ತಪ್ಪು ಮಾಹಿತಿ: ಗ್ರಾಮಕ್ಕೆ ದೌಡಾಯಿಸಿದ ಡಿಸಿ
Team Udayavani, Jan 23, 2022, 1:39 PM IST
ಕುಷ್ಟಗಿ: ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಾಳ್ಕರ್ ಅವರಿಗೆ ತಪ್ಪು ಮಾಹಿತಿಯಿಂದ ಬಿಜಕಲ್ ಗ್ರಾಮಕ್ಕೆ ದೌಡಾಯಿಸಿದ ಪ್ರಸಂಗ ಭಾನುವಾರ ನಡೆದಿದೆ.
ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಾಳ್ಕರ್ ಅವರು ಯಲಬುರ್ಗಾ ತಾಲೂಕಿನ ಹಾಸ್ಟೇಲ್ ನಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಸದರಿ ವಸತಿ ನಿಲಯಕ್ಕೆ ಹೋಗಬೇಕಿತ್ತು. ಆದರೆ ಅವರಿಗೆ ಊರ ಹೆಸರು, ಗೊದಲವಾಗಿ ಬಿಜಕಲ್ ಗೆ ಬಂದು ಅಲ್ಲಿ ಹಾಸ್ಟೆಲ್ ಎಲ್ಲಿ? ಎಂದು ವಿಚಾರಿಸಿದ್ದರು. ಆದರೆ ಅಲ್ಲಿ ಯಾವೂದೇ ಹಾಸ್ಟೆಲ್ ಇಲ್ಲ ಎನ್ನುವುದು ಗೊತ್ತಾಗಿ ಕೂಡಲೇ ಕೋವಿಡ್ ಲಸಿಕಾ ಮೇಳದ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಇಬ್ಬರ ಮನೆಗೆ ತೆರಳಿ, ಲಸಿಕೆಯ ಮಹತ್ವ ಮನವರಿಕೆ ಮಾಡಿದರು.
ಲಸಿಕೆ ಹಾಕಿಸುವುದರಿಂದ ನಿಮ್ಮಿಂದ ಏನೂ ಕೇಳುವುದಿಲ್ಲ. ಸರ್ಕಾರಕ್ಕೆ ನಿಮ್ಮ ಆರೋಗ್ಯ ಮುಖ್ಯವೆಂದು ತಿಳಿ ಹೇಳಿದ ಅವರು ಲಸಿಕೆ ಹಾಕಿಸಿಕೊಂಡರೆ ನೀವು ಕ್ಷೇಮ, ನಿಮ್ಮ ಕುಟುಂಬದವರು ಕ್ಷೇಮವಾಗಿರಲು ಸಾಧ್ಯ. ಓಮಿಕ್ರಾನ್ ವೈರಸ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ರೂಢಿಸಿಕೊಳ್ಳುವಂತೆ ಹೇಳಿದರು.
ಇದೇ ವೇಳೆ ಜಿ.ಪಂ.ಸಿಇಓ ಫೌಜೀಯ ತರುನ್ನುಮ್, ತಾ.ಪಂ.ಇಒ ಡಾ.ಜಯರಾಮ್ ಚೌವ್ಹಾಣ್, ಗ್ರೇಡ್-2 ತಹಶೀಲ್ದಾರ ಮುರಲೀಧರ ಮೊಕ್ತೆದಾರ ವೈದ್ಯಾಧಿಕಾರಿ ಡಾ.ಆನಂದ ಗೋಟೂರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಹಾಜರಿದ್ದರು.