ಫ್ಲಾಪಿ ಡಿಸ್ಕ್
Team Udayavani, May 25, 2020, 5:09 AM IST
ಇಂದು ನಾವು ಸ್ಮಾರ್ಟ್‌ಫೋನುಗಳಲ್ಲಿ 32 ಜಿಬಿ, 64 ಜಿಬಿ ಸಂಗ್ರಹ ಸಾಮರ್ಥ್ಯ ಎಂದೆಲ್ಲಾ ಮಾತನಾಡುತ್ತೇವೆ. ಪೆನ್ ಡ್ರೈವ್‌ನಲ್ಲಿಯೂ 8 ಜಿಬಿ, 16 ಜಿಬಿ ಎಂಬ ವರ್ಗೀಕರಣವನ್ನು ನೋಡುತ್ತೇವೆ. ಆದರೆ, ದಶಕಗಳ ಹಿಂದೆ ಸ್ಟೋರೇಜ್ ಡಿವೈಸಸ್ ಅಂದರೆ, ಡಿಜಿಟಲ್ ಮಾಹಿತಿ ಸಂಗ್ರಹಿಸುವ ತಂತ್ರಜ್ಞಾನ, ಅಷ್ಟಾಗಿ ಬೆಳೆದಿರಲಿಲ್ಲ. ಆಗಿನ ಕಾಲದಲ್ಲಿ, ಮಾಹಿತಿ ಸಂಗ್ರಹಿಸಲು ಬಳಕೆಯಾಗುತ್ತಿದ್ದ ಸಾಧನ- ಫ್ಲಾಪಿ ಡಿಸ್ಕ್ ಅದರ ಸಾಮರ್ಥ್ಯ ಎಂ.ಬಿ. ಲೆಕ್ಕದಲ್ಲಿರುತ್ತಿತ್ತು.
ಅಂದರೆ, ಒಂದು ಪ್ಲಾಪಿಯಲ್ಲಿ ಆಗ ನಾಲ್ಕೈದು ಎಂ.ಬಿ. ಗಾತ್ರದ ಎಂಪಿ 3 ಹಾಡೊಂದನ್ನು ಸಂಗ್ರಹಿಸಬಹುದಿತ್ತು, ಅಷ್ಟೇ. ಆಗಿನ ಕಾಲಕ್ಕೆ, ಅದುವೇ ಮಹತ್ತರ ಸಾಧನೆ. ಫ್ಲಾಪಿ ಡಿಸ್ಕ್‌ಗಳು ತಯಾರಾಗಿದ್ದು, ಕಂಪ್ಯೂಟರ್ ಪ್ರೋಗ್ರಾಂಗಳನ್ನು ಸಂಗ್ರಹಿಸಲು. ಅವನ್ನು ಒಂದು ಕಂಪ್ಯೂಟರ್‌ನಿಂದ ಇನ್ನೊಂದಕ್ಕೆ ಸಾಗಿಸಲು. ಒಂದು ಕೆ.ಜಿ.ಯಲ್ಲಿ 1000 ಗ್ರಾಂ. ಇರುವಂತೆಯೇ, ಒಂದು ಜಿ.ಬಿ. ಎಂದರೆ ಸುಮಾರು 1000 ಎಂ.ಬಿ.ಗಳಿಗೆ ಸಮ. ಕೇವಲ ನಾಲ್ಕೈದು ಎಂ.ಬಿ. ಮಾಹಿತಿ ಸಂಗ್ರಹಿಸುವ ಸಲುವಾಗಿ ಆವಿಷ್ಕಾರಗೊಂಡ ಫ್ಲಾಪಿ ಡಿಸ್ಕ್, ಚೌಕಾಕಾರದ ಆಕಾರ ಹೊಂದಿತ್ತು.
ಹೀಗೆ ಚೌಕಾಕಾರದಲ್ಲಿ ಇದ್ದಿದ್ದು ಪ್ಲಾಸ್ಟಿಕ್ ಕವಚ. ಅದರೊಳಗೆ ವೃತ್ತಾಕಾರದ ತೆಳು ಮ್ಯಾಗ್ನೆಟಿಕ್ ಫಿಲ್ಮ ಇರುತ್ತಿತ್ತು. ಸಿ.ಡಿ., ಡಿ.ವಿ.ಡಿ.ಗಳ ಆವಿಷ್ಕಾರವಾದ ನಂತರ ಫ್ಲಾಪಿ ಡಿಸ್ಕ್ ತನ್ನ ಉಪಯುಕ್ತತೆಯನ್ನು ಕಳೆದುಕೊಂಡಿತು. ಇಂದು ಟೈಪಿಂಗ್ ಸಾಫ್ಟ್ವೇರ್ ಎಡಿಟರ್ ಅಥವಾ ಯಾವುದೇ ಸಾಫ್ಟ್ ವೇರ್‌ಗಳಲ್ಲಿ ಸೇವ್ ಬಟನ್ ಅನ್ನು ಸೂಚಿಸಲು ಫ್ಲಾಪಿ ಡಿಸ್ಕ್ ಚಿತ್ರವನ್ನು ಸೂಚಕವಾಗಿ ಬಳಸಲಾಗುತ್ತಿದೆ. ಇದು ಫ್ಲಾಪಿ ಡಿಸ್ಕ್‌ಗೆ ಸಲ್ಲಿಸಿದ ಗೌರವವಾಗಿದೆ.