ರಾಮ ಮಂದಿರ ಶೀಘ್ರ ನಿರ್ಮಾಣವಾಗಲಿ

Team Udayavani, Dec 28, 2019, 3:09 AM IST

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯ ಸಮಸ್ಯೆ ಬಗೆಹರಿದಿರುವುದು ಸಂತಸದ ವಿಚಾರವಾಗಿದ್ದು, ಆದಷ್ಟು ಶೀಘ್ರ ಶ್ರೀರಾಮನ ಭವ್ಯ ರಾಮಮಂದಿರ ನಿರ್ಮಾಣವಾಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಆಶಿಸಿದರು. ನಗರದ ಸಂಘನಿಕೇತನದಲ್ಲಿ ಶುಕ್ರವಾರ ನಡೆದ ವಿಶ್ವ ಹಿಂದೂ ಪರಿಷತ್‌ನ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಪ್ರಬಂಧ ಸಮಿತಿಯ ಸಂಯುಕ್ತ ಬೈಠಕ್‌ನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಮಮಂದಿರ ನಿರ್ಮಾಣಕ್ಕೆ ದೀರ್ಘಾವಧಿ ತಗಲಿದ್ದು ಯಾಕೆ ಎಂಬುದು ನನ್ನನ್ನು ಸದಾ ಕಾಡುತ್ತಿತ್ತು. ಅದಕ್ಕೆ ರಾಮನ ಜನ್ಮ ಕುಂಡಲಿಯ ಸಮಸ್ಯೆಯೇ ಕಾರಣವಾಗಿರಬೇಕು ಎಂದೆನಿಸುತ್ತದೆ. ಯಾಕೆಂದರೆ, ಲೋಕ ಕಲ್ಯಾಣಕ್ಕಾಗಿ ರಾಮನ ಜನ್ಮವಾಗಿದ್ದರೂ, ಆತ ಶಿಕ್ಷಣ ಹಾಗೂ ಸಿಂಹಾಸನ ಏರುವ ಸಂದರ್ಭದಲ್ಲಿ ಸುದೀರ್ಘ‌ ವರ್ಷ ವನವಾಸ ಅನುಭವಿಸಬೇಕಾಯಿತು. ಇದೇ ರೀತಿ, ರಾಮಮಂದಿರ ನಿರ್ಮಾಣಕ್ಕೂ ಸಮಯ ತಗುಲಿದ್ದಾಗಿರಬೇಕು.

ಇದೀಗ ಕುಂಡಲಿ ನಿರ್ಣಯ ಆಗಿದ್ದು, ಹೊಸ ಮಂದಿರ ಆದಷ್ಟು ಬೇಗ ನಿರ್ಮಾಣವಾಗಲಿದೆ ಎಂದರು. ಬಡತನ, ಸಾಮಾಜಿಕ ಸಮಸ್ಯೆಗಳ ಕಾರಣಕ್ಕಾಗಿ ಅನುಕಂಪದ ನೆಲೆಯಲ್ಲಿ ಈ ಹಿಂದೆ ಮತಾಂತರ ನಡೆಯುತ್ತಿತ್ತು. ಆದರೆ, ಈಗ ಗ್ರಾಮೀಣ ವಿಕಾಸ ಯೋಜನೆಗಳು ಸಮಾಜದಲ್ಲಿನ ಬಡ ವರ್ಗಕ್ಕೆ ಆರ್ಥಿಕ ಸಬಲತೆಯನ್ನು ನೀಡಿರುವುದರಿಂದ ಬಡತನ, ಅಸಹಾಯಕತೆಯಿಂದಾಗಿ ಕರ್ನಾಟಕದಲ್ಲಿ ಮತಾಂತರ ಆಗುತ್ತಿಲ್ಲ ಎಂದರು.

ಗ್ರಾಮೀಣ ವಿಕಾಸ ಯೋಜನೆಯಡಿ ವರ್ಷದಲ್ಲಿ ಎರಡು ಬಾರಿ ಧರ್ಮಸ್ಥಳದಿಂದ ರಾಜ್ಯದ ಹಲವು ದೇವಸ್ಥಾನಗಳ ಶುಚಿತ್ವ ಕಾರ್ಯ ನಡೆಸಲಾಗುತ್ತಿದೆ. ಉತ್ತರ ಭಾರತದಲ್ಲಿಯೂ ಈ ಪ್ರಕ್ರಿಯೆ ನಡೆಯಬೇಕು. ಆ ಮೂಲಕ ಧಾರ್ಮಿಕ ಕ್ಷೇತ್ರಗಳ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದರು.

ಸಂಸ್ಕೃತಿ ಮರೆಯಾಗದಿರಲಿ: ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ವಿಶ್ವದ ಕಲ್ಯಾಣವಾಗಲಿ ಎಂಬುದೇ ಹಿಂದೂ ಸಂಸ್ಕೃತಿ. ಆದರೆ, ವಿದೇಶಿಯರ ಆಕ್ರಮಣದಿಂದಾಗಿ ನಮ್ಮ ಸಂಸ್ಕೃತಿ ಮರೆಯಾಗುವಂತಾಗಿದೆ. ಇಂತಹ ಬೆಳವಣಿಗೆ ನಡೆಯಬಾರದು. ಈ ನಿಟ್ಟಿನಲ್ಲಿ ಎಲ್ಲರಲ್ಲಿಯೂ ಎಚ್ಚರ ಮೂಡಿಬರಲಿ. ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ವಿಶ್ವ ಹಿಂದೂ ಪರಿಷತ್‌ನ ಸೃಷ್ಟಿಯಾಗಿದೆ ಎಂದರು. ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌, ಅಂತಾರಾ ಷ್ಟ್ರೀಯ ಕಾರ್ಯಾಧ್ಯಕ್ಷ ಅಶೋಕ್‌ ಕುಮಾರ್‌ ಚೌಧುರಿ ಹಾಗೂ ಇತರರು ಉಪಸ್ಥಿತರಿದ್ದರು.

ಹಿಂದೂಗಳ ಮೇಲೆ ಆಕ್ರಮಣ ಸಲ್ಲದು: ವಿಹಿಂಪ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ್‌ ಕೋಕ್ಜೆ ಮಾತನಾಡಿ, ನಮ್ಮದೇ ಹಿಂದೂ ಧರ್ಮದೊಳಗೆ ಇದ್ದವರನ್ನು ನಮ್ಮಿಂದ ಬೇರ್ಪಡಿಸಿ ಮತಾಂತರ ಮಾಡುವುದನ್ನು ನಾವು ತಡೆಯಲು ಪೂರ್ಣವಾಗಿ ಸಾಧ್ಯವಾಗಿಲ್ಲ. ಧರ್ಮ ನಿರಪೇಕ್ಷತೆಯ ಹೆಸರಿನಲ್ಲಿ ಹಿಂದೂಗಳ ಮೇಲೆ ಆಕ್ರಮಣಕಾರಿ ಷಡ್ಯಂತ್ರಗಳು ನಡೆಯುತ್ತಲೇ ಇವೆ. ಇದನ್ನು ವಿರೋಧಿಸಬೇಕಾಗಿದೆ. ಆದರೆ, 2014ರಿಂದೀಚೆಗೆ ಸಂಕುಚಿತವಾಗಿದ್ದ ಹಿಂದೂ ಧರ್ಮದವರು ತಮ್ಮನ್ನು ತಾವು ಹಿಂದೂಗಳೆಂದು ಕರೆಸಿಕೊಳ್ಳಲು ಹೆಮ್ಮೆ ಪಡುವಂತಾಗಿದೆ. ಇದು ವಿಎಚ್‌ಪಿಯ ಶಕ್ತಿ ಸಾಮರ್ಥ್ಯದಿಂದ ಸಾಧ್ಯವಾಗಿದೆ. ಜನಜಾಗೃತಿಯ ಮೂಲಕ ಹಿಂದೂಗಳ ಭಾವನೆಗಳಿಗೆ ಮಾನ್ಯತೆ ದೊರೆಯಬೇಕಾಗಿದೆ ಎಂದರು.

29, 30ನೇ ವಿಧಿ ಸೌಲಭ್ಯ ಸರ್ವರಿಗೂ ಲಭಿಸಲಿ
ಮಂಗಳೂರು: ಸಂವಿಧಾನದ ವಿಧಿ 29 ಮತ್ತು 30ರಡಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ, ಸರ್ವರೂ ಸಮಾನತೆ ಎಂಬ ನೆಲೆಯಲ್ಲಿ ಈ ವಿಧಿಯು ಎಲ್ಲ ಧರ್ಮಗಳ ಶಿಕ್ಷಣ ಸಂಸ್ಥೆಗಳಿಗೂ ದೊರೆಯಬೇಕೆಂಬ ವಿಚಾರದ ಬಗ್ಗೆ ಮಂಗಳೂರಿನಲ್ಲಿ ನಡೆಯುತ್ತಿರುವ ವಿಹಿಂಪ ಅಂತಾ ರಾಷ್ಟ್ರೀಯ ಬೈಠಕ್‌ನಲ್ಲಿ ಚರ್ಚೆಯಾಗಲಿದೆ ಎಂದು ವಿಹಿಂಪ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ಡಾ| ಸುರೇಂದ್ರ ಕುಮಾರ್‌ ಜೈನ್‌ ತಿಳಿಸಿದರು.

ಸಂಘನಿಕೇತನದಲ್ಲಿ ಶುಕ್ರ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸೌಲಭ್ಯಗಳು ಈ ದೇಶದಲ್ಲಿ ಧರ್ಮದ ಆಧಾರದಲ್ಲಿ ಸಿಗುವಂತಾಗ ಬಾರದು. ಆದರೆ, 29 ಹಾಗೂ 30ರ ವಿಧಿಯಲ್ಲಿ ಧರ್ಮದ ಆಧಾರದಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ವಿಶೇಷ ಸೌಲಭ್ಯ ನೀಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ನೀಡಿರುವ ಹಕ್ಕುಗಳನ್ನು ಹಿಂಪಡೆಯಬೇಕೆಂದು ನಾವು ಯಾವುದೇ ಕಾರಣಕ್ಕೂ ಬಯಸುವುದಿಲ್ಲ. ಆದರೆ, ಅವುಗಳಿಗೆ ನೀಡಲಾಗುವ ಸೌಲಭ್ಯಗಳು ಎಲ್ಲ ಧರ್ಮಗಳ ಸಂಸ್ಥೆಗಳಿಗೂ ಲಭಿಸಬೇಕೆಂಬುದು ನಮ್ಮ ಆಗ್ರಹ ಎಂದರು.

ಗೌರವಧನ ಅಸಮಾನತೆ ವಿರುದ್ಧ ಆಂದೋಲನ: ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಇತರ ಧರ್ಮದ ಗುರುಗಳಿಗೆ ಅಧಿಕ ಗೌರವಧನ ನೀಡಲಾಗುತ್ತದೆ. ಆದರೆ, ಪುರೋಹಿತರು ಮತ್ತು ಪಂಡಿತರಿಗೆ ಈ ಸೌಲಭ್ಯ ಒದಗಿಸದೆ ಹಿಂದೂ ವಿರೋಧಿ ಮತ್ತು ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸಲಾಗುತ್ತಿದೆ. ಈ ಬಗ್ಗೆ ಬೈಠಕ್‌ನಲ್ಲಿ ಚರ್ಚೆ ನಡೆಯಲಿದೆ. ಅಗತ್ಯವಾದಲ್ಲಿ ಈ ಎರಡೂ ರಾಜ್ಯಗಳ ವಿರುದ್ಧ ಆಂದೋಲನ ರೂಪಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಮಹಿಳೆಯರ ಸುರಕ್ಷತೆ: ಮಹಿಳೆಯರ ಸುರಕ್ಷತೆ ಇಂದು ಅತಿ ಪ್ರಮುಖವಾಗಿದೆ. ಸ್ತ್ರೀ-ಪುರುಷರ ಸಂಬಂಧ ವಿಕೃತಿಯಾಗಿ ಮಾರ್ಪಡುತ್ತಿದೆ. ಮಹಿಳೆಯರ ರಕ್ಷಣೆ ಸರಕಾರದ ಕೆಲಸ ಮಾತ್ರವಲ್ಲ. ಶಿಕ್ಷಣ ಸಂಸ್ಥೆಗಳೂ ಈ ಬಗ್ಗೆ ಗಮನ ಹರಿಸಬೇಕಿದೆ. ಈ ಬಗ್ಗೆ ಶಿಕ್ಷಣ ಸಂಸ್ಥೆಗಳಿಗೆ ಮನವಿ ನೀಡುವ ಕುರಿತು ಕ್ರಿಯಾ ಯೋಜನೆಯನ್ನು ಬೈಠಕ್‌ನಲ್ಲಿ ರೂಪಿಸಲಾಗುವುದು ಎಂದು ಹೇಳಿದರು.

ಪೌರತ್ವ ಕಾಯ್ದೆ ತಿದ್ದುಪಡಿ ಬಗ್ಗೆ ಚರ್ಚೆ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಸಮಾಜದಲ್ಲಿ ತಪ್ಪು ಸಂದೇಶವನ್ನು ನೀಡಿ ಮುಸ್ಲಿಂ ಸಮುದಾಯವನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಈ ಕುರಿತಂತೆ ಇತರ ಧರ್ಮಗಳ ಮನವೊಲಿಸುವ “ಒಆರ್‌ಪಿ’ ಬಗ್ಗೆಯೂ ಬೈಠಕ್‌ನಲ್ಲಿ ಚರ್ಚೆ ಆಗಲಿದೆ. ಆದಿವಾಸಿಗಳನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸುವ ಕಾರ್ಯವನ್ನು ಬ್ರಿಟಿಷರು ಆರಂಭಿಸಿದ್ದರು. ಆದಿವಾಸಿಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದ್ದವರು. ಆದರೆ, ವ್ಯವಸ್ಥಿತ ಷಡ್ಯಂತ್ರದಿಂದಾಗಿ ಅವರನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸಲಾಗಿದೆ. ಇದೀಗ ಅವರನ್ನು ಮನವೊಲಿಸುವ ಕಾರ್ಯ ಆಗಬೇಕಾಗಿದೆ. ಇದೇ ವೇಳೆ, ಮತಾಂತರದ ಬಗ್ಗೆ ಮಹತ್ವಪೂರ್ಣ ಚರ್ಚೆ ನಡೆಯಲಿದೆ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ