ರಾಮಲಿಂಗಾ ರೆಡ್ಡಿ ಬಹಿರಂಗ ಬಂಡಾಯ

Team Udayavani, Jun 5, 2019, 3:09 AM IST

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಬಂಡಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಲೋಕಸಭೆ ಚುನಾವಣೆಗೂ ಮುಂಚೆ ಮೌನವಾಗಿದ್ದ ಪಕ್ಷದ ಹಿರಿಯ ನಾಯಕರೆಲ್ಲ ಚುನಾವಣೆ ಫ‌ಲಿತಾಂಶದ ನಂತರ ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ಹಿರಿಯ ನಾಯಕರ ಬಹಿರಂಗ ಬಂಡಾಯದಿಂದ ಸಂಪುಟ ವಿಸ್ತರಣೆಗೆ ಮತ್ತೆ ಗ್ರಹಣ ಹಿಡಿಯುವ ಸಾಧ್ಯತೆಯಿದೆ.

ರೋಷನ್‌ ಬೇಗ್‌ ನಂತರ ರಾಮಲಿಂಗಾ ರೆಡ್ಡಿ ತಮ್ಮ ಅತೃಪ್ತಿಯನ್ನು ನೇರವಾಗಿ ಹೊರ ಹಾಕಿದ್ದು, “ಪಕ್ಷದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದ್ದು, ಬೇಕು ಅಂತಲೇ ತಮ್ಮನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ’ ಎಂದು ಆರೋಪಿಸಿದ್ದಾರೆ. ರಾಮಲಿಂಗಾರೆಡ್ಡಿಗೆ ರೋಷನ್‌ ಬೇಗ್‌ ಕೂಡ ಬೆಂಬಲ ವ್ಯಕ್ತಪಡಿಸಿ ಮತ್ತೆ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ರಂಜಾನ್‌ ದಿನ ಸಂಪುಟ ವಿಸ್ತರಣೆಗೆ ಪ್ರಯತ್ನ ನಡೆಸಿರುವ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಹಿರಿಯ ನಾಯಕರ ಬಂಡಾಯ ನುಂಗಲಾರದ ತುತ್ತಾಗಿದೆ. ರಾಮಲಿಂಗಾರೆಡ್ಡಿಯ ಬಂಡಾಯದ ಹಿಂದೆ ಮೂಲ ಕಾಂಗ್ರೆಸ್ಸಿನ ಹಿರಿಯ ನಾಯಕರ ಬೆಂಬಲವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ, ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್‌ ನಾಯಕರು ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.

ಲೋಕಸಭೆ ಸೋಲಿನ ನಂತರ ಕೆಲವು ಅಸಮರ್ಥ ಸಚಿವರನ್ನು ಕೈ ಬಿಟ್ಟು ಸಂಪುಟ ಪುನಾರಚನೆ ಮಾಡಬೇಕೆಂಬ ಬೇಡಿಕೆ ಹಾಗೂ ಮುಂದಿನ ವರ್ಷ ಬಿಬಿಎಂಪಿ ಚುನಾವಣೆ ಇರುವುದರಿಂದ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಮಾತು ಕೇಳಿಬಂದಿತ್ತು. ಆದರೆ, ಸಂಪುಟ ಪುನಾರಚನೆಗೆ ಸಚಿವರು ವಿರೋಧ ವ್ಯಕ್ತಪಡಿಸಿದ್ದರಿಂದ ಕೇವಲ ಇಬ್ಬರು ಪಕ್ಷೇತರರಿಗೆ ಮಾತ್ರ ಸಂಪುಟದಲ್ಲಿ ಅವಕಾಶ ನೀಡುತ್ತಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ರಾಮಲಿಂಗಾರೆಡ್ಡಿ ಪಕ್ಷದ ನಾಯಕರ ವಿರುದ್ಧ ಬಹಿರಂಗ ಬಂಡಾಯ ಸಾರಿದ್ದಾರೆಂದು ಹೇಳಲಾಗುತ್ತಿದೆ.

ರಾಮಲಿಂಗಾರೆಡ್ಡಿ ವಿದೇಶ ಪ್ರವಾಸ ಮುಗಿಸಿ ಬಂದ ಮೇಲೆ ಬಿಬಿಎಂಪಿಯ ಸುಮಾರು 20 ಕ್ಕೂ ಹೆಚ್ಚು ಕಾರ್ಪೊರೇಟರ್‌ಗಳು ಅವರನ್ನು ಭೇಟಿ ಮಾಡಿ, ಸದ್ಯದ ರಾಜಕೀಯ ಪರಿಸ್ಥಿತಿ ವಿವರಿಸಿ, ಬಂಡಾಯ ಸಾರುವವರಿಗೆ ಮಾತ್ರ ಪಕ್ಷದಲ್ಲಿ ಅಧಿಕಾರ ನೀಡಲಾಗುತ್ತಿದೆ. ನಿಮ್ಮಂಥ ಹಿರಿಯರಿಗೆ ಅವಕಾಶ ನೀಡದಿದ್ದರೆ, ಮುಂದಿನ ಬಾರಿ ಬಿಬಿಎಂಪಿ ಚುನಾವಣೆಯನ್ನು ಎದುರಿಸುವುದು ಕಷ್ಟವಾಗಲಿದೆ ಎಂದಿದ್ದಾರೆ.

ಉಪ ಮುಖ್ಯಮಂತ್ರಿ ಪರಮೇಶ್ವರ್‌ಗೂ, ಬೆಂಗಳೂರಿಗೂ ಏನು ಸಂಬಂಧ? ಲೋಕಸಭೆ ಚುನಾವಣೆಯಲ್ಲಿ ಅವರ ತವರು ಜಿಲ್ಲೆ ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಿದ್ದಾರೆ. ಬೆಂಗಳೂರಿನ ಮೂರೂ ಕ್ಷೇತ್ರಗಳಲ್ಲಿ ಸೋಲುವಂತಾಗಿದೆ. ಅವರಿದ್ದರೆ ಬಿಬಿಎಂಪಿಯಲ್ಲಿ ಮತ್ತೆ ಅಧಿಕಾರ ಹಿಡಿಯುವುದು ಕಷ್ಟವಾಗಲಿದೆ. ನೀವು ಮೌನವಾಗಿ ಕುಳಿತರೆ ಎಲ್ಲರ ಭವಿಷ್ಯವೂ ಮಂಕಾಗಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ದಿನೇಶ್‌ ಗುಂಡೂರಾವ್‌ ಅವರನ್ನು ಭೇಟಿ ಮಾಡಿ, ವಸ್ತು ಸ್ಥಿತಿ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದರು. ಅದಕ್ಕೆ ದಿನೇಶ್‌ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತಮ್ಮ ಮನಸ್ಸಿನ ವೇದನೆಯನ್ನು ಬಹಿರಂಗವಾಗಿಯೇ ಹೇಳಿ, ಪಕ್ಷದ ನಾಯಕರ ನಡವಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.

ಅವರಿಗೊಂದು ನ್ಯಾಯ ನಮಗೊಂದು ನ್ಯಾಯಾನಾ?: ಮಂಗಳವಾರ ಮಾಧ್ಯಮಗಳಿಗೆ ಬಹಿರಂಗವಾಗಿಯೇ ಹೇಳಿಕೆ ನೀಡಿರುವ ರಾಮಲಿಂಗಾ ರೆಡ್ಡಿ, ವಲಸಿಗರಿಗೆ ಪಕ್ಷದಲ್ಲಿ ಮಣೆ ಹಾಕುತ್ತಿರುವುದು ಎಷ್ಟು ಸರಿ? ಹಿರಿಯರನ್ನು ಸಂಪುಟದಿಂದ ದೂರ ಇಡಲಾಗಿದೆ ಎಂದು ಹೇಳುತ್ತಾರೆ. ಡಿ.ಕೆ.ಶಿವಕುಮಾರ್‌, ಆರ್‌.ವಿ.ದೇಶಪಾಂಡೆ, ಪರಮೇಶ್ವರ್‌ ಅವರೆಲ್ಲ ನಾಲ್ಕಾರು ಬಾರಿ ಸಚಿವರಾದವರನ್ನೇ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯಾನಾ? ಒಂದು ಜಾತಿಗೆ ಒಂದು ಸ್ಥಾನ ಎಂದು ಹೇಳುತ್ತಾರೆ, ಮೂವರು ಬ್ರಾಹ್ಮಣರಿಗೆ ಅಧಿಕಾರ ನೀಡಲಾಗಿದೆ. ಒಂದೇ ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯದ ಇಬ್ಬರನ್ನು ಮಂತ್ರಿ ಮಾಡಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ನಾನು ಮಂತ್ರಿ ಸ್ಥಾನಕ್ಕೆ ಒತ್ತಾಯ ಮಾಡುತ್ತಿಲ್ಲ. ಪಕ್ಷದಲ್ಲಿ ಆಗುತ್ತಿರುವ ತಪ್ಪುಗಳನ್ನು ಸರಿಪಡಿಸಲು ಕೇಳುತ್ತಿದ್ದೇವೆ. ಪಕ್ಷ ನಮ್ಮನ್ನು ಬೆಳೆಸಿದೆ, ನಾನು ಪಕ್ಷ ಬೆಳೆಸಿದ್ದೇನೆ. ನಮ್ಮನ್ನು ಪಕ್ಷದಿಂದ ಹೊರ ಹಾಕುವ ಪ್ರಯತ್ನ ನಡೆಯುತ್ತಿದೆ. ಪಕ್ಷದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಒಳ್ಳೆಯದಲ್ಲ. ಪಕ್ಷಕ್ಕಾಗಿ ದುಡಿದವರನ್ನು ತುಳಿಯುವುದು ಸರಿಯಲ್ಲ. ಬೇರೆ ಪಕ್ಷದಿಂದ ಬಂದವರಿಗೆ, ನಮಗಿಂತ ತೀರಾ ಕಿರಿಯರಿಗೆ ಅವಕಾಶ ಕೊಡುತ್ತಿದ್ದಾರೆ ಎಂದರೆ ನಾವೇಕೆ ಸುಮ್ಮನಿರಬೇಕೆಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸೇರ್ಪಡೆಗೆ ಆಹ್ವಾನ?: ಪಕ್ಷದ ನಾಯಕರ ವಿರುದ್ಧ ಬಂಡಾಯ ಸಾರಿರುವ ರಾಮಲಿಂಗಾ ರೆಡ್ಡಿ ಅವರನ್ನು ಬೆಂಗಳೂರಿನ ಬಿಜೆಪಿ ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌ ಹಾಗೂ ಸತೀಶ್‌ ರೆಡ್ಡಿ ಅವರು ಬಿಜೆಪಿ ಸೇರುವಂತೆ ಆಹ್ವಾನ ನೀಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸುತ್ತಿದೆ. ಯಡಿಯೂರಪ್ಪ ಅವರು ನಂಬಿದವರನ್ನು ಕೈ ಬಿಡುವುದಿಲ್ಲ. ಬಿಜೆಪಿಯಲ್ಲಿ ಒಳ್ಳೆಯ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್‌ನಿಂದಲೇ ಭರವಸೆ ದೊರೆಯುತ್ತದೆ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಅವರ ಆಹ್ವಾನಕ್ಕೆ ರಾಮಲಿಂಗಾ ರೆಡ್ಡಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ 104 ಸ್ಥಾನ ಗೆದ್ದರೂ ಸರ್ಕಾರ ರಚಿಸಲಾಗದೆ 14 ತಿಂಗಳು ಪ್ರತಿಪಕ್ಷದಲ್ಲಿದ್ದು, ಬದಲಾದ ರಾಜಕೀಯ ಸನ್ನಿವೇಶದಲ್ಲಿ...

  • ಬೆಂಗಳೂರು: ಕೂಸು ಹುಟ್ಟುವ ಮುನ್ನ ಕುಲಾವಿ ಎಂಬಂತೆ ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರದ ಪತನದ ಕನಸು ಕಂಡಿದ್ದ ಕಾಂಗ್ರೆಸ್‌ ನಾಯಕರಿಗೆ ಮತದಾರ "ಶಾಕ್‌' ನೀಡಿದ್ದು,...

  • ಬೆಂಗಳೂರು: ಆಪರೇಷನ್‌ ಕಮಲ ಕಾರ್ಯಾಚರಣೆಯಡಿ ಮೂರು ಸ್ಥಾನ ಕಳೆದು ಕೊಂಡು ಐದು ಸ್ಥಾನ ಗೆಲ್ಲುತ್ತೇವೆಂದು ಉಪ ಸಮರದ ಅಖಾಡಗಿಳಿದಿದ್ದ ಜೆಡಿಎಸ್‌ ಶೂನ್ಯ ಸಂಪಾದನೆ...

  • ಹುಬ್ಬಳ್ಳಿ: ಬಿಜೆಪಿಗೆ ಬಲ ನೀಡುವ ತಾಣವೆಂದೇ ಗುರುತಿಸಿಕೊಂಡಿರುವ ಉತ್ತರ ಕರ್ನಾಟಕದಲ್ಲಿ, ಉಪ ಚುನಾವಣೆ ಫ‌ಲಿತಾಂಶದಿಂದ ಕಮಲ ಮತ್ತಷ್ಟು ಅರಳಿದೆ. ಪ್ರಸ್ತುತ...

  • ಹಾವೇರಿ: ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದಲ್ಲಿ ಅರುಣೋದಯದೊಂದಿಗೆ ಕಮಲ ಅರಳಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಷ್ಟೇ ಕೃಷ್ಣಪ್ಪ ಭೀಮಪ್ಪ ಕೋಳಿವಾಡರನ್ನು...

ಹೊಸ ಸೇರ್ಪಡೆ