ವರುಣನ ಅಬ್ಬರಕ್ಕೆ ನಲುಗಿದ ಜನರು

Team Udayavani, Oct 22, 2019, 3:10 AM IST

ರಾಜ್ಯದ ಹಲವೆಡೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ಯವ್ಯಸ್ತಗೊಂಡಿದೆ. ಉತ್ತರ ಕರ್ನಾಟಕದ ಬಹುತೇಕ ಕಡೆ ವರುಣನಬ್ಬರಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ನೂರಾರು ಪ್ರವಾಸಿಗರು, ಸಂತ್ರಸ್ತರನ್ನು ರಕ್ಷಿಸಲಾಗಿದೆ. ದಕ್ಷಿಣದ ಹಲವು ಭಾಗಗಳಲ್ಲೂ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ.

ವಿರೂಪಾಪುರಗಡ್ಡಿ, ನವವೃಂದಾವನಗಡ್ಡಿ ಜಲಾವೃತ
ಗಂಗಾವತಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಡ್ಯಾಂ ಒಳಹರಿವು ಹೆಚ್ಚಾಗಿದ್ದು, ನದಿಗೆ ಒಂದು ಲಕ್ಷಕ್ಕೂ ಅಧಿ ಕ ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಕೊಪ್ಪಳ ಜಿಲ್ಲೆಯ ವಿರೂಪಾಪುರಗಡ್ಡಿ, ಆನೆಗೊಂದಿಯ ನವವೃಂದಾವನಗಡ್ಡಿ, ಶ್ರೀಕೃಷ್ಣದೇವರಾಯನ ಸಮಾ ಧಿ (60 ಕಾಲಿನ ಮಂಟಪ), ಋಷಿ ಮುಖ ಪರ್ವತ ಪ್ರದೇಶಗಳು ಜಲಾವೃತವಾಗಿದ್ದು, ಸಂಪರ್ಕ ಕಡಿದುಕೊಂಡಿವೆ. ಕಂಪ್ಲಿ ಸೇತುವೆ ಮುಳುಗಲು ನಾಲ್ಕು ಅಡಿ ಬಾಕಿ ಇದೆ. ವಾರಾಂತ್ಯ ಕಳೆಯಲು ಆಗಮಿಸಿ ವಿರೂಪಾಪೂರಗಡ್ಡಿ ರೆಸಾರ್ಟ್‌ಗಳಲ್ಲಿ ತಂಗಿದ್ದ 180ಕ್ಕೂ ಹೆಚ್ಚು ಪ್ರವಾಸಿಗರನ್ನು ಹರಿಗೋಲು ಮೂಲಕ ನದಿ ದಾಟಿಸಲಾಗಿದೆ. ಶನಿವಾರ ಬೆಳಗ್ಗೆ 350ಕ್ಕೂ ಹೆಚ್ಚು ಟೆಕ್ಕಿಗಳನ್ನು ಹರಿಗೋಲು ಮೂಲಕ ರೆಸಾರ್ಟ್‌ ಮಾಲೀಕರು ನದಿ ದಾಟಿಸಿದ್ದರು. ನದಿ ಪಾತ್ರಕ್ಕೆ ಜನರು ಹೋಗದಂತೆ ಪೊಲೀಸ್‌ ಇಲಾಖೆ ಭದ್ರತೆ ಒದಗಿಸಿದೆ.

ರಸ್ತೆ ಕುಸಿದು ಸಿಲುಕಿದ ಬಸ್‌!
ಯಮಕನಮರಡಿ: ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಚಿಕ್ಕಲದಿನ್ನಿ ಮಾರ್ಗದ ಸಮೀಪದ ಪಣಗುತ್ತಿ ಗ್ರಾಮದ ಬಳಿ ರಸ್ತೆ ಕುಸಿದು ಬಸ್‌ ಸಿಲುಕಿಕೊಂಡ ಘಟನೆ ನಡೆದಿದೆ. ಚಿಕ್ಕಲದಿನ್ನಿ ಮಾರ್ಗದಿಂದ ಫಣಗುತ್ತಿ ಗ್ರಾಮಕ್ಕೆ ಸಂಚರಿಸುವಾಗ ಮಾರ್ಗ ಮಧ್ಯೆ ರಸ್ತೆ ಕುಸಿದು ತಗ್ಗಿನಲ್ಲಿ ಬಸ್‌ ಸಿಲುಕಿಕೊಂಡಿದೆ. ಇದರಿಂದ ಗುಡ್ಡದ ಮೇಲಿಂದ ಹರಿಯುವ ನೀರು ಬಸ್‌ನೊಳಗೆ ನುಗ್ಗಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತುಪ್ಪರಿಹಳ್ಳದಲ್ಲಿ ಸಿಲುಕಿದ್ದ ದಂಪತಿ ಪಾರು
ನವಲಗುಂದ: ತಾಲೂಕಿನ ಜಾವೂರ-ಬಳ್ಳೂರ ಹತ್ತಿರವಿರುವ ತುಪ್ಪರಿ ಹಳ್ಳದ ಸಿಲುಕಿದ್ದ ದಂಪತಿಯನ್ನು ಉಪವಿಭಾಗಾಧಿಕಾರಿ ಮಹಮ್ಮದ ಜುಬೇದ ನೇತೃತ್ವದಲ್ಲಿ ತಾಲೂಕಾಡಳಿತ ಸೋಮವಾರ ಬೆಳಗ್ಗೆ ರಕ್ಷಿಸಿದೆ. ಪ್ರವಾಹದಲ್ಲಿ ಸಿಲುಕಿ ಟ್ರಾಕ್ಟರ್‌ ಮೇಲೆ ಹತ್ತಿ ಕುಳಿತಿದ್ದ ಪ್ರಕಾಶ ಅಂಗಡಿ ಹಾಗೂ ಪತ್ನಿ ಸಂಗೀತಾ ಅಂಗಡಿ ಅವರನ್ನು ರಕ್ಷಣಾ ತಂಡದವರು ಬೋಟ್‌ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆ ತಂದಿದ್ದಾರೆ.

ಬಸ್‌ನಲ್ಲಿದ್ದ ಪ್ರಯಾಣಿಕರ‌ ರಕ್ಷಣೆ
ಗದಗ: ಮಳೆ ನೀರಿನಿಂದ ತುಂಬಿಕೊಂಡಿದ್ದ ರೈಲ್ವೆ ಅಂಡರ್‌ ಪಾಸ್‌ನಲ್ಲಿ ಸಿಲುಕಿದ್ದ 36 ಜನರನ್ನು ಲಕ್ಷ್ಮೇಶ್ವರ ಠಾಣೆ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಹಾವೇರಿ ಜಿಲ್ಲೆಯ ಯಲವಿಗಿ ರೈಲ್ವೆ ಅಂಡರ್‌ ಪಾಸ್‌ನಲ್ಲಿ ಸುಮಾರು 6 ಅಡಿಗಳಷ್ಟು ನೀರು ತುಂಬಿಕೊಂಡಿತ್ತು. ಭಾನುವಾರ ತಡರಾತ್ರಿ ಸವಣೂರು ಮಾರ್ಗವಾಗಿ ಗದುಗಿಗೆ ಆಗಮಿಸುತ್ತಿದ್ದ ಮಂಗಳೂರು ಮೂಲದ ಖಾಸಗಿ ಬಸ್‌ ಚಾಲಕ ನೀರಿನ ಮಟ್ಟ ಲೆಕ್ಕಿಸದೆ ಬಸ್‌ ಓಡಿಸಿದ್ದಾನೆ. ಈ ವೇಳೆ ಅರ್ಧ ದಾರಿಯಲ್ಲೇ ಬಸ್‌ ಬಂದ್‌ ಆಗಿದ್ದರಿಂದ ಪ್ರಯಾಣಿಕರು ಅಪಾಯದಲ್ಲಿ ಸಿಲುಕಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

ಕೆರೆಯಂತಾದ ಕೆಎಸ್‌ಸಿಎ ಮೈದಾನ
ಶಿವಮೊಗ್ಗ: ಮನುಷ್ಯ ನದಿ ಹಾಗೂ ಕೆರೆಗಳ ದಿಕ್ಕನ್ನು ಬದಲಾಯಿಸಿದ ಮಾತ್ರಕ್ಕೆ ನೀರಿನ ಹರಿವು ತನ್ನ ಪಥ ಬದಲಿಸುವುದಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ರಾಜ್ಯ ಕ್ರಿಕೆಟ್‌ ಸಂಸ್ಥೆ ನಗರದ ನವುಲೆ ಕೆರೆಯನ್ನು ಮುಚ್ಚಿ ಕ್ರೀಡಾಂಗಣ ನಿರ್ಮಿಸಿದ್ದು ಈ ವರ್ಷ ಸುರಿದ ಭಾರೀ ಮಳೆಗೆ ಎರಡನೇ ಬಾರಿ ಜಲಾವೃತಗೊಂಡಿದೆ. ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡಿಸಲು ಕ್ರಿಕೆಟ್‌ ಸಂಸ್ಥೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಮಳೆಯು ಮೈದಾನವನ್ನು ಕೆರೆಯನ್ನಾಗಿಸಿದೆ.

37 ವರ್ಷ ಬಳಿಕ ತುಂಬಿ ಹರಿದ ಯಾದವಾಡ ಗ್ರಾಮದ ಕೆರೆ
ಮೂಡಲಗಿ: ಬೆಳಗಾವಿ ಜಿಲ್ಲೆಯ ಮೂಡಲಗಿ, ಗೋಕಾಕ ಮತ್ತು ರಾಮದುರ್ಗ ತಾಲೂಕಿನ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ತಾಲೂಕಿನ ಯಾದವಾಡ ಗ್ರಾಮದ ಹಳ್ಳ 37 ವರ್ಷಗಳ ನಂತರ ತುಂಬಿ ಹರಿಯುತ್ತಿದ್ದು, ಆತಂಕ ಸೃಷ್ಟಿಸಿದೆ. ಪ್ರವಾಹದಿಂದ ಯಾದವಾಡ ಗ್ರಾಮಕ್ಕೆ ಹೊಂದಿಕೊಂಡಿರುವ ಕೊಪ್ಪದಟ್ಟಿ, ಕಾಮನಕಟ್ಟಿ, ಗಿರಿಸಾಗರ, ಕುರಬಗಟ್ಟಿ ಮತ್ತು ಬಸವಪಟ್ಟಣ, ಮರಾಠಾ ಓಣಿ ಹಾಗೂ ಯಾದವಾಡ ಮಾರ್ಕೆಟ್‌ ಜಲಾವೃತವಾಗಿದೆ. ಯಾದವಾಡ- ಕೊಪದಟ್ಟಿ ಸಂಪರ್ಕ ರಸ್ತೆ ಸಂಪೂರ್ಣ ಬಂದಾಗಿದ್ದು, ಯಾದವಾಡದಿಂದ ಮುಧೋಳ, ಲೋಕಾಪುರ, ಹೊಸಕೋಟಿ ಕಡೆ ಸಂಚರಿಸುವ ಮಾರ್ಗ ಮಧ್ಯದಲ್ಲಿ ಯಾದವಾಡ ಮುಖ್ಯ ಸೇತುವೆ ಜಲಾವೃತಗೊಂಡಿದೆ.

ಆಂಧ್ರದ 10 ಕಾರ್ಮಿಕರ ರಕ್ಷಣೆ
ಹುಬ್ಬಳ್ಳಿ: ತಾಲೂಕಿನ ಇಂಗಳಹಳ್ಳಿ ಗ್ರಾಮದ ಬಳಿಯ ಪ್ರವಾಹಕ್ಕೆ ಸಿಲುಕಿದ್ದ ಯರನಹಳ್ಳದಲ್ಲಿ ಸೇತುವೆ ನಿರ್ಮಾಣಕ್ಕೆ ಆಗಮಿಸಿದ್ದ ಆಂಧ್ರದ 10 ಕಾರ್ಮಿಕರನ್ನು ಅಗ್ನಿ ಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.

ಅಜ್ಜಂಪುರದಲ್ಲಿ 17 ಸೆಂ.ಮೀ. ಮಳೆ
ಬೆಂಗಳೂರು: ಸೋಮವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನ ಎಲ್ಲೆಡೆ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆ ಸುರಿದಿದೆ. ಅಜ್ಜಂಪುರದಲ್ಲಿ ರಾಜ್ಯದಲ್ಲಿಯೇ ಗರಿಷ್ಠ 17 ಸೆಂ.ಮೀ. ಮಳೆಯಾಗಿದೆ. ಬುಧವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದಲ್ಲೆಡೆ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ. ಶಿರಾಲಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 34.2 ಡಿ. ಸೆ. ಹಾಗೂ ಬೀದರ್‌ ಮತ್ತು ಗದಗದಲ್ಲಿ ಕನಿಷ್ಠ 19.4 ಡಿ. ಸೆ. ತಾಪಮಾನ ದಾಖಲಾಗಿದೆ.

ಹೆದ್ದಾರಿ ವಾಹನ ಸಂಚಾರ ಸ್ಥಗಿತ
ಬೆಂಗಳೂರು: ಮಂಡ್ಯ, ಚಾಮರಾಜಗರ, ಮೈಸೂರು ಜಿಲ್ಲೆಯ ಹಲವೆಡೆ ಮಳೆಯಬ್ಬರ ಮುಂದುವರಿದಿದ್ದು, ಸೋಮವಾರ ಮಧ್ಯಾಹ್ನ ಶ್ರೀರಂಗಪಟ್ಟಣ, ಕೆ.ಆರ್‌.ಪೇಟೆ, ಮದ್ದೂರು ತಾಲೂಕಿನ ವಿವಿಧೆಡೆ ಅನಿರೀಕ್ಷಿತವಾಗಿ ಸುರಿದ ಗುಡುಗು ಸಹಿತ ಮಳೆ ಜನ ಜೀವನವನ್ನು ಅಸ್ತವ್ಯಸ್ತಗೊಂಡಿತ್ತು.ಮಧ್ಯಾಹ್ನ 2ರ ಸಮಯದಲ್ಲಿ ಆರಂಭವಾದ ಗುಡುಗು ಸಹಿತ ಮಳೆ ನಿರಂತರ ಎರಡು ತಾಸು ಸುರಿದು ತಗ್ಗು ಪ್ರದೇಶಗಳೂ ಸೇರಿ ಜನ ವಸತಿ ಪ್ರದೇಶ, ಪ್ರಮುಖ ರಸ್ತೆಗಳು ಮಳೆ ನೀರಿನಿಂದ ತುಂಬಿ ಕಾಲುವೆಯಂತಹ ಸ್ಥಿತಿ ನಿರ್ಮಾಣವಾಯಿತು.

ಮೈಸೂರು, ಬೆಂಗಳೂರು ಹೆದ್ದಾರಿಯ ವಾಹನ ಸಂಚಾರ ಅರ್ಧ ತಾಸಿಗೂ ಹೆಚ್ಚುಕಾಲ ಸ್ಥಗಿತಗೊಂಡು ವಾಹನ ಸವಾರರು ಮತ್ತು ವಾಹನದಲ್ಲಿದ್ದ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣಕ್ಕೆ ಅನಿರೀಕ್ಷಿತವಾಗಿ ಸುರಿದ ಭಾರೀ ಮಳೆ ಕಾರಣವಾಯಿತು. ಹುಣಸೂರು ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದ್ದರೆ, ಜೋಳದ ಬೆಳೆ ನಾಶವಾಗಿದೆ.ಭಾನುವಾರ ಸಂಜೆಯಿಂದಲೇ ಸುರಿಯುತ್ತಿರುವ ಮಳೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ರಸ್ತೆ ಬದಿ ವ್ಯಾಪಾರಸ್ಥರು ಹೈರಾಣಾಗಿದ್ದಾರೆ, ಕಾರ್ಮಿಕರು ನಿತ್ಯದ ಕೂಲಿ ಬಿಟ್ಟು ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ. ಹೆದ್ದಾರಿಯಲ್ಲಿ ನೀರು ನಿಂತು ವಾಹನಗಳ ಓಡಾಟಕ್ಕೆ ಅಡಚಣೆಯಾಗಿದೆ.

ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿ 3ನೇ ಬಾರಿ ಬಂದ್‌
ಕುಳಗೇರಿ ಕ್ರಾಸ್‌: ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಹುಬ್ಬಳ್ಳಿ-ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218 ಮತ್ತೆ ಬಂದ್‌ ಆಗಿದ್ದು, ಸಂಚಾರ ಸ್ಥಗಿತಗೊಂಡಿದೆ. ನವಿಲುತೀರ್ಥ ಜಲಾಶಯದಿಂದ 35,000 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಾಲೂಕಾಡಳಿತದ ಮನವಿ ಮಾಡಿದೆ. ಈ ಹಿಂದೆ ಎರಡು ಬಾರಿ ಪ್ರವಾಹ ಸಂದರ್ಭ ಹೆದ್ದಾರಿ ಕಿತ್ತು ಹೋಗಿ ಸಂಚಾರ ಸ್ಥಗಿತಗೊಂಡಿತ್ತು. ಹುಬ್ಬಳ್ಳಿಯಿಂದ ವಾರಗಟ್ಟಲೇ ರಸ್ತೆ ಮೇಲೆ ನಿಂತ ವಾಹನ ಚಾಲಕರು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಮೂರನೇ ಬಾರಿ ಪ್ರವಾಹ ಎದುರಾಗಿದ್ದು ಸಂಕಷ್ಟಕ್ಕೆ ಸಿಲುಕಿಸಿದೆ.

ಮಳೆ ಆಗದಂತೆ ದೇವರಿಗೆ ಬೇಡಿಕೊಳ್ಳಬೇಕು: ಸವದಿ
ಕೊಪ್ಪಳ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತೆ ಪ್ರವಾಹ ಎದುರಾಗುವ ರೀತಿಯಲ್ಲಿ ಮಳೆಯಾಗುತ್ತಿದೆ. ನಾವು ಆ ದೇವರಲ್ಲಿ ಮಳೆಯಾಗದಂತೆ ಬೇಡಿಕೊಳ್ಳಬೇಕಷ್ಟೆ. ಇದನ್ನು ಬಿಟ್ಟು ಮತ್ತೇನೂ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ನೆರೆ ಸಂತ್ರಸ್ತರಿಗೆ ಈಗಾಗಲೇ ಕೇಂದ್ರದಿಂದ 1200 ಕೋಟಿ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರವೂ ನೆರೆಗೆ ಸ್ಪಂದಿಸಿದೆ. ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಜಾಗೃತರಾಗಿರುವಂತೆ ಅ ಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ