ಕೊಟ್ಟ ಮಾತಿಗೆ ಎಂದೂ ತಪ್ಪಲಾರೆ: ಬಿಎಸ್‌ವೈ

ಬಿಜೆಪಿ ಸರಕಾರ ರಚನೆಗಾಗಿ ಶಾಸಕ ಸ್ಥಾನ ತ್ಯಾಗ ಮಾಡಿದ ಎಲ್ಲ ಅನರ್ಹರಿಗೂ ಸಚಿವ ಸ್ಥಾನದ ಭರವಸೆ

Team Udayavani, Nov 15, 2019, 6:07 AM IST

ಬೆಂಗಳೂರು: ತಮ್ಮ ಶಾಸಕ ಸ್ಥಾನವನ್ನು ತ್ಯಾಗ ಮಾಡಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿರುವ ಎಲ್ಲ ಮಾಜಿ ಶಾಸಕರಿಗೂ ಸಚಿವ ಸ್ಥಾನ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಅನರ್ಹ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡು ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕಾರಣರಾಗಿರುವ 17 ಮಂದಿಗೂ ಮಾತು ಕೊಟ್ಟಂತೆ ನಡೆದುಕೊಳ್ಳುತ್ತೇನೆ. ಅವರು ಎಲ್ಲವನ್ನೂ ತ್ಯಾಗ ಮಾಡಿ¨ªಾರೆ. ಅವರನ್ನು ಗೆಲ್ಲಿಸಿಕೊಂಡು ಬರುವುದು ಬಿಜೆಪಿ ಜವಾಬ್ದಾರಿ. ಪಕ್ಷದ ಮುಖಂಡರು ಒಡಕಿನ ಮಾತನಾಡದೆ ಅವರ ಗೆಲುವಿಗೆ ಶ್ರಮಿಸಬೇಕು. ಯಾವುದೇ ರೀತಿಯಲ್ಲಿ ಅವರಿಗೆ ತೊಂದರೆಯಾಗದಂತೆ ತನು-ಮನ-ಧನದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಮಾಜಿ ಶಾಸಕರನ್ನು ಪಕ್ಷಕ್ಕೆ ಸೇರಿಸಿ ಕೊಳ್ಳುವ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಕಾರ್ಯಕರ್ತರು ಯಾವುದೇ ರೀತಿಯ ಗೊಂದಲ ಸೃಷ್ಟಿಸದೆ 15 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಸೂಚಿಸಿದರು.

ಬಿಜೆಪಿ ಕೇಂದ್ರ ನಾಯಕರು ನಿಮ್ಮ ಜತೆಗಿ¨ªಾರೆ. ನಿಮ್ಮನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು. ಪಕ್ಷ ಮತ್ತು ಕಾರ್ಯಕರ್ತರು ನಿಮ್ಮ ಜತೆಗಿ¨ªಾರೆ. ನಿಮಗೆ ಯಾವುದೇ ಆತಂಕ ಬೇಡ. ಎಲ್ಲ ಮಾಜಿ ಶಾಸಕರನ್ನೂ ಗೆಲ್ಲಿಸಿಕೊಂಡು ಬಂದು ಲಕ್ಷ ಜನರನ್ನು ಸೇರಿಸಿ ಬೃಹತ್‌ ಸಮಾವೇಶ ಮಾಡಲಾಗುವುದು ಎಂದು ಹೇಳಿದರು.

ಪಕ್ಷಾಂತರ ಮಾಡಿಲ್ಲ: ಎಚ್‌.ವಿಶ್ವನಾಥ್‌
ನಾವ್ಯಾರೂ ಅಧಿಕಾರಕ್ಕಾಗಿ ಅಧಿಕಾರ ತ್ಯಾಗ ಮಾಡಿದವರಲ್ಲ. ರಾಜ್ಯದಲ್ಲಿದ್ದ ರಾಕ್ಷಸ ರಾಜಕಾರಣ ಅಂತ್ಯಗೊಳಿಸಲು ರಾಜೀನಾಮೆ ನೀಡಬೇಕಾಯಿತು. ನಾವು 17 ಮಂದಿ ಅತ್ಯಂತ ಸಂತೋಷದಿಂದ ಬಿಜೆಪಿಯನ್ನು ಸೇರಿದ್ದೇವೆ ಎಂದು ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಹೇಳಿದರು. ದೇಶದಲ್ಲಿ ಪಕ್ಷಾಂತರದ ಬಗ್ಗೆ ಚರ್ಚೆಯಾಗುತ್ತಿದೆ. ನಾವ್ಯಾರು ಪಕ್ಷಾಂತರ ಮಾಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 26 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಹಾಗಾದರೆ ಜನರೆಲ್ಲ ಪಕ್ಷಾಂತರ ಮಾಡಿದ್ದರಾ? ನಮ್ಮದು ಪಕ್ಷಾಂತರ ಅಲ್ಲ. ರಾಜಕೀಯ ಧ್ರುವೀಕರಣ. ಈಗ ಪಕ್ಷ ರಾಜಕಾರಣ ವಿಫ‌ಲವಾಗಿದೆ. ಇಡೀ ದೇಶದಲ್ಲಿಯೇ ರಾಜಕಾರಣ ಧ್ರುವೀಕರಣ ಆಗಿದೆ ಎಂದರು. 17 ಮಂದಿಗೆ ಶಿಕ್ಷೆ ನೀಡಲೇಬೇಕೆಂದು ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ ಅವರು ರಾಜ್ಯ ರಾಜಕಾರಣದಿಂದ ನಮ್ಮನ್ನು ದೂರ ಇಡಲು ಹುನ್ನಾರ ಮಾಡಿದ್ದರು. ಅವರ ಹುನ್ನಾರವನ್ನು ಸುಪ್ರೀಂ ಕೋರ್ಟ್‌ ತಡೆ ಹಿಡಿದು ನಮಗೆ ಸ್ಪರ್ಧೆಗೆ ಅವಕಾಶ ಕೊಟ್ಟಿದೆ ಎಂದು ಹೇಳಿದರು.

ಮೈತ್ರಿಯಲ್ಲಿ ಮನಸ್ಸು ಒಗ್ಗೂಡಲಿಲ್ಲ: ಡಾ| ಸುಧಾಕರ್‌
ರಾಜ್ಯದಲ್ಲಿ ಬಿಜೆಪಿಯನ್ನು ದೂರ ಇಡುವ ಏಕೈಕ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಯಿತು. ಹೀಗಾಗಿ ನಮ್ಮ ಮನಸ್ಸುಗಳು ಒಗ್ಗೂಡಲೇ ಇಲ್ಲ ಎಂದು ಡಾ| ಸುಧಾಕರ್‌ ಹೇಳಿದ್ದಾರೆ. ನಾವೆಲ್ಲ ಯಾರದೋ ಕೃಪೆಯಿಂದ ಗೆದ್ದವರಲ್ಲ. ಜನರ ಬೆಂಬಲವಿದೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಹೀಗಾಗಿ ಕುರ್ಚಿ ಇದ್ದರೆಷ್ಟು ಇಲ್ಲದಿದ್ದರೆಷ್ಟು ಎಂದು ರಾಜೀನಾಮೆ ಕೊಟ್ಟಿದ್ದೇವೆ. ನಾವು ಒಳ್ಳೆಯ ಉದ್ದೇಶಕ್ಕೆ ಬಿಜೆಪಿ ಸೇರಿದ್ದೇವೆ ಎಂದರು. ಮೈತ್ರಿ ಸರಕಾರ ಪತನವಾದ ಮೇಲೆ ಎರಡೂ ಪಕ್ಷಗಳ ನಾಯಕರು ಬೀದಿಯಲ್ಲಿ ವ್ಯಾಜ್ಯ ಮಾಡುತ್ತಿದ್ದಾರೆ. ನಾವು ಕೇಂದ್ರದಲ್ಲಿ ನರೇಂದ್ರ ಮೋದಿ ನಾಯಕತ್ವ, ರಾಜ್ಯದಲ್ಲಿ ಯಡಿಯೂರಪ್ಪ ಅವರ ಸ್ಥಿರ ಸರಕಾರವನ್ನು ಬೆಂಬಲಿಸಲು ಬಂದಿದ್ದೇವೆ ಎಂದವರು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ