ಅನರ್ಹ ಶಾಸಕರ ಓಲೈಕೆಗೆ ಪಕ್ಷದಲ್ಲೇ ಅಸಮಾಧಾನ

Team Udayavani, Oct 10, 2019, 3:10 AM IST

ಬೆಂಗಳೂರು: ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚಿಸಲು ಕಾರಣರಾದ ಅನರ್ಹಗೊಂಡ ಶಾಸಕರ “ಹಿತ’ ಕಾಪಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಹಾಗೂ ಪಕ್ಷ ಇಡುತ್ತಿರುವ ಹೆಜ್ಜೆಗಳು ಸದ್ಯದ ಮಟ್ಟಿಗೆ ಸರ್ಕಾರವನ್ನು ಸುರಕ್ಷಿತಗೊಳಿಸಿದಂತೆ ಕಂಡರೂ ಭವಿಷ್ಯದ ಬಿಕ್ಕಟ್ಟಿಗೆ ನಾಂದಿ ಹಾಡುವ ಲಕ್ಷಣ ಕಾಣುತ್ತಿದೆ.

ಸಚಿವ ಸ್ಥಾನ ವಂಚಿತರು, ಹಿರಿಯ ಶಾಸಕರಿಗೆ ನಿಗಮ-ಮಂಡಳಿ ಸ್ಥಾನಮಾನ ನೀಡಿ ಸಂತೈಸಲಾಗುತ್ತದೆ ಎಂಬ ಲೆಕ್ಕಾಚಾರ ಮೀರಿ ಅನರ್ಹಗೊಂಡ ಶಾಸಕರು, ಉಪಚುನಾವಣೆಗೆ ಸ್ಪರ್ಧಿಸುವವರ ಹಾದಿ ಸುಗಮಗೊಳಿಸಲು ಪರಾಜಿತ ಅಭ್ಯರ್ಥಿಗಳಿಗೆ ಸ್ಥಾನಮಾನ ಕಲ್ಪಿಸಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರ ಉಳಿಸಿ ಕೊಳ್ಳುವ ಏಕೈಕ ಉದ್ದೇಶದಿಂದ ಕೈಗೊಳ್ಳುತ್ತಿ ರುವ ನಿರ್ಧಾರಗಳು ಪಕ್ಷದಲ್ಲಿ ಬಣ ರಾಜಕೀಯ ಇನ್ನಷ್ಟು ತೀವ್ರವಾಗುವುದರ ಜತೆಗೆ ಮುಂದೆ ಸಂಘಟನೆ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಹಲವು ನಾಯಕರನ್ನು ಕಾಡಲಾರಂಭಿಸಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಎರಡೂವರೆ ತಿಂಗಳು ಸಮೀಪಿಸುತ್ತಿದೆ. ಸರ್ಕಾರ ರಚನೆಯಾದಾಗಿನಿಂದಲೂ ಅನರ್ಹಗೊಂಡ ಶಾಸಕರಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಅನರ್ಹಗೊಂಡ ಶಾಸಕರು ನಿರಂತರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರನ್ನು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸುತ್ತಿದ್ದು, ಅದಕ್ಕೆ ಸ್ಪಂದಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಅನರ್ಹಗೊಂಡವರಿಗೆ ಆದ್ಯತೆ: ಬಿಜೆಪಿ ಸರ್ಕಾರ ರಚನೆಗೆ ಅನರ್ಹಗೊಂಡ ಶಾಸಕರ “ತ್ಯಾಗ’ಕ್ಕೆ ಪ್ರತಿ ಯಾಗಿ ಸರ್ಕಾರವು ಅವರ ನಿರೀಕ್ಷೆಗಳಿಗೆ ಸ್ಪಂದಿಸುತ್ತಲೇ ಬಂದಿದೆ. ಮುಖ್ಯವಾಗಿ ಅನರ್ಹಗೊಂಡ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧ ಪಟ್ಟಂತೆ ಅಧಿಕಾರಿಗಳ ವರ್ಗಾವಣೆ, ಇತರ ನಿರ್ಧಾರ ಗಳು ಅವರ ಸಲಹೆ, ಸೂಚನೆಯಂತೆಯೇ ನಡೆಯು ತ್ತಿವೆ. ಈ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನ ನೀಡಲಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡು ತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ಅನರ್ಹಗೊಂಡ ಶಾಸಕರ ಒತ್ತಡಕ್ಕೆ ಮಣಿದು ಯಡಿಯೂರಪ್ಪ ಅವರು ದೆಹಲಿಗೆ ದೌಡಾಯಿಸಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಪಕ್ಷ ಕೈಬಿಡುವುದಿಲ್ಲ ಎಂದು ಭರವಸೆ ಸಂದೇಶ ಕೂಡ ರವಾನಿಸಿದ್ದರು. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಅನರ್ಹಗೊಂಡ ಶಾಸಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್‌ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಕೆಲ ಅನರ್ಹಗೊಂಡ ಶಾಸಕರು ಭೇಟಿಯಾಗಿ ಸ್ಪರ್ಧೆ ಬಗ್ಗೆ ಖಾತರಿಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯ ಎದುರಾಗಿರುವ ಉಪಚುನಾವಣೆಯಲ್ಲಿ ಅವ ಕಾಶ ಸಿಕ್ಕರೆ ಅನರ್ಹಗೊಂಡ ಶಾಸಕರನ್ನೇ ಕಣಕ್ಕಿಳಿಸುವ ಕುರಿತು ಚರ್ಚೆ ನಡೆದಿರುವ ಬಗ್ಗೆ ಬಿಜೆಪಿಯಲ್ಲೇ ಅಪಸ್ವರ ಕೇಳಿ ಬಂದಿದೆ. ಅದನ್ನು ನಿವಾರಿಸಲೆಂಬಂತೆ ಯಡಿಯೂರಪ್ಪ ಅವರು ಪರಾಜಿತ ಅಭ್ಯರ್ಥಿಗಳಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಿದಂತಿದೆ. ಇದು ಸದ್ಯ ಸಮಸ್ಯೆ ನಿವಾರಿಸಿದಂತೆ ಕಂಡು ಬಂದರೂ ಒಳಗೊಳಗೇ ಇನ್ನಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಮುಖಂಡರು, ಕಾರ್ಯಕರ್ತರ ಕಡೆಗಣನೆ ದೂರು: ಆರೂವರೆ ವರ್ಷದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೂ ಅನರ್ಹಗೊಂಡ ಶಾಸಕರಿಗೆ ಮುಂದೆ ಸಚಿವ ಸ್ಥಾನ ಕಲ್ಪಿಸಬೇಕೆಂಬ ಕಾರಣಕ್ಕೆ ಕೇವಲ 17 ಸಚಿವರನ್ನು ನೇಮಿಸಿ ಅವರಿಗೆ ಹಲವು ಖಾತೆ ವಹಿಸಲಾಗಿದೆ.

ಹೀಗಾಗಿ ಪಕ್ಷದಲ್ಲಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡದೆ ಸರ್ಕಾರ ರಚನೆಗಾಗಿ “ತ್ಯಾಗ’ ಮಾಡಿದವರಿಗೆ ಸಚಿವ ಸ್ಥಾನ ಕಾಯ್ದಿರಿಸಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೂ ಸರ್ಕಾರದ ಅಸ್ತಿತ್ವದ ದೃಷ್ಟಿಯಿಂದ ಆಕಾಂಕ್ಷಿಗಳು ಸುಮ್ಮನಿದ್ದರು. ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ ತಮಗೆ ಸ್ಥಾನಮಾನ ಸಿಗದಿರುವ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಜತೆಗೆ ಪಕ್ಷಕ್ಕಾಗಿ ದುಡಿದ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರುಗಳಿವೆ ಎನ್ನಲಾಗಿದೆ.

* ಎಂ. ಕೀರ್ತಿಪ್ರಸಾದ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ