ಜಮ್ಮು-ಕಾಶ್ಮೀರ: ಜಂಟಿ ಕಾರ್ಯಾಚರಣೆಯಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆ ಉಗ್ರನ ಬಂಧನ
ಬಂಧಿತ ಉಗ್ರನಿಂದ ಎಕೆ 47ರೈಫಲ್, ಜೀವಂತ ಗುಂಡುಗಳು ಹಾಗೂ ಅಪಾರ ಪ್ರಮಾಣದ ಸ್ಫೋಟಕ ವಶ
Team Udayavani, Apr 9, 2020, 4:15 PM IST
Representative Image
ಜಮ್ಮು-ಕಾಶ್ಮೀರ:ಉತ್ತರ ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ ಸ್ಥಳೀಯ ಉಗ್ರನೊಬ್ಬನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ. ಬಂಧಿತ ಉಗ್ರನಿಂದ ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಸೇರಿದ ವಸ್ತುಗಳು ಸಿಕ್ಕಿರುವುದಾಗಿ ಹೇಳಿದೆ.
ಬಾರಾಮುಲ್ಲಾ ಪ್ರದೇಶದ ಗಂಟಾಮುಲ್ಲಾದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಸೇನಾಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಬಂಧಿತ ಉಗ್ರನನ್ನು ಷಿರ್ ಪೋರಾದ ಬಶೀರ್ ಅಹ್ಮದ್ ಬೇಗ್ ಎಂದು ಗುರುತಿಸಲಾಗಿದೆ. ಬಂಧಿತ ಉಗ್ರನಿಂದ ಎಕೆ 47ರೈಫಲ್, ಜೀವಂತ ಗುಂಡುಗಳು ಹಾಗೂ ಅಪಾರ ಪ್ರಮಾಣದ ಸ್ಫೋಟಕ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳ ಹಿಂದಷ್ಟೇ ಬೇಗ್ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಯಾಗಿದ್ದ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.