ಜಿಎಸ್‌ಟಿ ತೆರಿಗೆ ಸಂಗ್ರಹ ಆಶಾದಾಯಕ

Team Udayavani, Jun 30, 2019, 3:10 AM IST

ಬೆಂಗಳೂರು: 2017-18ನೇ ಹಣಕಾಸು ವರ್ಷದಲ್ಲಿ ರಾಷ್ಟ್ರಾದ್ಯಂತ ಮಾಸಿಕ ಸರಾಸರಿ ಜಿಎಸ್‌ಟಿ ಸಂಗ್ರಹ 82,295 ಕೋಟಿ ರೂ. ಇದ್ದರೆ, 2018-19ನೇ ಸಾಲಿನಲ್ಲಿ ಇದು 98,114 ಕೋಟಿ ರೂ.ಗೆ ಏರಿಕೆಯಾಗಿದೆ. ಶೇ.19ರಷ್ಟು ಏರಿಕೆ ಕಂಡು ಬಂದಿದ್ದು, ತೆರಿಗೆ ಸಂಗ್ರಹ ಆಶಾದಾಯಕವಾಗಿದೆ ಎಂದು ಜಿಎಸ್‌ಟಿ ನೆಟ್‌ವರ್ಕ್‌ ಸಚಿವರ ತಂಡದ ಮುಖ್ಯಸ್ಥ, ಬಿಹಾರ ಉಪಮುಖ್ಯಮಂತ್ರಿ ಸುಶೀಲ್‌ಕುಮಾರ್‌ ಮೋದಿ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಜಿಎಸ್‌ಟಿಎನ್‌ ಸಚಿವರ ತಂಡದ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಜಿಎಸ್‌ಟಿ ಜಾರಿಯಾಗಿ ಎರಡು ವರ್ಷ ಕಳೆಯುತ್ತಿದ್ದು, ತೆರಿಗೆ ಸಂಗ್ರಹ ಆಶಾದಾಯಕವಾಗಿದೆ. ಜಿಎಸ್‌ಟಿ ಜಾರಿಯಾದ 2017ರ ಜುಲೈನಿಂದ 2019ರ ಮಾರ್ಚ್‌ವರೆಗಿನ 21 ತಿಂಗಳಲ್ಲಿ ಮಾಸಿಕ ಸರಾಸರಿ ಜಿಎಸ್‌ಟಿ 91,334 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿಸಿದರು.

2015-16ನೇ ಆರ್ಥಿಕ ವರ್ಷವನ್ನು ಆಧಾರ ವರ್ಷವಾಗಿ ಪರಿಗಣಿಸಿದರೆ ಆ ವರ್ಷದಲ್ಲಿ ಮಾಸಿಕ ಸರಾಸರಿ ವ್ಯಾಟ್‌ ಸಂಗ್ರಹ 70,000 ಕೋಟಿ ರೂ.ಇತ್ತು. ಹಿಂದಿನ ವ್ಯಾಟ್‌ ಪದ್ಧತಿಯಡಿ ರಾಜ್ಯ ಸರ್ಕಾರಗಳು ವಾರ್ಷಿಕವಾಗಿ ಸಂಗ್ರಹಿಸುತ್ತಿದ್ದ ತೆರಿಗೆ ಪ್ರಮಾಣದಲ್ಲಿ ಶೇ.14ರಷ್ಟು ಹೆಚ್ಚುವರಿ ಗಳಿಕೆ ಮಿತಿ ನೀಡಲಾಗಿದ್ದು, ಈ ಮಿತಿಗಿಂತ ಕಡಿಮೆ ತೆರಿಗೆ ಸಂಗ್ರಹವಾದರೆ ವ್ಯತ್ಯಾಸದ ಮೊತ್ತವನ್ನು ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ಭರಿಸುವ ಭರವಸೆ ನೀಡಿದೆ.

ಅದರಂತೆ ಪರಿಹಾರ ನೀಡಲಾಗುತ್ತಿದೆ. ಆದರೆ, 2019-2020ನೇ ಸಾಲಿನಲ್ಲಿ ಒಂದಷ್ಟು ರಾಜ್ಯಗಳು ಪರಿಹಾರ ಪಡೆಯುವ ವ್ಯಾಪ್ತಿಯಿಂದ ಹೊರ ಬರುವ ನಿರೀಕ್ಷೆ ಇದೆ. ಐದು ವರ್ಷ ಪೂರ್ಣಗೊಳ್ಳುವ ವೇಳೆಗೆ ಎಲ್ಲ ರಾಜ್ಯಗಳು ಪರಿಹಾರ ವ್ಯಾಪ್ತಿಯಿಂದ ಮುಕ್ತವಾಗುವ ವಿಶ್ವಾಸವಿದೆ ಎಂದು ಹೇಳಿದರು.

800 ಉತ್ಪನ್ನಗಳ ತೆರಿಗೆ ಇಳಿಕೆ: ಜಿಎಸ್‌ಟಿ ಜಾರಿಯಾದಾಗಿನಿಂದ ಈವರೆಗೆ 800 ಉತ್ಪನ್ನಗಳ ತೆರಿಗೆ ಇಳಿಕೆ ಮಾಡಲಾಗಿದೆ. ತೆರಿಗೆ ಸಂಗ್ರಹ ಹೆಚ್ಚಾದಂತೆ ತೆರಿಗೆ ಪ್ರಮಾಣ ಇಳಿಕೆಯಾಗಬೇಕೆಂಬ ನಿರೀಕ್ಷೆ ಸಹಜ. ಹಿಂದೆ ಅಬಕಾರಿ ಸುಂಕದ ಜತೆಗೆ ವ್ಯಾಟ್‌ ತೆರಿಗೆ ಕೂಡ ಸಂಗ್ರಹಿಸಲಾಗುತ್ತಿತ್ತು. ಎರಡನ್ನೂ ಒಟ್ಟುಗೂಡಿಸಿ ಜಿಎಸ್‌ಟಿಯಡಿ ಕಡಿಮೆ ತೆರಿಗೆ ವಿಧಿಸಲಾಗಿದೆ ಎಂದು ಅವರು ಹೇಳಿದರು. ಸಚಿವ ಬಂಡೆಪ್ಪ ಕಾಶೆಂಪುರ, ಜಿಎಸ್‌ಟಿಎನ್‌ ಸಿಇಒ ಪ್ರಕಾಶ್‌ ಕುಮಾರ್‌ ಉಪಸ್ಥಿತರಿದ್ದರು.

ತೆರಿಗೆ ವಂಚಕರು ಪಾರಾಗಲು ಸಾಧ್ಯವಿಲ್ಲ: ಜಿಎಸ್‌ಟಿ ತೆರಿಗೆ ವಂಚಕರು ಪಾರಾಗಲು ಸಾಧ್ಯವೇ ಇಲ್ಲ. ಅಕ್ರಮ ವಿಧಾನಗಳ ಮೂಲಕ ತೆರಿಗೆ ವಂಚಿಸುವವರನ್ನು ತಂತ್ರಜ್ಞಾನದ ನೆರವಿನಿಂದ ಕುಳಿತಲ್ಲೇ ಪತ್ತೆ ಹಚ್ಚಿ ವಂಚಿಸಿದ ತೆರಿಗೆ ಮೊತ್ತವನ್ನು ವಸೂಲು ಮಾಡಲಾಗುವುದು ಎಂದು ಮೋದಿ ಎಚ್ಚರಿಕೆ ನೀಡಿದರು.

ನಕಲಿ ಬಿಲ್‌ಗ‌ಳನ್ನು ಸೃಷ್ಟಿಸಿ ವಾಸ್ತವದಲ್ಲಿ ಸರಕು ಖರೀದಿಸದೆ, ಮಾರಾಟ ಮಾಡದೆ ಹುಟ್ಟುವಳಿ ತೆರಿಗೆ (ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌) ಪಡೆದು ವಂಚಿಸುವುದು ಹೆಚ್ಚಾಗಿದೆ. ಅಲ್ಲದೇ ಮೂರ್‍ನಾಲ್ಕು ಹೆಸರಿನಲ್ಲಿ ಕಂಪನಿ ನೋಂದಾಯಿಸಿ ಸರಕು, ಉತ್ಪನ್ನವನ್ನು ಖರೀದಿಸದೆ ಒಬ್ಬರಿಂದೊಬ್ಬರು ಖರೀದಿಸಿ ಮಾರಾಟ ಮಾಡಿದಂತೆ ದಾಖಲೆ ಸೃಷ್ಟಿಸಿ “ಸಕ್ಯುಲೇಟಿಂಗ್‌ ಟ್ರೇಡಿಂಗ್‌’ನಡಿ ವಂಚಿಸುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಬಿಹಾರದಲ್ಲಿ ಒಂದೇ ಪ್ರಕರಣದಲ್ಲಿ 226 ಕೋಟಿ ರೂ.ವಂಚಿಸಿರುವುದು ಬಯಲಾಗಿದೆ ಎಂದು ಹೇಳಿದರು.

ವ್ಯಾಪಾರ- ವಹಿವಾಟುದಾರರ ಪೈಕಿ ಕೆಲವರು ಎಷ್ಟೇ ಬುದ್ಧಿವಂತಿಕೆ ಉಪಯೋಗಿಸಿ ವಂಚಿಸಿದರೂ ಮೂರ್‍ನಾಲ್ಕು ವರ್ಷವಾದರೂ ಅಕ್ರಮವನ್ನು ಪತ್ತೆ ಹಚ್ಚಿಯೇ ತೀರಲಾಗುವುದು. ಅಕ್ರಮ ಪತ್ತೆಗಾಗಿ ಕಂಪನಿ, ವಹಿವಾಟು ನಡೆಸುವ ಸ್ಥಳಕ್ಕೆ ಭೇಟಿ ನೀಡಬೇಕೆಂದೇನೂ ಇಲ್ಲ. ಕುಳಿತಲ್ಲೇ ಮಾಹಿತಿ ಪಡೆದು ಅಕ್ರಮಗಳನ್ನು ಬಯಲಿಗೆಳೆಯುವ ವ್ಯವಸ್ಥೆ ಇದೆ. ಹಾಗಾಗಿ, ತೆರಿಗೆ ವಂಚಿಸಿದರೆ ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದರು.

* ಜಿಎಸ್‌ಟಿ ಸಂಗ್ರಹ ಆಶಾದಾಯಕವಾಗಿದ್ದು, ವ್ಯಾಪಾರ- ವಹಿವಾಟುದಾರರು ಇನ್ನಷ್ಟು ಸರಳವಾಗಿ ರಿಟರ್ನ್ಸ್ ಸಲ್ಲಿಸಲು ಅನುಕೂಲವಾಗುವಂತೆ ಅಕ್ಟೋಬರ್‌ನಿಂದ ಹೊಸ ವ್ಯವಸ್ಥೆ ತರಲು ಸಿದ್ಧತೆ ನಡೆಸಿದೆ. ವ್ಯಾಪಾರ-ಗ್ರಾಹಕ ವ್ಯವಹಾರವನ್ನಷ್ಟೇ ನಡೆಸುವ ವಹಿವಾಟುದಾರರಿಗೆ “ಸಹಜ್‌’, ವ್ಯಾಪಾರ-ವ್ಯಾಪಾರ ವ್ಯವಹಾರದಲ್ಲಿ ನಿರತರಾದವರಿಗೆ “ನಾರ್ಮಲ್‌’, ವ್ಯಾಪಾರ-ವ್ಯಾಪಾರ ಹಾಗೂ ವ್ಯಾಪಾರ-ಗ್ರಾಹಕ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ “ಸುಗಮ್‌’ನಡಿ ಒಂದೊಂದೇ ರಿಟರ್ನ್ಸ್ ಸಲ್ಲಿಕೆ ವ್ಯವಸ್ಥೆ ತರಲು ಪ್ರಯತ್ನ ನಡೆದಿದೆ. ಇದರಿಂದ ವಹಿವಾಟುದಾರರು ಮಾಸಿಕವಾರು 3ಬಿ, ಆರ್‌-1 ವಿವರ ಸಲ್ಲಿಕೆ ಬದಲಿಗೆ ಒಂದು ರಿಟರ್ನ್ಸ್ ಸಲ್ಲಿಸಿದರೆ ಸಾಕು.

* ಐದು ಕೋಟಿ ರೂ.ಮಿತಿಯೊಳಗೆ ವಹಿವಾಟು ನಡೆಸುವವರಿಗೆ 2020ರ ಜನವರಿ ಹಾಗೂ ಐದು ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವವರಿಗೆ ಮುಂದಿನ ಅಕ್ಟೋಬರ್‌ನಿಂದಲೇ ಈ ವ್ಯವಸ್ಥೆ ಜಾರಿಯಾಗಲಿದೆ. ಸರಳವಾಗಿ ರಿಟರ್ನ್ಸ್ ವಿವರ ದಾಖಲಿಸುವ ಮಾದರಿ ಜು.1ರಂದು ಬಿಡುಗಡೆಯಾಗಲಿದೆ.

* ರಫ್ತುದಾರರು ತಮ್ಮ ಬಾಕಿ ಮರು ಪಾವತಿಯನ್ನು ಸಕಾಲದಲ್ಲಿ ಪಡೆಯಲಾಗದೆ ತೊಂದರೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಜಿಎಸ್‌ಟಿಯಿಂದ ಬಾಕಿ ಮರುಪಾವತಿ ಪ್ರಕ್ರಿಯೆ ನಡೆಯುತ್ತಿತ್ತು. ಈ ಬಗ್ಗೆ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಿಂದ ಆಕ್ಷೇಪ ಕೇಳಿ ಬಂದಿತ್ತು. ಹಾಗಾಗಿ, ಕೇಂದ್ರ ಜಿಎಸ್‌ಟಿ ಒಂದೇ ಮೂಲದಿಂದಲೇ ಬಾಕಿ ಮರುಪಾವತಿ ವ್ಯವಸ್ಥೆಯನ್ನು ಮುಂದಿನ ಸೆಪ್ಟೆಂಬರ್‌ನಿಂದ ಜಾರಿ ಮಾಡಲಾಗುವುದು.

* ಜಿಎಸ್‌ಟಿ ಜಾರಿ ಬಳಿಕ ತೆರಿಗೆ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದಿರುವುದನ್ನು ನಿಯಂತ್ರಿಸಲು ರೂಪಿಸಲಾದ ಲಾಭಕೋರತನ ನಿಯಂತ್ರಣ ಪ್ರಾಧಿಕಾರಕ್ಕೆ (ಆ್ಯಂಟಿ ಪ್ರಾಫಿಟಿಯರಿಂಗ್‌ ಅಥಾರಿಟಿ) ಹೆಚ್ಚು ಒತ್ತು ನೀಡಲಾಗಿದೆ. ನಿಯಮ ಉಲ್ಲಂಘನೆಗೆ 25,000 ರೂ.ದಂಡ ವಿಧಿಸಲು ಅವಕಾಶವಿದ್ದು, 30 ದಿನದೊಳಗೆ ಪಾವತಿಸದಿದ್ದರೆ ಶೇ.10ರಷ್ಟು ದಂಡ ವಿಧಿಸಲು ನಿರ್ಧರಿಸಲಾಗಿದೆ. ಈಗಾಗಲೇ ಆ್ಯಂಟಿ ಪ್ರಾಫಿಟಿಯಿರಿಂಗ್‌ ಪ್ರಾಧಿಕಾರದಡಿ 606 ಕೋಟಿ ರೂ.ದಂಡ ವಿಧಿಸಿದ್ದು, 224 ಕೋಟಿ ರೂ.ವಸೂಲಿ ಮಾಡಲಾಗಿದೆ.

* ಅಕ್ರಮ ಸರಕು ಸಾಗಣೆ ನಿಯಂತ್ರಣಕ್ಕೆ “ಇ- ಇನ್‌ವಾಯ್ಸಿಂಗ್‌’ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. 50 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವ ವ್ಯಾಪಾರ-ವ್ಯಾಪಾರ ವ್ಯವಹಾರದಲ್ಲಿ “ಎಲೆಕ್ಟ್ರಾನಿಕ್‌ ಇನ್‌ವಾಯ್ಸಿಂಗ್‌’ ವ್ಯವಸ್ಥೆ ತರಲಿದ್ದು, ಇದರಲ್ಲಿ ವಹಿವಾಟುದಾರರು “ರಿಟರ್ನ್ಸ್’ ಸಲ್ಲಿಸುವ ಪ್ರಮೇಯವೇ ಇರುವುದಿಲ್ಲ.

* “ಇ- ವೇ ಬಿಲ್‌’ ವ್ಯವಸ್ಥೆ ತಂದರೂ ಸರಕು ಸಾಗಣೆಯಾಗುವ ಅಂತರದ ಬಗ್ಗೆ ಸ್ಪಷ್ಟತೆ ಇಲ್ಲದೆ ಗೊಂದಲವಿದೆ. ಕೆಲವೆಡೆ “ಇ-ವೇ ಬಿಲ್‌’ಗೆ ಸಮೂದಿಸಿರುವ ವಾಹನಗಳ ನೋಂದಣಿ ಪರಿಶೀಲಿಸಿದರೆ ಸ್ಕೂಟರ್‌, ದ್ವಿಚಕ್ರ ವಾಹನಗಳಿರುವುದು ಕಂಡು ಬಂದಿದೆ. ಆ ಹಿನ್ನೆಲೆಯಲ್ಲಿ ವಾಹನಗಳಿಗೂ “ಆರ್‌ಎಫ್ಐಡಿ’ ಟ್ಯಾಗ್‌ ಅಳವಡಿಕೆಗೆ ನಿರ್ದಿಷ್ಟ ಕಾಲಾವಕಾಶ ನೀಡಿ, ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದೆ. ಹಾಗೆಯೇ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಂತ್ರಣದಲ್ಲಿರುವ 450 ಟೋಲ್‌ಗೇಟ್‌ಗಳಲ್ಲಿ ಆರ್‌ಎಫ್ಐಡಿ ಟ್ಯಾಗ್‌ ಸ್ಕ್ಯಾನಿಂಗ್‌ ಮೂಲಕ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ತರಲು ಪ್ರಯತ್ನ ನಡೆದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕುಂದಗೋಳ: ವೇತನ ಪಾವತಿ ವಿಳಂಬ ಖಂಡಿಸಿ ತಾಲೂಕಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ ದರ್ಜೆ ಗುತ್ತಿಗೆದಾರರು ಗುರುವಾರ ತಮ್ಮ ಸೇವೆ ಸ್ಥಗಿತಗೊಳಿಸಿ...

  • ಮಂಗಳೂರು: ನಗರದ ಹೊರವಲಯದಲ್ಲಿರುವ  ತೊಕ್ಕೊಟ್ಟಿನ ಕಾಪಿಕಾಡ್ ಬಳಿ  ರೈಲು ಡಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಬೆಳಕಿಗೆ...

  • ಶಶಿಕಾಂತ ಕೆ.ಭಗೋಜಿ ಹುಮನಾಬಾದ: ಧರ್ಮಸಮನ್ವಯ ಖ್ಯಾತಿಗೆ ಪಾತ್ರವಾದ ಕಲ್ಯಾಣ ಕರ್ನಾಟಕದ ಇತಿಹಾಸ ಪ್ರಸಿದ್ಧ ಮಾಣಿಕನಗರ ಮಾಣಿಕಪ್ರಭು ಸಂಸ್ಥಾನ ಸಕಲ ಕಲೆ-ಕಲಾವಿದರನ್ನು...

  • ಅಳ್ನಾವರ: ಮಕ್ಕಳು ದೇಶದ ಆಸ್ತಿ ಇದ್ದಂಗೆ. ದೇಶದ ಭವಿಷ್ಯ ನಿರ್ಮಿಸುವ ಗುರುತರ ಜವಾಬ್ದಾರಿ ಅವರ ಹೆಗಲ ಮೇಲಿದೆ. ಅಂತಹ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವುದು ನಮ್ಮೆಲ್ಲರ...

  • ದಾವಣಗೆರೆ: ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಡಿ.16 ರಂದು ದಾವಣಗೆರೆಗೆ ಆಗಮಿಸುವರು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ತಿಳಿಸಿದ್ದಾರೆ. ನಳೀನ್‌...