ಕೇಂದ್ರದಿಂದ ರಾಜ್ಯಕ್ಕೆ ಆಹಾರಧಾನ್ಯ ಬಿಡುಗಡೆ
Team Udayavani, Apr 12, 2020, 5:49 AM IST
ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಘೋಷಿಸಿದಂತೆ ಪ್ರಧಾನಮಂತ್ರಿಗಳ ಕಲ್ಯಾಣ ಯೋಜನೆಯಡಿ ಎಪ್ರಿಲ್‌ನಿಂದ ಜೂನ್ ತಿಂಗಳವರೆಗೆ ಪ್ರತಿ ತಿಂಗಳು ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ತಲಾ ಐದು ಕೆ.ಜಿ. ಆಹಾರಧಾನ್ಯ ಭಾರತೀಯ ಆಹಾರ ನಿಗಮವು ರಾಜ್ಯಕ್ಕೆ ಪೂರೈಕೆ ಮಾಡಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ರಾಜ್ಯಕ್ಕೆ ಅಗತ್ಯವಾದ ಆಹಾರ ಧಾನ್ಯ ಪೂರೈಕೆ ಮಾಡಲಾಗಿದ್ದು, ರಾಜ್ಯದ ಎಲ್ಲ ಬಿಪಿಎಲ್ ಕಾರ್ಡ್‌ದಾರ ರಿಗೆ ಆಹಾರ ಧಾನ್ಯ ಸಿಗಲಿದೆ.ಸುಮಾರು ನಾಲ್ಕು ಕೋಟಿ ಫಲಾನುಭವಿಗಳಿಗೆ ಇದರಿಂದ ಅನುಕೂಲವಾಗಲಿದೆ.
ರಾಜ್ಯದಲ್ಲಿರುವ ಭಾರತೀಯ ಆಹಾರ ನಿಗಮದ 71 ಗೋದಾಮು ಗಳಿಗೆ ಆಹಾರ ಧಾನ್ಯ ತಲುಪಿಸಲಾಗಿದ್ದು, ಜತೆಗೆ ಸಮಯದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ ಅಕ್ಕಿ ಮತ್ತು ಗೋಧಿಯನ್ನು ಸಾರ್ವಜನಿಕ ವಿತರಣ ವ್ಯವಸ್ಥೆಯಡಿಯಲ್ಲಿ ಸರಬರಾಜು ಮಾಡಿದೆ ಎಂದು ಭಾರತೀಯ ಆಹಾರ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ವಿ. ಪ್ರಸಾದ್ ಹೇಳಿದ್ದಾರೆ.