ಬಿಜೆಪಿ ವಿರುದ್ಧ ಬೀದಿಗಿಳಿದ “ಮೈತ್ರಿ’ ನಾಯಕರು

Team Udayavani, Jul 11, 2019, 3:07 AM IST

ಬೆಂಗಳೂರು: ಬಿಜೆಪಿಯ “ಆಪರೇಷನ್‌ ಕಮಲ’ ಹಾಗೂ ರಾಜಭವನವನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಬುಧವಾರ ರಾಜಭವನ ಚಲೋ ನಡೆಸಿದರು.

ಕಬ್ಬನ್‌ ಪಾರ್ಕ್‌ ಬಳಿ ಇರುವ ಮಿನ್ಸ್‌ ಸ್ಕ್ಯಾರ್‌ ಚೌಕದ ಬಳಿ ಮೈತ್ರಿ ಪಕ್ಷಗಳ ನಾಯಕರು ಜಂಟಿಯಾಗಿ ಪ್ರತಿಭಟನೆ ನಡೆಸಿದರು. ಗುಲಾಂ ನಬಿ ಆಝಾದ್‌, ಕೆ.ಸಿ.ವೇಣುಗೋಪಾಲ್‌, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್‌, ಎಚ್‌.ಕೆ. ಪಾಟೀಲ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ನೇರ ವಾಗ್ಧಾಳಿ ನಡೆಸಿದರು. ನಂತರ ಸಿದ್ದರಾಮಯ್ಯ, ವೇಣುಗೋಪಾಲ್‌, ದಿನೇಶ್‌ ಗುಂಡೂರಾವ್‌ ರಾಜಭವನಕ್ಕೆ ಮುತ್ತಿಗೆ ಹಾಕಲು ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ಹೊರಟಿದ್ದರು.

ಮಧ್ಯದಲ್ಲಿಯೇ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದರಿಂದ ರಸ್ತೆ ಮಧ್ಯದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ನಂತರ, ಪೊಲೀಸರು ಪ್ರತಿಭಟನಾ ನಿರತ ನಾಯಕರ ಮನವೊಲಿಸಿ ಕಳುಹಿಸಿಕೊಟ್ಟರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಕೆಲವು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ಬಿಟ್ಟು ಕಳುಹಿಸಿದರು.

ಸಂವಿಧಾನ ಉಳಿಸಲು ಹೋರಾಟ: ಬಿಜೆಪಿಯವರು ದೇಶದ 14 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳನ್ನು ಅತಂತ್ರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿಯೂ ಅದೇ ಕೆಲಸ ಮಾಡುತ್ತಿದ್ದಾರೆ. ಈಗ ಹತ್ತು ಜನ ಶಾಸಕರು ಹೋದರು ಎಂದು ಕೈ ಕಟ್ಟಿ ಕೂಡುವಂತಿಲ್ಲ. ಬಿಜೆಪಿಯವರ ಪ್ರಜಾಪ್ರಭುತ್ವದ ನಡೆಯ ವಿರುದ್ಧ ಉಗ್ರ ಹೋರಾಟ ಮಾಡಬೇಕು. ಜಿಲ್ಲಾಮಟ್ಟದಲ್ಲಿ ಕಾಂಗ್ರೆಸ್‌ ಹೋರಾಟ ನಡೆಸಬೇಕು. ಯುವ ಮುಖಂಡರು ಹೋರಾಟದ ನಾಯಕತ್ವ ವಹಿಸಬೇಕು ಎಂದು ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವಿಸ್‌, ಕರ್ನಾಟಕ ಬಿಜೆಪಿಯ ಏಜೆಂಟರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಲ್ಲಿ ನಮ್ಮ ಶಾಸಕರನ್ನು ಬಂಧನದಲ್ಲಿಟ್ಟಿದ್ದಾರೆ. ಅವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದರೆ, ಬಿಜೆಪಿಯವರೇಕೆ ಅವರಿಗೆ ವಿಶೇಷ ವಿಮಾನ ಮಾಡುತ್ತಾರೆ. ಅವರಿಗೆ ಫೈವ್‌ಸ್ಟಾರ್‌ ಹೋಟೆಲ… ಮಾಡಿಕೊಡುತ್ತಾರೆ. ಇದೆಲ್ಲವೂ ಸಂವಿಧಾನ ವಿರೋಧಿ ನಡೆಯಾಗಿದ್ದು, ಸಂವಿಧಾನ ಉಳಿಸಲು ನಾವು ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

ಲಜ್ಜೆಗೆಟ್ಟ ಬಿಜೆಪಿ: ಬಿಜೆಪಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಅವರ ವಿರುದ್ಧ ದೇಶಾದ್ಯಂತ ಹೋರಾಟ ಮಾಡುವ ಅನಿವಾರ್ಯತೆ ಇದೆ. ರಾಜ್ಯದಲ್ಲಿ ಬಿಜೆಪಿಯವರಿಗೆ ಜನಾದೇಶ ಇಲ್ಲದಿದ್ದರೂ ಅಧಿಕಾರ ಹಿಡಿಯಬೇಕೆಂಬ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಶಾಸಕರನ್ನು ಹಣ, ಅಧಿಕಾರದ ಆಮಿಷ ತೋರಿಸಿ ಖರೀದಿ ಮಾಡಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ರಾಜ್ಯದಲ್ಲಿ “ಆಪರೇಷನ್‌ ಕಮಲ’ ಬಿಜೆಪಿಯಿಂದ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ. ಪ್ರತಿ ಶಾಸಕರಿಗೆ 25 ಕೋಟಿ ರೂ.ನ ಆಮಿಷ ಒಡ್ಡುತ್ತಿದ್ದಾರೆ. ಪ್ರಜಾಪ್ರಭುತ್ವ ಇರುವ ಯಾವ ದೇಶದಲ್ಲಿಯೂ ಈ ಪ್ರವೃತ್ತಿ ಇಲ್ಲ. ಲಜ್ಜೆಗೆಟ್ಟ ನರೇಂದ್ರ ಮೋದಿ, ಅಮಿತ್‌ ಶಾ, ಯಡಿಯೂರಪ್ಪ ಇವರೇ ಎಲ್ಲವನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅವರಿಗೆ ಜನಾದೇಶ ಇಲ್ಲ. ಅವರು ಅಧಿಕಾರಕ್ಕೆ ಬರಬಾರದು ಎಂದು ವಾಗ್ಧಾಳಿ ನಡೆಸಿದರು.

ಒಗ್ಗಟ್ಟಿನಿಂದ ಹೋರಾಡಬೇಕು – ದೇವೇಗೌಡ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿದ್ದಾರೆ. ಮುಂಬೈನಲ್ಲಿ ತುರ್ತು ಪರಿಸ್ಥಿತಿ ಜಾರಿಯಾದಂತಾಗಿದೆ. ನನ್ನ ರಾಜಕೀಯ ಇತಿಹಾಸದಲ್ಲಿ ಇಂತಹ ಕೆಟ್ಟ ವ್ಯವಸ್ಥೆಯನ್ನು ನೋಡಿರಲಿಲ್ಲ. ಒಂದು ರಾಜ್ಯದ ಸಚಿವರಿಗೆ ಹೋಟೆಲ್‌ ಒಳಗೆ ಹೋಗಲು ಬಿಡುತ್ತಿಲ್ಲ. ಇದು ಅತ್ಯಂತ ಕೆಟ್ಟ ಪರಿಸ್ಥಿತಿ. ಇದರ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ರಾಜೀನಾಮೆ ಸಲ್ಲಿಸಿದವರಿಗೆ ಸ್ಪೀಕರ್‌ ವಿಚಾರಣೆಗೆ ಅವಕಾಶ ನೀಡಿದ್ದಾರೆ. ಆದರೆ, ಬಿಜೆಪಿಯವರು ರಾಜ್ಯಪಾಲರ ಮುಖಾಂತರ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಈಗಿನ ಬೆಳವಣಿಗೆಯ ವಿರುದ್ಧ ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಹೇಳಿದರು.

ಬಿಜೆಪಿಯವರು ಕಳೆದ ಒಂದು ವರ್ಷದಲ್ಲಿ ಐದು ಬಾರಿ ರಾಜ್ಯ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ನಂಬರ್‌ ಒನ್‌ ಸ್ಥಾನ ಪಡೆದುಕೊಂಡಿದೆ. ಶೇಕಡಾ 38ರಷ್ಟು ಮತ ಪಡೆದಿರುವ ಕಾಂಗ್ರೆಸ್‌ಗೆ ಜನ ಬೆಂಬಲ ಇದೆ. ಬಿಜೆಪಿ ಶಾಸಕರನ್ನು ಬೆದರಿಸುವ ಮೂಲಕ ರಾಜೀನಾಮೆ ಕೊಡಿಸುತ್ತಿದೆ. ಇವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆ.
-ಕೆ.ಸಿ.ವೇಣುಗೋಪಾಲ್‌, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ

ಬಿಜೆಪಿಯವರು ಕಳೆದ ಐದು ವರ್ಷದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ದೇಶದಲ್ಲಿರುವ ಕಾಂಗೆಸ್ಸೇತರ ಸರ್ಕಾರಗಳನ್ನು ಅಸ್ಥಿರಗೊಳಿಸುವ ಯತ್ನ ಮಾಡುತ್ತಿದೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಬಿಜೆಪಿಯವರ ಸಂವಿಧಾನ ವಿರೋಧಿ ನಡೆಯ ವಿರುದ್ಧ ದೇಶಾದ್ಯಂತ ಹೋರಾಟ ನಡೆಸಬೇಕಿದೆ.
-ಗುಲಾಂ ನಬಿ ಆಜಾದ್, ರಾಜ್ಯಸಭೆಯ ಪ್ರತಿಕ್ಷದ ನಾಯಕ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ