ಮ್ಯಾಟ್ರಿಮೋನಿಯಲ್ ಪರಿಚಯ: ಯುವತಿ ಖಾಸಗಿ ಫೋಟೋ ಸೆರೆಹಿಡಿದು ಬ್ಲ್ಯಾಕ್‌ಮೇಲ್
Team Udayavani, Jan 21, 2022, 1:46 PM IST
ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಪರಿಚಯವಾದ ಯುವತಿಗೆ ಮದುವೆ ಯಾಗುವುದಾಗಿ ನಂಬಿಸಿ, ಆಕೆಯ ಖಾಸಗಿ ಫೋಟೋಗಳನ್ನು ಸೆರೆಹಿಡಿದುಕೊಂಡು ಬ್ಲ್ಯಾಕ್‌ಮೇಲ್ ಮಾಡು ತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ರಾಜಾಜಿನಗರದ ನಿವಾಸಿ ವಿಜಯ್ ಕುಮಾರ್ ಬಂಧಿತ. ಕೆಲ ತಿಂಗಳ ಹಿಂದೆ ಯುವತಿ ಮದುವೆ ಸಂಬಂಧ ಮ್ಯಾಟ್ರಿ ಮೋನಿಯಲ್ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡಿ ದ್ದರು. ಅದನ್ನು ಗಮನಿಸಿದ ಆರೋಪಿ, ಆಕೆಯನ್ನು ಪರಿಚಯಿಸಿಕೊಂಡು ಆಕೆಯ ಮೊಬೈಲ್ ನಂಬರ್ ಪಡೆದುಕೊಂಡು, ಆತ್ಮೀಯತೆ ಬೆಳೆಸಿಕೊಂಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಇಬ್ಬರು ಆತ್ಮೀಯವಾಗಿದ್ದರಿಂದ ಆರೋಪಿ ಆಕೆಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿದ್ದಾನೆ.
ಈ ವೇಳೆ, ಯುವತಿಯೊಂದಿಗೆ ಖಾಸಗಿಯಾಗಿ ಕಳೆದ ದೃಶ್ಯಗಳನ್ನು ಸೆರೆ ಹಿಡಿದುಕೊಂಡಿದ್ದ. ಆ ಫೋಟೊಗಳನ್ನು ಇಟ್ಟುಕೊಂಡು ಯುವತಿಗೆ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಆರಂಭಿಸಿದ್ದಾನೆ. ಅದಕ್ಕೆ ಯುವತಿ ಒಪ್ಪದಿದ್ದಾಗ, ಆಕೆ ಹೆಸರಿನಲ್ಲಿ ಇನ್‌ಸ್ಟ್ರಾಗ್ರಾಂ ಖಾತೆ ತೆರೆದು ಖಾಸಗಿ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾನೆ. ಅದರಿಂದ ಆತಂಕಗೊಂಡ ಯುವತಿ 50 ಸಾವಿರ ರೂ. ಕೊಟ್ಟು, ಖಾತೆ ಡಿಲೀಟ್ ಮಾಡುವಂತೆ ಮನವಿ ಮಾಡಿದರೂ, ಮತ್ತಷ್ಟು ಹಣ ಕೊಡುವಂತೆ ಪೀಡಿಸಿದ್ದಾನೆ. ಅಲ್ಲದೆ, ಹಣ ಕೊಡದಿದ್ದರೆ ಕುಟುಂಬಸ್ಥರು ಹಾಗೂ ಸಂಬಂಧಿಕರಿಗೆ ಟ್ಯಾಗ್ ಮಾಡಿ ಹೆದರಿಸುತ್ತಿದ್ದ. ಅದರಿಂದ ಇನ್ನಷ್ಟು ಗಾಬರಿಗೊಂಡ ಸಂತ್ರಸ್ತೆ, ಸೆನ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ವಿದ್ಯಾರಣ್ಯಪುರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.