ಫ‌ಲ ನೀಡಿದ ಬಿಜೆಪಿ ಕಾರ್ಯತಂತ್ರ

Team Udayavani, Jul 24, 2019, 3:07 AM IST

ಬೆಂಗಳೂರು: ಕಾನೂನು ತಜ್ಞರೊಂದಿಗೆ ಸಮಾಲೋಚನೆ, ತಾಳ್ಮೆಯ ನಡೆ, ವಿಧಾನಸಭೆಯ ಒಳಗೆ, ಹೊರಗೆ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯ ಹಾಗೂ ವಿಶ್ವಾಸ ಮತ ಯಾಚನೆ ನಿರ್ಣಯವನ್ನು ಮತಕ್ಕೆ ಹಾಕುವಂತೆ ವಿಧಾನಸಭಾಧ್ಯಕ್ಷರ ಮೇಲೆ ಒತ್ತಡ ಹೇರಿದ ಬಿಜೆಪಿಯ ಕಾರ್ಯತಂತ್ರ ನಿರೀಕ್ಷಿತ ಫ‌ಲವನ್ನೇ ನೀಡಿದಂತಿದೆ.

ಜು.12ರಿಂದ 26ರವರೆಗೆ ವಿಧಾನಮಂಡಲ ಅಧಿವೇಶನ ಪ್ರಕಟವಾಗುತ್ತಿದ್ದಂತೆ ಬಿಜೆಪಿಯು ಯೋಜಿತ ರೀತಿಯಲ್ಲೇ ಸಜ್ಜಾಗಿತ್ತು. ಆಡಳಿತ ಪಕ್ಷಗಳ 15 ಶಾಸಕರ ರಾಜೀನಾಮೆ ವಿಚಾರವನ್ನೇ ಮುಖ್ಯವಾಗಿಟ್ಟುಕೊಂಡು ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿದ ಬಿಜೆಪಿ ಶಾಸಕರು, ಇಡೀ ಅಧಿವೇಶನ ಇದೇ ವಿಚಾರದ ಬಗ್ಗೆ ಚರ್ಚೆಗೆ ಸೀಮಿತವಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಕಾಂಗ್ರೆಸ್‌, ಜೆಡಿಎಸ್‌ ಸಚಿವರು, ಶಾಸಕರು ಬಿಜೆಪಿ ನಾಯಕರ ವಿರುದ್ಧ ಹಾಗೂ ಆಪರೇಷನ್‌ ಕಮಲದ ಆರೋಪ ಹೊರಿಸಿ ಪ್ರಚೋದನೆ ನೀಡುವ ಪ್ರಯತ್ನದ ಬಗ್ಗೆ ಮೊದಲೇ ಅಂದಾಜಿಸಿದ್ದ ಬಿಜೆಪಿ ನಾಯಕರು, ಸದನದಲ್ಲಿ ಹೇಗೆ ವರ್ತಿಸಬೇಕು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರಂತರವಾಗಿ ಸೂಚನೆ ನೀಡುತ್ತಿದ್ದರು.

ಬಿಜೆಪಿ ವತಿಯಿಂದ ಜೆ.ಸಿ.ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್‌, ಎಸ್‌.ಸುರೇಶ್‌ ಕುಮಾರ್‌ ಅವರಷ್ಟೇ ಪ್ರತಿಕ್ರಿಯೆ, ಪ್ರತ್ಯುತ್ತರ ನೀಡಬೇಕು ಎಂದು ಸೂಚಿಸಲಾಗಿತ್ತು. ಯಾವುದೇ ವಿಚಾರ ಪ್ರಸ್ತಾಪವಾದರೂ ವಿಶ್ವಾಸ ಮತ ಯಾಚನೆ ನಿರ್ಣಯ ಪ್ರಸ್ತಾಪವನ್ನು ಮತಕ್ಕೆ ಹಾಕುವಂತೆ ಒತ್ತಡ ಹೇರುವ ಕಾರ್ಯತಂತ್ರ ರೂಪಿಸಿತು.

ಮುಖ್ಯಮಂತ್ರಿ ಆದಿಯಾಗಿ ಸಚಿವರು, ಶಾಸಕರು ಟೀಕೆ, ಟಿಪ್ಪಣಿ ಮಾಡಿದರೂ ಬಿಜೆಪಿ ಶಾಸಕರು ಗಾಢ ಮೌನಕ್ಕೆ ಶರಣಾಗಿದ್ದರು. ತುಟಿ ಬಿಚ್ಚಿದರೆ ಸದನದ ಕಲಾಪ ಕಾಲಹರಣವಾಗುತ್ತಿರುವ ಬಗ್ಗೆ ದೂರುವುದನ್ನು ಮುಂದುವರಿಸಿದ ಅವರು, ಸ್ಪೀಕರ್‌ ಅವರ ಭರವಸೆಗಳನ್ನೇ ನೆನಪಿಸುತ್ತಾ ಒತ್ತಡ ಹೇರುವ ತಂತ್ರವನ್ನು ಮುಂದುವರಿಸಿದರು.

ಪಕ್ಷದ 105 ಶಾಸಕರ ಪೈಕಿ ಯಾರೊಬ್ಬರು ಗೈರಾಗದಂತೆ ಎಚ್ಚರ ವಹಿಸಿದ ಬಿಜೆಪಿ, ಅಧಿವೇಶನದುದ್ದಕ್ಕೂ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಾಗುವಂತೆ ವಿಪ್‌ ಜಾರಿಗೊಳಿಸಿ ಅದನ್ನು ಅಚ್ಚುಕಟ್ಟಾಗಿ ಪಾಲಿಸಿತು. ಮುಖ್ಯಮಂತ್ರಿಗಳು ಜು.18ರಂದು ವಿಶ್ವಾಸಮತ ಯಾಚಿಸುವುದಾಗಿ ಹೇಳಿದರೂ ನಂತರವೂ ವಿಳಂಬವಾಗಿದ್ದರಿಂದ ಸೋಮವಾರ ಮಧ್ಯರಾತ್ರಿ 11.45ರವರೆಗೆ ಸದನ ಮುಂದುವರಿಯಿತು.

ಎಷ್ಟೇ ಹೊತ್ತಾದರೂ ಮುಗಿಸುವಂತೆ ಯಡಿಯೂರಪ್ಪ ಪಟ್ಟು ಹಿಡಿದರು. ಕೊನೆಗೆ ಸ್ಪೀಕರ್‌ ಮಂಗಳವಾರ ಸಂಜೆ 6 ಗಂಟೆ ಹೊತ್ತಿಗೆ ಮತಕ್ಕೆ ಹಾಕುವ ಭರವಸೆ ನೀಡಿದರು. ಅಲ್ಲಿಗೆ ಬಿಜೆಪಿಯ ಕಾರ್ಯತಂತ್ರ ಬಹುತೇಕ ಯಶಸ್ವಿಯಾದಂತಾಗಿತ್ತು. ಮಂಗಳವಾರದ ಕಲಾಪದಲ್ಲೂ ಬಿಜೆಪಿ ಶಾಸಕರು ಮೌನವಾಗಿಯೇ ಇದ್ದರು. ಮತದಾನ ಪ್ರಕ್ರಿಯೆ ನಡೆಯುವ ಹೊತ್ತಿಗೆ ಎಲ್ಲ ಶಾಸಕರು ಸದನದಲ್ಲಿರುವಂತೆ ನೋಡಿಕೊಳ್ಳುವಲ್ಲಿಯೂ ಎಚ್ಚರ ವಹಿಸಿತ್ತು.

ಬಿಜೆಪಿ ಕಚೇರಿ, ಮೊಗಸಾಲೆಯಲ್ಲಿ ಹತ್ತಾರು ಮಂದಿಯನ್ನಿರಿಸಿ ಯಾವ ಶಾಸಕರೂ ಹೊರಗುಳಿಯದಂತೆ ನೋಡಿಕೊಂಡಿತು. ಮುಖ್ಯಮಂತ್ರಿಗಳು ಮಂಡಿಸಿದ್ದ ವಿಶ್ವಾಸ ಮತ ನಿರ್ಣಯ ಬಿದ್ದು ಹೋಗುತ್ತಿದ್ದಂತೆ ಬಿಜೆಪಿ ನಾಯಕರು ಗೆಲುವಿನ ನಗೆ ಬೀರಿದರು.

ನಾಯಕರಲ್ಲಿ ಸಂತಸ: ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಮುಖ್ಯಮಂತ್ರಿಗಳ ವಿಶ್ವಾಸ ಮತ ನಿರ್ಣಯ ಬಿದ್ದು ಹೋಗಿದೆ ಎಂದು ಪ್ರಕಟಿಸುತ್ತಿದ್ದಂತೆ ಬಿಜೆಪಿ ನಾಯಕರಲ್ಲಿ ಸಂಭ್ರಮ ಮನೆ ಮಾಡಿತು. ಬಳಿಕ, ಸ್ಪೀಕರ್‌ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಬಳಿಕ ಬಿಜೆಪಿ ಶಾಸಕರೆಲ್ಲಾ ಯಡಿಯೂರಪ್ಪ ಅವರನ್ನು ಸುತ್ತುವರಿದು ಅಭಿನಂದನೆ ಸಲ್ಲಿಸಿದರು. ಬಳಿಕ ಯಡಿಯೂರಪ್ಪ ಅವರು ಗೆಲುವಿನ ಸಂಕೇತ ತೋರಿ ಕೈಮುಗಿದರು. ಸದನದಿಂದ ಹೊರಗೆ ಬರುತ್ತಿದ್ದಂತೆ ಯಡಿಯೂರಪ್ಪ ಅವರು ಸಹಾಯಕರಿಗೆ ಸಿಹಿ ತರಿಸಿ ಹಂಚುವಂತೆ ಸೂಚಿಸಿದರು.

* ಎಂ. ಕೀರ್ತಿಪ್ರಸಾದ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ