Udayavni Special

ಗೋಲ್ಡನ್‌ ಟೆಂಪಲ್… ಇಂಥ “ಅಮೃತ’ವನ್ನು ಸವಿಯಲು ಹಿಂದೆಮುಂದೆ ನೋಡಬೇಕಿಲ್ಲ!

ಶಹೀದೀ ಕುಂವೀ' (ಹುತಾತ್ಮರ ಬಾವಿ) ಎಂಬ ಸ್ಮಾರಕವನ್ನಾಗಿಸಿ ಜೋಪಾನವಾಗಿ ಸಂರಕ್ಷಿಸಲಾಗಿದೆ.

Team Udayavani, Jan 23, 2021, 6:45 PM IST

ಗೋಲ್ಡನ್‌ ಟೆಂಪಲ್… ಇಂಥ “ಅಮೃತ’ವನ್ನು ಸವಿಯಲು ಹಿಂದೆಮುಂದೆ ನೋಡಬೇಕಿಲ್ಲ

ಅಮೃತಸರ್‌. ಭಾರತ ದೇಶದ ಗಡಿಭಾಗದ ಜಿಲ್ಲೆಗಳಲ್ಲೊಂದು. ಅದು ಪಂಜಾಬ್‌ ರಾಜ್ಯದ ಧಾರ್ಮಿಕ, ಐತಿಹಾಸಿಕ, ಸಾಂಪ್ರದಾಯಿಕವಾಗಿಯೂ ವಿಶೇಷ, ವಿಶಿಷ್ಟ
ತಾಣವೆಂದೂ ಹೇಳಿದರೆ ಅತಿಶಯವೆನಿಸದು. ಅಮೃತಸರ, ಅದರಲ್ಲೂ ಮುಖ್ಯವಾಗಿ ವಿಶ್ವಪ್ರಸಿದ್ಧ ಸ್ವರ್ಣಮಂದಿರ ಕಾಣುವ ಹೆಬ್ಬಾಸೆ ಅದೆಂದೋ ಮೂಡಿದ್ದರೂ ಅಂಥ ಅವಕಾಶ ಸಿಕ್ಕಿರಲಿಲ್ಲ. ಕೊನೆಗೂ ಅದು ಸಾಕಾರಗೊಳ್ಳುವ ಲಕ್ಷಣ ಗೋಚರವಾಗುತ್ತಿದ್ದಂತೆ ಅದರ ಕನಸು ಕಾಣುವ ಕೊನೆಯ ರಾತ್ರಿ ದೆಹಲಿಯಲ್ಲಿ ಏಸಿ ರೈಲಿನ ಸೀಟು ಹಿಡಿದು ಕುಳಿತೆ. ಪಕ್ಕದಲ್ಲಿ ಕಾಲೇಜು ಯುವಕನೊಬ್ಬ ಮೊಬೈಲಿನಲ್ಲಿ ಪಂಜಾಬಿ ಹಾಡನ್ನು ಕೇಳುತ್ತ ತಾನೂ ಅದರೊಂದಿಗೆ ಗುನುಗುನಿಸುತ್ತಿದ್ದ. ಲುಧಿಯಾನದಲ್ಲಿ ಇಳಿಯುವ ಒಂದು ಪೂರ್ತಿ ಕುಟುಂಬವದು.

ನಾನು ಪಕ್ಕದ ಕಂಪಾರ್ಟ್‌ಮೆಂಟಿನಲ್ಲಿ ಬಂದು ಕುಳಿತದ್ದನ್ನು ಕಂಡು ಆತ ಒಮ್ಮೆ ಸ್ನೇಹನಗೆ ಬೀರಿದ. ನಾನೂ ಮರುನಕ್ಕೆ. ಆ ಬಳಿಕ ಅದೇನೋ ಥಟ್ಟನೆ ನೆನಪಾದವನಂತೆ ಕಿಸೆಯಿಂದ ಒಂದಿಷ್ಟು ಹಣ ತೆಗೆದು ಎಣಿಸಿದ. ಅಲ್ಲಿಯೇ ಚಾಕಲೇಟು, ಚಿಪ್ಸ್‌ನಂತ ಕುರುಕಲು ತಿಂಡಿಯನ್ನು ಒಯ್ಯುತ್ತಿದ್ದವನನ್ನು ತಡೆದು ಒಂದು ಕ್ಯಾಡ್‌ಬರೀಸ್‌ ಕೊಂಡು ಅದನ್ನು ತೆರೆದು ನನ್ನೊಂದಿಗೆ ರೈಲು ಹತ್ತಿದವರನ್ನು ಲೆಕ್ಕ ಹಾಕಿದ. “ತೀನ್‌… ತೀನ್‌…’ ಎಂದು ತನ್ನಷ್ಟಕ್ಕೇ ಗೊಣಗುತ್ತ ಕ್ಯಾಡ್‌ಬರೀಸ್‌ನ ಮೂರು ತುಂಡನ್ನು ಮುರಿದು ನನ್ನ ಕೈಗಿತ್ತು ಉಳಿದುದ್ದನ್ನು ತಾನು ತಿಂದು ಮಲಗಿಬಿಟ್ಟ. ಸಾಮಾನ್ಯವಾಗಿ ನಾವು ಜೋಕುಗಳಲ್ಲಿ ಪಂಜಾಬಿಗಳ ಅಪಹಾಸ್ಯಗೈಯ್ಯುತ್ತೇವೆ, ಅವರನ್ನು ಜೋಕಿನ ಸರಕುಗಳನ್ನಾಗಿಸುತ್ತೇವೆ, ಅಲ್ಲಿನ ರಾಜಕಾರಣಿಗಳು ಡ್ರಗ್ಸ್‌ನಂಥ ದಂಧೆಯಲ್ಲಿ ಶಾಮೀಲಾಗಿದ್ದರೂ ಅವರ ನಿಷ್ಕ್ರಿಯತೆಯಿಂದ ಎಂದಿಗೂ ಮುಗಿಯದೇ ಉಲ್ಬಣಗೊಳ್ಳುತ್ತಿರುವ ಆ ಸಮಸ್ಯೆಯನ್ನು ಜನಸಾಮಾನ್ಯರ ತಲೆಗೇ ಕಟ್ಟುತ್ತೇವೆ. ಆದರೆ ಅವರ ಆದರಾತಿಥ್ಯ, ಭ್ರಾತೃತ್ವದ ಸದ್ಗುಣಗಳನ್ನು ಹೊಗಳುವ ಹೃದಯಶ್ರೀಮಂತಿಕೆ ತೋರುವುದಿಲ್ಲ. ಬರಿಯ ಬಾಲಿವುಡ್‌ ಚಲನಚಿತ್ರಗಳಲ್ಲಿ ಅದನ್ನೆಲ್ಲ ಕಾಣುತ್ತಿದ್ದ ನನಗೆ ಆ ತರುಣನ ಈ ನಡೆಯಿಂದ ಅದರ ಸಾಕ್ಷಾತ್‌ ದರ್ಶನವಾಗಿಬಿಟ್ಟಿತು. ಚಲನಚಿತ್ರಗಳಲ್ಲಿ ಅವರನ್ನು ಉತ್ಪ್ರೇಕ್ಷೆಯೆಂಬ ಮಟ್ಟಕ್ಕೆ ಮುಖಸ್ತುತಿಗೈಯ್ಯುತ್ತಾರೇನೋ ಎಂಬ ಭಾವ ತಿರುಗಿ ಅವರ ಬಗೆಗೊಂದು ನೈಜಾಭಿಮಾನವೂ, ಸಹಾನುಭೂತಿಯೂ ಉಂಟಾಗುವುದಕ್ಕೆಂದೇ ಈ ಘಟನೆ ಜರುಗಿತೇನೋ ಅನ್ನಿಸಿದ್ದು ಸತ್ಯ.

ಜಲಿಯನ್‌ವಾಲಾಬಾಗ್‌
ಅಮೃತಸರ್‌ ಪಟ್ಟಣದಿಂದ ಜಲಿಯನ್‌ವಾಲಾ ಬಾಗ್‌ ಮೂರು ಕಿ.ಮೀ. ವ್ಯಾಪ್ತಿಯೊಳಗೆ ಬರುತ್ತದೆ. ಬ್ರಿಟಿಷರ ರೌಲತ್‌ ಆ್ಯಕ್ಟ್‌ನ ವಿರುದ್ಧ ದಂಗೆಯೆದ್ದ ಜನ
1919ರ ಎಪ್ರಿಲ್‌ 13ರಂದು ಒಂದೆಡೆ ಸೇರಿದ ಬಳಿಕ ನಡೆದ ದುರಂತ ಭಾರತದ ಇತಿಹಾಸದಲ್ಲೇ ಇಂಗ್ಲಿಷರ ಕ್ರೌರ್ಯಕ್ಕೆ, ನೂರಾರು ಸ್ವಾತಂತ್ರ್ಯ ಹೋರಾಟಗಾರರ ಬಲಿದಾನಕ್ಕೆ ಸಾಕ್ಷಿಯಾಗಿಬಿಟ್ಟಿತು. ಸಂಜೆಯ ಹೊತ್ತಿಗೆ ಏನೊಂದೂ ಸೂಚನೆ ನೀಡದೇ ಹತ್ತರಿಂದ ಹದಿನೈದು ನಿಮಿಷ ಸತತವಾಗಿ ಗುಂಡಿನ ಸುರಿಮಳೆಗೈಯ್ಯಲು ಆದೇಶಿಸಿದ ಜನರಲ್‌ ಡೈಯರ್‌ ಜಲಿಯನ್‌ ವಾಲಾ ಬಾಗ್‌ ಹತ್ಯಾಕಾಂಡ ಎಂಬ ಕುಖ್ಯಾತಿ ತಗಲುವಂತೆ ಮಾಡಿದ ನಿರ್ಲಜ್ಜ ಕ್ರೂರಿ.

ಆತನ ಆಜ್ಞೆಯನ್ನು ಶಿರಸಾಪಾಲಿಸಿದ ಇಂಗ್ಲಿಷ್‌ ಪಡೆ ಬರೋಬ್ಬರಿ 1650 ಸುತ್ತು ಗುಂಡು ಹೊಡೆದದ್ದು ಕ್ರೌರ್ಯದ ಪರಮಾವಧಿಯೆನ್ನದೇ ವಿಧಿಯಿಲ್ಲ. ಇಂಗ್ಲಿಷರ ಗುಂಡಿನಿಂದ ಬಚಾವಾಗಲು ಯರ್ರಾಬಿರ್ರಿ ಚದುರಿದ ಜನ ಗೋಡೆಹತ್ತಲು ಪ್ರಯತ್ನ ನಡೆಸಿದ್ದು, ಇಂದಿಗೂ ಗೋಡೆಗಳ ಮೇಲಿನ ಗುಂಡಿನ ಅಚ್ಚುಗಳು ಮೂಕ ವಿವರಣೆ ನೀಡುತ್ತವೆ. ಇನ್ನೊಂದೆಡೆ ಗುಂಡಿಗೆ ಬಲಿಯಾಗಿ ಆತ್ಮಾಭಿಮಾನ ಮರೆಯುವುದಕ್ಕಿಂತ ಸಾವೇ ಲೇಸೆಂದು ನಿರ್ಧರಿಸಿ ಅಲ್ಲಿನ ಬಾವಿಗೆ ಜಿಗಿದ ನೂರಾರು ಮಂದಿಯ ನೆನಪಿಗೆ ಅದನ್ನು “ಶಹೀದೀ ಕುಂವೀ’ (ಹುತಾತ್ಮರ ಬಾವಿ) ಎಂಬ ಸ್ಮಾರಕವನ್ನಾಗಿಸಿ ಜೋಪಾನವಾಗಿ ಸಂರಕ್ಷಿಸಲಾಗಿದೆ.

ಒಂದೆಡೆ ಗೋಡೆಯ ಮೇಲೆ 38 ಅಚ್ಚುಗಳಿದ್ದು, ಇನ್ನೊಂದೆಡೆ 28 ಅಚ್ಚುಗಳು ಅಂದು ನಡೆದ ಘೋರಘಟನೆಯನ್ನು ಕಣ್ಣೆದುರು ಚಿತ್ರಪಟದಂತೆ ತೋರಿಸುತ್ತವೆ. ಇನ್ನು ವಿಶಾಲವಾದ ಕಟ್ಟಡವೊಂದರಲ್ಲಿ ದುರಂತಕ್ಕೆ ಸಂಬಂಧಪಟ್ಟ ಹುತಾತ್ಮರ ಜೀವನಗಾಥೆಯನ್ನು ಚಿತ್ರಸಮೇತ ಪ್ರದರ್ಶಿಸಲಾಗಿದೆ. ಇಡಿಯ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಿದ್ದು ಮಧ್ಯಭಾಗದಲ್ಲಿ ಅಸುನೀಗಿದವರ ನೆನಪಿಗೆ ಎತ್ತರದ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಮಧ್ಯೆ ನಿಂತು ದುರಂತ ನಡೆದ ಆ ದಿನ ಸಂಜೆ ಭಗತ್‌ಸಿಂಗ್‌ ಶಾಲಾಚೀಲ ತಂಗಿಯ ಬಳಿ ಕೊಟ್ಟು ಇಲ್ಲಿನ ಮಣ್ಣನ್ನು ಶಾಯಿ ತುಂಬಿಸುವ ಬಾಟಲಿಯಲ್ಲಿ ತುಂಬಿಸಿ ಕೊಂಡೊಯ್ದಿದ್ದನೆಂಬುದನ್ನು ನೆನೆದರೆ ಮೈ ಜುಮ್ಮೆನಿಸುತ್ತದೆ. ಇನ್ನೊಂದೆಡೆ ವಸ್ತು ಸಂಗ್ರಹಾಲಯವಿದ್ದು, ದುರ್ಘ‌ಟನೆಯ ಬಳಿಕದ ಪತ್ರ ವ್ಯವಹಾರಗಳೂ, ಪತ್ರಿಕಾ ವರದಿಗಳೂ ಕಾಣಸಿಗುತ್ತವೆ.

ಜಲಿಯನ್‌ವಾಲಾ ಬಾಗ್‌ನಿಂದ ಹೊರಕ್ಕೆ ಕಾಲಿಡುತ್ತಲೇ ದೇಶದ ಸ್ವಾತಂತ್ರ್ಯಕ್ಕೆ ನೆತ್ತರು ಹರಿಸಿದ ಅಸಂಖ್ಯಾತ ಹುತಾತ್ಮರ ನೆನಪು ಬಂದು ಕಣ್ಣು ಮಂಜಾಗಿ ಹೃದಯ ಭಾರವಾಗುತ್ತದೆ. ಸ್ವಾತಂತ್ರ್ಯಕ್ಕೆ ಹಿರಿಯರು ಪಟ್ಟ ಶ್ರಮ, ತ್ಯಾಗದ ಕುರುಹಾಗಿ ಜಲಿಯನ್‌ವಾಲಾಬಾಗ್‌ ಕಾಣಿಸುವುದರಲ್ಲಿ ಅಚ್ಚರಿಯೇನೂ ಇರದು.

ಹರ್ಮಿಂದರ್‌ ಸಾಹಿಬ್‌ (ಗೋಲ್ಡನ್‌ ಟೆಂಪಲ್‌)
ಹಿಂದಿ ಚಿತ್ರ ರಬ್‌ ನೇ ಬನಾ ದಿ ಜೋಡಿ ಕಂಡವರಿಗೆ ಶ್ರೇಯಾ ಘೋಷಾಲ್‌ ಧ್ವನಿಯು ಹಿಂಬದಿಯಿಂದ ಕೇಳುತ್ತಲೇ ಶಾರುಖ್‌ ಖಾನ್‌ ಮೆಟ್ಟಿಲು ಹತ್ತಿ ನಿಧಾನಗತಿಯಲ್ಲಿ ಬರುವ ದೃಶ್ಯ ಇಷ್ಟವಾಗದೇ ಇರಲಿಕ್ಕಿಲ್ಲ. ಅದಕ್ಕೆ ಕಾರಣ ಸ್ವರ್ಣಮಂದಿರವಲ್ಲದೇ ಬೇರೇ ಉತ್ತರ ಸಿಗಲಾರದು. ಜಲಿಯನ್‌ವಾಲಾಬಾಗ್‌ನಿಂದ ಕಾಲ್ನಡಿಗೆಯ ದೂರದಲ್ಲಿರುವ ಇದನ್ನು ಪ್ರಪಂಚದ ಅದ್ಭುತವೆಂದು ವ್ಯಾಖ್ಯಾನಿಸಿದರೂ ಅಪರಾಧವಾಗದು. ಸಿಕ್ಖರ ಪದ್ಧತಿಯಂತೆ ಶಿರೋವಸ್ತ್ರ ಧರಿಸಿ
ಒಳಹೊಕ್ಕುವಾಗ ಸ್ವರ್ಗವನ್ನೇ ಕಾಣುತ್ತಿರುವೆವೆಂಬ ಭಾವ ಮೊಳಕೆಯೊಡೆಯುತ್ತದೆ. ಒಂದೆಡೆ ಮಂದಿರದ ಚಿನ್ನದ ಬಣ್ಣವೂ, ಮಂದಿರದ ಸುತ್ತಲಿನ ವಿಶಾಲವಾದ ಕೊಳದ  ಶುಭ್ರನೀರಿನ ಬಣ್ಣವೂ, ಮೇಲ್ಗಡೆಯ ಆಗಸದ ತಿಳಿನೀಲ ಬಣ್ಣವೂ ಸೇರಿ ಮನಸ್ಸನ್ನು ಆಕರ್ಷಿಸಿ ಎಂತಹಾ ಬಾಯಿಬಡುಕರನ್ನೂ ತುಸುಹೊತ್ತು ಸ್ತಬ್ಧರನ್ನಾಗಿಸುತ್ತದೆ ಇದರ ಸೌಂದರ್ಯ! ಸಿಕ್ಖರ ನಾಲ್ಕನೇ ಗುರು, ಗುರು ರಾಮದಾಸ್‌ ಇದರ ನಿರ್ಮಾಣದ ರೂವಾರಿಯಾದರೆ, ಐದನೇ ಗುರು ಅರ್ಜನ್‌ ಸಿಂಗ್‌ ಸಿಕ್ಖರ ಪವಿತ್ರ ಗ್ರಂಥ “ಗುರುಗ್ರಂಥ ಸಾಹಿಬ್‌’ನ್ನು ಸ್ಥಾಪಿಸಿದರು.

ಸ್ವರ್ಣಮಂದಿಕ್ಕೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ದ್ವಾರಗಳಿದ್ದು ಸರ್ವಧರ್ಮೀಯರಿಗೂ ಮುಕ್ತಾಹ್ವಾನವನ್ನು ನೀಡುವುದರ ಪ್ರತೀಕದಂತಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನಕ್ಕೆ ಸರಾಸರಿ ನಲವತ್ತು ಸಾವಿರವಾದರೆ, ರಜೆಯ ಅವಧಿ ಲಕ್ಷವನ್ನೂ ದಾಟುವುದಿದೆ. ಸಿಕ್ಖರು ನೆಲದಲ್ಲಿ ಕುಳಿತು ಕಣ್ಮುಚ್ಚಿ ದೇವರಿಗೆ ಪ್ರಾರ್ಥಿಸುವಾಗಿನ ಅವರ ನಿಷ್ಕಪಟ ಭಕ್ತಿಯನ್ನು ಸೂಕ್ಷ್ಮವಾಗಿ ಕಂಡರೆ ಖುದ್ದು ದೇವರೊಡನೆ ಸಂಭಾಷಣೆಯಲ್ಲಿ ತೊಡಗಿರುವರೋ ಎಂಬಂತೆ ಭಾಸವಾಗುತ್ತದೆ. ಮಂದಿರದೊಳಹೊಕ್ಕರೆ ಸಿಕ್ಖರ ಗುರುಗಳು ಗುರುಗ್ರಂಥ ಸಾಹಿಬ್‌ ಪಠಿಸುತ್ತಿರುತ್ತಾರೆ. ಮೇಲೆ ತಿರುಗುವ ಫ್ಯಾನಿನಿಂದ ಹಿಡಿದು ಬಳಸುವ  ಹಾರ್ಮೋನಿಯಂವರೆಗೂ ಎಲ್ಲವೂ ಚಿನ್ನವೇ ಎಂಬುದು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.

ವಾಘಾ ಗಡಿ
ಅಮೃತ್‌ಸರ್‌ ದೇಶದ ಗಡಿಭಾಗದ ಜಿಲ್ಲೆ. ಈ ಜಿಲ್ಲೆಯ ಕಟ್ಟಕಡೆಯ ಊರು ಅಟ್ಟಾರಿ. ಅಲ್ಲಿಂದ ಪಾಕಿಸ್ತಾನದ ಲಾಹೋರ್‌ಗೆ ಕೇವಲ 23 ಕಿ.ಮೀ. ಅಮೃತ್‌ಸರ
ಪಟ್ಟಣದಿಂದ ವಾಘಾ ಗಡಿಗೆ 32 ಕಿ.ಮೀ. ಪ್ರಯಾಣವಷ್ಟೇ. ದಾರಿಯುದ್ದಕ್ಕೂ ಮಿಲಿಟರಿ ಪಡೆಯ ಕಾರ್ಯಸ್ಥಾನಗಳು ಕಾಣಿಸುತ್ತವೆ. ಎಲ್ಲಿ ನೋಡಿದರೂ ಬಿಎಸ್‌ಎಫ್ ಯೋಧರ ಖಾಕಿ ಬಟ್ಟೆಯೇ!

ಅಮೃತ್‌ಸರಕ್ಕೆ ತೆರಳಿದರೆ ಒಂದೇ ದಿನದಲ್ಲಿ ತ್ರಾಸಪಡದೇ ನೋಡಬಹುದಾದ ಜಾಗಗಳು ಇವು ಮೂರಾದರೂ, ಪ್ರೇಕ್ಷಣೀಯ ಸ್ಥಳಗಳಿಗೇನೂ ಕಡಿಮೆಯಿಲ್ಲ. ಜಲಿಯನ್‌ವಾಲಾ ಬಾಗ್‌ ಐತಿಹಾಸಿಕವಾಗಿ ಹಿಂದೆ ನಡೆದುದ್ದನ್ನು ಕಲ್ಪಿಸಿಕೊಳ್ಳುವ ಅವಕಾಶವಿತ್ತರೆ, ಸ್ವರ್ಣಮಂದಿರ ಧಾರ್ಮಿಕ ಮತ್ತು ಸೌಂದರ್ಯದ ನೆಲೆಯಲ್ಲಿ ನೆನಪುಳಿಯುತ್ತದೆ. ಇನ್ನು ವಿದೇಶೀ ಪ್ರವಾಸಿಗರನ್ನೇ ಸೆಳೆಯುವ ವಾಘಾಗಡಿಯ ಮಹತ್ವದ ಬಗ್ಗೆ ವಿವರಿಸಬೇಕಿಲ್ಲ. ಹೀಗೇ ಈ ಮೂರನ್ನೂ ಒಮ್ಮೆ ಕಂಡ ಬಳಿಕ ಊರಿಗೆ ಮರಳಿ ಎಷ್ಟು ಕಾಲ ಸಂದರೂ ಸ್ಮತಿಯಲ್ಲಿ ಇವೆಲ್ಲವೂ ಒಟ್ಟಾಗಿ ಅನುಭವವನ್ನು ಅಮೃತದಂತೆ ಗುಟುಕು ಗುಟುಕಾಗಿ ನೀಡುತ್ತಲೇ ಇರುತ್ತವೆ. ಅವಕಾಶ ಸಿಕ್ಕಿದರೆ ಇಂಥ “ಅಮೃತ’ವನ್ನು ಸವಿಯಲು ಹಿಂದೆಮುಂದೆ ನೋಡಬೇಕಿಲ್ಲ.

*ಅರ್ಜುನ್‌ ಶೆಣೈ

ಟಾಪ್ ನ್ಯೂಸ್

ಗುಜರಾತ್ ನಲ್ಲಿ ಕಾಂಗ್ರೆಸ್ ಹಿನ್ನಡೆ : ಅಮಿತ್ ಚಾವ್ ​ಡಾ ರಾಜೀನಾಮೆ

ಭದ್ರತೆ ನಡುವೆಯೂ ಕೆಆರ್‌ಎಸ್ ಬೃಂದಾವನದಲ್ಲಿ ಗಂಧದ ಮರ ಕಳವಿಗೆ ಯತ್ನ

ಭದ್ರತೆ ನಡುವೆಯೂ ಕೆಆರ್‌ಎಸ್ ಬೃಂದಾವನದಲ್ಲಿ ಗಂಧದ ಮರ ಕಳವಿಗೆ ಯತ್ನ

ಮಂಡ್ಯ : ನಿರ್ಬಂಧವಿದ್ದರೂ ಕೆಆರ್‌ಎಸ್ ಡ್ಯಾಂ ಮೇಲೆ ವಾಹನ ಚಾಲನೆ ಆರೋಪ ; ಪಿಎಸ್‌ಐ ಅಮಾನತು

ಮಂಡ್ಯ : ನಿರ್ಬಂಧವಿದ್ದರೂ ಕೆಆರ್‌ಎಸ್ ಡ್ಯಾಂ ಮೇಲೆ ವಾಹನ ಚಾಲನೆ ಆರೋಪ ; ಪಿಎಸ್‌ಐ ಅಮಾನತು

Dishaank app helps you check Karnataka land records

ಭೂಮಿಯ ಬಗ್ಗೆ ಪಿನ್ ಟು ಪಿನ್ ಮಾಹಿತಿ ನೀಡುತ್ತದೆ “ದಿಶಾಂಕ್ ಆ್ಯಪ್”..!

ನಿವೃತ್ತಿಗೊಂಡು ತವರಿಗೆ ಮರಳಿದ ಯೋಧನಿಗೆ ಗ್ರಾಮಸ್ಥರಿಂದ ಸಾಂಪ್ರದಾಯಿಕ ಸ್ವಾಗತ

ನಿವೃತ್ತಿಗೊಂಡು ತವರಿಗೆ ಮರಳಿದ ಯೋಧನಿಗೆ ಗ್ರಾಮಸ್ಥರಿಂದ ಸಾಂಪ್ರದಾಯಿಕ ಸ್ವಾಗತ

Jagadish Shettar talk about congress

ವಂಶಪಾರಂಪರ್ಯ ರಾಜಕೀಯದಿಂದ ಕಾಂಗ್ರೆಸ್ ಉದ್ಧಾರ ಆಗಲ್ಲ: ಜಗದೀಶ್ ಶೆಟ್ಟರ್

Congress Workers Stage Protest Against Ghulam Nabi Azad In Jammu

ಮೋದಿಗೆ ಬಹುಪರಾಕ್ : ಜಮ್ಮುವಿನಲ್ಲಿ ಆಜಾದ್ ವಿರುದ್ಧ ಆಕ್ರೋಶ ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

the-solution-for-the-obesity

ಆಧುನಿಕ ಶೈಲಿಯ ಆಹಾರ ಪದಾರ್ಥ; ಸ್ಥೂಲಕಾಯ ನಿವಾರಣೆಗೆ ಸರಳ ಮನೆಮದ್ದು

Special Interview with Lyricist Nagendra Prasad

ಎಕ್ಸ್ ಕ್ಲ್ಯೂಸಿವ್ ಇಂಟರ್ ವ್ಯೂ – ‘ಭಾರತ ಸಂಗೀತ ಪ್ರಧಾನವಾದ ದೇಶ’ : ನಾಗೇಂದ್ರ ಪ್ರಸಾದ್

ಫೆಡರರ್‌, ನಡಾಲ್‌, ಜೊಕೊ‌:ತ್ರಿವಿಕ್ರಮರಿಗೆ ಇನ್ನೆಷ್ಟು ಗ್ರ್ಯಾನ್‌ಸ್ಲ್ಯಾಮ್‌ ಒಲಿಯುತ್ತೆ?

ಫೆಡರರ್‌, ನಡಾಲ್‌, ಜೋಕೊ‌: ತ್ರಿವಿಕ್ರಮರಿಗೆ ಇನ್ನೆಷ್ಟು ಗ್ರ್ಯಾನ್‌ಸ್ಲ್ಯಾಮ್‌ ಒಲಿಯುತ್ತೆ?

Untitled-1

ಆಟೋವೇ ಅರಮನೆ : ಮೊಮ್ಮಕ್ಕಳ ಶಿಕ್ಷಣಕ್ಕಾಗಿ ಆಟೋ ಓಡಿಸಿ ಬದುಕು ಸಾಗಿಸುವ 74 ರ ವೃದ್ಧ

Sridevi death anniversary: Lesser-known facts about the ‘first female superstar’ of Indian cinema

ಶ್ರೀದೇವಿ ಪುಣ್ಯಸ್ಮರಣೆ : ಬೊಗಸೆ ಕಂಗಳ ನಟಿ ಅಭಿಮಾನಿಗಳಿಗೆ ಆಘಾತ ನೀಡಿದ ದಿನವಿದು..!

MUST WATCH

udayavani youtube

Udayavani 02-March-2021 News Bulletin | Udayavani

udayavani youtube

ಮಂಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ನೂತನ ಮೇಯರ್ ಪ್ರೇಮಾನಂದ ಶೆಟ್ಟಿ

udayavani youtube

ಹಳೆಯ ವೃತ್ತ ಪತ್ರಿಕೆಯಿಂದ ಶಿವಾಜಿ ಮಹಾರಾಜರ ಕಲಾಕೃತಿ:

udayavani youtube

ಚಿಟ್ ಚಾಟ್ ವಿಥ್ ಸಿಂಗರ್ ಶ್ರೀ ಹರ್ಷ | Interview with Shree Harsha | Harshadhwani

udayavani youtube

FRIDGE ನೀರು ದೇಹದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ?

ಹೊಸ ಸೇರ್ಪಡೆ

ಗುಜರಾತ್ ನಲ್ಲಿ ಕಾಂಗ್ರೆಸ್ ಹಿನ್ನಡೆ : ಅಮಿತ್ ಚಾವ್ ​ಡಾ ರಾಜೀನಾಮೆ

ಭದ್ರತೆ ನಡುವೆಯೂ ಕೆಆರ್‌ಎಸ್ ಬೃಂದಾವನದಲ್ಲಿ ಗಂಧದ ಮರ ಕಳವಿಗೆ ಯತ್ನ

ಭದ್ರತೆ ನಡುವೆಯೂ ಕೆಆರ್‌ಎಸ್ ಬೃಂದಾವನದಲ್ಲಿ ಗಂಧದ ಮರ ಕಳವಿಗೆ ಯತ್ನ

ಮಂಡ್ಯ : ನಿರ್ಬಂಧವಿದ್ದರೂ ಕೆಆರ್‌ಎಸ್ ಡ್ಯಾಂ ಮೇಲೆ ವಾಹನ ಚಾಲನೆ ಆರೋಪ ; ಪಿಎಸ್‌ಐ ಅಮಾನತು

ಮಂಡ್ಯ : ನಿರ್ಬಂಧವಿದ್ದರೂ ಕೆಆರ್‌ಎಸ್ ಡ್ಯಾಂ ಮೇಲೆ ವಾಹನ ಚಾಲನೆ ಆರೋಪ ; ಪಿಎಸ್‌ಐ ಅಮಾನತು

Dishaank app helps you check Karnataka land records

ಭೂಮಿಯ ಬಗ್ಗೆ ಪಿನ್ ಟು ಪಿನ್ ಮಾಹಿತಿ ನೀಡುತ್ತದೆ “ದಿಶಾಂಕ್ ಆ್ಯಪ್”..!

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.