ಕೋವಿಡ್: ಕೇಂದ್ರೀಕೃತ ವ್ಯವಸ್ಥೆಗೆ ಹೈಕೋರ್ಟ್ ಸಲಹೆ
Team Udayavani, Jul 11, 2020, 9:36 AM IST
ಬೆಂಗಳೂರು: ಕೋವಿಡ್-19ಗೆ ಚಿಕಿತ್ಸೆ ನೀಡುವ ಆಸ್ಪತ್ರೆ, ಅವುಗಳಲ್ಲಿರುವ ಒಟ್ಟು ಬೆಡ್ಗಳು ಹಾಗೂ ಖಾಲಿಯಿರುವ ಬೆಡ್ಗಳ ಬಗ್ಗೆ ಸಾರ್ವಜನಿಕರಿಗೆ ನಿಖರ ಹಾಗೂ ವಸ್ತುನಿಷ್ಠ ಮಾಹಿತಿ ಸಕಾಲಕ್ಕೆ ಸಿಗುವಂತೆ ವೆಬ್ಸೈಟ್ ಅಥವಾ ಪೋರ್ಟಲ್ ಮೂಲಕ ಕೇಂದ್ರೀಕೃತ ವ್ಯವಸ್ಥೆ ರೂಪಿಸುವ ಬಗ್ಗೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.
ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಅನೇಕ ಸೋಂಕಿತರು ಸಾವನ್ನಪ್ಪಿದ್ದಾರೆ ಮತ್ತು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯಿದೆ ಎಂದು ನ್ಯಾಯವಾದಿ ಗೀತಾ ಮಿಶ್ರಾ, ಭಾರತ್ ಪುನರುತ್ಥಾನ ಟ್ರಸ್ಟ್ ಸೇರಿ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಮತ್ತು ಹೈಕೋರ್ಟ್ ದಾಖಲಿಸಿಕೊಂಡ ಸ್ವಯಂಪ್ರೇರಿತ ಅರ್ಜಿಗಳನ್ನು ಮುಖ್ಯ ನ್ಯಾ| ಎ.ಎಸ್.ಓಕ್ ಹಾಗೂ ನ್ಯಾ| ಅರವಿಂದ ಕುಮಾರ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.