ಉಡುಪಿಯಲ್ಲೀಗ ಪರ್ಯಾಯದ ಸಂಭ್ರಮ

ಇಂದಿನಿಂದ ಈಶಪ್ರಿಯತೀರ್ಥರ ಮೊದಲ ಪರ್ಯಾಯ ಪೂಜೆ ಆರಂಭ

Team Udayavani, Jan 18, 2020, 3:10 AM IST

ಉಡುಪಿ: ಶ್ರೀಕೃಷ್ಣ ನಗರಿ ಉಡುಪಿಯಲ್ಲೀಗ ಪರ್ಯಾಯ ಪೂಜೆಯ ಸಂಭ್ರಮ, ಸಡಗರ. ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ಪೂಜೆಯ ಇತಿಹಾಸದಲ್ಲಿ 250ನೇ ಪರ್ಯಾಯ ಪೂಜೆ, ಅದಮಾರು ಮಠದ ಸರದಿಯಲ್ಲಿ 32ನೇ ಪರ್ಯಾಯ ಪೂಜೆ.

ಈಗ 31 ಪರ್ಯಾಯ ಚಕ್ರಗಳು ಮುಗಿದಿದ್ದು, 32ನೇ ಚಕ್ರದಲ್ಲಿ ಮೊದಲ ಪರ್ಯಾಯವನ್ನು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು ಶುಕ್ರವಾರ ಮುಕ್ತಾಯಗೊಳಿಸಿದ್ದಾರೆ. ಇದು ಅವರ ದ್ವಿತೀಯ ಪರ್ಯಾಯವಾಗಿದ್ದು, ಈ ಅವಧಿಯಲ್ಲಿ ಶ್ರೀಕೃಷ್ಣ ಮಠಕ್ಕೆ ಸ್ವರ್ಣಗೋಪುರ, ಶ್ರೀ ಮುಖ್ಯಪ್ರಾಣ ದೇವರಿಗೆ ಸ್ವರ್ಣ ಗೋಪುರ, ಎರಡು ವರ್ಷಗಳ ಅಖಂಡ ಭಜನೆ, ನಿತ್ಯ ಲಕ್ಷ ವಿಷ್ಣುಸಹಸ್ರನಾಮ ಪಠಣದೊಂದಿಗೆ ಲಕ್ಷತುಳಸಿ ಅರ್ಚನೆಯನ್ನು ಸಮ ರ್ಪಿಸಿ ದ್ದಾರೆ. ಇದೀಗ ಸರದಿ ಅದಮಾರು ಮಠದ್ದು.

ಶಿಷ್ಯಪೂಜಾ ಪರಂಪರೆ: ಈ ಬಾರಿ ಅದಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ಈಶಪ್ರಿಯತೀರ್ಥರ ಪರ್ಯಾಯ ಪೀಠಾರೋಹಣ. ಇವರು ಪರಂಪರೆ ಯಲ್ಲಿ 33ನೆಯ ಯತಿ. 31ನೇ ಸ್ವಾಮೀಜಿಯವರಾ ಗಿದ್ದ ಶ್ರೀ ವಿಬುಧೇಶತೀರ್ಥ ಶ್ರೀಪಾದರು 1956-57 ಮತ್ತು 1972-73ರಲ್ಲಿ ಎರಡು ಪರ್ಯಾಯ ಪೂಜೆ ಗಳನ್ನು ನಡೆಸಿ, 1988-89 ಮತ್ತು 2004-06ರಲ್ಲಿ ತಮ್ಮ ಶಿಷ್ಯ, 32ನೆಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಿಂದ ಪರ್ಯಾಯ ಪೂಜೆಗಳನ್ನು ನಡೆಸಿದ್ದರು.

ತಾವಿರುವಾಗಲೇ ಶಿಷ್ಯರಿಂದ ಪರ್ಯಾಯ ಪೂಜೆಯನ್ನು ನಡೆಸಿದ ಎರಡನೆಯ ಯತಿ ಇವರು. ಶ್ರೀ ವಾದಿರಾಜಸ್ವಾಮಿಗಳು 1598-99ರ ಪರ್ಯಾಯ ಪೂಜೆಯನ್ನು ಶಿಷ್ಯ ಶ್ರೀ ವೇದವೇದ್ಯತೀರ್ಥರಿಂದ ನಡೆಸಿದ್ದರು. ತಮ್ಮ ಗುರುಗಳು ಹಾಕಿಕೊಟ್ಟ ಪರಂಪರೆಯಂತೆ ಶ್ರೀ ವಿಶ್ವಪ್ರಿಯತೀರ್ಥರು ಎರಡು ಪರ್ಯಾಯ ಪೂಜೆಗಳನ್ನು ನಡೆಸಿ, ಈಗ ತಮ್ಮ ಪಟ್ಟಶಿಷ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಪರ್ಯಾಯ ಪೂಜೆಯನ್ನು ನಡೆಸಲಿದ್ದಾರೆ.

ಮೊದಲು ಹಿರಿಯರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸರ್ವಜ್ಞಪೀಠದಲ್ಲಿ ಕುಳಿತು ಬಳಿಕ ಶಿಷ್ಯರು ಕುಳಿತುಕೊಳ್ಳುವ ಪರಂಪರೆ ಮುಂದುವರಿಯಿತು. ಶ್ರೀ ಈಶಪ್ರಿಯತೀರ್ಥರು ಎಂಜಿನಿಯರಿಂಗ್‌ ಪದವಿ ಮುಗಿಸಿದ ಬಳಿಕ 2014ರಲ್ಲಿ ಸನ್ಯಾಸಾ ಶ್ರಮವನ್ನು ಸ್ವೀಕರಿಸಿದರು. ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಲ್ಲಿ ಶಾಸ್ತ್ರಾಧ್ಯಯನವನ್ನು ನಡೆಸುತ್ತಿದ್ದಾರೆ.

730 ದಿನಗಳ ಅಖಂಡ ಭಜನೆ ಇಂದು ಸಮಾಪನ
ಉಡುಪಿ: ಎರಡು ವರ್ಷ ಅಂದರೆ 730 ದಿನಗಳ ಕಾಲ ಅನುಕ್ಷಣವೂ ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆದ ಗೋವಿಂದನಾಮ ಸ್ಮರಣೆ ಜ. 18ರ ಪ್ರಾತಃಕಾಲ ಸಮಾಪನ ಗೊಳ್ಳುತ್ತಿದೆ. ಎರಡು ವರ್ಷ ಅನುದಿನವೂ ನಡೆದ ಲಕ್ಷತುಳಸೀ ಅರ್ಚನೆ ಮತ್ತು ಲಕ್ಷ ವಿಷ್ಣು ಸಹಸ್ರನಾಮಾರ್ಚನೆ ಜ. 17ರಂದು ಮುಕ್ತಾಯಗೊಂಡಿದೆ. ಇಂತಹ ಅದ್ಭುತ ಸೇವೆ ಪಲಿಮಾರು ಮಠದ ಶ್ರೀ ವಿದ್ಯಾಧೀ ಶತೀರ್ಥ ಶ್ರೀಪಾದರಿಂದ ಸಂದಂತಾಗಿದೆ.

ಆರಂಭದಲ್ಲಿ ದಿನಕ್ಕೆ ಆರು ಭಜನ ಮಂಡಳಿಗಳು ಎರಡೆರಡು ಪಾಳಿಗಳಂತೆ ಎರಡೆರಡು ತಾಸುಗಳಂತೆ ಭಜನೆ ಹಾಡುತ್ತಿದ್ದವು. ಬಂದ ತಂಡಗಳು ಎರಡು ದಿನಗಳ ಕಾಲ ಸೇವೆ ಸಲ್ಲಿಸುತ್ತಿದ್ದವು. ಕೊನೆಕೊನೆಗೆ ಬೇಡಿಕೆ ಹೆಚ್ಚಾಗಿ ಅರ್ಧ ತಾಸು ಹಾಡಲು ಸಿಗುವುದೇ ಕಷ್ಟವೆನಿಸಿತು. ದಿನಕ್ಕೆ ಆರು ಭಜನ ಮಂಡಳಿಗಳೆಂದು ಲೆಕ್ಕ ಹಾಕಿದರೆ 2 ವರ್ಷಗಳಲ್ಲಿ 8,760 ಮಂಡಳಿ ಗಳು ಭಾಗವಹಿಸಿದಂತಾಯಿತು.

ಎರಡು ದಿನಗಳಿಗೊಮ್ಮೆ ಆರು ಮಂಡಳಿಗಳೆಂದು ಲೆಕ್ಕ ಹಾಕಿದರೆ 4,380 ತಂಡಗಳು ಭಾಗವಹಿಸಿದಂತಾಗುತ್ತದೆ. ಕೆಲವು ತಂಡಗಳಲ್ಲಿ 10-15 ಜನರು, ಕೆಲವು ತಂಡಗಳಲ್ಲಿ 30- 40 ಮಂದಿ ಇರುತ್ತಿದ್ದರು. ಸರಾಸರಿ 20 ಜನರನ್ನು ಲೆಕ್ಕ ಹಾಕಿದರೆ 8,760 ತಂಡಗ ಳಲ್ಲಿ 1.75 ಲಕ್ಷಕ್ಕೂ ಹೆಚ್ಚು ಸದಸ್ಯರು ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಭಜಿಸಿದಂತಾಗುತ್ತದೆ.

ನಿತ್ಯ ಲಕ್ಷಾರ್ಚನೆ: 2018ರ ಜ. 18ರಂದು ಆರಂಭಗೊಂಡ ಲಕ್ಷ ತುಳಸೀ ಅರ್ಚನೆ 2020ರ ಜ. 17ರಂದು ಮುಕ್ತಾಯಗೊಂ ಡಿದೆ. ಇದು ಲಕ್ಷ ತುಳಸೀ ಅರ್ಚನೆ ಎಂದು ಪ್ರಸಿದ್ಧವಾದರೂ ಇದರೊಳಗೆ ಲಕ್ಷ ನಾಮ ಅರ್ಚನೆಯೂ ಸೇರಿಕೊಂಡಿತ್ತು.

ಪಟ್ಟದ ದೇವರು ಚತುರ್ಭುಜ ಕಾಳಿಂಗಮರ್ದನ ಕೃಷ್ಣ: ಅದಮಾರು ಮಠದ ಯತಿಗಳಿಗೆ ಪೂಜಿಸಲು ಮಧ್ವಾಚಾರ್ಯರು ಅನುಗ್ರಹಿಸಿದ ದೇವತಾ ವಿಗ್ರಹ ಚತುರ್ಭುಜ ಕಾಳಿಂಗಮರ್ದನ ಕೃಷ್ಣ ದೇವರು. ಇದನ್ನು ಪಟ್ಟದ ದೇವರು ಎಂದು ಕರೆಯುತ್ತಾರೆ. ಪಂಚಲೋಹದ ವಿಗ್ರಹವಿದು. ಸುಮಾರು ಆರು ಇಂಚು ಎತ್ತರವಿದೆ. ಕಟ್ಟತ್ತಿಲದ ಗೋಪಾಲಕೃಷ್ಣ ದೇವರೂ ಪಟ್ಟದ ದೇವರಂತೆ ಪೂಜೆಗೊಳ್ಳುತ್ತಿದ್ದು, ಇದು ಸುಮಾರು ನಾಲ್ಕು ಇಂಚು ಎತ್ತರವಿದೆ. ಇನ್ನೆರಡು ವರ್ಷ ಈ ವಿಗ್ರಹಗಳು ಶ್ರೀಕೃಷ್ಣ ಪೂಜೆಯೊಂದಿಗೆ ಪೂಜೆಗೊಳ್ಳುತ್ತವೆ.

ಪರ್ಯಾಯೋತ್ಸವದ ವಿಧಿವಿಧಾನಗಳು
* ಪರ್ಯಾಯ ಪೀಠವೇರಲಿರುವ ಶ್ರೀಪಾದರಿಂದ ಶನಿವಾರ ಮುಂಜಾನೆ ಕಾಪು ಬಳಿಯ ದಂಡತೀರ್ಥಕ್ಕೆ ತೆರಳಿ ಸ್ನಾನ.

* ಜೋಡುಕಟ್ಟೆಗೆ ಆಗಮನ, ಅಲ್ಲಿ ಪರ್ಯಾಯೋತ್ಸವದ ದಿನ ಮಾತ್ರ ಮಠಾಧೀಶರು ಪೇಟ ಸುತ್ತಿಕೊಳ್ಳುವ ಸಂಪ್ರದಾಯ.

* ಅಲ್ಲಿಂದ ವಿವಿಧ ಬ್ಯಾಂಡ್‌ ಸೆಟ್‌, ವಾದ್ಯೋಪಕರಣಗಳು-ಟ್ಯಾಬ್ಲೋಗಳ ವೈಭವದ ಮೆರವಣಿಗೆ.

* ಭಾವೀ ಪರ್ಯಾಯ ಪೀಠಾಧೀಶರ ಪಟ್ಟದ ದೇವರಾದ ಚತುರ್ಭುಜ ಶ್ರೀಕಾಳಿಮರ್ದನ ಕೃಷ್ಣನ ಪ್ರತಿಮೆಯನ್ನು ಪಲ್ಲಕಿಯಲ್ಲಿರಿಸಿ ಹಿಂದಿನಿಂದ ಅದಮಾರು ಮಠಾಧೀಶರು, ನಂತರ ಆಶ್ರಮ ಜೇಷ್ಠತ್ವದಂತೆ ಕೃಷ್ಣಾಪುರ ಮೊದಲಾದ ಶ್ರೀಗಳು ವೈಭವದ ಮೆರವಣಿಗೆಯಲ್ಲಿ ರಥಬೀದಿಗೆ ಆಗಮನ.

* ರಥಬೀದಿಗೆ ಪ್ರವೇಶವಾಗುತ್ತಿದ್ದಂತೆ ವಾಹನದಿಂದ ಇಳಿದು ಹಾಸುಗಂಬಳಿಯ ಮೇಲೆ ಆಗಮಿಸಿ ಮೊದಲು ಕನಕನ ಕಿಂಡಿಯ ಮೂಲಕ ದೇವರ ದರ್ಶನ, ನವಗ್ರಹದಾನ ಪ್ರದಾನ, ಚಂದ್ರೇಶ್ವರ, ಅನಂತೇಶ್ವರ ದರ್ಶನ, ಕೃಷ್ಣಮಠದ ಮುಂಭಾಗ ನಿರ್ಗಮನ ಪೀಠಾಧೀಶರಿಂದ ಆಗಮನ ಪೀಠಾಧೀಶರಿಗೆ ಸ್ವಾಗತ, ಮಧ್ವಸರೋವರದಲ್ಲಿ ಪಾದ ಪ್ರಕ್ಷಾಳನ, ದೇವರ ದರ್ಶನ, ಅಕ್ಷಯಪಾತ್ರೆಯ ಹಸ್ತಾಂತರ, ಸರ್ವಜ್ಞ ಸಿಂಹಾಸನ ಆರೋಹಣ, ಬಳಿಕ ಬಡಗು ಮಾಳಿಗೆಯಲ್ಲಿ ಪರ್ಯಾಯ ಶ್ರೀಪಾದರಿಂದ ಇತರ ಮಠಾಧೀಶರಿಗೆ ಗಂಧ್ಯದ್ಯುಪಚಾರ. ಇದು ಸಾಂಪ್ರದಾಯಿಕ ದರ್ಬಾರ್‌ ಸಭೆ.

* ಇದೇ ಮೊದಲ ಬಾರಿಗೆ ಸಾರ್ವಜನಿಕ ಪರ್ಯಾಯ ದರ್ಬಾರ್‌ ಸಭೆ ಅಪರಾಹ್ನ 2.30ಕ್ಕೆ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ