“ಜಂಟಲ್‌ಮೆನ್’ ಮರುಬಿಡುಗಡೆ
Team Udayavani, Jun 11, 2020, 7:48 AM IST
ಸಿನಿಮಾ ಬಿಡುಗಡೆಗೆ ಅನುಮತಿ ಸಿಕ್ಕ ಕೂಡಲೇ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಲಿವೆ. ಅದರಲ್ಲಿ ಸ್ಟಾರ್‌ಗಳ, ಹೊಸಬರ ಚಿತ್ರಗಳು ಸೇರಿದಂತೆ ಬೇರೆ ಬೇರೆ ವಿಭಾಗಗಳ ಚಿತ್ರಗಳಿವೆ. ಈ ಸಾಲಿಗೆ ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್‌ಮೆನ್ ಚಿತ್ರ ಕೂಡಾ ಸೇರುತ್ತದೆ. ಎಲ್ಲಾ ಓಕೆ, ಜಂಟಲ್‌ಮೆನ್ ಯಾಕೆ ಎಂದು ನೀವು ಕೇಳಬಹುದು. ಏಕೆಂದರೆ ಈ ಚಿತ್ರ ಈಗಾಗಲೇ ಬಿಡುಗಡೆಯಾಗಿದೆ.
ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ ನಾನಾ ಕಾರಣಗಳಿಂದಾಗಿ ಆ ಚಿತ್ರ ಚಿತ್ರಮಂದಿರದಲ್ಲಿ ಹೆಚ್ಚು ದಿನ ಇರಲಾಗಲಿಲ್ಲ. ಆ ಕಾರಣದಿಂದ ನಿರ್ಮಾಪಕ ಗುರುದೇಶಪಾಂಡೆ ಈಗ ಚಿತ್ರವನ್ನು ಮರುಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಒಳ್ಳೆಯ ಸಿನಿಮಾವನ್ನು ಪ್ರೇಕ್ಷಕ ಯಾವತ್ತೂ ಸೋಲಲು ಬಿಡಲ್ಲ ಎಂಬ ನಂಬಿಕೆಯೊಂದಿಗೆ ಚಿತ್ರ ಮರುಬಿಡುಗಡೆ ಮಾಡಲಿದ್ದಾರೆ.
ಈ ಚಿತ್ರದ ಕಥಾಹಂದರ ಹೊಸದಾಗಿದ್ದು, ಚಿತ್ರದಲ್ಲಿ ನಾಯಕ ಪ್ರಜ್ವಲ್ ದೇವರಾಜ್ “ಸ್ಲಿಪಿಂಗ್ ಸಿಂಡ್ರೋಮ್’ ಅಥವಾ ಹೈಪರ್ ಸೋಮ್ನಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ದಿನಕ್ಕೆ 18 ಗಂಟೆ ಮಾಡುವ ನಿದ್ರೆ ಮಾಡುವ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್‌ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಜೋಡಿಯಾಗಿದ್ದಾರೆ. ಈ ಚಿತ್ರವನ್ನು ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದಾರೆ.
ಈ ನಡುವೆಯೇ ಪ್ರಜ್ವಲ್ ನಟನೆಯ ಇನ್ಸ್‌ಪೆಕ್ಟರ್ ವಿಕ್ರಂ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರದಲ್ಲಿ ಪ್ರಜ್ವಲ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿ ಮೆಚ್ಚುಗೆ ಪಡೆದಿವೆ.