ಜನ ನಮ್ಮನ್ನು ಅನರ್ಹರು ಎನ್ನುತ್ತಿಲ್ಲ


Team Udayavani, Nov 25, 2019, 3:09 AM IST

janan-namm

ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿರುವ 15 ಕ್ಷೇತ್ರಗಳ ಉಪಚುನಾವಣೆ ಕದನ ದಿನೇದಿನೆ ರಂಗೇರುತ್ತಿದೆ. ಅನರ್ಹಗೊಂಡ ಶಾಸಕರು ಬಿಜೆಪಿಯ ಕಮಲ ಚಿಹ್ನೆಯಡಿ ಉಪ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಎಲ್ಲ ಕ್ಷೇತ್ರದ ಅಭ್ಯರ್ಥಿಗಳೂ ಗೆಲುವು ತಮ್ಮದೇ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಮತದಾರರು ತಮ್ಮನ್ನು ಆಯ್ಕೆ ಮಾಡಲು ಕಾರಣ ಹಾಗೂ ಕ್ಷೇತ್ರದ ಅಭಿವೃದ್ಧಿಯನ್ನು ಯಾವ ರೀತಿ ಮಾಡಲಿದ್ದೇವೆ ಎಂಬುದನ್ನು ಅವರು “ಉದಯವಾಣಿ ಪಂಚ ಪ್ರಶ್ನೆ’ಗೆ ಉತ್ತರ ನೀಡಿದ್ದಾರೆ. ಮೊದಲ ಭಾಗವಾಗಿ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಕಿರು ಸಂದರ್ಶನ ಇಲ್ಲಿದೆ.

1. ಚುನಾವಣೆ ಸ್ಪರ್ಧೆಯನ್ನು ಯಾವ ವಿಷಯ ಆಧರಿಸಿ ಎದುರಿಸುತ್ತೀರಿ?

2. ಮತದಾರರು ನಿಮ್ಮನ್ನು ಮರು ಆಯ್ಕೆ ಯಾಕೆ ಮಾಡಬೇಕು?

3. ಅನರ್ಹರು ಎಂದು ಕರೆಯಿಸಿಕೊಳ್ಳಲು ಮುಜುಗರ ಆಗುವುದಿಲ್ಲವೇ?

4. ಗೆದ್ದರೆ ಇಷ್ಟು ದಿನ ನೀವು ವಿರೋಧಿಸಿದ್ದ ಸಿದ್ಧಾಂತ ಈಗ ಅಪ್ಪಿಕೊಂಡಿರುವ ಬಿಜೆಪಿ ಸಿದ್ಧಾಂತ ಹೊಂದಾಣಿಕೆ ಆಗುತ್ತದೆಯೇ? ಸೋತರೆ ರಾಜಕೀಯ ವನವಾಸವೇ?

5. ಸರ್ಕಾರ ಉರುಳಿಸಲು ಮತ್ತು ಸೃಷ್ಟಿಸಲು ನಿಮ್ಮ ಹಿಂದೆ ಇದ್ದ ಶಕ್ತಿ ಯಾವುದು?

ಎಸ್‌.ಟಿ.ಸೋಮಶೇಖರ್‌, ಯಶವಂತಪುರ
1. ಅಭಿವೃದ್ಧಿಯೊಂದೇ ನನ್ನ ಗುರಿ. ಕ್ಷೇತ್ರಕ್ಕೆ ಕಾವೇರಿ ಕುಡಿಯುವ ನೀರು, ಸಮರ್ಪಕ ಒಳಚರಂಡಿ ವ್ಯವಸ್ಥೆ, ಸುಗಮ ಸಂಚಾರಕ್ಕೆ ರಸ್ತೆ, ಮೆಲ್ಸೇತುವೆ, ಬಡವರಿಗೆ ಮನೆ ಕಲ್ಪಿಸುವುದು ನನ್ನ ಆದ್ಯತೆ. ಅದುವೇ ನನ್ನ ಅಜೆಂಡಾ.

2. ರಾಜ್ಯ ಸರ್ಕಾರದಿಂದ 751 ಕೋಟಿ ರೂ. ಅನುದಾನ ದೊರೆತಿದೆ. ಜತೆಗೆ ಇನ್ನೂ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಮಂಜೂರಾತಿ ಸಿಕ್ಕಿದೆ. ಕ್ಷೇತ್ರದ ಜನರ ಕಲ್ಯಾಣಕ್ಕೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ನನ್ನ ಕ್ಷೇತ್ರದ ಜನರಿಗೂ ಇದು ಗೊತ್ತಿದೆ. ಹೀಗಾಗಿ, ಮರು ಆಯ್ಕೆ ಮಾಡಲು ಮನವಿ ಮಾಡುತ್ತಿದ್ದೇನೆ.

3. ಕಾನೂನು ಬಾಹಿರವಾಗಿ ನಮ್ಮನ್ನು ಅನರ್ಹತೆ ಮಾಡಲಾಯಿತು. ಕಾಲಾವಕಾಶ ಕೊಡದೇ ಹಿಂದಿನ ಸ್ಪೀಕರ್‌ ಯಾರಧ್ದೋ ಮಾತು ಕೇಳಿ ಅನರ್ಹತೆ ಮಾಡಿದರು. ಆದರೂ ಸುಪ್ರೀಂಕೋರ್ಟ್‌ ನಮಗೆ ಸ್ಪರ್ಧೆಗೆ ಅವಕಾಶ ಕೊಟ್ಟಿದೆ. ಹೀಗಾಗಿ, ಎಲ್ಲವನ್ನೂ ಜನರ ಮುಂದೆಯೇ ಇಡುತ್ತೇವೆ.

4. ನಾವು ಕಾಂಗ್ರೆಸ್‌ನಲ್ಲಿದ್ದಾಗ ಆ ಪಕ್ಷದ ಸಿದ್ಧಾಂತ ಒಪ್ಪಿ ಬದ್ಧತೆಯಿಂದ ಇದ್ದೆವು. ಇದೀಗ ಬಿಜೆಪಿ ಸೇರಿದ್ದೇವೆ. ಈ ಪಕ್ಷದಲ್ಲಿ ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾಗಬಹುದು. ಆದರೆ, ಇರುವ ಪಕ್ಷದ ಸಿದ್ಧಾಂತ ಒಪ್ಪಿ ನಡೆಯಲೇಬೇಕು. ನಮ್ಮನ್ನು ಜನತೆ ಕೈ ಬಿಡುವುದಿಲ್ಲವೆಂಬ ವಿಶ್ವಾಸವಿದೆ. ಹೀಗಾಗಿ, ಸೋತು ವನವಾಸದ ಪ್ರಶ್ನೆ ಉದ್ಭವಿಸುವುದಿಲ್ಲ. ಯಾಕೆಂದರೆ ಕ್ಷೇತ್ರದ ಅಭಿವೃದ್ಧಿ ಹಾಗೂ ಮತದಾರರ ಒಳಿತಿಗಾಗಿಯೇ ನಾನು ರಾಜೀನಾಮೆ ಕೊಟ್ಟು ಉಪ ಚುನಾವಣೆಗೆ ಬಂದಿದ್ದೇನೆ.

5. ನಾವು ಯಡಿಯೂರಪ್ಪನವರ ಅಥವಾ ಬಿಜೆಪಿ ಸರ್ಕಾರ ರಚನೆಯಾಗಬೇಕು ಎಂದು ರಾಜೀನಾಮೆ ಕೊಟ್ಟಿದ್ದಲ್ಲ. ಸರ್ಕಾರದ ನೇತೃತ್ವ ವಹಿಸಿದ್ದವರು ಶಾಸಕರನ್ನು ಸರಿಯಾಗಿ ನಡೆಸಿಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಲೋಕಸಭೆ ಚುನಾವಣೆ ನಂತರ ಸರ್ಕಾರ ಇರುವುದಿಲ್ಲ ಎಂದು ಎರಡೂ ಪಕ್ಷಗಳಿಗೆ ಗೊತ್ತಿತ್ತು. ಹೀಗಾಗಿ, ಅವರದೇ ಆದ ತಪ್ಪುಗಳಿಂದ ಸರ್ಕಾರ ಬಿದ್ದು ಹೋಯಿತು. ಇದಕ್ಕೆ ಬಿಜೆಪಿಯನ್ನು ದೂರುವುದು ಸರಿಯಲ್ಲ. ನಮ್ಮನ್ನು ಕಾಂಗ್ರೆಸ್‌ನಿಂದ ಉಚ್ಚಾಟನೆ ಮಾಡಿದ್ದಕ್ಕೆ ಬಿಜೆಪಿ ಸೇರಬೇಕಾಯಿತು.

ಕೆ. ಗೋಪಾಲಯ್ಯ ಮಹಾಲಕ್ಷ್ಮಿಲೇಔಟ್‌
1. ಕ್ಷೇತ್ರದ ಸಮಗ್ರ ಅಭಿವೃದ್ಧಿಯೊಂದೇ ನನ್ನ ಪ್ರಮುಖ ಉದ್ದೇಶ. ಪಾಲಿಕೆ ಸದಸ್ಯ ಹಾಗೂ ಎರಡು ಬಾರಿ ಶಾಸಕನಾಗಿ ಜನ ಆಯ್ಕೆ ಮಾಡಿದ್ದಾಗ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಮತ್ತೆ ಜನರ ಮನೆ ಬಾಗಿಲಿಗೆ ಹೋಗುತ್ತಿದ್ದೇನೆ. ಕ್ಷೇತ್ರದ ಜನರು ನನ್ನನ್ನು ಒಪ್ಪುತ್ತಾರೆ.

2. ನಾನು ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಮನೆ ಮಗ. ನಾನು ಹಾಗೂ ನನ್ನ ಪತ್ನಿ ದಿನದ 24 ಗಂಟೆ ಕ್ಷೇತ್ರದ ಜನರ ಸೇವೆಯಲ್ಲಿ ಪ್ರಾಮಾಣಿಕವಾಗಿ ತೊಡಗಿದ್ದೇವೆ. ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದೇನೆ. ಬಿಜೆಪಿ ಸರ್ಕಾರ ಬಂದ ಮೇಲೆ ಸಾಕಷ್ಟು ಅನುದಾನ ಸಿಕ್ಕಿದೆ. ಹೀಗಾಗಿ, ಮರು ಆಯ್ಕೆ ಮಾಡಿ ಎಂದು ಮನವಿ ಮಾಡುತ್ತಿದ್ದೇನೆ.

3. ಅನರ್ಹರು ಎಂದು ನನ್ನ ಕ್ಷೇತ್ರದ ಜನರು ಹೇಳಿಲ್ಲ. ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ನಾನು ಯಾರ ಬಗ್ಗೆಯೂ ಮಾತನಾಡಲ್ಲ, ನನ್ನ ಕೆಲಸ ಮಾತನಾಡಬೇಕು. ಜನರ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ. ಜನರಿಗೆ ಈ ಗೋಪಾಲಯ್ಯ ಏನು ಎಂಬುದು ಚೆನ್ನಾಗಿ ಗೊತ್ತಿದೆ.

4. ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ದೇಶ ಹಾಗೂ ರಾಜ್ಯ ಅಭಿವೃದ್ಧಿ ಪಥದತ್ತ ನಡೆಯುತ್ತಿದೆ. ನಾನೂ ನನ್ನ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಾದರಿ ಮಾಡಲು ಬಿಜೆಪಿ ಸೇರಿದ್ದೇನೆ. ನನ್ನ ಕ್ಷೇತ್ರದ ಜನರ ಅಭಿಪ್ರಾಯ ಪಡೆದೇ ನಾನು ತೀರ್ಮಾನ ಕೈಗೊಂಡಿದ್ದೇನೆ. ಇಲ್ಲಿದ್ದಾಗ ಸಿದ್ಧಾಂತ ಒಪ್ಪುವುದು ನನ್ನ ಧರ್ಮ. ಸೋಲುವುದು, ವನವಾಸ ಎಲ್ಲವೂ ಜನರೇ ನಿರ್ಧರಿಸುತ್ತಾರೆ. ಆದರೆ, ನನ್ನ ಜನ ನನ್ನ ಕೈ ಹಿಡಿಯುವರು ಎಂಬ ವಿಶ್ವಾಸವಿದೆ.

5. ನಾವು ಸರ್ಕಾರ ಉರುಳಿಸಲು ರಾಜೀನಾಮೆ ಕೊಟ್ಟಿಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ತೊಂದರೆಯಾಗಿದ್ದಕ್ಕೆ ಸರಿಯಾಗಿ ನ್ಯಾಯ ಸಿಗದ ಕಾರಣ ರಾಜೀನಾಮೆ ಕೊಟ್ಟಿದ್ದೆವು. ಸಮ್ಮಿಶ್ರ ಸರ್ಕಾರದಲ್ಲಿ ನಮ್ಮನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಲಿಲ್ಲ. ಅಭಿವೃದ್ಧಿಗೆ ಸಹಕಾರವೂ ಸಿಗಲಿಲ್ಲ. ಹೀಗಾಗಿ, ರಾಜೀನಾಮೆ ಕೊಟ್ಟೆವು. ಬೇರೆ ಯಾವ ಶಕ್ತಿಯೂ ಇಲ್ಲ. ತಮ್ಮಲ್ಲೇ ತಪ್ಪು ಇಟ್ಟುಕೊಂಡು ಬೇರೆಯವನ್ನು ದೂರುವುದು ಸರಿಯಲ್ಲ.

ಬಿ.ಸಿ.ಪಾಟೀಲ್‌, ಹಿರೇಕೆರೂರು
1. ಕ್ಷೇತ್ರದ ಅಭಿವೃದ್ಧಿ ವಿಷಯ ಆಧರಿಸಿ ಚುನಾವಣೆ ಎದುರಿಸುತ್ತೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಾಗಬೇಕೆಂದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವವೇ ಆರಂಭವಾಗಬೇಕಾಗಿದೆ. ಆದ್ದರಿಂದ ಜನ ನಮ್ಮನ್ನು ಆಶೀರ್ವಾದ ಮಾಡುತ್ತಾರೆ ಎಂದು ನಂಬಿದ್ದೇನೆ. ಖಂಡಿತವಾಗಿ ಆಯ್ಕೆ ಮಾಡುತ್ತಾರೆ. ಇದರಲ್ಲಿ ಸಂಶಯವೇ ಬೇಡ.

2. ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ ನೋಡಿ ಜನ ನನ್ನನ್ನು ಮರು ಆಯ್ಕೆ ಮಾಡುತ್ತಾರೆ. ನಾನು ಇದುವರೆಗೂ ಮಾಡಿದ ಅಭಿವೃದ್ಧಿ ಕಾರ್ಯ, ರೈತಪರ ಯೋಜನೆಗಳನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತೇನೆ.

3. ಅನರ್ಹರು ಎಂದು ದುರುದ್ದೇಶದಿಂದ ಹಿಂದಿನ ವಿಧಾನ ಸಭಾಧ್ಯಕ್ಷರು ಮಾಡಿದ್ದಾರೆ. ನನಗೆ ಖಂಡಿತಾ ಆ ಬಗ್ಗೆ ಮುಜುಗರ ಇಲ್ಲ. ಅನರ್ಹನಾಗಿದ್ದಾಗಲೂ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಂದ ತಾಲೂಕಿಗೆ 255 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ. ತಾಲೂಕಿನ ನೀರಾವರಿ ಯೋಜನೆ ಪೂರ್ಣಗೊಳಿಸಲು ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸಲಾಗಿದ್ದು, ಅಭಿವೃದ್ಧಿಗೆ ಸಹಕಾರಿಯಾಗಿದೆ. ಇದರಿಂದ ತಾಲೂಕಿನ ರೈತರ ಬಹುವರ್ಷಗಳ ಬವಣೆ ತೀರುತ್ತದೆ ಎಂಬ ಹರ್ಷ ಇದೆ. ನನಗೆ ಆಗಿರುವ ಅನ್ಯಾಯಗಳಿಗೆ ಖಂಡಿತ ಮುಜುಗರ ಇಲ್ಲ. ಈ ಎಲ್ಲ ವಿಷಯಗಳ ಬಗ್ಗೆ ಕ್ಷೇತ್ರದ ಮತದಾರರಿಗೆ ಅರಿವಿದೆ.

4. ಖಂಡಿತ ನಾನು ಗೆಲ್ಲುತ್ತೇನೆ. ಭಾರತೀಯ ಜನತಾ ಪಕ್ಷದ ತತ್ವ-ಸಿದ್ಧಾಂತ ಒಪ್ಪಿಕೊಳ್ಳುತ್ತೇನೆ. ಸೋಲು ಎನ್ನುವ ಪ್ರಶ್ನೆಯೇ ಉದ್ಭವಿಸಲ್ಲ. ಅದರ ಬಗ್ಗೆ ನನಗೆ ಚಿಂತನೆಯೂ ಇಲ್ಲ. ನೂರಕ್ಕೆ ನೂರು ಪರ್ಸೆಂಟ್‌ ಗೆದ್ದೇ ಗೆಲ್ಲುತ್ತೇನೆ. ಮತದಾರರು ನನ್ನ ಕೈಬಿಡುವುದಿಲ್ಲ ಎಂಬ ಅಚಲವಾದ ನಂಬಿಕೆ ನನಗಿದೆ.

5. ಆತ್ಮಸ್ಥೈರ್ಯ, ಸ್ವಾಭಿಮಾನ, ತಾಲೂಕಿನ ಅಭಿವೃದ್ಧಿ, ರೈತಶಕ್ತಿ ಹಾಗೂ ಕ್ಷೇತ್ರದ ಜನರ ಆಶೀರ್ವಾದ ಇವೇ ನನ್ನ ಹಿಂದಿನ ಮಹಾಶಕ್ತಿ.

ನಾರಾಯಣಗೌಡ, ಕೆ.ಆರ್‌.ಪೇಟೆ
1. ಅಭಿವೃದ್ಧಿ ವಿಷಯವನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದೇನೆ. ಕಳೆದ 15 ವರ್ಷಗಳಿಂದಲೂ ತಾಲೂಕಿನ ಅಭಿವೃದ್ಧಿಯಾಗಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಕನಸುಗಳಿವೆ. ಅವುಗಳನ್ನು ಸಾಕಾರಗೊಳಿಸಲು ಅವಕಾಶ ನೀಡುವಂತೆ ಮನವಿ ಮಾಡುತ್ತಾ ಮತದಾರರ ಮುಂದೆ ಹೋಗುತ್ತಿದ್ದೇನೆ.

2. ಸೈನಿಕನಂತೆ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಸೇವಕನಾಗಿ ಕಡೆಯವರೆಗೂ ಉಳಿಯಬೇಕು ಎನ್ನುವುದು ನನ್ನ ಆಸೆ. ಅದಕ್ಕಾಗಿ ಜನರು ನನ್ನನ್ನು ಆಯ್ಕೆ ಮಾಡಬೇಕು. ಸ್ವಾರ್ಥಕ್ಕೆ, ಅಧಿಕಾರಕ್ಕಾಗಿ ಆಯ್ಕೆಯಾಗುವ ಜಾಯಮಾನ ನನ್ನದಲ್ಲ. ಜನರ ಸೇವೆ ಮಾಡುವುದಕ್ಕೆ ನನ್ನನ್ನು ಆಯ್ಕೆ ಮಾಡಿ ಎಂದು ಬೇಡುತ್ತಿದ್ದೇನೆ.

3. ನಾವು ಅನರ್ಹರಲ್ಲ. ಉದ್ದೇಶಪೂರ್ವಕವಾಗಿ ಅನರ್ಹತೆಗೆ ಒಳಪಡಿಸಿದವರು ಸ್ಪೀಕರ್‌. ಸ್ವಯಂಪ್ರೇರಿತವಾಗಿ ರಾಜೀನಾಮೆ ಕೊಡುವುದಕ್ಕೆ ನಮಗೆ ಅಧಿಕಾರವಿದೆ. ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸದ ಸರ್ಕಾರದೊಂದಿಗೆ ಇರಲು ಇಷ್ಟವಿರಲಿಲ್ಲ. ಅದಕ್ಕಾಗಿ ರಾಜೀನಾಮೆ ಕೊಟ್ಟೆವು. ಅಷ್ಟು ಮಾತ್ರಕ್ಕೆ ಅನರ್ಹರು ಎನ್ನುವುದರಲ್ಲಿ ಅರ್ಥವಿಲ್ಲ.

4. ನಾವೀಗ ಸೇರಿರುವ ಪಕ್ಷ ನಮ್ಮ ಪಾಲಿಗೆ ದೇವಸ್ಥಾನವಿದ್ದಂತೆ. ಬಿಜೆಪಿ ತತ್ವ-ಸಿದ್ಧಾಂತದ ಬಗ್ಗೆ ನಾನು ಬಿಎಸ್ಪಿ ಸೇರುವ ಮೊದಲಿನಿಂದಲೂ ಗೌರವವಿತ್ತು. ಆದರೆ, ಆ ಪಕ್ಷ ಸೇರುವ ಅವಕಾಶ ಲಭ್ಯವಾಗಿರಲಿಲ್ಲ. ಒಮ್ಮೆ ಚುನಾವಣೆಯಲ್ಲಿ ಸೋತರೂ ಕ್ಷೇತ್ರವನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಇಲ್ಲೇ ಉಳಿದು ಜನರೊಟ್ಟಿಗೆ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ.

5. ನೋವು, ನಿರಾಸೆ, ಆತ್ಮವಿಶ್ವಾಸ. ಜನರಿಂದ ಆಯ್ಕೆಯಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿಲ್ಲವಲ್ಲ ಎಂಬ ನೋವು-ನಿರಾಸೆ ತುಂಬಾ ಕಾಡಿತ್ತು. ಸ್ವಯಂಪ್ರೇರಣೆಯಿಂದ ಎಲ್ಲರೂ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದೆವು. ಯಾರಿಂದಲೋ ಪ್ರೇರಿತರಾಗಿ ರಾಜೀನಾಮೆ ನೀಡಲಿಲ್ಲ. ನಮ್ಮ ನೋವೇ ರಾಜೀನಾಮೆಗೆ ಪ್ರೇರಣೆ ನೀಡಿತು.

ಡಾ.ಕೆ.ಸುಧಾಕರ್‌, ಚಿಕ್ಕಬಳ್ಳಾಪುರ
1. ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದೇನೆ. ಅಭಿವೃದ್ಧಿ ಆಗಬೇಕಾದರೆ ಸ್ಪಂದಿಸುವ ಸರ್ಕಾರ ಬೇಕಿದೆ. ಸಮ್ಮಿಶ್ರ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಮಲತಾಯಿ ಧೋರಣೆ ಅನುಸರಿಸಿತು. ಅದಕ್ಕಾಗಿಯೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜನಪರ ನಿಲುವು ತೆಗೆದುಕೊಂಡಿದ್ದೇನೆ.

2. ಏಕೆಂದರೆ ಕ್ಷೇತ್ರದ ಅಭಿವೃದ್ಧಿ ಮುಂದುವರಿಯಬೇ ಕಲ್ಲವಾ? ಕ್ಷೇತ್ರದ ಜನರ ಭವಿಷ್ಯವನ್ನು ರೂಪಿಸುವಂತಹ ನಾಯಕತ್ವ ಅವರಿಗೆ ಬೇಕಿದೆ. ಅಂತಹ ನಾಯಕತ್ವ ನನ್ನಲ್ಲಿ ಜನ ನೋಡಿದ್ದಾರೆ. ಜನ ನನಗೆ ಆಶೀರ್ವಾದ ಮಾಡುವ ಸಂಪೂರ್ಣ ವಿಶ್ವಾಸವಿದೆ.

3. ಅನರ್ಹ ಶಾಸಕರು ಅಂತ ಹೇಳುವ ಜನಕ್ಕೆ ಉಪ ಚುನಾವಣೆಯಲ್ಲಿ ಜನತಾ ನ್ಯಾಯಾಲಯ ತೀರ್ಪು ಬರುತ್ತಲ್ಲ ಆಗ ಗೊತ್ತಾಗುತ್ತದೆ. ಡಿಸೆಂಬರ್‌ 9ಕ್ಕೆ ಯಾರು ಅರ್ಹ, ಯಾರು ಅನರ್ಹ ಎಂಬುದರ ಬಗ್ಗೆ ಜನ ಕೊಡುವ ತೀರ್ಪಿಗೆ ಹೆಚ್ಚು ಬೆಲೆ ಇರುತ್ತದೆಯೆಂದು ನಾನು ನಂಬಿದ್ದೇನೆ.

4. ಕಾಂಗ್ರೆಸ್‌ ಪಕ್ಷಕ್ಕೆ ಸಿದ್ಧಾಂತ ಇದೆಯೇ? ಸಿದ್ಧಾಂತ ಇದ್ದಿದ್ದರೆ ದಳದ ಜತೆಗೆ ಏಕೆ ಮೈತ್ರಿ ಮಾಡಿಕೊಳ್ಳುತ್ತಿದ್ದರು. ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮ ಸಮಾಜ ನಿರ್ಮಾಣ ಮಾಡಬೇಕೆಂದು ಅಂಬೇಡ್ಕರ್‌ ಹೇಳಿದಂತೆ ಕೆಲಸ ಮಾಡುತ್ತಿದೆ. 125 ಕೋಟಿ ಭಾರತೀಯರು ಒಂದೇ ಎನ್ನುವುದು ಬಿಜೆಪಿ ವಾದ. ಅದು ಸರಿ ಅಲ್ಲವೇ? ರಾಜಕೀಯ ವನವಾಸಕ್ಕಿಂತ ನಾವು ನಂಬಿರುವ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡಿದ್ದೇವೆಂಬ ಸಮಾಧಾನ ನನ್ನಲ್ಲಿರುತ್ತದೆ. ಗೆಲ್ಲುವುದು ನೂರಕ್ಕೆ ನೂರರಷ್ಟು ನಿಶ್ಚಿತ. ಆದರೆ ಒಂದಾನೊಂದು ವೇಳೆ ಕಾಂಗ್ರೆಸ್‌, ಜೆಡಿಎಸ್‌ ಅನೈತಿಕವಾಗಿ, ಆಂತರಿಕವಾಗಿ ಒಳ ಒಪ್ಪಂದ ಮಾಡಿಕೊಂಡು ಏನಾದರೂ ಮೋಸದಾಟ ಮಾಡಿದರೆ ಏನೂ ಮಾಡಲಾಗದು.

5. ನಮ್ಮ ಹಿಂದೆ ಇದ್ದಂತಹ ಶಕ್ತಿ ಅಲ್ಲ. ನಾನು ನೋವಿನಿಂದ ರಾಜೀನಾಮೆ ಕೊಟ್ಟಿದ್ದು, ಅನಿವಾರ್ಯವಾಗಿ ಕೊಡುವಂತಹ ಸ್ಥಿತಿಯನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿಂದಿನ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರವೇ ಸೃಷ್ಟಿಸಿತು. ಮಲತಾಯಿ ಧೋರಣೆಯನ್ನು ಈ ಕ್ಷೇತ್ರದ ಮೇಲೆ ತೋರಿಸಿದರು.

ಶಿವರಾಮ್‌ ಹೆಬ್ಬಾರ್‌, ಯಲ್ಲಾಪುರ
1. ಅಭಿವೃದ್ಧಿ ಅಂಶಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ. ಕ್ಷೇತ್ರದಲ್ಲಿ ನಾನು ಮಾಡಿದ ಅಭಿವೃದ್ಧಿ ಕೆಲಸ ಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದೇನೆ.

2. ಸಮ್ಮಿಶ್ರ ಸರ್ಕಾರದಲ್ಲಿ ನಿರೀಕ್ಷಿಸಿದ್ದ ಅನುದಾನ ಸಿಗಲಿಲ್ಲ. ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಆದ್ದರಿಂದ ಕ್ಷೇತ್ರದ ಜನರ ಆಶೋತ್ತರಗಳಿಗೆ, ಹತ್ತಾರು ಬೇಡಿಕೆಗಳಿಗೆ ಸ್ಪಂದಿಸಲು ಕಷ್ಟವಾಯಿತು. ಸಿಎಂ ಯಡಿಯೂರಪ್ಪ ನಮ್ಮೆಲ್ಲರ ಬೇಡಿಕೆ ಈಡೇರಿಸುವರೆಂಬ ಭರವಸೆ ಮೂಡಿ ಅವರ ನೇತೃತ್ವಕ್ಕೆ ಮನಸೋತು ಬಿಜೆಪಿ ಸೇರಿದ್ದೇನೆ.

3. ಜನರ ಆಶೋತ್ತರ ಈಡೇರಿಸಲು ಆಗದಿದ್ದಾಗ ರಾಜೀನಾಮೆ ನೀಡುವಂತಹ ವಾತಾವರಣ ನಿರ್ಮಾಣವಾಯಿತು. ಅದಕ್ಕಾಗಿ ರಾಜೀನಾಮೆ ನೀಡಿದ್ದೇನೆ. ತಾಂತ್ರಿಕವಾಗಿ ಅನರ್ಹತೆ ಎಂಬ ಶಬ್ದ ಅಂಟಿಕೊಂಡಿತ್ತು. ಈಗ ಅನರ್ಹತೆ ಪ್ರಶ್ನೆ ಉಳಿದಿಲ್ಲ. ನ್ಯಾಯಾಲಯ ಅನರ್ಹತೆ ಬಗ್ಗೆ ಸ್ಪಷ್ಟನೆ ನೀಡಿದೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ನಮಗೆ ಅವಕಾಶ ನೀಡಿದೆ. ನಮ್ಮ ಮೇಲೆ ಅನರ್ಹತೆ ಪ್ರಯೋಗವಾದರೂ ವಾಸ್ತವಿಕವಾಗಿ ಅಭಿವೃದ್ಧಿಗೆ ಬದ್ಧರಾಗಿದ್ದೇವೆ.

4. ನನಗೆ ಬಿಜೆಪಿ ಹೊಸತಲ್ಲ. ಬಿಜೆಪಿ ಸಿದ್ಧಾಂತ ಬಲ್ಲವನಾಗಿದ್ದೇನೆ. ನಾನು ಒಂದು ಅವಧಿಗೆ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಆ ಪಕ್ಷವನ್ನು ಸಂಘಟಿಸಿ ಮುನ್ನಡೆಸಿದವನು. ಅಲ್ಲಿನ ಆಗು ಹೋಗು ನನಗೆ ಗೊತ್ತಿದೆ. ನಂತರ ರಾಜಕೀಯ ಆಕಾಂಕ್ಷೆಯಿಂದ ಕಾಂಗ್ರೆಸ್‌ ಸೇರಿದ್ದೆ. ಬಿಜೆಪಿ ಸಿದ್ಧಾಂತಗಳಲ್ಲಿ ನಂಬಿಕೆ ಇದೆ. ಹಿಂದೆ ಬಿಜೆಪಿಯಲ್ಲಿ ಕೆಲಸ ಮಾಡಿದ ಅನುಭವ ಇದೆ. ಅಲ್ಲಿದ್ದವರ ಸಂಪರ್ಕವಿದೆ. ಹಾಗಾಗಿ ಮುಜುಗರದ ಪ್ರಶ್ನೆಯೇ ನನಗೆ ಉದ್ಭವವಾಗಲ್ಲ.

5. ರಾಜೀನಾಮೆ ನನ್ನ ಸ್ವಯಂ ತೀರ್ಮಾನವಾಗಿತ್ತು. ಯಾರ ಒತ್ತಡಕ್ಕೂ ರಾಜೀನಾಮೆ ನೀಡಿಲ್ಲ. ಅಭಿವೃದ್ಧಿ ಪರವಾದ ಚಿಂತನೆ, ಆಶಯದಿಂದ ಶಾಸಕ ಸ್ಥಾನ ಬಿಟ್ಟು, ಬಿಜೆಪಿಯಿಂದ ಶಾಸಕನಾಗುವ ತೀರ್ಮಾನ ತೆಗೆದುಕೊಂಡಿದ್ದೇನೆ.

ಬೈರತಿ ಬಸವರಾಜು, ಕೆ.ಆರ್‌.ಪುರಂ
1. ಕ್ಷೇತ್ರದ ಅಭಿವೃದ್ಧಿಯೇ ನನ್ನ ಅಜೆಂಡಾ. ಕ್ಷೇತ್ರದ ಜನರಿಗೆ ಕಾವೇರಿ ಕುಡಿಯುವ ನೀರು, ವಾಹನ ದಟ್ಟಣೆ ನಿವಾರಣೆ, ಮೂಲಸೌಕರ್ಯ ಕಲ್ಪಿಸುವುದು, ನಗರದ ಕೇಂದ್ರ ಭಾಗದ ಪ್ರದೇಶಗಳಂತೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು ನನ್ನ ಗುರಿ. ಇದೇ ಕಾರ್ಯಕ್ಕೆ ಹಿಂದಿನಿಂದ ಒತ್ತು ನೀಡುತ್ತಾ ಬಂದಿದ್ದು, ಅದೇ ವಿಚಾರವನ್ನಿಟ್ಟುಕೊಂಡು ಉಪಚುನಾವಣೆ ಎದುರಿಸುತ್ತಿದ್ದೇನೆ.

2. ಕ್ಷೇತ್ರವನ್ನು ವಿಶೇಷವಾಗಿ ಅಭಿವೃದ್ಧಿಪಡಿ ಸಲು ನೀಲನಕ್ಷೆ ರೂಪಿಸಿ ಹಂತ ಹಂತ ವಾಗಿ ಜಾರಿಗೊಳಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಚಿತ್ರಣ ಕಂಪ್ಯೂಟರ್‌ ಡೇಟಾದಂತೆ ನನ್ನ ತಲೆಯಲ್ಲಿದೆ. ಬಿಜೆಪಿ ಸರ್ಕಾರವಿರುವುದರಿಂದ ವಿಶೇಷ ಅನುದಾನ ಸಿಗಲಿದೆ. ಹತ್ತಾರು ವರ್ಷಗಳಿಂದ ಎಲ್ಲ ವರ್ಗದವರಿಗೆ ಕೈಲಾದಮಟ್ಟದಲ್ಲಿ ಸ್ಪಂದಿಸಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲು ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದೇನೆ.

3. ನಾವು ಯಾವುದೇ ತಪ್ಪು ಮಾಡದಿದ್ದರೂ ನಮ್ಮನ್ನು ಅಮಾನತು ಮಾಡಲಾಗಿತ್ತು. ಕಾಂಗ್ರೆಸ್‌ ಸರ್ಕಾರ ಹಾಗೂ ಮೈತ್ರಿ ಸರ್ಕಾರಕ್ಕೆ ಸಾಕಷ್ಟು ನೆರವಾದ ನಮ್ಮನ್ನು ಅನರ್ಹರು ಎಂದಾಗ ನೋವಾಗುತ್ತದೆ. ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಜತೆಗೆ ಹಿಂದಿನ ಸರ್ಕಾರಗಳಿಗೆ ಹೇಗೆಲ್ಲ ನೆರವಾಗಿದ್ದೇವೆ ಎಂಬುದು ಜನರಿಗೂ ಅರಿವಿದೆ. ಆ ವಿಶ್ವಾಸದಿಂದಲೇ ಮುಂದುವರಿಯುತ್ತಿದ್ದೇನೆ.

4. ಜನಸೇವೆಗೆ ಯಾವುದೇ ಸಿದ್ಧಾಂತವೂ ಅಗತ್ಯವಿಲ್ಲ. ಹಾಗೆಯೇ ಜನಸೇವೆಗೆ ಯಾವ ಸಿದ್ಧಾಂತವೂ ಅಡ್ಡಿಯಾಗದು. ಪಕ್ಷಕ್ಕಿಂತಲೂ ವ್ಯಕ್ತಿಗತವಾಗಿ ನನ್ನನ್ನು ಎಲ್ಲ ವರ್ಗ, ಮತದವರು ಮೆಚ್ಚಿ ಬೆಂಬಲಿಸುತ್ತಾ ಬಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಸೇರಿದ್ದು, ಸಾಧ್ಯವಾದಷ್ಟು ಹೊಂದಾಣಿಕೆ ಮಾಡಿಕೊಂಡು ಮುಂದುವರಿಯುತ್ತೇನೆ. ಜನ ನೀಡುವ ತೀರ್ಪಿಗೆ ತಲೆಬಾಗುತ್ತೇನೆ. ಜನಸೇವೆಯೇ ನನ್ನ ಪರಮ ಗುರಿಯಾಗಿದ್ದು, ರಾಜಕೀಯ ವನವಾಸದ ಪ್ರಶ್ನೆ ಉದ್ಭವಿಸದು. ಜನಸೇವೆ ಮುಂದುವರಿಯಲಿದೆ.

5. ನನಗೆ ಸರ್ಕಾರವನ್ನು ಉರುಳಿಸುವುದು ಗೊತ್ತಿದೆ, ಉಳಿಸುವುದೂ ಗೊತ್ತಿದೆ. ನನ್ನದೇ ಆದ ತತ್ವ, ಸಿದ್ಧಾಂತವನ್ನು ಪಾಲಿಸಿಕೊಂಡು ಬಂದಿದ್ದೇನೆ. ಯಾರಿಗೂ ಮೋಸ, ಅನ್ಯಾಯ ಮಾಡಿಲ್ಲ. ಸ್ವಾಭಿಮಾನ ಬಿಟ್ಟು ಬದುಕಿಲ್ಲ. ಜನಶಕ್ತಿ, ದೈವಶಕ್ತಿಯೊಂದಿಗೆ ಜನರಿಗೆ ಒಳಿತು ಮಾಡುವ ಕಾರ್ಯದಲ್ಲಿ ತೊಡಗುತ್ತೇನೆ.

ಮಹೇಶ್‌ ಕುಮಟಳ್ಳಿ, ಅಥಣಿ
1. ಕ್ಷೇತ್ರದ ಅಭಿವೃದ್ಧಿ ಬಿಟ್ಟು ಬೇರೆ ವಿಷಯ ಇಲ್ಲ. ಅಧಿಕಾರದ ಆಸೆಗಾಗಿ ನಾನು ಬಿಜೆಪಿಗೆ ಬಂದ‌ವನಲ್ಲ. ಪ್ರಗತಿ ವಿಷಯದಲ್ಲಿ ನಮ್ಮ ಕ್ಷೇತ್ರ ಉಳಿದವರಿಗೆ ಮಾದರಿಯಾಗಬೇಕೆಂಬ ಕನಸಿದೆ. ನೀರಾವರಿ ಸೇರಿ ಇನ್ನೂ ಅನೇಕ ಯೋಜನೆಗಳು ನಮ್ಮಲ್ಲಿ ಬರಬೇಕಿದೆ. ಬಹಳ ದೊಡ್ಡದಾಗಿರುವ ಸವಳು-ಜವಳು ಸಮಸ್ಯೆ ನಿವಾರಣೆ ಆಗಬೇಕಿದೆ. ಈ ಎಲ್ಲ ವಿಷಯಗಳ ಆಧಾರದ ಮೇಲೆ ನಾನು ಚುನಾವಣೆ ಎದುರಿಸುತ್ತಿದ್ದೇನೆ.

2. ಕ್ಷೇತ್ರದ ಸುಧಾರಣೆ ಆಗಬೇಕೆಂದರೆ ಬಿಜೆಪಿ ಬರಬೇಕು. ಇದು ಸಾಧ್ಯವಾಗಬೇಕಾದರೆ ನನಗೆ ಮತ ನೀಡಬೇಕು. ಕೇಂದ್ರದಲ್ಲಿ ಸಹ ಬಿಜೆಪಿ ಸರ್ಕಾರವಿದೆ. ಇಲ್ಲಿಯೂ ಅದೇ ಸರ್ಕಾರ ಇರುವುದರಿಂದ ಎಲ್ಲ ಕೆಲಸಗಳು ತ್ವರಿತ ಗತಿಯಲ್ಲಿ ಆಗುತ್ತವೆ. ಅನುದಾನ ವಿಳಂಬವಿಲ್ಲದೆ ಬಿಡುಗಡೆ ಆಗುತ್ತದೆ. ಅದು ಬಿಜೆಪಿ ಸರ್ಕಾರದಿಂದ ಸಾಧ್ಯ. ಹೀಗಾಗಿ ಜನರು ನನ್ನನ್ನು ಆಯ್ಕೆ ಮಾಡಬೇಕು ಎಂಬುದು ನನ್ನ ಆಶಯ. ಮತದಾರರ ಮುಂದೆ ಇದನ್ನೇ ಹೇಳುತ್ತಿದ್ದೇನೆ.

3. ಖಂಡಿತ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಅನರ್ಹ ಶಾಸಕರೇ ಅಲ್ಲ. ಹೀಗಿರುವಾಗ ಮುಜುಗರದ ಪ್ರಶ್ನೆ ಎಲ್ಲಿ ಬಂತು. ನಾವು ಸರ್ಕಾರದಿಂದ ಬೇಸರಗೊಂಡು ರಾಜೀನಾಮೆ ನೀಡಿ ಹೊರ ಬಂದಿದ್ದೆವು. ನಂತರ ಪಕ್ಷದವರು ನಮ್ಮನ್ನು ಅನರ್ಹಗೊಳಿಸಿದರು. ಪದೇಪದೆ ಅನರ್ಹರು ಎನ್ನುವುದು ತಪ್ಪು.

4. ನನಗೆ ಬಿಜೆಪಿ ತತ್ವ ಮತ್ತು ಸಿದ್ಧಾಂತಗಳ ಮೇಲೆ ನಂಬಿಕೆ ಹಾಗೂ ಒಪ್ಪಿಗೆ ಇದೆ. ಇದನ್ನು ಚುನಾವಣೆಯಲ್ಲಿ ಗೆಲ್ಲಬೇಕು ಅಥವಾ ಅಧಿಕಾರಕ್ಕೆ ಬರಬೇಕೆಂಬ ಆಸೆಯಿಂದ ಹೇಳುತ್ತಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿ ನನಗೆ ಮುಖ್ಯ. ಹಿಂದೆ ವಿರೋಧಿಸಿದ್ದ ಮಾತ್ರಕ್ಕೆ ಬಿಜೆಪಿ ನನಗೆ ಹೊಂದಾಣಿಕೆ ಆಗುವುದಿಲ್ಲ ಎಂಬುದು ತಪ್ಪು. ಈಗ ಹೊಸ ಶಕ್ತಿ ಬಂದಿದೆ. ಸಚಿವ ಲಕ್ಷ್ಮಣ ಸವದಿ ಅವರ ಬೆಂಬಲ ಹೊಸ ಹುಮ್ಮಸ್ಸು ನೀಡಿದೆ.

5. ಯಾವ ಶಕ್ತಿಯೂ ಇಲ್ಲ. ನಾವು 17 ಜನ ಶಾಸಕರು ಒಂದಾಗಿ ನಿರ್ಧಾರ ಮಾಡಿ ರಾಜೀನಾಮೆ ಕೊಟ್ಟು ಸರ್ಕಾರದಿಂದ ಹೊರಬಂದೆವು. ಇದಕ್ಕೆ ಪ್ರತ್ಯೇಕ ಶಕ್ತಿ ಎಂಬುದು ಇಲ್ಲವೇ ಇಲ್ಲ. ನಮ್ಮ ಬಗ್ಗೆ ವಿನಾಕಾರಣ ನಿರಾಧಾರ ಆರೋಪಗಳು ಹಾಗೂ ಸುದ್ದಿಗಳು ಬರುತ್ತವೆ. ಇದರಲ್ಲಿ ಯಾವ ಸತ್ಯಾಂಶವೂ ಇಲ್ಲ.

ಟಾಪ್ ನ್ಯೂಸ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

9-fusion

Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.