ಸಿದ್ದು ಬಿಗಿಮುಷ್ಠಿ: ಕೆಪಿಸಿಸಿಗೆ ಮೇಜರ್‌ ಸರ್ಜರಿ

Team Udayavani, Jun 20, 2019, 3:10 AM IST

ಬೆಂಗಳೂರು: ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ರಾಜ್ಯ ಪ್ರದೇಶ ಕಾಂಗ್ರೆಸ್‌ ಪದಾಧಿಕಾರಿಗಳ ಸಮಿತಿಯನ್ನು ವಿಸರ್ಜಿಸಿ ಹೈಕಮಾಂಡ್‌ ಆದೇಶ ನೀಡಿದ್ದು, ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ. ಆ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಸುಪರ್ದಿಯಲ್ಲಿ ಹೊಸ ಪಡೆ ಕಟ್ಟಲು ಅವಕಾಶ ಕಲ್ಪಿಸಲಾಗಿದೆ.

ಡಾ.ಜಿ.ಪರಮೇಶ್ವರ್‌ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನೇಮಕಗೊಂಡಿದ್ದ ಸುಮಾರು 275ಕ್ಕೂ ಹೆಚ್ಚು ಪದಾಧಿಕಾರಿಗಳಿಗೆ ಗೇಟ್‌ ಪಾಸ್‌ ನೀಡಲಾಗಿದೆ. ಬಿ.ಎಲ್‌.ಶಂಕರ್‌, ವಿ.ಆರ್‌.ಸುದರ್ಶನ್‌, ರಾಮಲಿಂಗಾ ರೆಡ್ಡಿ, ಮೋಟಮ್ಮ, ಪ್ರೊ.ಬಿ.ಕೆ.ಚಂದ್ರಶೇಖರ್‌ ಸೇರಿದಂತೆ 20 ಕ್ಕೂ ಹೆಚ್ಚು ಉಪಾಧ್ಯಕ್ಷರು, 50 ಪ್ರಧಾನ ಕಾರ್ಯದರ್ಶಿಗಳು, 75 ಕಾರ್ಯದರ್ಶಿಗಳನ್ನು ಪಕ್ಷದ ಜವಾಬ್ದಾಯಿಂದ ಕೈ ಬಿಡಲಾಗಿದೆ.

ಇವರಲ್ಲಿ ಬಹುತೇಕರು ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌ ಅವರ ನಿಕಟವರ್ತಿಗಳು ಎಂಬ ಮಾತುಗಳು ಕೇಳಿ ಬಂದಿದ್ದವು. ಲೋಕಸಭೆ ಚುನಾವಣೆಗೂ ಮುಂಚೆ ಎಐಸಿಸಿ ನೇಮಕ ಮಾಡಿದ್ದ ಚುನಾವಣಾ ಸಮಿತಿ, ಚುನಾವಣಾ ಪ್ರಚಾರ ಸಮಿತಿ, ಕೆಪಿಸಿಸಿ ಸಮನ್ವಯ ಸಮಿತಿ, ಮಾಧ್ಯಮ ಪ್ರಚಾರ ಸಮಿತಿ, ಮಾಧ್ಯಮ ಸಂವಹನ ಸಮಿತಿ ಸೇರಿದಂತೆ ಎಲ್ಲ ಸಮಿತಿಗಳನ್ನೂ ವಿಸರ್ಜನೆ ಮಾಡಲಾಗಿದೆ.

ಲೋಕಸಭೆ ಚುನಾವಣೆಗೂ ಮೊದಲೇ ಪಕ್ಷದ ಪದಾಧಿಕಾರಿಗಳ ಬದಲಾವಣೆಗೆ ದಿನೇಶ್‌ ಗುಂಡೂರಾವ್‌ ಪ್ರಯತ್ನ ನಡೆಸಿದ್ದರು. ಆದರೆ, ಆ ಸಂದರ್ಭದಲ್ಲಿ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಈ ಪ್ರಯತ್ನವನ್ನು ತಡೆ ಹಿಡಿಯಲಾಗಿತ್ತು. ಈಗ ಚುನಾವಣೆ ಫ‌ಲಿತಾಂಶ ಬಂದ ನಂತರ ದಿನೇಶ್‌ ಗುಂಡೂರಾವ್‌ ಪದಾಧಿಕಾರಿಗಳ ಸಮಿತಿಯನ್ನು ವಿಸರ್ಜನೆ ಮಾಡಲು ಹೈಕಮಾಂಡ್‌ಗೆ ಮನವಿ ಮಾಡಿದ್ದರು. ಅವರ ಮನವಿ ಮೇರೆಗೆ ಹೈಕಮಾಂಡ್‌ ಈ ತೀರ್ಮಾನ ಕೈಗೊಂಡಿದೆ.

ಬಲಗೊಂಡ ಸಿದ್ದರಾಮಯ್ಯ ಹಿಡಿತ: ಖಾಸಗಿ ಕಾರ್ಯಕ್ರಮದ ಹೆಸರಿನಲ್ಲಿ ಮೂರು ದಿನ ದೆಹಲಿಗೆ ಭೇಟಿ ನೀಡಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ, ಪಕ್ಷದಲ್ಲಿ ಆಗಬೇಕಿರುವ ಬದಲಾವಣೆಗಳ ಬಗ್ಗೆ ಮನವರಿಕೆ ಮಾಡಿ, ಹೈಕಮಾಂಡ್‌ ಮೂಲಕ ಆದೇಶ ಹೊರಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಕೆಪಿಸಿಸಿ ಪದಾಧಿಕಾರಿಗಳ ಸಮಿತಿ ವಿಸರ್ಜನೆ ಮಾಡಲಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಚ್‌.ಕೆ. ಪಾಟೀಲ್‌, ಹೈಕಮಾಂಡ್‌ ನಾಯಕರ ಮೂಲಕ ಅಧ್ಯಕ್ಷ ಗಾದಿಗೇರಲು ಪ್ರಯತ್ನ ನಡೆಸಿದ್ದರು ಎಂದು ಹೇಳಲಾಗುತ್ತಿದೆ.

ಆದರೆ, ಸಿದ್ದರಾಮಯ್ಯ ವ್ಯವಸ್ಥಿತವಾಗಿ ದಿನೇಶ್‌ ಗುಂಡೂರಾವ್‌ ಹಾಗೂ ಈಶ್ವರ್‌ ಖಂಡ್ರೆ ಅವರನ್ನು ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಉಳಿಸಿಕೊಂಡು, ಉಳಿದ ಪದಾಧಿಕಾರಿಗಳನ್ನು ಮಾತ್ರ ವಿಸರ್ಜನೆ ಮಾಡಿಸುವ ಮೂಲಕ ಪಕ್ಷದ ಪದಾಧಿಕಾರಿಗಳ ಹುದ್ದೆಯಲ್ಲಿ ತಮ್ಮ ಆಪ್ತರಿಗೆ ಅವಕಾಶ ಕಲ್ಪಿಸಲು ವೇದಿಕೆ ಸೃಷ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹಾಗೂ ಮೈತ್ರಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ ನಾಯಕರು ಹಾಗೂ ಕಾರ್ಯಕರ್ತರಿಗೆ ಪಕ್ಷ ಸಂಘಟನೆಯಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಯಾರು, ಯಾರ ಹಿಂಬಾಲಕರು ಎನ್ನುವ ಆಧಾರದಲ್ಲಿ ಪದಾಧಿಕಾರಿಗಳ ನೇಮಕ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಸಿದ್ದರಾಮಯ್ಯ ಬಣದ ನಾಯಕರು ಮತ್ತು ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ದೊರೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಎಐಸಿಸಿ, ಕೆಪಿಸಿಸಿ ಪದಾಧಿಕಾರಿಗಳ ಸಮಿತಿಯನ್ನು ವಿಸರ್ಜಿಸಿದೆ. ಕೆಪಿಸಿಸಿ ಪುನಾರಚನೆ ಮಾಡುವ ನಿಟ್ಟಿನಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿ ನಿರ್ಧರಿಸುತ್ತೇವೆ. ಪಕ್ಷ ಸಂಘಟನೆ ಮಾಡುವವರನ್ನು ಗುರುತಿಸಿ ಪಕ್ಷದಲ್ಲಿ ಅವಕಾಶ ಕಲ್ಪಿಸಲಾಗುವುದು.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ