ರಮೇಶ್‌ ಜಾರಕಿಹೊಳಿ ಭೇಟಿ ಮಾಡಿದ ಕುಮಠಳ್ಳಿ

Team Udayavani, May 16, 2019, 3:06 AM IST

ಬೆಂಗಳೂರು: ಎರಡೂ ಕ್ಷೇತ್ರಗಳ ಉಪ ಚುನಾವಣೆಯ ನಡುವೆಯೇ “ಆಪರೇಷನ್‌ ಕಮಲ’ಕ್ಕೆ ಯತ್ನ ನಡೆಯುತ್ತಿದೆ ಎಂಬ ಗುಸು ಗುಸು ಮಧ್ಯೆ ಅಥಣಿ ಶಾಸಕ ಮಹೇಶ್‌ ಕುಮಠಳ್ಳಿಯವರು ಬಂಡಾಯ ಶಾಸಕ ರಮೇಶ್‌ ಜಾರಕಿಹೊಳಿಯನ್ನು ಭೇಟಿ ಮಾಡಿ, ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಮೇಶ್‌ ಜಾರಕಿಹೊಳಿಯಿಂದ ಅಂತರ ಕಾಯ್ದುಕೊಂಡು ತಾವು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಹೇಳಿದ್ದ ಮಹೇಶ್‌ ಕುಮಠಳ್ಳಿ, ಬುಧವಾರ ರಮೇಶ್‌ ಜಾರಕಿಹೊಳಿಯನ್ನು ಬೆಂಗಳೂರಿನ ಅವರ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದರು. ಇದು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಮೇ 23ರ ನಂತರ ತಮ್ಮ ಬೆಂಬಲಿಗರೊಂದಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರುವ ರಮೇಶ್‌ ಜಾರಕಿಹೊಳಿ ಅವರೊಂದಿಗೆ ಮಹೇಶ್‌ ಕುಮಠಳ್ಳಿಯೂ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಮಂಗಳವಾರ “ಆಪರೇಷನ್‌ ಕಮಲ’ದ ಜವಾಬ್ದಾರಿ ಹೊತ್ತುಕೊಂಡಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರು ರಮೇಶ್‌ ಜಾರಕಿಹೊಳಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬೆನ್ನಲ್ಲೆ ಬುಧವಾರ ಮಹೇಶ್‌ ಕುಮಠಳ್ಳಿಯ ಭೇಟಿ ನಡೆದಿದೆ. ಹೀಗಾಗಿ, ಭೇಟಿಗೆ ಮತ್ತಷ್ಟು ಮಹತ್ವ ಬಂದಂತಾಗಿದೆ.

ರಮೇಶ್‌ ಜಾರಕಿಹೊಳಿ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಹೇಶ್‌ ಕುಮಠಳ್ಳಿ, “ರಮೇಶ್‌ ಜಾರಕಿಹೊಳಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನಾನು ಕುಂದಗೋಳ ಉಪ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದೇನೆ. ಕೃಷ್ಣಾ ನದಿಯಲ್ಲಿ ನೀರಿಲ್ಲ. ಮಹಾರಾಷ್ಟ್ರದಿಂದ ನೀರು ಬಿಡಿಸುವ ಸಲುವಾಗಿ ಕಡತ ತೆಗೆದುಕೊಂಡು ಬಂದಿದ್ದೆ.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರು ಎಲ್ಲರಂತೆ ರಮೇಶ್‌ ಜಾರಕಿಹೊಳಿಯನ್ನು ಭೇಟಿಯಾಗಿರಬಹುದು. ಅದಕ್ಕೂ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ರಮೇಶ್‌ ಜಾರಕಿಹೊಳಿಯವರು ರಾಜೀನಾಮೆ ನೀಡುವ ವಿಚಾರದ ಬಗ್ಗೆ ಅವರನ್ನೇ ಕೇಳಿ. ಅವರೂ ಪಕ್ಷ ಬಿಟ್ಟು ಹೋಗುವುದಿಲ್ಲ. ನಾವೂ ಪಕ್ಷ ಬಿಡುವುದಿಲ್ಲ. ಎಲ್ಲರ ನಿರ್ಧಾರ ಒಂದೇ ಆಗಿದೆ’ ಎಂದು ಸಮಜಾಯಿಷಿ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ