ಅನುಭವ ಎಲ್ಲವನ್ನೂ ಕಲಿಸಿದೆ: ಡಿಕೆಶಿ

ಚುನಾವಣೆಯ ಹೊಣೆಗಾರಿಕೆ ನಿಭಾಯಿಸುವ ವಿಶ್ವಾಸ

Team Udayavani, Nov 22, 2019, 6:00 AM IST

ಹುಬ್ಬಳ್ಳಿ: ಉಪ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ಸೂಚಿಸಿದ ಕಾರ್ಯವನ್ನು ನಿಭಾಯಿಸುತ್ತೇನೆ. ಈ ಸಂದರ್ಭದಲ್ಲಿ ಏನೆಲ್ಲ ಸಮಸ್ಯೆ ತಂದೊಡ್ಡಿದರೂ ನನ್ನದೇ ಆದ ಲೆಕ್ಕಾಚಾರದಲ್ಲಿ ಉಪ ಚುನಾವಣೆಯಲ್ಲಿನ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಸೂಚಿಸಿದ ಕೆಲಸಕ್ಕೆ ಮೋಸ ಮಾಡುವುದಿಲ್ಲ. ಉಪಚುನಾವಣೆ ಕಾರ್ಯದೊಂದಿಗೆ ನನ್ನ ಕಾನೂನು ಹೋರಾಟವನ್ನೂ ನೋಡಿ ಕೊಳ್ಳಬೇಕಾಗಿದೆ. ಹೀಗಾಗಿ ಎಲ್ಲ ಕ್ಷೇತ್ರಗಳಿಗೂ ಹೋಗುತ್ತೇನೆ ಎಂಬುದರ ಬಗ್ಗೆ ಗೊತ್ತಿಲ್ಲ. ಕೆಲವು ಕ್ಷೇತ್ರಗಳ ಅಭ್ಯರ್ಥಿಗಳು, ಬೆಂಬಲಿಗರು ಮತ್ತು ನಾಯಕರು ಬಂದು ಮನವಿ ಮಾಡಿದ್ದಾರೆ. ಕೋರ್ಟ್‌, ಇಡಿ., ಆರೋಗ್ಯ ಇವುಗಳ ಮಧ್ಯೆ ಕೆಲವು ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗುತ್ತೇನೆ ಎಂದರು.

ಉಪ ಚುನಾವಣೆಗಳನ್ನು ಹೇಗೆ ಮಾಡಬೇಕು ಎಂಬುದನ್ನು ಅನುಭವದಿಂದ ಕಲಿತಿದ್ದೇನೆ. ನನ್ನ ಲೆಕ್ಕಾಚಾರದ ಪ್ರಕಾರ ಚುನಾವಣೆ ಮಾಡುತ್ತೇನೆ. ಕರ್ತವ್ಯ ಲೋಪವಾಗದಂತೆ ಕಾರ್ಯನಿರ್ವಹಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಯಕತ್ವದಲ್ಲಿ ನಾವೆಲ್ಲ ಕೆಲಸ ಮಾಡುತ್ತೇವೆ. ನಾನು ಪಕ್ಷದ ಪ್ರಾಮಾಣಿಕ ಕಾರ್ಯಕರ್ತ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾರಿಗೂ ಅಸಮಾಧಾನವಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲರೂ ನಮ್ಮ ಅಭ್ಯರ್ಥಿಗಳು ಎಂದರು.

ಅನರ್ಹ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಇರುವ ಆಸಕ್ತಿ ರಾಜ್ಯದ ಹಿತಾಸಕ್ತಿ ಕುರಿತಾಗಿ ಸಿಎಂ ಯಡಿಯೂರಪ್ಪ ಅವರಲ್ಲಿ ಕಾಣುತ್ತಿಲ್ಲ. ಬಹಿರಂಗವಾಗಿ ಅನರ್ಹ ಶಾಸಕರಿಗೆ ಇಂಥ ಖಾತೆಗಳನ್ನು ನೀಡುವುದಾಗಿ ಹೇಳುತ್ತಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಚುನಾವಣೆ ಆಯೋಗ ಕಣ್ಣು ಮುಚ್ಚಿ ಕುಳಿತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ