ಬಿಸಿಯೂಟ ತಯಾರಿಗೆ ಸಾಲ ಮಾಡುತ್ತಿರುವ ಶಿಕ್ಷಕರು!
Team Udayavani, Dec 19, 2019, 3:08 AM IST
ಯಾದಗಿರಿ: ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಮಾರ್ಚ್‌ನಿಂದ ಅನುದಾನ ಬಿಡುಗಡೆ ಆಗದಿರುವುದರಿಂದ ಶಿಕ್ಷಕರು ತರಕಾರಿ, ಸಾಂಬಾರ್ ಪದಾರ್ಥ, ಎಣ್ಣೆ ಸಾಲ ಮಾಡಿ ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ರುವ ಸರ್ಕಾರದ ಬಿಸಿಯೂಟ ಯೋಜನೆಗೆ ಭಾರತ ಆಹಾರ ನಿಗಮ 1ರಿಂದ 8ನೇ ತರಗತಿ ಮಕ್ಕಳಿಗಾಗಿ ಉಚಿತವಾಗಿ ಅಕ್ಕಿ ಮತ್ತು ಗೋದಿ ವಿತರಿಸಿದರೆ, ಕರ್ನಾಟಕ ಆಹಾರ ನಿಗಮ ಟೆಂಡರ್ ಮೂಲಕ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಅಕ್ಕಿ, ತೊಗರಿ ಬೇಳೆ, ಎಣ್ಣೆ ಸರಬರಾಜು ಮಾಡುತ್ತದೆ.
ಆಹಾರ ಧಾನ್ಯ ಹೊರತುಪಡಿಸಿ ತರಕಾರಿ, ಸಾಂಬಾರ್ ಪದಾರ್ಥ, ಎಣ್ಣೆ ಸೇರಿ ಅಡುಗೆಗೆ ಬೇಕಿರುವ ಅಗತ್ಯ ಸಾಮಗ್ರಿ ಖರೀದಿಸಲು ಆಯಾ ಶಾಲೆ ಮುಖ್ಯ ಶಿಕ್ಷಕ ಹಾಗೂ ಮುಖ್ಯ ಅಡುಗೆಯವರ ಜಂಟಿ ಖಾತೆಗೆ ಹಣ ಜಮೆ ಮಾಡುತ್ತದೆ. ಮಾರ್ಚ್ 2019 ರವ ರೆಗೆ ಹಣ ಬಿಡುಗಡೆಯಾಗಿದೆ. ಆದರೆ, ಮಾರ್ಚ್ ನಿಂದ ಈವರೆಗೂ ಖಾತೆಗಳಿಗೆ ಹಣ ಜಮೆ ಆಗಿಲ್ಲ. ಅಡುಗೆಗೆ ತಗಲುವ ವೆಚ್ಚವನ್ನು ಸರ್ಕಾರ 1ರಿಂದ 5ನೇ ತರಗತಿ ಮಕ್ಕಳಿಗೆ ತಲಾ 1.56 ರೂ., 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 2.33 ರೂ. ನಿಗದಿ ಮಾಡಿದೆ. ಅಂದಾಜಿನ ಪ್ರಕಾರ ಪ್ರತಿ ಶಾಲೆ ನಿತ್ಯ 200ರಿಂದ 500 ರೂ. ವರೆಗೆ ಖರ್ಚು ಮಾಡುತ್ತದೆ.
ಉದ್ರಿ ಲೆಕ್ಕ: ಈ ಹಿಂದೆ 2-3 ತಿಂಗಳಿಗೊಮ್ಮೆ ಅನುದಾನ ನೀಡಲಾಗುತ್ತಿತ್ತು. ಈ ಬಾರಿ ಯಾದಗಿರಿ, ಕಲಬುರಗಿ ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸುಮಾರು 9 ತಿಂಗಳಿಂದ ಅನುದಾನ ನೀಡಿಲ್ಲ. ಮುಖ್ಯ ಶಿಕ್ಷಕರನ್ನು ವಿಚಾರಿಸಿದರೆ ಮೇಲಿಂದಲೇ ಅನುದಾನ ಬಂದಿಲ್ಲ ಎನ್ನುತ್ತಿದ್ದಾರೆ. ಯಾದಗಿರಿ ಜಿಲ್ಲೆಯೊಂದರಲ್ಲೇ 1046 ಸರ್ಕಾರಿ ಶಾಲೆ ಮತ್ತು 54 ಅನುದಾನಿತ ಶಾಲೆಗಳಿವೆ. ಎನ್‌ಜಿಒಗಳ ಮೂಲಕ ಬಿಸಿಯೂಟ ಪಡೆಯುವ ಶಾಲೆ ಹೊರತುಪಡಿಸಿ ಉಳಿದ ಶಾಲೆಗಳ ಮುಖ್ಯ ಶಿಕ್ಷಕರು ತರಕಾರಿ ಇನ್ನಿತರ ಪದಾರ್ಥಗಳನ್ನು ಅಂಗಡಿಯಲ್ಲಿ ಉದ್ರಿ ತರುತ್ತಿದ್ದರೇ, ಇನ್ನೂ ಕೆಲವರು ಕೈಯಿಂದ ಹಣ ಖರ್ಚು ಮಾಡುತ್ತಿದ್ದಾರೆ.
ಬಿಸಿಯೂಟಕ್ಕೂ ಉಳ್ಳಾಗಡ್ಡಿ ಕಣ್ಣೀರು: ಈ ನಡುವೆ ಉಳ್ಳಾಗಡ್ಡಿ ಬೆಲೆ ಗಗನಕ್ಕೇರಿದೆ. ಮಾರು ಕಟ್ಟೆಯಲ್ಲಿ 100 ರೂ. ಗಡಿ ದಾಟಿರುವುದುರಿಂದ ಬಿಸಿಯೂಟಕ್ಕೂ ಉಳ್ಳಾಗಡ್ಡಿ ಕಣ್ಣೀರು ತರಿಸುತ್ತಿದೆ. ಬಹತೇಕ ಕಡೆ ಅಡುಗೆಯಲ್ಲಿ ಉಳ್ಳಾಗಡ್ಡಿ ಬಳಸುವುದನ್ನೇ ಸ್ಥಗಿತಗೊಳಿಸಲಾಗಿದೆ. ಅದರ ಬದಲಿಗೆ ಆಲೂಗಡ್ಡೆ, ಬೆಳ್ಳುಳ್ಳಿ, ಟೊಮೆಟೋ ಹೆಚ್ಚಿನ ಪ್ರಯಾಣದಲ್ಲಿ ಬಳಸಲಾಗುತ್ತಿದೆ. ದರದ ಹೆಚ್ಚಳದಿಂದಾಗಿ ಒಂದು ಕೆ.ಜಿ. ಉಳ್ಳಾಗಡ್ಡಿ ಬೆಲೆಯಲ್ಲಿ ಇತರೆ ಎರಡು ಕೆ.ಜಿ. ತರಕಾರಿ ಬರುತ್ತದೆ ಎನ್ನುತ್ತಾರೆ ಮುಖ್ಯ ಅಡುಗೆಯವರು.
ಖಜಾನೆ-2 ಮೂಲಕ ಹಣವನ್ನು ಖಾತೆಗೆ ವರ್ಗಾಯಿಸಬೇಕಿತ್ತು. ಜಿಪಂನಿಂದ ತಾಪಂಗೆ ಹಣ ವರ್ಗವಾಗಿ ಬಳಿಕ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಮೂಲಕ ಆಯಾ ಶಾಲೆ ಖಾತೆಗೆ ಜಮೆ ಮಾಡಬೇಕಿದೆ. ತಾಪಂ ಅಧಿಕಾರಿಗಳು ಬದಲಾವಣೆ ಆಗಿರುವುದರಿಂದ ಡಿಎಸ್‌ಸಿ ಸಮಸ್ಯೆಯಿಂದ ಹಣ ಜಮೆ ತಡವಾಗಿದೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಸರಿ ಹೋಗುತ್ತದೆ.
-ಡಿ.ಎಂ.ಹೊಸಮನಿ, ಯಾದಗಿರಿ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ
ಮಾರ್ಚ್‌ನಿಂದ ಖಾತೆಗೆ ಹಣ ಜಮೆ ಆಗಿಲ್ಲ. ಈ ಕುರಿತು ಎಲ್ಲಾ ಅಧಿಕಾರಿಗಳ ಗಮನದಲ್ಲೂ ಇದೆ. ಏಕೆ ತೊಂದರೆಯಾಗುತ್ತಿದೆ ಎನ್ನುವುದು ಗೊತ್ತಿಲ್ಲ. ಮಕ್ಕಳಿಗೆ ಬಿಸಿಯೂಟ ನಿಲ್ಲಿಸಲಾಗುವುದಿಲ್ಲ ಎನ್ನುವ ಕಾರಣಕ್ಕೆ ತರಕಾರಿ, ಕಿರಾಣಿ ಅಂಗಡಿಯಲ್ಲಿ ಖಾತೆ ಮಾಡಿ ಉದ್ರಿ ತರಲಾಗುತ್ತಿದೆ. ಈ ಹಿಂದೆ 2-3 ತಿಂಗಳಿ ಗೊಮ್ಮೆ ಬರುತ್ತಿದ್ದ ಅನುದಾನ ಈ ಬಾರಿ ಇನ್ನೂ ಬಂದಿಲ್ಲ.
-ಹೆಸರು ಹೇಳಲಿಚ್ಛಿಸದ ಮುಖ್ಯ ಶಿಕ್ಷಕ, ಯಾದಗಿರಿ
* ಅನೀಲ ಬಸೂದೆ