ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ಪಾಕಿಸ್ಥಾನ ಕ್ರಿಕೆಟ್ ತಂಡ
Team Udayavani, Jun 29, 2020, 6:05 AM IST
ಕರಾಚಿ: ಕೋವಿಡ್-19 ಸಂಕಟದ ನಡುವೆಯೂ 20 ಸದಸ್ಯರ ಪಾಕಿಸ್ಥಾನ ಕ್ರಿಕೆಟ್ ತಂಡ ರವಿವಾರ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿತು. ಇಲ್ಲಿಗೆ ಬಂದಿಳಿದ ಬಳಿಕ ಪಾಕ್ ತಂಡ ವೂರ್ಸ್ಟರ್ಶೈರ್ನಲ್ಲಿ 14 ದಿನಗಳ ಕ್ವಾರಂಟೈನ್ಗೆ ಒಳಗಾಗಲಿದೆ. ಬಳಿಕ ಅಭ್ಯಾಸಕ್ಕೆ ಇಳಿಯಲಿದೆ ಎಂದು ತಂಡದ ಪ್ರಕಟನೆ ತಿಳಿಸಿದೆ.
ತಂಡದೊಂದಿಗೆ ಕೋಚ್ ಮಿಸ್ಬಾ ಉಲ್ ಹಕ್ ಕೂಡ ತೆರಳಿದ್ದಾರೆ. ಜತೆಗೆ ಅಧಿಕಾರಿಗಳು, ಸಹಾಯಕ ಸಿಬಂದಿ ಇದ್ದಾರೆ. ಆದರೆ ಕೋವಿಡ್-19 ಪರೀಕ್ಷೆ ವೇಳೆ ಪಾಸಿಟಿವ್ ಫಲಿತಾಂಶ ಕಂಡುಬಂದ 10 ಮಂದಿ ಆಟಗಾರರು ಸದ್ಯ ಪ್ರವಾಸದಿಂದ ದೂರ ಉಳಿದಿದ್ದಾರೆ. ಮುಂದಿನ ಕೋವಿಡ್-19 ಟೆಸ್ಟ್ನಲ್ಲಿ ಇವರ ಫಲಿತಾಂಶ ನೆಗೆಟಿವ್ ಬಂದರೆ ಇಂಗ್ಲೆಂಡಿಗೆ ತೆರಳುವ ಸಾಧ್ಯತೆ ಇದೆ.
ಇಂಗ್ಲೆಂಡ್ ಪ್ರವಾಸದ ವೇಳೆ 3 ಟೆಸ್ಟ್ ಮತ್ತು 3 ಟಿ20 ಪಂದ್ಯಗಳನ್ನು ಆಡಲಾಗುವುದು. ಇದಕ್ಕೂ ಮುನ್ನ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಸರಣಿ ಆಡಲಿದೆ.