ಕೊಹ್ಲಿ, ಶಾಸ್ತ್ರಿ ಬೆಂಬಲ: ರೋಹಿತ್
Team Udayavani, Oct 22, 2019, 11:59 PM IST
ರಾಂಚಿ: ನನ್ನ ಸಾಮರ್ಥ್ಯದ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಅವರಿಗಿದ್ದ ನಂಬಿಕೆಯಿಂದ ಟೆಸ್ಟ್ನಲ್ಲಿ ಆರಂಭಿಕನ ಸ್ಥಾನ ಪಡೆಯಲು ನೆರ ವಾಯಿತು ಎಂದು ತಿಳಿಸಿದ ರೋಹಿತ್ ಶರ್ಮ ಅವರು ಅವರಿಬ್ಬರ ಬೆಂಬಲ, ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.
ಆರಂಭಿಕರಾಗಿ ಪದಾರ್ಪಣ ಸರಣಿಯಲ್ಲಿ ರೋಹಿತ್ ಅವರು ಚೊಚ್ಚಲ ದ್ವಿಶತಕ, ಅವಳಿ ಶತಕ ಸಹಿತ ಒಟ್ಟು 529 ರನ್ ಪೇರಿಸಿದ್ದಾರೆ. ಈ ಅಮೋಘ ನಿರ್ವಹಣೆಗಾಗಿ ಅವರು ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ಈ ಸಾಧನೆಗೆ ಕೋಚ್ ಅವರ ಬೆಂಬಲ ಮತ್ತು ನಾಯಕ ನನ್ನ ಮೇಲೆ ಇರಿಸಿದ ನಂಬಿಕೆಯೇ ಮುಖ್ಯ ಕಾರಣ. ಒಂದು ವೇಳೆ ಅವರು ನನಗೆ ಈ ಅವಕಾಶವನ್ನು ನೀಡದೇ ಇದ್ದಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ತಂಡದ ಆಡಳಿತ, ನಾಯಕ, ಕೋಚ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇದು ನನ್ನ ಬಾಳ್ವೆಯ ಅವಿಸ್ಮರಣೀಯ ಸರಣಿಯಾಗಿದೆ ಎಂದು ಅವರು ಹೇಳಿದರು.