ಉಳ್ಳಾಲ ಸೇತುವೆ ಬೇಲಿ ಕಾಮಗಾರಿ ಶೀಘ್ರ ಆರಂಭ
ಎರಡು ತಿಂಗಳೊಳಗೆ ಬೇಲಿ ನಿರ್ಮಾಣ ನಿರೀಕ್ಷೆ
Team Udayavani, May 31, 2020, 6:17 AM IST
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ನದಿಯ ಉಳ್ಳಾಲ ಸೇತುವೆಯ ಇಕ್ಕೆಲಗಳಲ್ಲಿ ರಕ್ಷಣಾ ಬೇಲಿ ನಿರ್ಮಾಣದ ಕಾಮಗಾರಿಯು ಜೂನ್ ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಬೇಲಿಯು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಾಣವಾಗಲಿದೆ.
ಬೇಲಿ ನಿರ್ಮಾಣಕ್ಕೆ 58 ಲ.ರೂ. ಹಾಗೂ ಸಿ.ಸಿ. ಕೆಮರಾ ಅಳವಡಿಸಲು 5 ಲ. ರೂ. ಮೊತ್ತದ ಟೆಂಡರ್ ಕರೆದು ಈಗಾಗಲೇ ವಹಿಸಿಕೊಡಲಾಗಿದೆ. ಆರ್ಥಿಕ ಬಿಡ್ ಮತ್ತಿತರ ಪ್ರಕ್ರಿಯೆಗಳು ಒಂದು ವಾರದಲ್ಲಿ ಪೂರ್ಣಗೊಳ್ಳ ಲಿದ್ದು, ಜೂ. 15- 20 ರೊಳಗೆ ಕೆಲಸ ಆರಂಭವಾಗಲಿದೆ. ಕಾಮಗಾರಿ ಪೂರ್ತಿಗೊಳಿಸಲು 3 ತಿಂಗಳ ಕಾಲಾವ ಕಾಶ ನೀಡಲಾಗಿದ್ದರೂ 2 ತಿಂಗಳೊಳಗೆ ಕೆಲಸ ಪೂರ್ತಿಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಮುಡಾ ಕಚೇರಿಯ ಮೂಲಗಳು ತಿಳಿಸಿವೆ.
ಬಹುಕಾಲದ ಬೇಡಿಕೆ
ಈ ಸೇತುವೆಗೆ ರಕ್ಷಣಾ ಬೇಲಿ ನಿರ್ಮಿಸಬೇಕೆನ್ನುವುದು ಬಹುಕಾಲದ ಬೇಡಿಕೆಯಾಗಿತ್ತು. 2019ರ ಜುಲೈ 29 ರಂದು ಕೆಫೆ ಕಾಫಿ ಡೇ ಸಂಸ್ಥೆಯ ಸ್ಥಾಪಕ ವಿ.ಜಿ. ಸಿದ್ದಾರ್ಥ ಅವರು ಈ ಸೇತುವೆ ಬಳಿಯಿಂದ ನಾಪತ್ತೆಯಾಗಿ ಜು. 31 ರಂದು ಅವರ ಶವ ಹೊಗೆ ಬಜಾರ್ ಬಳಿ ಯಲ್ಲಿ ಪತ್ತೆಯಾಗಿತ್ತು. ಬಳಿಕ·ರಕ್ಷಣಾ ಬೇಲಿ ನಿರ್ಮಿಸಬೇಕೆಂಬ ಆಗ್ರಹ ಕೇಳಿಬಂತು.
ಮಂಗಳೂರು ಪೊಲೀಸ್ ಕಮಿಷ ನರೆಟ್ ವತಿಯಿಂದ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ವ್ಯವಹಾರ ನಡೆದಿತ್ತು. ಸಿದ್ಧಾರ್ಥ ಆತ್ಮಹತ್ಯೆಯ ಬಳಿಕ ಇಲ್ಲಿ ಸರಣಿ ಆತ್ಮಹತ್ಯೆ ಪ್ರಕರಣ ಗಳು ನಡೆದಿದ್ದು, ಬಳಿಕ ಬೇಲಿನಿರ್ಮಿಸಲು ಒತ್ತಡ ಹೆಚ್ಚಾಯಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಾಂತ್ರಿಕ ಸಲಹೆಗಾರರ ಸಹಾಯ ಪಡೆದು ತಯಾರಿ ಸಿದ ಪ್ರಸ್ತಾವನೆಯಲ್ಲಿ ಅಂದಾಜು ಮೊತ್ತ ಜಾಸ್ತಿ ಇದ್ದು, ಹಣಕಾಸಿನ ಕೊರತೆಯಿಂದ ಯೋಜನೆ ನನೆಗುದಿಗೆ ಬಿದ್ದಿತ್ತು.
2020 ಎಪ್ರಿಲ್ 15ರಂದು ರಾತ್ರಿ ಕೊಲ್ಯದ ವಿಕ್ರಂ ಗಟ್ಟಿ ಅವರು ಈ ಸೇತುವೆ ಬಳಿ ತನ್ನ ಕಾರು ನಿಲ್ಲಿಸಿ ನಾಪತ್ತೆಯಾಗಿ, ಎ. 17ರಂದು ಉಳ್ಳಾಲ
ಹೊಗೆಯ ನೇತ್ರಾವತಿ ನದಿ ತೀರದಲ್ಲಿ ಶವವಾಗಿ ಪತ್ತೆಯಾದಾಗ ಬೇಲಿ ನಿರ್ಮಾಣ ಯೋಜನೆ ಮರು ಜೀವ ಪಡೆದಿತ್ತು.
ಆಗ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿ ಕಾರ (ಮುಡಾ)ದ ವತಿಯಿಂದ ಈ ಸೇತುವೆಗೆ ರಕ್ಷಣಾ ಬೇಲಿ ನಿರ್ಮಾಣ ಹಾಗೂ ಸಿಸಿ ಕೆಮರಾ ಅಳವಡಿಸುವ ಕುರಿತು ಭರವಸೆ ನೀಡಿದ್ದರು. ಈಗ ಕಾಮಗಾರಿಗೆ ಮುಡಾ ವತಿಯಿಂದ ಟೆಂಡರ್ ಕರೆದು ಕಾಮಗಾರಿ ಯನ್ನು ಗುತ್ತಿಗೆದಾರರಿಗೆ ವಹಿಸುವ ಮೂಲಕ ಶಾಸಕರು ತಮ್ಮ ಮಾತನ್ನು ಉಳಿಸಿಕೊಂಡಂತಾಗಿದೆ.
ಬೇಲಿ ನಿರ್ಮಿಸಲು 58 ಲ.ರೂ. ಹಾಗೂ ಸಿ.ಸಿ. ಕೆಮರಾ ಅಳವಡಿಸಲು 5 ಲ.ರೂ.ಗಳ ಟೆಂಡರ್ ಆಗಿದೆ. ಈಗ ಉಕ್ಕಿನ ಬೆಲೆ ದಿಢೀರ್ ಹೆಚ್ಚಳವಾದ್ದರಿಂದ ಟೆಂಡರುದಾರರು ಮೊತ್ತವನ್ನು 58ರಿಂದ 64 ಲ.ರೂ.ಗಳಿಗೆ ಏರಿಸಬೇಕೆಂದು ಮನವಿ ಮಾಡಿದ್ದಾರೆ. ಹಾಗಾಗಿ ಈ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಪುನಃ ಅನುಮೋದನೆ ಪಡೆಯಲು ಪ್ರಯತ್ನಿಸಲಾಗುವುದು. ಇದರಿಂದಾಗಿ ಕೆಲವು ದಿನಗಳ ವಿಳಂಬ ಆಗುವ ಸಾಧ್ಯತೆ ಇದೆ. ಏನಿದ್ದರೂ ಜೂ.15- 20ರೊಳಗೆ ಕಾಮಗಾರಿ ಆರಂಭವಾಗುವುದು ಖಚಿತ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
800 ಮೀ. ಉದ್ದದ ಬೇಲಿ
ಉಳ್ಳಾಲ ಸೇತುವೆ 800 ಮೀ. ಉದ್ದವಿದ್ದು, ಇಡೀ ಸೇತುವೆಗೆ ಕಬ್ಬಿಣದ ರಕ್ಷಣಾ ಬೇಲಿ ನಿರ್ಮಾಣ ಮಾಡಲಾಗುತ್ತದೆ. ಗ್ರಿಲ್ಸ್ ಗಳನ್ನು ವರ್ಕ್ ಶಾಪ್‌ನಲ್ಲಿಯೇ ಸಿದ್ಧಪಡಿಸಿ ಬಳಿಕ ಸೇತುವೆಯ ಬಳಿ ತಂದು ಜೋಡಿಸಲಾಗುತ್ತದೆ. ಬೇಲಿ ಕಾಮಗಾರಿ ಮುಗಿದ ಬಳಿಕ ಸೇತುವೆಯ ಎರಡೂ ದಿಕ್ಕುಗಳಲ್ಲಿ ಸಿ.ಸಿ. ಕೆಮರಾ ಅಳವಡಿಸಲಾಗುತ್ತದೆ. ಕೆಮರಾದ ಮಾನಿಟರಿಂಗ್ ಪೊಲೀಸರ ಕೈಯಲ್ಲಿ ಇರಲಿದೆ. ಆದ್ದರಿಂದ ಕೆಮರಾ ಅಳವಡಿಸುವ ಬಗ್ಗೆ ಪೊಲೀಸ್ ಇಲಾಖೆಯಿಂದ ವರದಿ ಮತ್ತು ಅನುಮತಿ ಲಭಿಸಿದೆ. ಆರ್ಥಿಕ ಬಿಡ್ ಮತ್ತು ಇತರ ಕೆಲವು ಪ್ರಕ್ರಿಯೆಗಳು ಮಾತ್ರ ಬಾಕಿ ಇದ್ದು, ಜೂನ್ 15ರ ವೇಳೆಗೆ ಇವೆಲ್ಲವೂ ಪೂರ್ತಿಯಾಗಲಿವೆ ಎಂದು ಮುಡಾ ಎಂಜಿನಿಯರ್ ಅಕºರ್ ಪಾಶಾ ಅವರು ಉದಯವಾಣಿಗೆ ತಿಳಿಸಿದ್ದಾರೆ.
ಶಾಸಕರ ಪ್ರಯತ್ನ ಕಾರಣ
ಶಾಸಕರಾದ ಡಿ. ವೇದವ್ಯಾಸ್ ಕಾಮತ್ ಅವರ ಪ್ರಯತ್ನದಿಂದಾಗಿ ಈ ಯೋಜನೆ ಕಾರ್ಯ ಸಾಧ್ಯವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಬರುವವರಿಗೆ ಇಲ್ಲಿನ ಬೇಲಿ ಅಡ್ಡಿಯಾದಾಗ ಅವರು ಮನಸ್ಸು ಬದಲಾಯಿಸಿ ಸಾಯುವ ನಿರ್ಧಾರ ಕೈಬಿಡುವಂತಾಗಲಿ ಎಂದು ಆಶಿಸುತ್ತೇವೆ.
-ಅಕ್ಬರ್ ಪಾಶಾ, ಮುಡಾ ಎಂಜಿನಿಯರ್.
ಅನಾಹುತ ತಡೆಗೆ ಬೇಲಿ
ಈ ಸೇತುವೆಯ ಮೇಲೆ ನಡೆಯುತ್ತಿರುವ ಅನಾಹುತ ಗಳನ್ನು ತಡೆಯಲು ರಕ್ಷಣಾ ಬೇಲಿ ನಿರ್ಮಿಸಬೇಕೆಂಬುದು ಬಹು ಕಾಲದ ಬೇಡಿಕೆ. ಅದೀಗ ಈಡೇರುವ ಕಾಲ ಬಂದಿದೆ ಎನ್ನಲು ಹೆಮ್ಮೆ ಎನಿಸುತ್ತಿದೆ. ಸ್ಥಳೀಯ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕವೇ ಇದು ನೆರವೇರು ತ್ತಿರುವುದು ಸಂತಸದ ಸಂಗತಿ.
-ಡಿ. ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುರತ್ಕಲ್ :ಮಿತ್ರಪಟ್ಟಣ ಭಾಗದಲ್ಲಿ ಭಾರಿ ಕಡಲ್ಕೊರೆತ : ಅಪಾಯದ ಅಂಚಿನಲ್ಲಿ ಮೀನುಗಾರಿಕಾ ರಸ್ತೆ
ಪದೇ ಪದೇ ಜಾಗ ಬದಲಾಯಿಸುತ್ತಿದ್ದ ಪ್ರವೀಣ್ ಹಂತಕರು : ಆರೋಪಿಗಳ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ
ಕಿನ್ಯ ಗ್ರಾಮದಲ್ಲಿ ಸಮಸ್ಯೆಗಳೇ ಬಹುದೊಡ್ಡದು
ತೊಕ್ಕೊಟ್ಟು: ಬೈಕ್ -ಕಾರು ಢಿಕ್ಕಿ; ಇಬ್ಬರಿಗೆ ಗಾಯ
ಚಪ್ಪಲಿಯಲ್ಲಿ ಮರೆ ಮಾಚಿ ಅಕ್ರಮ ಸಾಗಾಟ; 17 ಲಕ್ಷ ರೂ. ಮೌಲ್ಯದ ಚಿನ್ನ ವಶ