“ಕೆಲಸ ಮಾಡಲಾಗದಿದ್ದರೆ ರಜೆ ಹಾಕಿ ಹೋಗಿ’: ಎಚ್.ಡಿ.ರೇವಣ್ಣ
Team Udayavani, May 9, 2019, 3:05 AM IST
ಹಾಸನ: ಜಿಲ್ಲೆಯಲ್ಲಿ ಬರ ಪರಿಹಾರ ಕಾರ್ಯಗಳು, ಕುಡಿಯುವ ನೀರಿನ ಸಮಸ್ಯೆ, ಆಲೂಗಡ್ಡೆ ಬಿತ್ತನೆ ಬೀಜ ಮಾರಾಟದ ವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಬರ ಪರಿಹಾರ ಕಾರ್ಯಗಳಿಗೆ 8 ಕೋಟಿ ರೂ., ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗೆ 5 ಕೋಟಿ ರೂ.ಗಳ ಅನುದಾನವನ್ನು ಸರ್ಕಾರ ಪ್ರತ್ಯೇಕವಾಗಿ ಬಿಡುಗಡೆ ಮಾಡಿದೆ.
ಆದರೆ, ಜಿಲ್ಲಾಧಿಕಾರಿಯವರು ಆ ಮೊತ್ತವನ್ನು 15 ದಿನಗಳಿಂದಲೂ ಪಿ.ಡಿ.ಅಕೌಂಟ್‌ನಲ್ಲಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು. ತುರ್ತು ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಮೊತ್ತವನ್ನು ಪಿಡಿ ಅಕೌಂಟ್‌ನಲ್ಲಿಟ್ಟುಕೊಳ್ಳಲು ಸರ್ಕಾರ ಬಿಡುಗಡೆ ಮಾಡಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ ಬಿತ್ತನೆ ಇನ್ನೊಂದು ವಾರದಲ್ಲಿ ಆರಂಭವಾಗುತ್ತದೆ. ಆದರೆ, ಇದುವರೆಗೂ ಗುಣಮಟ್ಟದ ಬಿತ್ತನೆ, ಆಲೂಗಡ್ಡೆ ಮಾರಾಟದ ವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಯವರು ಕ್ರಮ ಕೈಗೊಂಡಿಲ್ಲ.
ಜಿಲ್ಲಾಧಿಕಾರಿಯವರಿಗೆ ಕೆಲಸ ಮಾಡಲಾಗದಿದ್ದರೆ ರಜೆ ಹಾಕಿ ಹೋಗಲಿ. ಮಳೆ ಬಿದ್ದ ತಕ್ಷಣ ರೈತರು ಮಾರುಕಟ್ಟೆಯಲ್ಲಿ ಆಲೂಗಡ್ಡೆ ಖರೀದಿಗೆ ಮುಗಿಬಿದ್ದು, ಗಲಾಟೆ, ಲಾಠಿ ಪ್ರಹಾರ, ಗೋಲಿಬಾರ್ ಆದರೆ ಅದಕ್ಕೆ ಜಿಲ್ಲಾಧಿಕಾರಿಯವರೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬೇರೆಲ್ಲಾ ಕೆಲಸ ಮಾಡುವ ಜಿಲ್ಲಾಧಿಕಾರಿಯವರಿಗೆ ಬರ ಪರಿಹಾರ ಕಾರ್ಯಗಳನ್ನು ಮಾಡಲು ಪುರುಷೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ವ್ಯವಸ್ಥಿತ ಕ್ರಮ ಕೈಗೊಳ್ಳಲಾಗಿದೆ – ಡೀಸಿ ಸ್ಪಷ್ಟನೆ: ಸಚಿವರ ಪತ್ರಿಕಾಗೋಷ್ಠಿ ಬಳಿಕ ಪ್ರಕಟಣೆ ಮೂಲಕ ಸ್ಪಷ್ಟಿಕರಣ ನೀಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ಈಗಾಗಲೇ ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ 8 ತಾಲೂಕುಗಳು ಬರ ಪೀಡಿತವೆಂದು ಘೋಷಣೆಯಾಗಿದ್ದು, ಸಮಸ್ಯಾತ್ಮಕ ಗ್ರಾಮಗಳಲ್ಲಿ ವಿವಿಧ ಜಲ ಮೂಲಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ ಜಾನುವಾರುಗಳಿಗೆ 3,38,303 ಮೆಟ್ರಿಕ್ ಟನ್ ಮೇವು ಲಭ್ಯವಿದೆ. ಜಿಲ್ಲೆಯಲ್ಲಿ ಈ ವರ್ಷ ಅಂದಾಜು 15,000 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆಯಾಗುವ ನಿರೀಕ್ಷೆಯಿದೆ.
ತೋಟಗಾರಿಕೆ ಇಲಾಖೆ ವತಿಯಿಂದ ಆಲೂಗಡ್ಡೆ ಬೆಳೆಗೆ ಪ್ರೋತ್ಸಾಹಧನ ನೀಡಲು ಯಾವ ದರವನ್ನು ಪರಿಗಣಿಸಲಾಗುವುದೋ ಆ ದರದಲ್ಲಿ ಎಪಿಎಂಸಿಯಲ್ಲಿ ಆಲೂಗಡ್ಡೆ ಮಾರಾಟ ಮಾಡಬಹುದು. ಒಂದು ವೇಳೆ, ಮಧ್ಯವರ್ತಿಗಳ ಹಾವಳಿ ಕಂಡು ಬಂದಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.