ಎಲ್ಲ ಮಕ್ಕಳಿಗೂ “ಕರ್ನಾಟಕ ದರ್ಶನ’ ಭಾಗ್ಯ

Team Udayavani, Dec 8, 2019, 3:10 AM IST

ಬೆಂಗಳೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿ ಗಳಿಗೆ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳ ದರ್ಶನ ಮಾಡಿಸುವ “ಕರ್ನಾಟಕ ದರ್ಶನ’ಕ್ಕೆ ಎಲ್ಲ ಸಮುದಾಯದವರಿಗೂ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಇಲಾಖೆಯ ಸಚಿವರಾಗಿ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಶನಿವಾರ “ನೂರು ದಿನಗಳು-ನೂರಾರು ಹೆಜ್ಜೆಗಳು: ಹೆಜ್ಜೆ ಗುರುತು’ ಕೈಪಿಡಿ ಬಿಡುಗಡೆ ಮಾಡಿದರು. ಬಳಿಕ, ಸುದ್ದಿಗಾರರ ಜತೆ ಮಾತನಾಡಿ ತಮ್ಮ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ವಿವರಣೆ ನೀಡಿದರು.

* 8 ಅಥವಾ 9 ನೇ ತರಗತಿಯ ಆಯ್ದ ಜಾತಿಯ ವಿದ್ಯಾರ್ಥಿಗಳಿಗೆ ಮಾತ್ರ “ಕರ್ನಾಟಕ ದರ್ಶನ’ ಪ್ರವಾಸ ಯೋಜನೆ ಬಗ್ಗೆ ನನಗೆ ಸಮಾಧಾನ ಇಲ್ಲ. ವಿದ್ಯಾರ್ಥಿಗಳನ್ನು ಜಾತಿ ಆಧಾರದಲ್ಲಿ ನೋಡುವುದೇ ಜಾತ್ಯತೀತ ಪರಿಕಲ್ಪನೆಗೆ ವಿರೋಧ. ಹೀಗಾಗಿ, ಎಲ್ಲ ವರ್ಗಕ್ಕೂ ಈ ಯೋಜನೆಯನ್ನು ಮುಂದಿನ ಆರ್ಥಿಕ ವರ್ಷದಿಂದ ಜಾರಿಗೊಳಿಸಲಾಗುವುದು.

* ಪ್ರಸ್ತುತ ವರ್ಷದಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳು, ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾಗೂ ದಿವ್ಯಾಂಗ ವಿದ್ಯಾರ್ಥಿಗಳಿಗೆ “ಕರ್ನಾಟಕ ದರ್ಶನ’ ಆಯೋಜಿಸಿದ್ದು, 10 ಕೋಟಿ ರೂ.ವೆಚ್ಚ ಭರಿಸಲಾಗಿದೆ.

* 2020-2025ನೇ ಸಾಲಿಗೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲು ಪೂರ್ವಭಾವಿ ತಯಾರಿ ನಡೆದಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಪ್ರವಾಸಿ ತಾಣಗಳಲ್ಲಿ ಮೊಬೈಲ್‌ ಶೌಚಾಲಯ, ಮೊಬೈಲ್‌ ಕ್ಯಾಂಟೀನ್‌ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯಿಂದ ಸಬ್ಸಿಡಿ ಸಹ ಕೊಡುವ ಬಗ್ಗೆ ಚಿಂತನೆಯಿದೆ.

* ರಾಜ್ಯದ ಬೇಲೂರು-ಹಳೆಬೀಡು, ಬಾದಾಮಿ -ಐಹೊಳೆ-ಪಟ್ಟದಕಲ್ಲು ಹಾಗೂ ಶ್ರೀರಂಗಪಟ್ಟಣವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಗೋಲ್ಡನ್‌ ಚಾರಿಯೇಟ್‌ ರೈಲು ಸೇವೆ ಸ್ಥಗಿತಗೊಂಡಿದ್ದು, ಅದನ್ನು ಪುನರಾರಂಭಿಸಲು ಐಆರ್‌ಸಿಟಿಸಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಸೇವೆ ಲಭ್ಯವಾಗಬಹುದು.

* “ಲಂಡನ್‌ ಬಿಗ್‌ ಬಸ್‌’ ಮಾದರಿಯ 6 ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಪ್ರಾರಂಭಿಸಲು ಚಾಲನೆ ನೀಡಲಾಗಿದ್ದು, ಮುಂದಿನ ವರ್ಷದಿಂದ ಕಾರ್ಯಾಚರಣೆಗೆ ಲಭ್ಯವಿರಲಿದೆ. ಬಾದಾಮಿ, ಬೇಲೂರು, ಹಂಪಿ ಹಾಗೂ ವಿಜಯಪುರಗಳಲ್ಲಿ 4 ಸ್ಟಾರ್‌ ಹೋಟೆಲ್‌ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಬಡೆjಟ್‌ ಹೋಟೆಗಳಿಗೂ ಆದ್ಯತೆ ನೀಡಲಾಗುವುದು.

* ಸದ್ಯದಲ್ಲೇ ಪ್ರವಾಸೋದ್ಯಮ ಮೇಳ ಆಯೋಜಿಸಿ, ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಅವಕಾಶಗಳನ್ನು ವಿವರಿಸಿ, ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲಾಗುವುದು. ವೇ-ಸೈಡ್‌ ಅಮಿನಿಟೀಸ್‌ -2019ರ ಕರಡು ನೀತಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮದ ಸಹಭಾಗೀದಾರರ ಸಭೆ ಕರೆದು ಚರ್ಚಿಸಲಾಗುತ್ತಿದೆ.

* ಮೈಸೂರಿನಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರವನ್ನು ಅತ್ಯಾಧುನಿಕವಾಗಿ 75 ಕೋಟಿ ರೂ.ವೆಚ್ಚದಲ್ಲಿ “ಮೈಸೂರು ಹಾಥ್‌’ ಎಂಬ ಹೆಸರಿನಲ್ಲಿ ನಿರ್ಮಾಣ ಮಾಡಲಾಗುವುದು. ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ 75 ಕೋಟಿ ರೂ.ವೆಚ್ಚದಲ್ಲಿ ಮೈಸೂರು ಚಾಮುಂಡಿ ದೇವಾಲಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

* ರಾಜ್ಯದಲ್ಲಿ 25 ಸಾವಿರದಷ್ಟು 100 ವರ್ಷ ಹಳೆಯದಾಗ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡದ ಗುಡಿ, ಗೋಪುರ, ಚರ್ಚ್‌, ಮಸೀದಿ ಸೇರಿ ಪ್ರವಾಸಿ ಸ್ಥಳಗಳಿದ್ದು, ಅದೆಲ್ಲದರ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ.

* ಪ್ರವಾಸಿಗರಿಂದ ಕರ್ನಾಟಕದ ಜಿಡಿಪಿಗೆ ಶೇ.14.8ರಷ್ಟು ಕೊಡುಗೆ ಇದ್ದು, ಇದನ್ನು ಶೇ.20ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ. 2018-19ನೇ ಸಾಲಿನಲ್ಲಿ ಕರ್ನಾಟಕಕ್ಕೆ ದೇಶೀಯ 18.72 ಕೋಟಿ ಹಾಗೂ ವಿದೇಶಿಯ 5.4 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.

ವಿಕಿಪೀಡಿಯಾ ಮಾದರಿಯಲ್ಲಿ ಗ್ರಾಮಗಳ ಇತಿಹಾಸ ದಾಖಲು
* ರಾಜ್ಯದ ಎಲ್ಲ ಗ್ರಾಮಗಳ ಇತಿಹಾಸ/ಸಂಸ್ಕೃತಿಯನ್ನು ದಾಖಲಿಸಿ, ವಿಕಿಪೀಡಿಯಾ ಮಾದರಿಯಲ್ಲಿ ಮುಕ್ತವಾಗಿ ಸಾರ್ವಜನಿಕರಿಗೆ ಒದಗಿಸಲು ಯೋಜನೆ ರೂಪಿಸಲಾಗಿದೆ. ನಶಿಸಿ ಹೋಗುತ್ತಿರುವ ಕಲೆ, ಸಂಸ್ಕೃತಿ, ಸಾಹಿತ್ಯ ಪ್ರಕಾರಗಳ ಪುನಶ್ಚೇತನಕ್ಕೆ ಕಾರ್ಯಯೋಜನೆ ಸಿದ್ಧಪಡಿಸಲಾಗುತ್ತಿದೆ.

* ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮಸ್ಥಳಗಳನ್ನು ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರಗಳನ್ನಾಗಿ ಮಾಡಲು 50 ಕೋಟಿ ರೂ.ವೆಚ್ಚದಲ್ಲಿ ಯೋಜನೆ ತಯಾರಿಸಲಾಗುತ್ತಿದೆ.

* ಕಲಾವಿದರ ಮಾಸಾಶನವನ್ನು 1,500 ರೂ.ನಿಂದ 2000 ರೂ.ಗೆ ಹೆಚ್ಚಿಸಲಾಗಿದ್ದು, ಇನ್ನೂ ಹೆಚ್ಚಳ ಮಾಡಲು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಕಲಾವಿದರಿಗೆ ಕಲಾಪ್ರದರ್ಶನ ಮುಗಿದ ಕೂಡಲೇ ಗೌರವ ಸಂಭಾವನೆಯನ್ನು ಅವರ ಖಾತೆಗೆ ಆರ್‌ಟಿಜಿಎಸ್‌ ಮೂಲಕ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ.

* ಪೂರ್ಣ ಪ್ರಮಾಣದ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರವನ್ನು ಮೈಸೂರಿನಲ್ಲಿ ಪ್ರಾರಂಭಿಸಲು ತೀರ್ಮಾನಿಸಿದ್ದು, ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 3 ಎಕರೆ ಜಾಗ ನೀಡಲು ಮೈಸೂರು ವಿಶ್ವವಿದ್ಯಾಲಯ ಒಪ್ಪಿದೆ. ತಮಿಳುನಾಡಿನಲ್ಲಿ ತಮಿಳು ಶಾಸ್ತ್ರೀಯ ಅಧ್ಯಯನ ಕೇಂದ್ರ ಉತ್ತಮವಾಗಿ ನಡೆಯುತ್ತಿದ್ದು, ಅಲ್ಲಿಗೆ ರಾಜ್ಯದ ತಂಡವೊಂದನ್ನು ಕಳುಹಿಸಿ, ಅಧ್ಯಯನ ವರದಿ ಪಡೆಯಲಾಗಿದೆ. ಕನ್ನಡ ಶಾಸ್ತ್ರೀಯ ಭಾಷೆ ಸ್ಥಾನಮಾನದ ಅಧ್ಯಯನ ಕೇಂದ್ರಕ್ಕೆ 3 ಸಮಿತಿಗಳ ರಚನೆಗೆ ಚಾಲನೆ ನೀಡಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಶೇ.30 ಕಬ್ಬು ಇಳುವರಿ ಕುಸಿತ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ಈ ಬಾರಿ ಶೇ.30ರಷ್ಟು ಕಬ್ಬು ಇಳುವರಿ ಕುಸಿತ ಕಂಡಿದೆ ಎಂದು ಸಕ್ಕರೆ ಸಚಿವ ಸಿ.ಟಿ.ರವಿ ತಿಳಿಸಿದರು. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಭಾಗದಲ್ಲಿ ಕಬ್ಬು ಬೆಳೆ ಕಡಿಮೆಯಾಗಿದೆ.

ಅಲ್ಲಿನ ರೈತರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕಾರ್ಖಾನೆಗಳು ರೈತರಿಗೆ ಪಾವತಿಸಲು ಬಾಕಿ ಉಳಿಸಿಕೊಂಡಿದ್ದ ಹಿಂದಿನ ವರ್ಷಗಳ 11,948 ಕೋಟಿ ರೂ.ಪೈಕಿ 11,921 ಕೋಟಿ ರೂ. ಪಾವತಿಸಲಾಗಿದೆ. ಕೇವಲ 37 ಕೋಟಿ ರೂ.ಮಾತ್ರ ಬಾಕಿಯಿದ್ದು, ಪಾವತಿ ಪ್ರಮಾಣ ಶೇ.99.50ರಷ್ಟಿದೆ ಎಂದು ಹೇಳಿದರು.

ಮೊದಲ ಬಾರಿಗೆ ವೈಜ್ಞಾನಿಕವಾಗಿ ಕಬ್ಬು ಸಾಗಣೆ ಮತ್ತು ಕಟಾವು ವೆಚ್ಚದ ಮೊತ್ತ ನಿಗದಿಪಡಿಸಲಾಗಿದ್ದು, ಇದರಿಂದ ರೈತರಿಗೆ ಅನುಕೂಲವಾಗಿದೆ. ರೈತರು ಬೆಳೆಯುವ ಕಬ್ಬು ಇಳುವರಿ ನಿಖರತೆ ಪತ್ತೆಗೆ ಪ್ರಾಯೋಗಿಕವಾಗಿ ರಾಜ್ಯದ 2 ಭಾಗಗಳಲ್ಲಿ ಆಟೋಮೇಟೀವ್‌ ಶುಗರ್‌ ಡಿಟೆಕ್ಟೀವ್‌ ಮಶಿನ್‌ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 18 ಸಕ್ಕರೆ ಕಾರ್ಖಾನೆ ಸ್ಥಗಿತ: ರಾಜ್ಯದಲ್ಲಿ 18 ಸಕ್ಕರೆ ಕಾರ್ಖಾನೆಗಳು ಸ್ಥಗಿತಗೊಂಡಿದ್ದು, ಮಂಡ್ಯದ ಮೈಶುಗರ್‌ ಕಾರ್ಖಾನೆಯ ಪುನಶ್ಚೇತನಕ್ಕೆ ಸರ್ಕಾರ ಇದುವರೆಗೆ 504 ಕೋಟಿ ರೂ.ವೆಚ್ಚ ಮಾಡಿದೆ. ಆದರೂ ಪುನಶ್ಚೇತನ ಸಾಧ್ಯವಾಗಿಲ್ಲ. ಹೀಗಾಗಿ, ಖಾಸಗಿ ಸಹಭಾಗಿತ್ವದಲ್ಲಿ ಪುನರಾರಂಭಕ್ಕೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಹೇಳಿದರು.

ಮೈಶುಗರ್‌ ಕಾರ್ಖಾನೆ ಒಂದು ರೀತಿ ಆನೆಯಂತಾಗಿದೆ. ಆದರೆ, ಆಹಾರ ಸೇವಿಸಿದ ಆನೆ ಲದ್ದಿ ಆದರೂ ಹಾಕುತ್ತದೆ. ಆದರೆ, ಮಂಡ್ಯ ಮೈಶುಗರ್‌ ಕಾರ್ಖಾನೆಗೆ ಸರ್ಕಾರ ಎಷ್ಟು ಅನುದಾನ ಕೊಟ್ಟರೂ ಲದ್ದಿ ಹಾಕಿದ ಲಕ್ಷಣವೂ ಕಾಣುತ್ತಿಲ್ಲ ಎಂದು ಚಟಾಕಿ ಹಾರಿಸಿದರು.

ಮಹಾಪುರುಷರ ಜಯಂತಿ ಆಚರಣೆಗೆ ಸಮಾಲೋಚನೆ: ಮಹಾಪುರುಷರ ಜಯಂತಿ ಆಚರಣೆ ಹಾಗೂ ಅದರ ಸ್ವರೂಪ ಹೇಗಿರಬೇಕು ಎಂಬ ಬಗ್ಗೆ ತಜ್ಞರು, ಆಡಳಿತ ಹಾಗೂ ಪ್ರತಿಪಕ್ಷ ನಾಯಕರು, ಸಾಹಿತಿ, ಚಿಂತಕರ ಜತೆ ಚರ್ಚಿಸಿ ತೀರ್ಮಾನ ಮಾಡಲಾಗು ವುದು. ಜಾತಿ ಆಧಾರದಲ್ಲಿ ಮಹಾಪುರುಷರ ಜಯಂತಿ ಆಚರಣೆಯಾಗಬಾರದು ಎಂಬುದು ನಮ್ಮ ಉದ್ದೇಶ. ಮಹಾಪುರುಷರ ಗೌರವ ಹೆಚ್ಚಿಸುವ ರೀತಿಯಲ್ಲಿ ತೀರ್ಮಾನ ಕೈಗೊಳ್ಳಲಾ ಗುವುದು ಎಂದು ಸಚಿವರು ತಿಳಿಸಿದರು.

ತಾಳ್ಮೆ ಹೆಚ್ಚಾಗಿದೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿ 53 ದಿನ ದೊಳಗೆ ಅಕಾಡೆಮಿ ಅಧ್ಯಕ್ಷರು-ಸದಸ್ಯರ ನೇಮಕ ಮಾಡಿದ್ದೇನೆ. ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ನನಗೆ ತಾಳ್ಮೆ, ಸಮಾಧಾನವೂ ಹೆಚ್ಚಾಗಿದೆ. ಜನ ಸಾಮಾ ನ್ಯರು 5 ನಿಮಿಷದಲ್ಲಿ ಹೇಳುವ ವಿಷಯ, ಸಾಹಿತಿ ಕಲಾವಿದರು ತಮ್ಮ ಅನುಭವ ಆಧಾರದ ಮೇಲೆ ಹದಿನೈದು ನಿಮಿಷ ಹೇಳುತ್ತಾರೆ. ಹೀಗಾಗಿ, ಅವರಿಗೆ ಗೌರವ ನೀಡಿ ಕೇಳಿಸಿಕೊಳ್ಳುತ್ತೇನೆ. ಸರಳವಾಗಿ ವಿಷಯ ತಿಳಿಸಿ ಎಂದರೆ ಅವರು ತಪ್ಪು ತಿಳಿದುಕೊಳ್ಳು ತ್ತಾರೆ. ಆ ಮೂಲಕ ತಾಳ್ಮೆ ಹೆಚ್ಚಾಗಿದೆ ಎಂದು ಸಿ.ಟಿ. ರವಿ ಚಟಾಕಿ ಹಾರಿಸಿದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ