“ಸಮಗ್ರ ಕುಡಿಯುವ ನೀರಿನ ಯೋಜನೆ ಪರಿಣಾಮಕಾರಿ ಅನುಷ್ಠಾನ’
Team Udayavani, Mar 4, 2021, 4:00 AM IST
ಲಾಲ್‌ಬಾಗ್: ನಗರದಲ್ಲಿ ಈಗಾಗಲೇ ಕೈಗೆತ್ತಿಕೊಂಡಿರುವ ಸಾವಿರಾರು ಕೋಟಿ ರೂ.ಗಳ ಕಾಮಗಾರಿಗಳ ಜತೆಗೆ, 800 ಕೋಟಿ ರೂ. ವೆಚ್ಚದ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಿಸಲು ತನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ಭರವಸೆ ನೀಡಿದ್ದಾರೆ.
ಅವರು ಬುಧವಾರ ಪಾಲಿಕೆಯ ಮೇಯರ್ ಕೊಠಡಿಯಲ್ಲಿ ನಿಕಟಪೂರ್ವ ಮೇಯರ್ ದಿವಾಕರ್ ಪಾಂಡೇಶ್ವರ ಅವರಿಂದ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಉಪ ಮೇಯರ್ ಸುಮಂಗಲಾ ರಾವ್ ಅವರು ನಿಕಟ ಪೂರ್ವ ಉಪ ಮೇಯರ್ ವೇದಾವತಿ ಅವರಿಂದ ಉಪ ಮೇಯರ್ ಕೊಠಡಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಸಾರ್ವಜನಿಕರು ಪ್ರಸ್ತುತ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆಯೇ ಮಾತನಾಡುತ್ತಿದ್ದಾರೆ; ಈ ಯೋಜನೆ ಮಂಗಳೂರಿಗೆ ದೊರಕುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಯಾವ ರೀತಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತೋ ಅದೇ ರೀತಿಯಲ್ಲಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ.
ಘನತ್ಯಾಜ್ಯ ವಿಲೇವಾರಿ ಕುರಿತಂತೆ ಈಗಿರುವ ಗುತ್ತಿಗೆದಾರರ ಅವಧಿಯು ಪೂರ್ಣಗೊಳ್ಳುವ ಹಂತ ದಲ್ಲಿದ್ದು, ಮುಂದೇನು ಎನ್ನುವ ಬಗ್ಗೆ ಸರಕಾರದ ಮಾರ್ಗಸೂಚಿಯಂತೆ ಹೊರ ಗುತ್ತಿಗೆ , ನೇರ ನೇಮಕಾತಿ ಮೂಲಕ ಪೌರ ಕಾರ್ಮಿಕರ ನೇಮಕ ಮಾಡುವ ಬಗ್ಗೆ ಪಾಲಿಕೆ ಆಯುಕ್ತರು ಕ್ರಮಗಳನ್ನು ಕೈಗೊಳ್ಳ ಲಿದ್ದಾರೆ. ಈ ಪ್ರಕ್ರಿಯೆ ಈಗಾಗಲೇ ಆರಂಭ ಆಗಿದೆ ಎಂದು ಪ್ರೇಮಾ ನಂದ ಶೆಟ್ಟಿ ಹೇಳಿದರು.
ಉರ್ವ, ಕದ್ರಿ ಮತ್ತು ಕಂಕನಾಡಿ ಮಾರ್ಕೆಟ್ ಕಟ್ಟಡಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಉರ್ವ, ಕದ್ರಿ ಮಾರ್ಕೆಟ್ ಕಟ್ಟಡಗಳ ಕಾಮಗಾರಿಯನ್ನು ಅವಸರವರದಲ್ಲಿ ಕೈಗೆತ್ತಿಕೊಂಡಿದ್ದರಿಂದ ಸಮಸ್ಯೆ ಎದುರಾಗಿದೆ. ಉರ್ವ ಮಾರ್ಕೆಟ್ ಸಮಸ್ಯೆ ಬಗೆಹರಿಸಲು ಮುಡಾ ಅಧ್ಯಕ್ಷರು ಕೆಲವು ಸೂತ್ರಗಳನ್ನು ಮುಂದಿಟ್ಟಿದ್ದಾರೆ. ಪಾಲಿಕೆ ಕಡೆಯಿಂದಲೂ ಪ್ರಸ್ತಾವನೆ ಇದ್ದು, ಜತೆಯಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.
ರಾಜಕಾಲುವೆ ಒತ್ತುವರಿ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ
ನಗರದಲ್ಲಿ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿ 8 ವಾರ್ಡ್‌ಗಳಲ್ಲಿ ಡ್ರೋನ್ ಸರ್ವೆ ನಡೆಸಲಾಗಿದೆ. ಒತ್ತುವರಿ ಬಗ್ಗೆ ಇದರಿಂದ ಸ್ಪಷ್ಟವಾಗಿ ಪತ್ತೆ ಮಾಡಲು ಸಾಧ್ಯವಿದೆ. ಒತ್ತುವರಿ ತೆರವಿಗೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ನೀರಿನ ಬಿಲ್‌ಗಳು ಪ್ರತಿ ತಿಂಗಳು ನೀಡಲಾಗುತ್ತಿಲ್ಲ ಎಂಬ ದೂರು ಇರುವ ಹಿನ್ನೆಲೆಯಲ್ಲಿ 60 ವಾರ್ಡ್‌ಗಳಿಗೆ ಓರ್ವರಂತೆ ಈಗಿರುವ ಎಂಪಿಡಬ್ಲ್ಯು ವರ್ಕರ್‌ಗಳಿಗೆ ಹೆಚ್ಚುವರಿಯಾಗಿ ಮತ್ತೆ 30 ಮಂದಿಯನ್ನು ನೇಮಕಗೊಳಿಸಲು ಆಯುಕ್ತರು ಸಲಹೆ ನೀಡಿದ್ದಾರೆ. ಗೃಹ ಬಳಕೆಯ ನೀರಿನ ಬಿಲ್‌ಗಳಿಗೆ ಸಂಬಂಧಿಸಿ ಮೀಟರ್‌ಗಳು ಕೆಟ್ಟು ಹೋಗಿದ್ದು, ಅಸಮಂಜಸ ರೀಡಿಂಗ್ ಮಾಡಿ ನೀರಿನ ಬಿಲ್ ನೀಡಲಾಗುತ್ತಿರುವ ಕುರಿತಂತೆ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಇಂತಹ ಗೃಹ ಬಳಕೆಯ ನೀರಿನ ಮೀಟರ್ ರೀಡಿಂಗ್ ಸಂದರ್ಭ ಷರಾ ಬರೆದು ಸರಾಸರಿ ಮೀಟರ್ ರೀಡಿಂಗ್ ಆಧಾರದಲ್ಲಿ ಬಿಲ್ ನೀಡುವಂತೆ ಸೂಚನೆ ನೀಡಲಾಗುವುದು. ಜತೆಗೆ ಪ್ರತಿ ತಿಂಗಳು ನೀರಿನ ಬಿಲ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಮೇಯರ್ ವಿವರಿಸಿದರು. ಶಾಸಕರಾದ ಡಿ. ವೇದವ್ಯಾಸ ಕಾಮತ್ ಮತ್ತು ಡಾ| ಭರತ್ ಶೆಟ್ಟಿ ವೈ., ಪಾಲಿಕೆಯ ಸದಸ್ಯರು, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಲಮಿತಿಯಲ್ಲಿ ಪೂರ್ಣ
ಈ ಹಿಂದಿನ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣ ಗೊಳಿಸಲು ಪ್ರಥಮ ಆದ್ಯತೆ ನೀಡಲಾಗುವುದು. 24×7 ಸಮಗ್ರ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಈಗಿರುವ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವುದಲ್ಲದೆ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಪ್ರತೀ ತಿಂಗಳು ಸಭೆ ನಡೆಸಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೂಡುಬಿದಿರೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಝೀರ್ ಗೆ ಮಾತೃ ವಿಯೋಗ
ಕೊರೊನಾ ಎರಡನೇ ಅಲೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಬೆಡ್ ಕೊರತೆ
ಖಾಸಗೀಕರಣದ ಹೆಸರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ಲಕ್ಷ್ಯ : ಐವನ್ ಡಿ’ಸೋಜಾ ಆರೋಪ
ಮಂಗಳೂರು : ಐಟಿ ಕಛೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ
ವಾಹನ ಅಡ್ಡಗಟ್ಟಿ ಸುಲಿಗೆ ಪ್ರಕರಣ: ಮಂಗಳೂರಿನಲ್ಲಿ ಮತ್ತೆ ಆರು ಖದೀಮರ ಬಂಧನ