ದಿಗ್ಗಜರಿಗೆ ಸೋಲಿನ ಕಹಿ ನೀಡಿದ ಮತದಾರ

Team Udayavani, May 25, 2019, 3:10 AM IST

ಬೆಂಗಳೂರು: ಲೋಕಸಭೆಯಲ್ಲಿ ರಾಜ್ಯ ಪ್ರತಿನಿಧಿಸುತ್ತಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ ಹಾಗೂ ಎಂ.ವೀರಪ್ಪ ಮೊಯ್ಲಿಯವರಿಗೆ ಈ ಚುನಾವಣೆ ಸಾಕಷ್ಟು ಕಹಿ ನೀಡಿದೆ.

ಹಾಸನದಲ್ಲಿ ಸತತ ಗೆಲವು ಸಾಧಿಸಿಕೊಂಡು ಬರುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರಿಗೆ ಬಿಟ್ಟುಕೊಟ್ಟು, ತುಮಕೂರಿ ನಿಂದ ಸ್ಪರ್ಧಿಸಿದ್ದರು. ಹೇಮಾವತಿ ನದಿ ನೀರು ಹಂಚಿಕೆ ವಿಚಾರದಲ್ಲಿ ದೇವೇಗೌಡರ ಬಗ್ಗೆ ತುಮಕೂರು ಜನರಲ್ಲಿ ಆಕ್ರೋಶವಿತ್ತು. ಅಲ್ಲದೆ, ಮೊಮ್ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟು, ತುಮಕೂರಿಗೆ ಬಂದಿರುವುದು ಕೂಡ ಸ್ಥಳೀಯ ಮತದಾರರಿಗೆ ಇಷ್ಟವಿರಲಿಲ್ಲ.

ಬಿಜೆಪಿಯ ತಂತ್ರಗಾರಿಕೆಯೂ ಅಷ್ಟೇ ಪರಿಣಾಮಕಾರಿಯಾಗಿತ್ತು. ಲಿಂಗಾಯತ, ಒಕ್ಕಲಿಗರ ಮತಗಳು ಸಹಿತವಾಗಿ ಚಿಕ್ಕಪುಟ್ಟ ಸಮುದಾಯಗಳ ಮತವನ್ನು ಪರಿಣಾಮಕಾರಿಯಾಗಿ ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ಶ‌ಕ್ತವಾಗಿದೆ. ಹೀಗಾಗಿ, 13 ಸಾವಿರಕ್ಕೂ ಅಧಿಕ ಮತಗಳಿಂದ ಬಿಜೆಪಿಯ ಜಿ.ಎಸ್‌.ಬಸವರಾಜು ಎದುರು ದೇವೇಗೌಡರು ಸೋತಿದ್ದಾರೆ.

ರಾಜಕೀಯ ಮುತ್ಸದ್ಧಿಗೆ ಸೋಲು: ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಸುಮಾರು 50 ವರ್ಷದಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿ ಕೊಂಡಿದ್ದವರು. ಸೋಲಿಲ್ಲದ ಸರದಾರ ಎಂದೇ ಗುರುತಿಸಿಕೊಂಡಿದ್ದರು. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿ ಎದುರು ಸುಮಾರು 90 ಸಾವಿರಕ್ಕೂ ಅಧಿಕ ಮತಗಳಿಂದ ಕಲಬುರಗಿಯಲ್ಲಿ ಸೋಲುಂಡಿದ್ದಾರೆ.

ಬಿಜೆಪಿಯ ಡಾ.ಉಮೇಶ್‌ ಜಾಧವ್‌ ಅವರು 6,20,192 ಮತ ಗಳಿಸಿದ್ದರೆ, ಖರ್ಗೆಯವರು 5,24,740 ಮತ ಗಳಿಸಲು ಸಾಧ್ಯವಾಗಿದೆ. ಜಾಧವ್‌ ಅವರು ಕಾಂಗ್ರೆಸ್‌ನ ಶಾಸಕರಾಗಿದ್ದರು. ಇತ್ತೀಚೆಗೆ ಖರ್ಗೆ ವಿರುದ್ಧವೇ ತೊಡೆತಟ್ಟಿ, ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.

ಬಿಜೆಪಿ ನಾಯಕರೂ ಒಂದು ವರ್ಷದಿಂದಲೇ ಖರ್ಗೆ ಅವರನ್ನು ಸೋಲಿಸಲು ಅಗತ್ಯ ಕಾರ್ಯತಂತ್ರ ಸಿದ್ಧಪಡಿಸಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಎರಡು ತಿಂಗಳು ಅದೇ ಕ್ಷೇತ್ರದಲ್ಲಿದ್ದು ಸಂಘಟನೆಯ ಕಾರ್ಯ ಮಾಡಿದ್ದರು. ಕಾಂಗ್ರೆಸ್‌ ನಾಯಕರಾಗಿದ್ದ ಬಾಬುರಾವ್‌ ಚಿಂಚನಸೂರು, ಮಾಲಿ ಕಯ್ಯ ಗುತ್ತೇದಾರ್‌, ಡಾ.ಎ.ಬಿ.ಮಾಲಕರಡ್ಡಿ ಸೇರಿ ಪ್ರಮುಖ ನಾಯಕರು ಬಿಜೆಪಿಗೆ ಸೇರಿದ್ದು ಜಾಧವ್‌ಗೆ ವರದಾನವಾಗಿದೆ. ಅಲ್ಲದೆ, ಲಂಬಾಣಿ, ಮರಾಠ ಸೇರಿ ಎಲ್ಲ ವರ್ಗದ ಮತಗಳನ್ನು ಸೆಳೆಯುವಲ್ಲೂ ಜಾಧವ್‌ ಯಶಸ್ವಿಯಾಗಿದ್ದಾರೆ.

ಮಾಜಿ ಮುಖ್ಯಮಂತ್ರಿಗೂ ಅಚ್ಚರಿ: ಮುಖ್ಯಮಂತ್ರಿ ಯಾಗಿ, ಕೇಂದ್ರದಲ್ಲಿ ಸಚಿವರಾಗಿದ್ದ ಡಾ.ಎಂ.ವೀರಪ್ಪ ಮೊಯ್ಲಿಯವರನ್ನು ಬಿಜೆಪಿಯ ಬಿ.ಎನ್‌.ಬಚ್ಚೇಗೌಡ 1.98 ಲಕ್ಷಕ್ಕೂ ಅಧಿಕ ಮತಗಳಿಂದ ಚಿಕ್ಕಬಳ್ಳಾಪುರದಲ್ಲಿ ಸೋಲಿಸಿದ್ದಾರೆ. 2014ರ ಚುನಾವಣೆಯಲ್ಲಿ ಮೊಯ್ಲಿ ವಿರುದ್ಧವೇ ಸ್ಪರ್ಧಿಸಿದ್ದ ಬಚ್ಚೇಗೌಡ ಅವರು ಹಲವು ಕಾರಣದಿಂದಾಗಿ ಅಲ್ಪ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು.

ಅಲ್ಲದೆ, ಎಚ್‌.ಡಿ.ಕುಮಾರಸ್ವಾಮಿ ಅವರೂ ಸ್ಪರ್ಧಾ ಕಣದಲ್ಲಿದ್ದರಿಂದ ಒಕ್ಕಲಿಗ ಮತ ಸೆಳೆಯುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದರು. ಈ ಬಾರಿ ಬಚ್ಚೇಗೌಡ ಅವರಿಗೆ ಒಕ್ಕಲಿಗ ಓಟು ಸಹಿತವಾಗಿ ವಿವಿಧ ಸಮುದಾಯ ಮತ ಚೆನ್ನಾಗಿ ಬಂದಿರುವುದರಿಂದ ಮೊಯ್ಲಿ ವಿರುದ್ಧ ಸುಲಭ ಜಯ ಸಾಧಿಸಿದ್ದಾರೆ.

ಮುನಿಯಪ್ಪಗೂ ಸೋಲು: 6 ಬಾರಿ ಸಂಸದನಾಗಿದ್ದು, ಕೇಂದ್ರದ ಸಚಿವರಾಗಿದ್ದ ಕೋಲಾರದ ಕೆ.ಎಚ್‌.ಮುನಿಯಪ್ಪ ಅವರಿಗೆ ಶಾಕ್‌ ನೀಡಿದ್ದು, ಬಿಬಿಎಂಪಿ ಸದಸ್ಯ ಮುನಿಸ್ವಾಮಿ. ಮುನಿಸ್ವಾಮಿ ಅವರನ್ನು ಬಿಜೆಪಿ ವರಿಷ್ಠರು ಈ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ.

ಮುನಿಸ್ವಾಮಿ ಹೆಸರು ಘೋಷಣೆಯಾದ ನಂತರ ಕ್ಷೇತ್ರದಲ್ಲಿ ನಿರಂತರ ಪ್ರವಾಸ ಮಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನ ಕೆಲವರು ಕೂಡ ಬಿಜೆಪಿ ಅಭ್ಯರ್ಥಿಗೆ ಸಹಾಯ ಮಾಡಿದ್ದರಿಂದ ಸುಲಭ ಜಯ ಗಳಿಸಲು ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಕ್ಷೇತ್ರದಲ್ಲಿದ್ದ ಮುನಿಯಪ್ಪ ವಿರೋಧಿ ಅಲೆ ಹಾಗೂ ಮೋದಿ ಅಲೆ ಬಿಜೆಪಿಗೆ ವರದಾನವಾಗಿದೆ.

ಹಿರಿಯ ನಾಯಕರ‌ ಲೆಕ್ಕಾಚಾರ ಉಲ್ಟಾಪಲ್ಟಾ: ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಟ್ರಬಲ್‌ ಶೂಟರ್‌ ಎಂದೇ ಕರೆಸಿಕೊಂಡಿದ್ದ ಬಿ.ಕೆ.ಹರಿಪ್ರಸಾದ್‌ ಬಿಜೆಪಿಯ ಯುವ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಸುಮಾರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲುಂಡಿದ್ದಾರೆ. ಬಿಜೆಪಿಯ ಭದ್ರ ಕೋಟೆಯಾಗಿರುವ ಬೆಂಗಳೂರು ದಕ್ಷಿಣದಲ್ಲಿ ಅನಂತಕುಮಾರ್‌ ಅಕಾಲಿಕ ನಿಧನದಿಂದ ಅಭ್ಯರ್ಥಿ ಆಯ್ಕೆಯಲ್ಲಿ ಕೆಲವು ಗೊಂದಲಗಳಾಗಿತ್ತು. ಅಂತಿಮವಾಗಿ ಬಿಜೆಪಿ ವರಿಷ್ಠರು ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್‌ ನೀಡಿದ್ದರು.

ಅಷ್ಟೊತ್ತಿಗೆ ಹರಿಪ್ರಸಾದ್‌ ಒಂದು ಸುತ್ತಿನ ಪ್ರಚಾರ ಕಾರ್ಯ ಕೂಡ ಮುಗಿಸಿದ್ದರು. ಆದರೆ, ಯುವ ಮತದಾರರು ಬಿಜೆಪಿಯ ಜತೆಯಾಗಿದ್ದರಿಂದ ಹರಿಪ್ರಸಾದ್‌ ಹೀನಾಯವಾಗಿ ಸೋಲು ಅನುಭವಿಸಬೇಕಾಯಿತು. ಹಲವು ವರ್ಷಗಳಿಂದ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಹರಿಪ್ರಸಾದ್‌ ಈ ಬಾರಿ ಬೆಂಗಳೂರು ದಕ್ಷಿಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೂ, ಜಯ ಒಲಿಸಿಕೊಳ್ಳಲು ಸಾಧ್ಯವಾಗಿಲ್ಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ