ಕಾರಾಗೃಹ ಅಭಿವೃದ್ಧಿ ಮಂಡಳಿ ಸ್ಥಾಪನೆ

Team Udayavani, Oct 22, 2019, 3:07 AM IST

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ಕಾರಾಗೃಹಗಳ ಅಭಿವೃದ್ಧಿಗಾಗಿ “ಕಾರಾಗೃಹ ಅಭಿವೃದ್ಧಿ ಮಂಡಳಿ’ ಸ್ಥಾಪನೆಗೆ ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಸನ್ನಡತೆ ಆಧಾರದಲ್ಲಿ 141 ಮಂದಿ ಕೈದಿಗಳ ಬಿಡುಗಡೆ, ರಾಷ್ಟ್ರಪತಿಗಳ ಮತ್ತು ಮುಖ್ಯಮಂತ್ರಿಗಳ ಪದಕ ಪ್ರದಾನ, ಬೆಂಗಳೂರು ರೇಡಿಯೋ ಪ್ರಾರಂಭ, ನೂತನ ಸಭಾಂಗಣ ಉದ್ಘಾಟನೆ ಹಾಗೂ ಕೌಶಲ್ಯ ತರಬೇತಿಗೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೈಲುಗಳ ಅಭಿವೃದ್ಧಿ, ಅಧಿಕಾರಿಗಳಿಗೆ ಸೌಲಭ್ಯ ಮತ್ತು ಕೈದಿಗಳ ಸುಧಾರಣೆ ಮಾಡುವ ಉದ್ದೇಶದಿಂದ ಕಾರಾಗೃಹ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಲಾಗುವುದು. ಈ ಮೂಲಕ ಮಾನವ ಹಕ್ಕುಗಳ ಆಯೋಗಗಳ ಶಿಫಾರಸು ಜಾರಿಗೆ ತರಲಾಗುವುದು ಎಂದರು. ಪ್ರಾಯಶ್ಚಿತ್ತ ಮತ್ತು ಪಶ್ಚಾತ್ತಾಪ ಎರಡೂ ಬಹು ದೊಡ್ಡ ಗುಣಗಳು. ಈ ಗುಣಗಳನ್ನು ಸಾಧನವಾಗಿ ಬಳಸಿ ಸನ್ನಡತೆ ರೂಢಿಸಿಕೊಳ್ಳಬೇಕು. ಸನ್ನಡತೆ ಆಧಾರದಲ್ಲಿ ಬಿಡುಗಡೆಯಾ ಗುತ್ತಿರುವ ಕೈದಿಗಳು ಹೊರಗಡೆ ಹೋಗುತ್ತಿದ್ದಂತೆ ಸಕಾರಾತ್ಮ ಕವಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಆನ್‌ಲೈನ್‌ ಮೂಲಕ ಬ್ರಾಂಡ್‌: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ, ಕೈದಿಗಳೇ ಸಿದ್ಧಪಡಿಸುವ ಕಲಕುಶಲ ವಸ್ತುಗಳು, ಬೇಕರಿ, ಬಟ್ಟೆ ನೇಯಿಗೆ ಹಾಗೂ ಇತರೆ ಉತ್ಪನ್ನಗಳ ಕೇಂದ್ರಗಳಿಗೆ ಭೇಟಿ ನೀಡಿದ ಗೃಹ ಸಚಿವರು, ಜೈಲಿನ ಒಳಗಡೆ ಕೈದಿಗಳಿಗೆ ಇಷ್ಟೆಲ್ಲ ತರಬೇತಿ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಹೀಗಾಗಿ ಕೈದಿಗಳು ಸಿದ್ಧಪಡಿಸುವ ಬಟ್ಟೆ ಹಾಗೂ ಇತರೆ ವಸ್ತುಗಳ ಮಾರಾಟಕ್ಕೆ ಆನ್‌ಲೈನ್‌ ಮೂಲಕ ವೇದಿಕೆ ಸಿದ್ಧಪಡಿಸಿಕೊಳ್ಳಿ. ಅಲ್ಲದೆ, “ಮೆಡ್‌ ಬೈ ಜೈಲ್‌ ಇನ್‌ಮೆಟ್ಸ್‌’ ಎಂಬ ಬ್ರಾಂಡ್‌ ಅನ್ನು ಆನ್‌ಲೈನ್‌ ಮೂಲಕ ಸೃಷ್ಟಿಸಿಕೊಂಡರೆ ಉತ್ತಮ ಮಾರುಕಟ್ಟೆ ಕೂಡ ಸೃಷ್ಟಿಸಬಹುದು. ಇದಕ್ಕೆ ಸರ್ಕಾರವೂ ಸಹಕಾರ ನೀಡಲಿದೆ ಎಂದು ಹೇಳಿದರು.

ಸಮುದಾಯ ರೇಡಿಯೋಗೆ ಚಾಲನೆ: ಇದೇ ಸಂದರ್ಭದಲ್ಲಿ ಮೈಂಡ್‌ ಟ್ರೀ ಫೌಂಡೇಶನ್‌ ಹಾಗೂ ರೇಡಿಯೋ ಸಿಟಿ ಎಫ್ಎಂ 91.1 ಅವರ ಸಹಯೋಗದೊಂದಿಗೆ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಇದೇ ಮೊದಲ ಬಾರಿಗೆ “ಸಮುದಾಯ ರೇಡಿಯೋ(ಬೆಂಗಳೂರು ರೇಡಿಯೋ)’ ಸ್ಥಾಪನೆ ಮಾಡಿದ್ದು, ಕಾರಾಗೃಹ ಆವರಣದಲ್ಲಿರುವ ರೇಡಿಯೋ ಕೇಂದ್ರಕ್ಕೆ ಗೃಹ ಸಚಿವರು ಚಾಲನೆ ನೀಡಿದರು.

ಖಾಕಿ ಬಟ್ಟೆ ತಯಾರಿ!: ಬಟ್ಟೆ ನೇಯ್ಗೆ ಕೇಂದ್ರಕ್ಕೆ ಸಚಿವರು ಭೇಟಿ ನೀಡಿದರು. ಈ ವೇಳೆ ಕಾರಾಗೃಹ ಅಧಿಕಾರಿಗಳು, ಗೃಹ ರಕ್ಷಕ ಸಿಬ್ಬಂದಿಯ ಸಮವಸ್ತ್ರವನ್ನು ಸಿದ್ಧಪಡಿಸಲಾಗುತ್ತಿದೆ. ಒಂದು ವೇಳೆ ಸರ್ಕಾರ ಅನುಮತಿ ಕೊಟ್ಟರೆ ಇಲ್ಲಿಂದಲೇ ಸರಬರಾಜು ಮಾಡಲು ಕ್ರಮಕೈಗೊಳ್ಳಬಹುದು ಎಂದು ಸಚಿವರಿಗೆ ತಿಳಿಸಿದರು. ಜೈಲು ಆವರಣದಲ್ಲಿ ಕೌಶಲ್ಯ ಹಾಗೂ ಇ-ಬಂದೀಖಾನೆ ತಂತ್ರಾಂಶ ತರಬೇತಿ ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಸಜಾಬಂಧಿ ಛತ್ರಪತಿ, “ನಾನು ಶಿವಮೊಗ್ಗ ಜಿಲ್ಲೆಯ ಆಯನೂರು ಮೂಲದವನಾಗಿದ್ದು, ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದೇನೆ. ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದು, ಇದೀಗ ಕಂಪ್ಯೂಟರ್‌ ತರಬೇತಿ ಪಡೆಯುತ್ತಿದ್ದೇನೆ. ಈ ಮೂಲಕ ಡೇಟಾ ಎಂಟ್ರಿ, ಟ್ಯಾಲಿ, ಹಾರ್ಡ್‌ವೇರ್‌ ಕಲಿಯುತ್ತೇನೆ. ಒಂದು ವೇಳೆ ಜಾಮೀನು ಪಡೆದು ಹೊರ ಹೋದರೆ ತಂತ್ರಜ್ಞಾನದ ಮೂಲಕ ಹೊಸ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಹೇಳಿದರು.

141 ಬಂಧಿಗಳ ಬಿಡುಗಡೆ: ಸನ್ನಡತೆ ಆಧಾರದಲ್ಲಿ ಬೆಂಗಳೂರಿನ 71, ಮೈಸೂರಿನ 23, ಬೆಳಗಾವಿಯ ಒಬ್ಬ ಮಹಿಳೆ ಸೇರಿ 6, ಕಲಬುರಗಿ 13, ವಿಜಯಪುರ 6, ಬಳ್ಳಾರಿ 11 ಹಾಗೂ ಧಾರವಾಡದ 11 ಮಂದಿ ಸೇರಿ ಒಟ್ಟು 141 ಮಂದಿ ಕೈದಿಗಳನ್ನು ಬಿಡುಗಡೆ ಮಾಡಲಾಯಿತು.

ಕಾರಾಗೃಹ ಎಡಿಜಿಪಿ ಎನ್‌.ಎಸ್‌. ಮೇಘರಿಕ್‌, ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಜನೀಶ್‌ ಗೋಯಲ್‌, ಕಾರ್ಯದರ್ಶಿ ಬಿ.ಕೆ.ಸಿಂಗ್‌, ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಸಮಾಲೋಚಕರು ಎಚ್‌.ಎಸ್‌.ರೇವಣ್ಣ ಹಾಗೂ ಶಾಸಕರಾದ ಎಂ.ಕೃಷ್ಣಪ್ಪ, ಸೌಮ್ಯರೆಡ್ಡಿ, ಕಾರಾಗೃಹ ಮುಖ್ಯ ಅಧೀಕ್ಷಕ ವಿ.ಶೇಷುಮೂರ್ತಿ, ಅಧೀಕ್ಷಕಿ ಆರ್‌. ಲತಾ ಇತರರು ಇದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಮಹಿಳಾ ಕೈದಿಗಳು ತಯಾರಿಸುವ ತಂಜಾವೂರು ಕಲಾಕೃತಿಗಳನ್ನು ಗೃಹ ಸಚಿವರು ಹಾಗೂ ಅತಿಥಿಗಳಿಗೆ ಉಡುಗೊರೆಯಾಗಿ ನೀಡಲಾಯಿತು.

ಔರಾದ್ಕರ್‌ ವರದಿಯಲ್ಲಿ ಪೊಲೀಸ್‌ ಇಲಾಖೆಯವರಿಗೆ ಸೌಲಭ್ಯಗಳನ್ನು ಕಲ್ಪಿಸಿದ್ದು, ಅದರಲ್ಲಿ ಕಾರಾಗೃಹ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸೇರ್ಪಡೆ ಮಾಡಿರ ಲಿಲ್ಲ. ಇದೀಗ ಅವರಿಗೂ ಕೂಡ ಔರಾದ್ಕರ್‌ ವರದಿಯಂತೆ ಎಲ್ಲ ಸೌಲಭ್ಯಗಳನ್ನು ನೀಡಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ