ಪಾಲಿಕೆ ಅಧಿಕಾರಿಗಳಿಂದ ಟಿನ್ ಫ್ಯಾಕ್ಟರಿ ಮಾರ್ಗದಲ್ಲಿ ಒತ್ತುವರಿ ತೆರವು
Team Udayavani, Jan 24, 2021, 11:29 AM IST
ಬೆಂಗಳೂರು: ಬೆನ್ನಿಗಾನ ಹಳ್ಳಿ (ಟಿನ್‌ಫ್ಯಾಕ್ಟರಿ)ಮಾರ್ಗದ ರಸ್ತೆ ಮಾರ್ಗದಲ್ಲಿ ಒತ್ತುವರಿ ಮಾಡಿ ನಿರ್ಮಾಣ ಮಾಡಲಾಗಿದ್ದ
ಧಾರ್ಮಿಕ ಕೇಂದ್ರವನ್ನು ಪಾಲಿಕೆಯ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು. ಬೆನ್ನಿಗಾನಹಳ್ಳಿ ವ್ಯಾಪ್ತಿಯ 21 ಗುಂಟೆ ಜಾಗದಲ್ಲಿ ಶ್ರೀ ಔಡೇಶ್ವರಿ ದೇಗುಲ ನಿರ್ಮಾಣ ಮಾಡಲಾಗಿತ್ತು.
ಅಂದಾಜು 50 ಕೋಟಿ ರೂ. ಮೌಲ್ಯ ಹೊಂದಿದೆ ಎನ್ನಲಾಗಿದೆ. ಸದ್ಯ ಬೆನ್ನಿಗಾನ ಹಳ್ಳಿಯ ಬಸ್ ನಿಲ್ದಾಣದ ನಂತರದ ಬಸ್ ನಿಲ್ದಾಣಕ್ಕೆ ಸ್ಥಳಾವಕಾಶದ ಕೊರತೆ ಇರುವುದರಿಂದ ಟಿನ್ ಫ್ಯಾಕ್ಟರಿಯ ಮೇಲ್ಸೇತುವೆಯ ಮೇಲೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಯ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ದಟ್ಟಣೆ ಆಗುತ್ತಿದೆ. ಹೀಗಾಗಿ, “ಒತ್ತುವರಿ ತೆರವು ಮಾಡಿರುವ ಪ್ರದೇಶದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ’ ಎಂದು ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ನಗರದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ಅಧಿಕೃತವಾಗಿ ಪ್ರಾರಂಭವಾಗಿದೆ. ಎಲ್ಲ ವಲಯಗಳಲ್ಲಿರುವ ಅನಧಿಕೃತ ಕಟ್ಟಡ ನಿರ್ಮಾಣಗಳ ವರದಿ ಸೋಮವಾರ ಮಂಡನೆ ಸಾಧ್ಯತೆಯಿದೆ.