ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ತಂತ್ರ

ಕಾಂಗ್ರೆಸ್‌ ಜತೆಗೂಡಿ "ಆಪರೇಷನ್‌'ಗೆ ಪ್ಲಾನ್‌ ; ಬಿಜೆಪಿಯ ಐವರು ಶಾಸಕರ ಜತೆ ಸಂಪರ್ಕ

Team Udayavani, Apr 26, 2019, 6:05 AM IST

ಬೆಂಗಳೂರು: ಲೋಕಸಭಾ ಚುನಾವಣೆಯ ಫ‌ಲಿತಾಂಶ ಏನೇ ಬಂದರೂ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಆಪತ್ತು ಬಾರದಂತೆ ಈಗಿನಿಂದಲೇ ಕಾರ್ಯತಂತ್ರ ರೂಪಿಸಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಾರ್ಯ ತಂತ್ರ ಹೆಣೆದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಕನಿಷ್ಠ 15 ಸ್ಥಾನ ಗಳಿಸದಿದ್ದರೆ ಸಮ್ಮಿಶ್ರ ಸರ್ಕಾರಕ್ಕೆ ಅಪಾಯ ಎಂಬ ಮಾಹಿತಿ ಹಿನ್ನೆಲೆಯಲ್ಲಿ
ಏ.23ಕ್ಕೂ ಮೊದಲೇ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಂದೋಬಸ್ತ್ ಮಾಡಿಕೊಳ್ಳಲು ಅವರು ಕಸರತ್ತು ಆರಂಭಿಸಿದ್ದಾರೆ.

ಕಾಂಗ್ರೆಸ್‌ ವಿರುದ್ಧ ಬಂಡಾಯ ಸಾರಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾಗದಂತೆ ತಂತ್ರಗಾರಿಕೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಲೋಕಸಭಾ ಚುನಾವಣೆಯ ಟಿಕೆಟ್‌ ಹಂಚಿಕೆಯಿಂದ ಬೇಸರಗೊಂಡಿರುವ ಐವರು ಬಿಜೆಪಿ ಶಾಸಕರ ಪಟ್ಟಿ ಮಾಡಿ, ಆ ಪೈಕಿ ಮೂವರ ಜತೆ ಈಗಾಗಲೇ ಒಂದು ಸುತ್ತು ಮಾತುಕತೆ ಸಹ ನಡೆಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಆಪತ್ತು ತರಬಲ್ಲ ನಾಯಕರನ್ನು ಬಿಟ್ಟು ಹೈಕಮಾಂಡ್‌ ಜತೆ ನೇರ ಸಂಪರ್ಕ ಇರುವ ಇತರ ಕಾಂಗ್ರೆಸ‌ ನಾಯಕರ ಜತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿ, ತಮ್ಮ ಪರ ಬ್ಯಾಟಿಂಗ್‌ ಮಾಡಲು ವೇದಿಕೆ ಸಜ್ಜುಗೊಳಿಸಿದ್ದಾರೆ. ಕೇಂದ್ರದಲ್ಲಿ ಮತ್ತೂಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೂ, ರಾಜ್ಯದಲ್ಲಿ ಮೈತ್ರಿಕೂಟ ಕಡಿಮೆ ಸ್ಥಾನ ಪಡೆದರೂ ಭವಿಷ್ಯದಲ್ಲಿ ಕಾಂಗ್ರೆಸ್‌ನ ಶಕ್ತಿ ಬಲವರ್ಧನೆಯಾಗಲು ಜೆಡಿಎಸ್‌ನ ಮೈತ್ರಿ ಹಾಗೂ ಸಹಕಾರ ಬೇಕೇ ಬೇಕು. ಇಲ್ಲದಿದ್ದರೆ ಬಿಜೆಪಿಯನ್ನು ಎದುರಿಸುವುದು ಕಷ್ಟ ಎಂಬುದನ್ನು ಈ ನಾಯಕರು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊ ಡಲಿದ್ದಾರೆ ಎಂದು ಹೇಳಲಾಗಿದೆ.

ಮತ್ತೂಂದೆಡೆ, ರಮೇಶ್‌ ಜಾರಕಿಹೊಳಿಯವರು ಕಾಂಗ್ರೆಸ್‌ ಬಿಟ್ಟರೂ ಅವರ ಜತೆ ಇದ್ದಾರೆ ಎನ್ನಲಾದ ಮಹೇಶ್‌ ಕುಮಟಳ್ಳಿ , ಬಿ.ಸಿ.ಪಾಟೀಲ್‌, ಬಿ. ನಾಗೇಂದ್ರ, ಡಾ.ಸುಧಾಕರ್‌, ನಾಗೇಶ್‌ ಅವರನ್ನು ಸೆಳೆದು ಕಳೆದ ಬಾರಿ ಆಪರೇಷನ್‌ ಕಮಲ ಸಂದರ್ಭದಲ್ಲಿ ಮಾಡಿದಂತೆ ರಮೇಶ್‌ ಜಾರಕಿಹೊಳಿಯನ್ನು ಏಕಾಂಗಿ ಮಾಡುವುದು ಕಾರ್ಯತಂತ್ರದ ಒಂದು ಭಾಗವಾಗಿದೆ. ಅದರಂತೆ, ಮಹೇಶ್‌ ಕುಮಟಳ್ಳಿ ಅವರನ್ನು ಈಗಾಗಲೇ ಮನೆಗೆ ಕರೆಸಿಕೊಂಡು ಸಮಾಧಾನಪಡಿ ಸಲಾ ಗಿದೆ. ಉಳಿದ ಶಾಸಕರನ್ನು ತಮ್ಮ ಬಳಿಯೇ ನೇರವಾಗಿ ಕರೆ ತರಲು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದ್ದಾರೆಂದು ಹೇಳಲಾಗಿದೆ. ಬಿಜೆಪಿಯವರು ಲೋಕಸಭಾ ಚುನಾವಣೆ ಫ‌ಲಿತಾಂಶ ನೋಡಿಕೊಂಡು ರಾಜ್ಯ ಸಮ್ಮಿಶ್ರ ಸರ್ಕಾರದ ಬಗ್ಗೆ ಯೋಚಿಸಲು ನಿರ್ಧರಿಸಿದ್ದಾರೆ. ಆದರೆ,ಕುಮಾರಸ್ವಾಮಿಯವರು, ಫ‌ಲಿತಾಂಶ ಏನೇ ಆದರೂ ತಮ್ಮ ಸರ್ಕಾರವನ್ನು ಸೇಫ್ ಮಾಡಿಕೊಳ್ಳಲು ಮಾಜಿ ಪ್ರಧಾನಿ ಎಚ್‌ .ಡಿ.ದೇವೇಗೌಡರ ಮಾರ್ಗ ದರ್ಶನದ ಮೇರೆಗೆ ತಂತ್ರ
ಹೆಣೆಯುತ್ತಿದ್ದಾರೆ.

ಬಿಜೆಪಿ ಶಾಸಕರ ಸಂಪರ್ಕ: ಪ್ರಸ್ತುತ 224 ಸಂಖ್ಯಾಬಲದ ವಿಧಾನಸಭೆಯಲ್ಲಿ ಸಿ.ಎಸ್‌.ಶಿವಳ್ಳಿ ಅವರ ನಿಧನ, ಉಮೇಶ್‌ ಜಾಧವ್‌ ರಾಜೀನಾಮೆಯಿಂದ ಎರಡು ಸ್ಥಾನಗಳು ತೆರವಾಗಿರುವುದರಿಂದ ವಿಧಾನಸಭೆಯ ಸಂಖ್ಯಾಬಲ 222 ಆಗಿದೆ. ಬಹುಮತಕ್ಕೆ 112 ಶಾಸಕರು ಸಾಕು. ಕಾಂಗ್ರೆಸ್‌-ಜೆಡಿಎಸ್‌ ಸಂಖ್ಯಾಬಲ 117. (ಬಿಎಸ್‌ಪಿ ಹಾಗೂ ಪಕ್ಷೇತರ ಸದಸ್ಯ ನಾಗೇಶ್‌ ಸೇರಿ). ಒಂದೊಮ್ಮೆ ರಮೇಶ್‌
ಜಾರಕಿಹೊಳಿ ರಾಜೀನಾಮೆ ಕೊಟ್ಟರೂ ಸಂಖ್ಯಾಬಲ 116 ಇರಲಿದೆ.

ಬಿಜೆಪಿಯ ಬಲ 105. (ಪಕ್ಷೇತರ ಶಾಸಕ ಆರ್‌.ಶಂಕರ್‌ ಸೇರಿ ).ಒಂದು ವೇಳೆ, ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ ಆಗ ಐದರಿಂದ ಏಳು ಶಾಸಕರು ರಾಜೀನಾಮೆ ನೀಡಿದರೆ ಸಮಸ್ಯೆಯಾಗಲಿದೆ. ಇದನ್ನು ಅರಿತಿರುವ ಕಾಂಗ್ರೆಸ್‌-ಜೆಡಿಎಸ್‌ ವರಿಷ್ಠರು, ಬಿಜೆಪಿಯ ಐವರು ಶಾಸಕರ ಸಂಪರ್ಕದಲ್ಲಿದ್ದಾರೆಂದು ಹೇಳಲಾಗಿದೆ.

ಫ್ಯಾಮಿಲಿ ಪ್ರಾಬ್ಲಿಂ
ರಮೇಶ್‌ ಜಾರಕಿಹೊಳಿಯವರ ಬಂಡಾಯ ವಿಚಾರದ ಬಗ್ಗೆ ಕುಮಾರಸ್ವಾಮಿ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಬೆಳಗಾವಿ ಜಿಲ್ಲಾ ರಾಜಕಾರಣ, ಸಹೋದರರ ನಡುವಿನ ಆಂತರಿಕ ಕಲಹ, ಡಿ.ಕೆ.ಶಿವಕುಮಾರ್‌ ಹಾಗೂ ಲಕ್ಷ್ಮಿಹೆಬ್ಟಾಳ್ಕರ್‌ ಹಸ್ತಕ್ಷೇಪ ಕುರಿತ ಕಾರಣಗಳಿಂದಾಗಿ ರಮೇಶ್‌ ಜಾರಕಿಹೊಳಿ ಮುನಿಸಿಕೊಂಡಿದ್ದು,ಅದಕ್ಕೂ ಸಮ್ಮಿಶ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ, ಅದು ಅವರವರ ವೈಯಕ್ತಿಕ ವಿಚಾರ. ಆ ವಿಚಾರದಲ್ಲಿ ಯಾವುದೇ ರೀತಿಯ ಮಧ್ಯಪ್ರವೇಶ ಮಾಡುವುದು ಬೇಡವೆಂಬ ನಿಲುವಿಗೆ ಜೆಡಿಎಸ್‌ ಬಂದಿದೆ ಎಂದು ತಿಳಿದು ಬಂದಿದೆ. ಆದರೂ, ಕುಮಾರಸ್ವಾಮಿಯವರು ರಮೇಶ್‌ ಜಾರಕಿಹೊಳಿ ಜತೆ ದೂರವಾಣಿ ಮೂಲಕ ಮಾತನಾಡಿ,”ನನ್ನಿಂದ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾ ಗುವುದಿಲ್ಲ’ ಎಂಬ ಭರವಸೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ರಮೇಶ್‌ ಜಾರಕಿ ಹೊಳಿಯವರ ಮನವೊಲಿಕೆಗೆ ಕುಮಾರಸ್ವಾಮಿ ಮುಂದಾದರೆ ಡಿ.ಕೆ.ಶಿವಕುಮಾರ್‌ ಮುನಿಸಿ  ಕೊಳ್ಳಬಹುದು ಎಂಬ ಆತಂಕವೂ ಸಿಎಂಗೆ ಇದೆ ಎನ್ನಲಾಗಿದೆ.

-ಎಸ್‌. ಲಕ್ಷ್ಮಿನಾರಾಯಣ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ