ಮಳೆಗಾಗಿ ಗೊಂಬೆಗಳ ಅದ್ಧೂರಿ ಮದುವೆ
Team Udayavani, May 29, 2022, 4:08 PM IST
ಲೋಕಾಪುರ: ಎಲ್ಲೆಡೆ ಮಳೆಯಾಗಲಿ ಎಂದು ವರ್ಚಗಲ್ ಗ್ರಾಮದಲ್ಲಿ ಗೊಂಬೆಗಳ ಮದುವೆ ಮಾಡುವ ಮೂಲಕ ಗ್ರಾಮಸ್ಥರು ವರುಣ ದೇವರಲ್ಲಿ ಪ್ರಾರ್ಥಿಸಿದರು.
ಗ್ರಾಮದಲ್ಲಿ ಮದುವೆಯ ಸಡಗರವಿತ್ತು, ಮದುವೆಯ ಸಂದರ್ಭದಲ್ಲಿ ಮಾಡಬೇಕಾದ ಎಲ್ಲ ಕೈಂಕರ್ಯಗಳು ನಡೆಯುತ್ತಿದ್ದವು. ಓಣಿಯಲ್ಲಿನ ಎಲ್ಲರೂ ಸಂಭ್ರಮದಿಂದ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಓಣಿಯ ಹಿರಿಯರು ಗೊಂಬೆಗಳಿಗೆ ಅರಿಶಿಣ ಹಾಗೂ ಅರಿಷಿಣ ನೀರು ಹಾಕಿದರು. ಚಿಕ್ಕ ಮಕ್ಕಳ ಕೈಯಲ್ಲಿ ಈ ಗೊಂಬೆಗಳನ್ನು ಕೊಟ್ಟು ಅವರ ಮೂಲಕವೇ ಗೊಂಬೆಗಳ ಮದುವೆ ಮಾಡಿದ್ದಾರೆ. ಹೆಣ್ಣು ಮತ್ತು ಗಂಡು ಗೊಂಬೆಗಳಿಗೆ ಸುರಗಿ ಕಟ್ಟುವುದು, ವಿಶೇಷ ಆರತಿ ಮಾಡುವುದು ಹೀಗೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಡೆಯುವ ಸಾಮಾನ್ಯ ಮದುವೆಗಳಂತೆಯೇ ಗೊಂಬೆಗಳಿಗೆ ಮದುವೆಗೂ ಎಲ್ಲ ನಿಯಮಗಳನ್ನು ಪಾಲನೆ ಮಾಡಿದ್ದು ಗಮನಾರ್ಹವಾಗಿತ್ತು.
ಗ್ರಾಮಸ್ಥರಾದ ಈರಪ್ಪ ಕಟ್ಟಿ, ಭಗವಂತಪ್ಪ ತುಳಸಿಗೇರಿ, ವೆಂಕಪ್ಪ ಈಳಗೇರಿ, ವಿಠ್ಠಲ ತುಳಸಿಗೇರಿ, ಹಣಮಪ್ಪ ತುಳಸಿಗೇರಿ, ಬಸನಗೌಡ ಪಾಟೀಲ, ಪಾರ್ವತೆವ್ವ ಪಾಟೀಲ, ರಂಗವ್ವ ಪಾಟೀಲ, ಚೆಂದವ್ವ ಚಿಕ್ಕೂರ, ರೇಣುಕಾ ಕುಂಬಾರ, ಛಾಯಪ್ಪಗೌಡ ಪಾಟೀಲ, ಮಹಾದೇವಿ ಪಾಟೀಲ, ಹಣಮವ್ವ ಮುತ್ತಣ್ಣವರ, ಬಸನಗೌಡ ಪಾಟೀಲ ಇತರರು ಇದ್ದರು.