ಶ್ರೀ ಜಗನ್ನಾಥದಾಸರ ಜೀವನಚರಿತ್ರೆಗೆ ಮುಹೂರ್ತ
Team Udayavani, Jan 23, 2021, 4:09 PM IST
ಶ್ರೀ ಮಾತಾಂಬುಜಾ ಮೂವೀಸ್ ಲಾಂಛನದಲ್ಲಿ ಮಧುಸೂದನ್ ಹವಾಲ್ದಾರ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಶ್ರೀಜಗನ್ನಾಥದಾಸರು ಎಂಬ ಚಲನಚಿತ್ರ ಹಾಗೂ ಧಾರಾವಾಹಿಯ ಮುಹೂರ್ತ ಕಾರ್ಯಕ್ರಮ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ನೆರವೇರಿತು. ಮಂತ್ರಾಲಯ ಮಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಈ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಚಿತ್ರ ಹಾಗೂ ಧಾರಾವಾಹಿಯ ಚಿತ್ರೀಕರಣಕ್ಕೆ
ಅಧಿಕೃತವಾಗಿ ಚಾಲನೆ ನೀಡಿದರು.
ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಮಧುಸೂದನ್ ಪುರಂದರದಾಸರು, ಕನಕದಾಸರು, ರಾಘವೇಂದ್ರ ಶ್ರೀಗಳ ಕುರಿತಂತೆ ಚಲನಚಿತ್ರಗಳು ಈಗಾಗಲೇ ನಿರ್ಮಾಣವಾಗಿವೆ. ಆದರೆ ಮಹಾನ್ ಕೃತಿಗಳನ್ನು ರಚಿಸಿದಂಥ ಜಗನ್ನಾಥದಾಸರ ಜೀವನ ಕುರಿತಂತೆ ಯಾರೂ ಸಹ ಚಲನಚಿತ್ರ ಮಾಡಿಲ್ಲ. ಈ ಕುರಿತಂತೆ ಜೆ.ಎಂ.ಪ್ರಹ್ಲಾದ್ ಅವರ ಜೊತೆ ಕೂಲಂಕುಶವಾಗಿ ಚರ್ಚಿಸಿ ಸಂಪೂರ್ಣ
ಚಿತ್ರಕಥೆಯನ್ನು ಸಿದ್ಧಪಡಿಸಿಕೊಂಡು, ಅದಕ್ಕೆ ಸರಿಯಾದ ಪಾತ್ರಧಾರಿಗಳನ್ನು ಹುಡುಕಿ ಈಗ ಚಿತ್ರೀಕರಣಕ್ಕೆ ಹೊರಟಿದ್ದೇವೆ.
ನೀನಾಸಂ ಪ್ರತಿಭೆ ಶರತ್ ಜೋಷಿ ಅವರನ್ನು ಜಗನ್ನಾಥದಾಸರ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇವೆ, ಉಳಿದಂತೆ ಹಿರಿಯ
ಕಲಾವಿದರಾದ ರಮೇಶ್ ಭಟ್, ಸುಧಾರಾಣಿ, ಸುಚೇಂದ್ರ ಪ್ರಸಾದ್ ಸೇರಿದಂತೆ ಸಾಕಷ್ಟು ಕಲಾವಿದರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದರು.