ಅನರ್ಹರಿಗೂ ಸಿಗುತ್ತಿದೆ 371 ಜೆ ಪ್ರಮಾಣ ಪತ್ರ!

Team Udayavani, Sep 10, 2019, 3:07 AM IST

ರಾಯಚೂರು: ಹೈ-ಕ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಜಾರಿಗೊಳಿಸಿದ 371 ಜೆ ವಿಶೇಷ ಸ್ಥಾನಮಾನ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎನ್ನುವ ದೂರುಗಳ ಬೆನ್ನಲ್ಲೇ ಹೈ-ಕ ಭಾಗದವರಲ್ಲದ ಜನ ತಪ್ಪು ಮಾಹಿತಿ ನೀಡಿ ಈ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ಇಲ್ಲಿನ ಕೃಷಿ ವಿವಿ ಪ್ರಾಧ್ಯಾಪಕರಿಬ್ಬರು ಇಂಥದ್ದೇ ಪ್ರಮಾಣ ಪತ್ರ ಪಡೆದಿದ್ದು, ಹೈ-ಕ ವಿಶೇಷ ಕೋಶದ ಜಂಟಿ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಸಹಾಯಕ ಆಯುಕ್ತರು ಅವರಿಗೆ ನೀಡಿದ್ದ ಪ್ರಮಾಣ ಪತ್ರ ರದ್ದುಗೊಳಿಸಿದ್ದಾರೆ. ಕೃಷಿ ವಿವಿ ಪ್ರಾಧ್ಯಾಪಕರಾದ ಜೆ.ಅಶೋಕ, ಡಾ.ಲೋಕೇಶ ಅವರು ತಾವು ಕಳೆದ ಹಲವು ವರ್ಷಗಳಿಂದ ಇಲ್ಲಿಯೇ ಸೇವೆ ಸಲ್ಲಿಸಿದ್ದಾಗಿ ಮಾಹಿತಿ ನೀಡಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಹಿಂದೆ 2015ರಲ್ಲೂ ಪ್ರಮಾಣ ಪತ್ರ ಪಡೆದಾಗ ಅದನ್ನು ರದ್ದುಗೊಳಿಸಲಾಗಿತ್ತು. ಪುನಃ 2016ರಲ್ಲಿ ಮತ್ತೆ ಅರ್ಜಿ ಸಲ್ಲಿಸಿ ಪಡೆದಿದ್ದರು.

ಬಡ್ತಿಗಾಗಿ ಪ್ರಹಸನ: ಈ ಭಾಗದಲ್ಲಿ ಸರ್ಕಾರಿ ನೌಕರಿ ಮಾಡುತ್ತಿರುವ ಅನೇಕರು ಬೇರೆ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ವಿಶೇಷ ಸ್ಥಾನಮಾನದಿಂದ ಮೀಸಲಾತಿ ಸೌಲಭ್ಯದಿಂದ ಬಡ್ತಿ ವಿಚಾರದಲ್ಲಿ ಅವರಿಗೆ ಹಿನ್ನಡೆ ಆಗುತ್ತಿದೆ. ಅವರೇನಿದ್ದರೂ ಶೇ.25, 20, 15ರಷ್ಟು ಮೀಸಲಾತಿಯಲ್ಲಿಯೇ ಬಡ್ತಿ ಪಡೆಯಬೇಕು. ಆದರೆ, ಬೆರಳೆಣಿಕೆಯಷ್ಟು ಉನ್ನತ ಹುದ್ದೆಗಳಿದ್ದು, ಅವು ಸ್ಥಳೀಯರಿಗೆ ಸಿಗುವ ಕಾರಣ “ನಾವೂ ಸ್ಥಳೀಯರೇ’ ಎಂಬ ಕೋಟಾದಡಿ ಸೌಲಭ್ಯ ಪಡೆಯುವ ಹುನ್ನಾರ ನಡೆಸಲಾಗುತ್ತಿದೆ. ಹಲವು ವರ್ಷಗಳಿಂದ ಈ ಭಾಗದಲ್ಲಿಯೇ ಸೇವೆ ಮಾಡುತ್ತಿದ್ದೇವೆ. ನಮ್ಮನ್ನೂ ಹೈ-ಕ ಭಾಗದವರೆಂದು ಪರಿಗಣಿಸಿ ಎಂಬ ವಾದ ಮಂಡಿಸುತ್ತಿದ್ದಾರೆ. ಅಲ್ಲದೇ, ಸದ್ದಿಲ್ಲದೇ ಅದೆ ಮಾನದಂಡದಡಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಆದರೆ, ನಿಯಮಗಳ ಪ್ರಕಾರ ಇದು ಕಾನೂನು ಬಾಹಿರ ಎನ್ನುತ್ತಾರೆ ಸ್ಥಳೀಯ ಹೋರಾಟಗಾರರು.

ಕೃಷಿ ವಿವಿಯಲ್ಲೇ ಹೆಚ್ಚು: 371 ಜೆ ವಿಶೇಷ ಸ್ಥಾನಮಾನದಡಿ ಎ, ಬಿ ಮತ್ತು ಸಿ ಗ್ರೇಡ್‌ನ‌ಡಿ ಮೀಸಲಾತಿ ಹಂಚಿಕೆ ಮಾಡಲಾಗುತ್ತಿದೆ. ಅದರದಲ್ಲಿ ಆಯಾ ಗ್ರೇಡ್‌ ಹುದ್ದೆಗಳನ್ನು ಆಧರಿಸಿ ಶೇ.75-25, ಶೇ.80-20 ಹಾಗೂ ಶೇ.85-15 ಮಾದರಿಯಲ್ಲಿ ಮೀಸಲಾತಿ ಸಿಗಲಿದೆ. ಈ ಹಿಂದೆ ಕೃಷಿ ವಿವಿಯಲ್ಲಿ ಉನ್ನತ ಹುದ್ದೆಗೆ ಬಡ್ತಿ ಹೊಂದುವ ಉದ್ದೇಶದಿಂದ ಹೈ-ಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದಾಗಿ ವಿವರಣೆ ನೀಡಿ 27 ಜನ ಇದೇ ರೀತಿ 371 ಜೆ ಪ್ರಮಾಣ ಪತ್ರ ಪಡೆದಿದ್ದರು. ದೂರುಗಳು ಬಂದ ಕಾರಣ ಅಷ್ಟೂ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಲಾಗಿತ್ತು. ಈಗ ಇಬ್ಬರು ಪ್ರಾಧ್ಯಾಪಕರ ಪ್ರಮಾಣ ಪತ್ರ ಕೂಡ ರದ್ದುಗೊಳಿಸಲಾಗಿದೆ. ಆದರೆ, ಇನ್ನೂ ಅನೇಕ ಕಡೆ ಇಂಥ ಪ್ರಕರಣಗಳು ನಡೆಯುತ್ತಲೇ ಇದ್ದು, ಪ್ರಮಾಣ ಪತ್ರ ದುರ್ಬಳಕೆ ಹೆಚ್ಚಾಗುತ್ತಿದೆ.

ಮಾನದಂಡ ಏನು?: 371 ಜೆ ಪ್ರಮಾಣ ಪತ್ರ ಪಡೆಯಬೇಕಾದರೆ ವಿಶೇಷ ಸ್ಥಾನಮಾನ ಜಾರಿಗೂ ಮುಂಚೆ 10 ವರ್ಷಗಳಿಂದ ಪಾಲಕರು ಈ ಭಾಗದಲ್ಲಿ ವಾಸವಾಗಿದ್ದರೆ ಅಂಥವರ ಮಕ್ಕಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಅದರ ಜತೆಗೆ ಜನನ, ವ್ಯಾಸಂಗ, ವಂಶಾವಳಿ ಮುಖ್ಯವಾಗಿ ಗಣನೆಗೆ ಬರಲಿದೆ. ಆದರೆ, ಈ ಭಾಗದವರಲ್ಲದ ಜನ ಅರ್ಜಿ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿ ಪ್ರಮಾಣ ಪಡೆಯುತ್ತಿದ್ದು, ಅದರಿಂದ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹೈ-ಕ ಭಾಗದ ಜನರಿಗೆ ವಂಚನೆಯಾಗುತ್ತಿದೆ.

ಹೈ-ಕ ಭಾಗದವರಲ್ಲದ ಜನ ತಪ್ಪು ಮಾಹಿತಿ ದಾಖಲಿಸಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಉದ್ಯೋಗ, ಶಿಕ್ಷಣ, ಬಡ್ತಿಯಲ್ಲಿ ವಂಚನೆಯಾಗುತ್ತಿದೆ. ಕೃಷಿ ವಿವಿಯಲ್ಲಿ ಇಂಥ ಸಾಕಷ್ಟು ಪ್ರಕರಣ ನಡೆದ ಉದಾಹರಣೆಗಳಿವೆ. ಸೇವೆ ಆಧಾರದಡಿ ಪ್ರಮಾಣ ಪತ್ರ ಪಡೆಯಲು ನಿಯಮಗಳಲ್ಲಿ ಅವಕಾಶವಿಲ್ಲ. ಹಾಗೆ ಪಡೆದವರ ಪ್ರಮಾಣ ಪತ್ರ ರದ್ದುಗೊಳಿಸುವುದಲ್ಲದೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
-ಡಾ.ರಝಾಕ ಉಸ್ತಾದ, ಹೈ-ಕ ಹೋರಾಟ ಸಮಿತಿ ಮುಖಂಡ

* ಸಿದ್ದಯ್ಯಸ್ವಾಮಿ ಕುಕನೂರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ