ಕಲಬುರಗಿಯಲ್ಲಿ ಕನ್ನಡ ಹಬ್ಬಕ್ಕೆ ಸಂಭ್ರಮದ ಸಿದ್ಧತೆ
Team Udayavani, Jan 23, 2020, 3:07 AM IST
ಬೆಂಗಳೂರು: “ಕಲ್ಯಾಣ ಕರ್ನಾಟಕ: ಅಂದು-ಇಂದು-ಮುಂದು’, “ಕನ್ನಡ ಉಳಿಸಿ ಬೆಳೆಸುವ ಬಗೆ’, “ಕನ್ನಡ ಭಾಷೆ: ಹೊಸ ತಂತ್ರಜ್ಞಾನ’, “ಕೃಷಿ ಮತ್ತು ನೀರಾವರಿ’ ಸೇರಿದಂತೆ ವಿವಿಧ ವಿಚಾರಗಳ ಕುರಿತು ವಿದ್ವಾಂಸರು, ತಜ್ಞರು ಕಲಬುರಗಿಯಲ್ಲಿ ನಡೆಯಲಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆಳಕು ಚೆಲ್ಲಲಿದ್ದಾರೆ.
ಫೆ. 5, 6 ಮತ್ತು 7ರಂದು 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಜಿಲ್ಲಾಡಳಿ ತದಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸಮ್ಮೇಳನಲ್ಲಿ ಪ್ರಧಾನ ವೇದಿಕೆ ಸೇರಿ ಎರಡು ಸಮಾನಾಂತರ ವೇದಿಕೆಯಲ್ಲಿ ಮೂರು ದಿನಗಳಲ್ಲಿ 22 ಗೋಷ್ಠಿಗಳು ನಡೆಯಲಿವೆ.
ಈ ಸಂಬಂಧ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್, ಕಲಬುರಗಿಯ ಸುಮಾರು 27 ಕವಿಗಳು ಸೇರಿ, ಒಟ್ಟು ನೂರಕ್ಕೂ ಅಧಿಕ ಕವಿಗಳು ಮೂರು ವೇದಿಕೆಗಳಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಕವಿಗೋಷ್ಠಿ, ವಿಚಾರ ಗೋಷ್ಠಿ ಗಳಲ್ಲಿ ವಿಷಯ ಮತ್ತು ವಿಚಾರ ಮಂಡನೆಗೆ ಕಲಬುರಗಿ ಭಾಗಕ್ಕೆ ಹೆಚ್ಚಿನ ಪ್ರಾಧ್ಯಾನತೆ ನೀಡಲಾಗಿದೆ ಎಂದರು.
ವಿದೇಶಿ ಪ್ರತಿನಿಧಿಗಳು: ಈವರೆಗೆ 8,428 ಪುರುಷರು ಹಾಗೂ 2,407 ಮಹಿಳೆಯರು ಸೇರಿ ಒಟ್ಟು 10,835 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾ, ಬೆಹರಿನ್ ಹಾಗೂ ಕತಾರ್‌ನಿಂದ ವಿದೇಶಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ 500 ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದ್ದು, ಈಗಾಗಲೇ 380 ಮಳಿಗೆಗಳು ನೋಂದಣಿಯಾಗಿವೆ. 300 ವಾಣಿಜ್ಯ ಮಳಿಗೆಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಸದ್ಯ 153 ಮಳಿಗೆಗಳು ನೋಂದಣಿಯಾಗಿವೆ ಎಂದರು.
ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ 14 ಕೋಟಿ ರೂ.ಖರ್ಚಾಗುವ ಸಾಧ್ಯತೆ ಇದೆ ಎಂದು ಕಲಬುರಗಿ ಜಿಲ್ಲಾ ಆಡಳಿತ ಸರ್ಕಾರಕ್ಕೆ ಅಂದಾಜು ಪಟ್ಟಿ ಸಲ್ಲಿಸಿದೆ. ಸರ್ಕಾರ 10 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ದೇಣಿಗೆ ರೂಪದಲ್ಲಿ ಸಮ್ಮೇಳನಕ್ಕೆ ಎಷ್ಟು ಹಣ ಸಂಗ್ರಹವಾಗಲಿದೆ ಎಂಬುದನ್ನು ಗಮನಿಸಿ ನಂತರ ಉಳಿದ ಹಣವನ್ನು ಸರ್ಕಾರ ನೀಡಲಿದೆ ಎಂದು ತಿಳಿಸಿದರು.
ಪ್ರತಿದಿನ ಒಂದೂವರೆ ಲಕ್ಷ ಜನರು ಬರುವ ನಿರೀಕ್ಷೆ: ಸಮ್ಮೇಳನಕ್ಕೆ ಪ್ರತಿದಿನ ಒಂದರಿಂದ ಒಂದೂವರೆ ಲಕ್ಷ ಮಂದಿ ಭಾಗವಹಿಸುವ ಸಾಧ್ಯತೆ ಇದ್ದು, ಒಟ್ಟು 5 ಲಕ್ಷ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಬದನೆಕಾಯಿ ಪಲ್ಲೆ, ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗದ ಕೆಲವು ಖಾದ್ಯಗಳು ಇರಲಿವೆ. ಗೋಷ್ಠಿಯಲ್ಲಿ ಮಂಡನೆಯಾಗಲಿರುವ ಉಪನ್ಯಾಸವನ್ನು ಬರಹದ ಮೂಲಕ ನೀಡಬೇಕು ಎಂದು ವಿದ್ವಾಂಸರಿಗೆ ತಿಳಿಸಲಾಗಿದೆ. ಸಮ್ಮೇಳನ ಮುಗಿದ ನಂತರ ಸ್ಮರಣ ಸಂಪುಟಗಳನ್ನು ಹೊರತರಲಾಗುವುದು ಎಂದು ಬಳಿಗಾರ್ ತಿಳಿಸಿದರು.
ಫೆಬ್ರವರಿ 5ರಂದು ಚಾಲನೆ
-ಫೆ.5ರಂದು ಬೆಳಗ್ಗೆ 8 ಗಂಟೆಗೆ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. 8.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ, 11.30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
-ಫೆ.6ರಂದು ಬೆಳಗ್ಗೆ 11.30ಕ್ಕೆ ಪ್ರಧಾನ ವೇದಿಕೆಯಲ್ಲಿ ಸಂಶೋಧಕ ಡಾ.ಷ.ಶೆಟ್ಟರ್ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಸುಮಾರು 45 ನಿಮಿಷಗಳ ಉಪನ್ಯಾಸದಲ್ಲಿ ಅವರು ಕನ್ನಡ ಉಳಿಸಿ ಬೆಳೆಸುವ ಕುರಿತು ಮಾತನಾಡಲಿದ್ದಾರೆ.
-ಫೆ.7ರಂದು ಸಂಜೆ 4.15ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಗೌರವ ಅತಿಥಿಯಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಹೋಟೆಲ್, ಕಲ್ಯಾಣ ಮಂಟಪ, ವಿದ್ಯಾರ್ಥಿ ನಿಲಯ ಸೇರಿದಂತೆ ವಿವಿಧ ಕಡೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. “ಎ’ ಶ್ರೇಣಿಯ 174 ಕೊಠಡಿ, “ಬಿ’ ಶ್ರೇಣಿಯ 184 ಕೊಠಡಿ ಸೇರಿದಂತೆ ಅಂದಾಜು 2,300 ಜನರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ.
-ಡಾ. ಮನು ಬಳಿಗಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ