ಕೊವ್ಯಾಕ್ಸಿನ್ ಮನುಷ್ಯನ ಮೇಲೆ ಪ್ರಯೋಗ ಆರಂಭ
Team Udayavani, Jul 19, 2020, 10:08 AM IST
ಹೊಸದಿಲ್ಲಿ: ಮನುಷ್ಯನ ಮೇಲೆ ಕೊವ್ಯಾಕ್ಸಿನ್‌ನ ಪ್ರಯೋಗ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಕೋವಿಡ್ ಗೆ ದೇಶೀಯ ವಾಗಿ ಅಭಿವೃದ್ಧಿಪಡಿಸಿರುವ ಲಸಿಕೆ, ಕೊವ್ಯಾಕ್ಸಿನ್‌ನ್ನು ಮನುಷ್ಯನ ಮೇಲೆ ಪ್ರಯೋಗಿಸುವ ಪ್ರಕ್ರಿಯೆಗೆ ಭಾರತ್ ಬಯೋಟೆಕ್ ಸಂಸ್ಥೆ ಚಾಲನೆ ನೀಡಿದೆ. ಭಾರತದ ಔಷಧ ನಿಯಂತ್ರಕ ಸಂಸ್ಥೆಯಿಂದ ಇದಕ್ಕಾಗಿ ಇತ್ತೀಚೆಗೆ ಅನುಮೋದನೆ ಪಡೆಯಲಾಗಿದೆ.
ಈ ಮಧ್ಯೆ, ಕೋವಿಡ್ ಚಿಕಿತ್ಸೆಗಾಗಿ ಸದ್ಯ ಭಾರತದಲ್ಲಿ ಏಳು ಲಸಿಕೆಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ ಎಂದು ಔಷಧ ನಿಯಂತ್ರಕ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ತಜ್ಞರ ಸಹಯೋಗದಲ್ಲಿ ಲಸಿಕೆ ಅಭಿವೃದ್ಧಿಪಡಿ ಸಿದ್ದು, ಮುಂದಿನ ಮೂರು ತಿಂಗಳ ಅವಧಿಯಲ್ಲಿ ಲಕ್ಷಾಂತರ ಡೋಸ್‌ಗಳಷ್ಟು ಲಸಿಕೆ ಉತ್ಪಾದಿಸುವ ಗುರಿ ಹೊಂದಿದೆ. ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಸೀರಮ್ ಇನ್‌ಸ್ಟಿಟ್ಯೂ ಟ್‌ನ ಸಿಇಒ ಆದರ್ ಪೂನವಾಲ್ಲಾ, ಲಸಿಕೆ ಅಭಿವೃದ್ಧಿಪಡಿಸಲು ನಾವು ಸಾಕಷ್ಟು ಹಣ ವ್ಯಯಿಸಿದ್ದೇವೆ. ಕೋವಿಡ್ ಗಾಗಿ ಅಭಿವೃದ್ಧಿ ಪಡಿಸಲಾದ ಈ ಮೊದಲ ಲಸಿಕೆ ಅತ್ಯುತ್ತಮವಾದುದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಆದರೆ, ಲಸಿಕೆಯ ಉತ್ಪಾದನೆಗೆ ಪರವಾನಿಗೆ ದೊರೆಯುತ್ತಿದ್ದಂತೆ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಲಕ್ಷಾಂತರ ಡೋಸ್‌ಗಳಷ್ಟು ಲಸಿಕೆಯನ್ನು ಉತ್ಪಾದಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.