ಹೊಸ ಆದಾಯ ಮೂಲದತ್ತ ಕೆಎಸ್‌ಆರ್‌ಟಿಸಿ ಚಿತ್ತ

Team Udayavani, Jun 17, 2019, 3:08 AM IST

ಬೆಂಗಳೂರು: ವಿದ್ಯಾರ್ಥಿ ಪಾಸಿನ ದರ ಏರಿಕೆ ಆದೇಶದಿಂದಲೂ ಸರ್ಕಾರ ಹಿಂದೆಸರಿದ ಬೆನ್ನಲ್ಲೇ ಹೊಸ ಆದಾಯ ಮೂಲದ ಹುಡುಕಾಟ ನಡೆಸಿರುವ ಕೆಎಸ್‌ಆರ್‌ಟಿಸಿ ಇದಕ್ಕಾಗಿ ಕಾರ್ಮಿಕ ಇಲಾಖೆ ಮೊರೆಹೋಗಿದೆ.

ರಾಜ್ಯದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ರಿಯಾಯ್ತಿ ಪಾಸು ನೀಡಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಈ ಸಂಬಂಧ ಕಾರ್ಮಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಹಾಗೊಂದು ವೇಳೆ ಇದಕ್ಕೆ ಅನುಮತಿ ದೊರೆತರೆ ಬಿಎಂಟಿಸಿಯಂತೆಯೇ ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲೂ ಕಾರ್ಮಿಕರಿಗೆ ಸೌಲಭ್ಯ ದೊರೆಯಲಿದೆ. ಜತೆಗೆ ನಿಗಮಕ್ಕೂ ಹೊಸ ಪ್ರಯಾಣಿಕ ವರ್ಗ ದೊರೆಯಲಿದೆ.

ರಾಜ್ಯಾದ್ಯಂತ ಲಕ್ಷಾಂತರ ಅಸಂಘಟಿತ ಕಾರ್ಮಿಕರಿದ್ದಾರೆ. ಅವರೆಲ್ಲ ನಿತ್ಯ ಕೆಲಸಕ್ಕೆ ತೆರಳಲು ಟೆಂಪೋ, ಗೂಡ್ಸ್‌ ಆಟೋಗಳು ಸೇರಿ ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ. ಗ್ರಾಮೀಣ ಭಾಗದಲ್ಲಂತೂ ಸರಕು ಸಾಗಣೆ ವಾಹನಗಳಲ್ಲೇ ಕಾರ್ಮಿಕರನ್ನು ತುಂಬಲಾಗಿರುತ್ತದೆ.

ಇದು ಅಸುರಕ್ಷಿತ ಕೂಡ. ಒಂದು ವೇಳೆ ಕಾರ್ಮಿಕ ಇಲಾಖೆಯು ಅನುದಾನ ನೀಡಲು ಮುಂದೆ ಬಂದರೆ, ಕೆಎಸ್‌ಆರ್‌ಟಿಸಿಯು ಆ ಎಲ್ಲ ವರ್ಗದ ಕಾರ್ಮಿಕರಿಗೆ ರಿಯಾಯ್ತಿ ಅಥವಾ ಉಚಿತ ಪಾಸು ನೀಡಲು ಸಿದ್ಧವಿದೆ. ಇದರಿಂದ ಸುರಕ್ಷಿತ ಮತ್ತು ವ್ಯವಸ್ಥಿತ ಸಾರಿಗೆ ಸೌಲಭ್ಯವೂ ದೊರೆಯುತ್ತದೆ. ಆ ಮೂಲಕ ಆದಾಯವೂ ಹೆಚ್ಚುತ್ತದೆ ಎನ್ನುವುದು ಕೆಎಸ್‌ಆರ್‌ಟಿಸಿ ಲೆಕ್ಕಾಚಾರ.

ಇದೂ ಸರ್ಕಾರದಿಂದಲೇ ಬರಬೇಕಲ್ಲವೇ?: ತುಮಕೂರು, ಮೈಸೂರು, ಚನ್ನಪಟ್ಟಣ, ರಾಮನಗರ, ಕನಕಪುರ, ದೊಡ್ಡಬಳ್ಳಾಪುರ ಸೇರಿ ಬೆಂಗಳೂರು ಸುತ್ತಮುತ್ತ ಸಾಕಷ್ಟು ಕಾರ್ಮಿಕರಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಆದರೆ, ಇದು ಕೂಡ ಸರ್ಕಾರದಿಂದಲೇ ಬರಬೇಕು. ಅಲ್ಲದೆ, ಸಂಘಟಿತ ವಲಯದ ಲೆಕ್ಕ ಇದೆ; ಅಸಂಘಟಿತ ಕಾರ್ಮಿಕರ ಲೆಕ್ಕವಿಲ್ಲ. ಅಂಥವರನ್ನು ಪತ್ತೆಹಚ್ಚಿ ಗುರುತಿನಚೀಟಿ ನೀಡಬೇಕಾಗುತ್ತದೆ. ಇದೆಲ್ಲವೂ ಅಂದುಕೊಂಡಂತಾದರೆ, ತಕ್ಕಮಟ್ಟಿಗೆ ನಿಗಮಕ್ಕೆ ನೆರವಾಗಲಿದೆ ಎಂದು ಕೆಎಸ್‌ಆರ್‌ಟಿಸಿಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಬಸ್‌ ಪಾಸ್‌ ದರ ಏರಿಕೆ ಆಗಿದ್ದರೆ, ಸುಮಾರು 15ರಿಂದ 20 ಕೋಟಿ ರೂ. ಆದಾಯ ಬರುತ್ತಿತ್ತು. ಹೆಚ್ಚು-ಕಡಿಮೆ ಇಷ್ಟೇ ಆದಾಯವನ್ನು ನಿಗಮವು ಕಾರ್ಮಿಕ ವಲಯದಿಂದ ನಿರೀಕ್ಷಿಸುತ್ತಿದೆ. ಆದರೆ, ಬಿಎಂಟಿಸಿಯಲ್ಲಿ ಈಗಾಗಲೇ ಕಾರ್ಮಿಕರಿಗೆ ರಿಯಾಯ್ತಿ ಪಾಸು ವಿತರಣೆ ಯೋಜನೆ ಜಾರಿಯಲ್ಲಿದೆ. ಅಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರಿಂದ ಸ್ಪಂದನೆ ದೊರೆಯುತ್ತಿಲ್ಲ.

ಹೀಗಿರುವಾಗ, ಕೆಎಸ್‌ಆರ್‌ಟಿಸಿಯಲ್ಲಿ ಇದು ಫ‌ಲ ನೀಡಲಿದೆಯೇ ಎಂದೂ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸುತ್ತಾರೆ. ಕಾರ್ಮಿಕ ಇಲಾಖೆಗೆ ಸಲ್ಲಿಸಿದ ಪ್ರಸ್ತಾವನೆ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರನ್ನು ಸಂಪರ್ಕಿಸಿದಾಗ, ಕರೆ ಸ್ವೀಕರಿಸಲಿಲ್ಲ. ಮೊಬೈಲ್‌ ಸಂದೇಶಕ್ಕೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಸರ್ಕಾರಿ ಸೌಲಭ್ಯ ಪಡೆದವರು 3.82 ಲಕ್ಷ: ವಿವಿಧ ಕಾರ್ಮಿಕ ಸಂಘಟನೆಗಳ ಪ್ರಕಾರ ರಾಜ್ಯದಲ್ಲಿ 60 ಲಕ್ಷ ಅಸಂಘಟಿತ ಕಾರ್ಮಿಕರಿದ್ದು, ಈ ಪೈಕಿ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಂಡವರ ಸಂಖ್ಯೆ 20.74 ಲಕ್ಷ. ಇದರಲ್ಲಿ ಇತ್ತೀಚೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡುವವರೂ ಇದ್ದಾರೆ. ಇನ್ನು ಸರ್ಕಾರಿ ಸೌಲಭ್ಯ ಪಡೆದವರು 3.82 ಲಕ್ಷ.

ಕತ್ತರಿ ಹಾಕಲು ಚಿಂತನೆ: ಕಾರ್ಮಿಕ ಇಲಾಖೆಯಿಂದ ಪ್ರಸ್ತಾವನೆ ಜತೆಗೆ ನಷ್ಟಕ್ಕೆ ಕಾರಣವಾಗಿರುವ ಕೆಲವು ಅನುಸೂಚಿಗಳಿಗೆ ಕತ್ತರಿ ಹಾಕಲಿಕ್ಕೂ ಕೆಎಸ್‌ಆರ್‌ಟಿಸಿ ಉದ್ದೇಶಿಸಿದೆ. ನಿಗಮದ ಬಸ್‌ಗಳು ಪ್ರತಿ ಕಿ.ಮೀ. ಸಂಚಾರಕ್ಕೆ ಸರಾಸರಿ 32 ರೂ. ಖರ್ಚಾಗುತ್ತದೆ. ಆದರೆ, ಕೆಲವು ಮಾರ್ಗಗಳಲ್ಲಿ ಪ್ರತಿ ಕಿ.ಮೀ. ಆದಾಯವು 25 ರೂ.ಗಳಿಗಿಂತ ಕಡಿಮೆ ಇದೆ. ಅಂತವುಗಳನ್ನು ಗುರುತಿಸಿ ಅದರಲ್ಲೂ ವೇಗದೂತಗಳಿಗೆ ಸಾಧ್ಯವಾದಷ್ಟು ಕತ್ತರಿ ಹಾಕಲು ಚಿಂತನೆ ನಡೆದಿದೆ. ಈ ಸಂಬಂಧದ ಪಟ್ಟಿಯನ್ನೂ ಸಿದ್ಧಪಡಿಸಲಾಗುತ್ತಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಈಗಷ್ಟೇ ಇಲಾಖೆಯ ಅಧಿಕಾರ ಸ್ವೀಕರಿಸಿದ್ದೇನೆ. ಪ್ರಸ್ತಾವನೆ ಬಗ್ಗೆ ನನಗೆ ಇನ್ನೂ ಗಮನಕ್ಕೆ ಬಂದಿಲ್ಲ. ಹಾಗೊಂದು ವೇಳೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದರೂ, ಒಂದೆರಡು ದಿನಗಳಲ್ಲಿ ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳಲಾಗುವುದು.
-ಮಂಜುನಾಥ್‌ ನಾಯಕ್‌, ಕಾರ್ಯದರ್ಶಿಗಳು, ಕಾರ್ಮಿಕ ಕಲ್ಯಾಣ ಇಲಾಖೆ

* ವಿಜಯಕುಮಾರ್‌ ಚಂದರಗಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ