ಕೋಟ ಸಮೀಪ ವಡ್ಡರ್ಸೆಯಲ್ಲಿ ಗೊರಿಲ್ಲ ಪ್ರತ್ಯಕ್ಷ!
Team Udayavani, Jan 6, 2021, 7:39 PM IST
ಕೋಟ: ವಡ್ಡರ್ಸೆ ಪ್ರೌಢಶಾಲೆ ಸಮೀಪ ಬುಧವಾರ ಬೆಳಗಿನ ಜಾವ ಅಪರೂಪದ ಗೋರಿಲ್ಲ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ಸ್ಥಳೀಯ ಮನೆಗಳಿಗೆ ಪತ್ರಿಕೆ ವಿತರಿಸುವ ಪ್ರಜ್ವಲ ಎನ್ನುವ ಯುವಕ ಬೆಳಗ್ಗೆ ಪತ್ರಿಕೆ ವಿತರಿಸಲು ತೆರಳುವ ಸಂದರ್ಭ ಗೋರಿಲ್ಲ ಎದುರಾಗಿದ್ದು ಸ್ವಲ್ಪ ದೂರದವರೆಗೆ ಅಟ್ಟಿಸಿಕೊಂಡು ಬಂದು ಮರವನ್ನೇರಿ ಕುಳಿತಿದೆ. ಅನಂತರ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ಗೋರಿಲ್ಲ ಚಲನವಲನಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. ಕಳೆದ ಎರಡು-ಮೂರು ದಿನಗಳಿಂದ ಈ ಪ್ರದೇಶದಲ್ಲಿದೆ ಇದು ಕಾಣಸಿಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬಂದಿ ಅಕ್ಷತಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಇಲಾಖೆಯವರು ಸ್ಥಳಕ್ಕಾಗಮಿಸುವಾಗ ಗೋರಿಲ್ಲ ಸ್ಥಳದಿಂದ ನಾಪತ್ತೆಯಾಗಿದೆ.
ಗೋರಿಲ್ಲ ಅಪರೂಪ
ಆಗುಂಬೆ ಪಶ್ಚಿಮ ಘಟದಲ್ಲೂ ಗೋರಿಲ್ಲ ಕಾಣಸಿಕ್ಕಿರುವುದು ಅಪರೂಪವಾಗಿದೆ ಹಾಗೂ ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಇದು ಕಾಣಸಿಕ್ಕಿದ್ದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಹತ್ತಿರದಲ್ಲಿ ರೈಲ್ವೇ ರಸ್ತೆ ಇದ್ದು ರೈಲಿನಲ್ಲಿ ಪ್ರಾಣಿಗಳನ್ನು ಸಾಗಿಸುವಾಗ ತಪ್ಪಿಸಿಕೊಂಡಿರಬಹುದು ಅಥವಾ ಬೇರೆ ಕಡೆಯಿಂದ ಇಲ್ಲಿಗೆ ತಂದು ಬಿಟ್ಟಿರಬಹುದು ಎಂದು ಸಂಶಯಿಸಲಾಗಿದೆ.
ಈ ಪ್ರದೇಶದಲ್ಲಿ ಇದಕ್ಕೆ ಸೂಕ್ತ ಆಹಾರವಿಲ್ಲದ ಕಾರಣ ಪ್ರಾಣಕ್ಕೆ ಕಂಟಕ ಎದುರಾಗುವ ಸಾಧ್ಯತೆ ಇರುವುದರಿಂದ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.