ಕರಾವಳಿ,ಮಲೆನಾಡು ಭಾಗಗಳಲ್ಲಿ ಮಳೆ ಸಾಧ್ಯತೆ

Team Udayavani, Apr 26, 2019, 6:10 AM IST

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಏ.30ರಿಂದ ಮೂರು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆಯಿದ್ದು, ಮೇ 1ರಿಂದ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಿಂದೂ ಮಹಾಸಾಗರದಲ್ಲಿ ಉಂಟಾಗಿದ್ದ ಕಡಿಮೆ ಒತ್ತಡ ಪ್ರದೇಶವು ಬಂಗಾಳಕೊಲ್ಲಿಯ ಕಡೆಗೆ ಚಲಿಸಿದ್ದು, ಮುಂದಿನ ಎರಡು ದಿನಗಳಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿ
ಚಂಡಮಾರುತ ಸೃಷ್ಟಿಯಾಗುವ ನಿರೀಕ್ಷೆಯಿದೆ.

ಚಂಡಮಾರುತದಿಂದ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಉತ್ತಮ ಮಳೆಯಾಗಲಿದ್ದು,ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲೂ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ತಿಳಿಸಿದರು.

ಸದ್ಯ ಬಂಗಾಳಕೊಲ್ಲಿಯಲ್ಲಿರುವ ಕಡಿಮೆ ಒತ್ತಡ ಪ್ರದೇಶವು ದಿನದಿಂದ ದಿನಕ್ಕೆ ದಿಕ್ಕು ಬದಲಿಸುತ್ತಾ ತೀವ್ರತೆ ಹೆಚ್ಚಿಸಿಕೊಳ್ಳುತ್ತಿದೆ. ಗುರುವಾರದ ಮಾಹಿತಿಯಂತೆ ತೀವ್ರ ವಾಯುಭಾರದಿಂದ ಸೃಷ್ಟಿಯಾಗುವ ಚಂಡಮಾರುತ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿ ಪ್ರದೇಶದ ಮೂಲಕ ನೈರುತ್ಯ ದಿಕ್ಕಿನೆಡೆಗೆ ಚಲಿಸುವ ಸಾಧ್ಯತೆಯಿದೆ. ಒಂದೊಮ್ಮೆ ಅದು ಕರ್ನಾಟಕದ ಕಡೆಗೆ ಬಂದರೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೇಲ್ಮೆ„ ಸುಳಿಗಾಳಿ ಪರಿಣಾಮದಿಂದ ಗುರುವಾರ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗಿದ್ದು, ದಕ್ಷಿಣ ಕನ್ನಡದಲ್ಲಿ 19 ಮಿ.ಮೀ.ಮಳೆಯಾಗಿದೆ.

ಉಳಿದಂತೆ ಧಾರವಾಡ 9, ರಾಮನಗರ 7, ಉಡುಪಿ 5, ದಾವಣಗೆರೆ 4.80, ಮಂಡ್ಯ 4.50, ಚಾಮರಾಜನಗರ 4, ಕೊಡಗು 3.50,ವಿಜಯಪುರ 3, ಚಿಕ್ಕಬಳ್ಳಾಪುರ, ರಾಯಚೂರು ಹಾಗೂ ಬೆಳಗಾವಿಯಲ್ಲಿ 2.50, ಮೈಸೂರಿನಲ್ಲಿ 2 ಹಾಗೂ ಉತ್ತರ ಕನ್ನಡದಲ್ಲಿ 1 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಉತ್ತರ ಒಳನಾಡಿನಲ್ಲಿ
ಒಣಹವೆ ಮುಂದುವರಿದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ