಆರಂಭವಾಗಲಿದೆ. ಇದು ಕೊರೊನಾ ಕಾಲದಲ್ಲಿ ನಡೆಯಲಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ 9 ಮಂದಿ ಮೀಸಲು ಆಟಗಾರರನ್ನೂ ಸೇರಿಸಿಕೊಳ್ಳಲಾಗಿದೆ.
ಈ ಟೆಸ್ಟ್ ಪಂದ್ಯಕ್ಕೆ ವೀಕ್ಷಕರಿಗೆ ನಿರ್ಬಂಧವಿದೆ. ಇತ್ತೀಚಿನ ವರ್ಣದ್ವೇಷ ಪ್ರತಿ ಭಟನೆಯ ಹಿನ್ನೆಲೆಯಲ್ಲಿ ಎರಡೂ ತಂಡಗಳ ಕ್ರಿಕೆಟಿಗರು “ಬಿಎಲ್ಎಂ’ (ಬ್ಲ್ಯಾಕ್ ಲೈವ್ಸ್ ಮ್ಯಾಟರ್) ಲಾಂಛನ ಧರಿಸಿ ಆಡಲಿಳಿಯಲಿದ್ದಾರೆ.
ಇಂಗ್ಲೆಂಡ್ ತಂಡ
ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆ್ಯಂಡರ್ಸನ್, ಆರ್ಚರ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜಾಸ್ ಬಟ್ಲರ್ (ವಿ.ಕೀ.), ಜಾಕ್ ಕ್ರಾಲಿ, ಜೋ ಡೆನ್ಲಿ, ಓಲೀ ಪೋಪ್, ಡಾಮ್ ಸಿಬ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್.