ಉತ್ತರ ಪ್ರದೇಶದಲ್ಲಿ ವಾಕ್‌ಸಮರ; ಅಖಿಲೇಶ್ ಜಿನ್ನಾ ಆರಾಧಕರು ಎಂದ ಯೋಗಿ
Team Udayavani, Jan 29, 2022, 6:45 AM IST
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಮೀರತ್ ಜಿಲ್ಲೆಯ ಖೇಡಾದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.
ಹೊಸದಿಲ್ಲಿ: ಉತ್ತರಪ್ರದೇಶದಲ್ಲಿ ಚುನಾವಣೆಯ ಕಾವು ಏರುತ್ತಿರುವಂತೆಯೇ ರಾಜಕೀಯ ವಿರೋಧಿಗಳ ಮಾತಿನ ಅಬ್ಬರವೂ ಜೋರಾಗಿದೆ.
ದೊಡ್ಡ ಮಟ್ಟದ ರ್‍ಯಾಲಿ, ರೋಡ್‌ಶೋಗಳಿಗೆ ನಿಷೇಧವಿದ್ದರೂ ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ನಾಯಕರ ನಡುವೆ ವಾಕ್ ಪ್ರಹಾರವು ಎಲ್ಲ ರ್‍ಯಾಲಿಗಳನ್ನೂ ಮೀರಿಸುವಂತಿದೆ. ಶುಕ್ರವಾರವೂ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಎಸ್‌ಪಿ ನಾಯಕ ಅಖಿಲೇಶ್ ನಡುವೆ ಮಾತಿನ ಸಮರ ನಡೆದಿದೆ.
“ಎಸ್‌ಪಿ ನಾಯಕರು “ಜಿನ್ನಾನ ಆರಾಧಕರು’, ನಾವು “ಸರ್ದಾರ್ ಪಟೇಲರ’ ಆರಾಧಕರು. ಅವರಿಗೆ ಪಾಕಿಸ್ತಾನ ವೆಂದರೆ ಪ್ರೀತಿ. ನಾವು ತಾಯಿ ಭಾರತಿಗಾಗಿ ಪ್ರಾಣತ್ಯಾಗ ಮಾಡುವವರು’ ಎಂದು ಸಿಎಂ ಯೋಗಿ ಹೇಳಿದರೆ, “ಬಿಜೆಪಿಯು ಹತಾಶೆಯಿಂದ ಏನೇನೋ ಮಾತನಾಡುತ್ತಿದೆ’ ಎಂದು ಅಖಿಲೇಶ್ ಹೇಳಿದ್ದಾರೆ. ಜತೆಗೆ ಬಿಜೆಪಿಯನ್ನು ಸೋಲಿಸಲು ನಾನು “ಅನ್ನ ಸಂಕಲ್ಪ’ ಮಾಡಿದ್ದೇನೆ. ನಾನು ರೈತನ ಮಗ. ಬಿಜೆಪಿಯನ್ನು ರಾಜ್ಯದಿಂದ ಓಡಿಸಲಿದ್ದೇನೆ ಎಂದೂ ಹೇಳಿದ್ದಾರೆ.
ಎಸ್‌ಪಿಯು ರಾಜ್ಯದಲ್ಲಿ ಕ್ರಿಮಿನಲ್‌ಗಳಿಗೆ ಟಿಕೆಟ್ ನೀಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದ್ದಾರೆ.
ಇನ್ನೊಂದೆಡೆ, ಚುನಾವಣ ಕಾರ್ಯಕ್ರಮಕ್ಕಾಗಿ ದಿಲ್ಲಿಯಿಂದ ಉತ್ತರಪ್ರದೇಶದ ಮುಜಫರ್‌ನಗರಕ್ಕೆ ತೆರಳುವವನಿದ್ದೆ. ಆದರೆ ಬಿಜೆಪಿಯು ನನ್ನ ಹೆಲಿಕಾಪ್ಟರ್ ಟೇಕ್‌ಆಫ್ಗೆ ಅವಕಾಶ ಕೊಡದೇ ನಾನು ದಿಲ್ಲಿಯಲ್ಲೇ ಉಳಿಯುವಂತೆ ಮಾಡಿತು ಎಂದೂ ಅಖೀಲೇಶ್ ಆರೋಪಿಸಿದ್ದಾರೆ.
ಫೀಲ್ಡಿಗಿಳಿದ ಹಿಂದೂ ಯುವ ವಾಹಿನಿ: ಯುವಕರಲ್ಲಿ ರಾಷ್ಟ್ರೀಯವಾದವನ್ನು ಉತ್ತೇಜಿಸುವ ಸಲುವಾಗಿ ರೂಪುಗೊಂಡಿದ್ದ ಹಿಂದೂ ಯುವ ವಾಹಿನಿ ಕಳೆದ ಕೆಲವು ವರ್ಷಗಳಿಂದ ನಿಷ್ಕ್ರಿಯಗೊಂಡಿತ್ತು. ಈಗ ಈ ಸಂಘಟನೆಯು ಮತ್ತೆ ಜಿಗಿತುಕೊಂಡಿದ್ದು, ಗೋರಖ್‌ಪುರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಪರ ಫೀಲ್ಡಿಗಿಳಿದಿದೆ. ಯೋಗಿ ಅವರನ್ನು ಗೆಲ್ಲಿಸುವ ಪಣದಿಂದ ಯುವವಾಹಿನಿಯು ಸಕ್ರಿಯವಾಗಿ ಬೂತ್‌ಮಟ್ಟದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಇದೇ ವೇಳೆ, ಬಿಜೆಪಿ ಶುಕ್ರವಾರ 91 ಅಭ್ಯರ್ಥಿಗಳ ಹೊಸ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ 13 ಸಚಿವರಿಗೆ ಟಿಕೆಟ್ ನೀಡಿದೆ.
ಕಾರ್ಯಕರ್ತರಿಂದ ಕೆಂಪು ಟೋಪಿ ಸಂಗ್ರಹ!
“ಸಮಾಜವಾದಿ ಪಕ್ಷದ ಕೆಂಪು ಟೋಪಿಯು ರೆಡ್ ಅಲರ್ಟ್ ಇದ್ದಂತೆ’ ಎಂದು ಪ್ರಧಾನಿ ಮೋದಿ ಅವರು ವ್ಯಂಗ್ಯವಾಡಿದ ಬೆನ್ನಲ್ಲೇ ಎಸ್‌ಪಿ ಕಾರ್ಯಕರ್ತರು ರಾಜ್ಯಾದ್ಯಂತ ಈ ಕೆಂಪು ಟೋಪಿಗಳನ್ನು ಭಾರೀ ಪ್ರಮಾಣದಲ್ಲಿ ಖರೀದಿಸಿ ಸಂಗ್ರಹಿಸಿಡಲಾರಂಭಿಸಿದ್ದಾರೆ. ಈ ಟೋಪಿಯು “ಬದಲಾವಣೆ ಮತ್ತು ಕ್ರಾಂತಿಯ ಸಂಕೇತ’ ಎನ್ನುವುದು ಅವರ ವಾದ. ಚುನಾವಣ ರ್‍ಯಾಲಿಗಳು ರದ್ದಾಗಿರುವ ಕಾರಣ ಚುನಾವಣ ಪರಿಕರಗಳನ್ನು ಮಾರಾಟ ಮಾಡುವ ವರ್ತಕರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಈಗ ನಾವು ಈ ಟೋಪಿಗಳನ್ನು ಖರೀದಿಸುತ್ತಿರುವುದರಿಂದ ಅವರಿಗೆ ಲಾಭವಾಗುತ್ತಿದೆ. ಅಲ್ಲದೇ ಪ್ರತೀ ಗ್ರಾಮದಲ್ಲೂ ಪ್ರತೀ ಕಾರ್ಯಕರ್ತನೂ ಈ ಟೋಪಿ ಹಾಕಿಕೊಂಡು ತಿರುಗುತ್ತಿದ್ದಾರೆ. ಈ ಮೂಲಕ ಮೋದಿ ಅವರ ಟೀಕೆಯನ್ನು ಮೌನವಾಗಿ ಪ್ರತಿಭಟಿಸುತ್ತಿದ್ದೇವೆ ಎಂದು ಎಸ್‌ಪಿ ಕಾರ್ಯಕರ್ತರು ಹೇಳಿದ್ದಾರೆ.
ರುದ್ರಪ್ರಯಾಗ್‌ನಲ್ಲಿ ಅಮಿತ್ ಶಾ ಪ್ರಚಾರ
ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಮನೆ ಮನೆ ಪ್ರಚಾರ ನಡೆಸಿದ್ದಾರೆ. ಇನ್ನೂ 5 ವರ್ಷಗಳ ಕಾಲ ಉತ್ತಮ ಆಡಳಿತ ಬೇಕೆಂದರೆ ಬಿಜೆಪಿಗೆ ಮತ್ತೆ ಅಧಿಕಾರ ನೀಡಿ ಎಂದು ಅವರು ಕೋರಿದ್ದಾರೆ.
4 ಸೀಟುಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ
ಗೋವಾ ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ವೇಳೆ ಹಲವು ಕಡೆ ಉಂಟಾಗಿದ್ದ ಅತೃಪ್ತಿಯನ್ನು ಶಮನಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಆದರೆ ಪಣಜಿ ಸೇರಿದಂತೆ 4 ಕ್ಷೇತ್ರಗಳಲ್ಲಿ ಮಾತ್ರ ಆಡಳಿತಾರೂಢ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದೆ. ಪಣಜಿಯಲ್ಲಿ ಮಾಜಿ ಸಿಎಂ ಮನೋಹರ್ ಪರ್ರಿಕರ್ ಪುತ್ರಿ ಉತ್ಪಲ್ ಪರ್ರಿಕರ್ ಟಿಕೆಟ್ ಸಿಗದ ಕೋಪಕ್ಕೆ ಪಕ್ಷೇತರರಾಗಿ ಕಣಕ್ಕಿಳಿದಿದ್ದು, ಬಿಜೆಪಿ ಅಭ್ಯರ್ಥಿ ಅಟನಾಸಿಯೋ ಮೊನ್ಸರಟ್ಟೆ ಅವರಿಗೆ ತಲೆನೋವು ಉಂಟುಮಾಡಿದ್ದಾರೆ. ಮಂಡ್ರೇಮ್‌ನಲ್ಲಿ ಮಾಜಿ ಸಿಎಂ ಲಕ್ಷ್ಮೀಕಾಂತ್ ಪರ್ಶೇಕರ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಗೆ ಸವಾಲೊಡ್ಡಿದ್ದಾರೆ. ಸಾಂಗ್ವೆಮ್‌ನಲ್ಲಿ ಡಿಸಿಎಂ ಚಂದ್ರಕಾಂತ್ ಕವೆಲಾರ್ ಅವರ ಪತ್ನಿ ಸಾವಿತ್ರಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಕಂಭರ್ಜುವಾದಲ್ಲಿ ರೋಹನ್ ಹರ್ಮಾಲ್ಕರ್ ಅವರು ಬಿಜೆಪಿ ಅಭ್ಯರ್ಥಿಗೆ ಸೆಡ್ಡು ಹೊಡೆದಿದ್ದಾರೆ.