ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ

ದೇವೇಗೌಡರನ್ನು ನಾಯ್ಡು ಭೇಟಿ ಮಾಡಿದ್ದು ಗೊಂದಲ ಉಂಟು ಮಾಡುವ ಪ್ರಯತ್ನ: ಬಿಎಸ್‌ವೈ

Team Udayavani, May 23, 2019, 6:04 AM IST

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ 22 ಸ್ಥಾನ ಗೆಲ್ಲಲಿದೆ. ಅಂತೆಯೇ ಕೇಂದ್ರದಲ್ಲಿ 300ಕ್ಕೂ ಅಧಿಕ ಸೀಟು ಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸೋಲಿನ ಭಯದಿಂದ ಇವಿಎಂ ಬಗ್ಗೆ ವಿಪಕ್ಷಗಳು ಮಾತಾಡುತ್ತಿವೆ. ಇವಿಎಂ ಬಗ್ಗೆ ಆಕ್ಷೇಪ ಎತ್ತಿದ್ದರ ಬಗ್ಗೆ ಸುಪ್ರೀಂ ಕೋರ್ಟ್‌ ಸಹ ಛೀಮಾರಿ ಹಾಕಿದೆ. ಚಂದ್ರಬಾಬು ನಾಯ್ಡು, ದೇವೇಗೌಡರನ್ನು ಭೇಟಿ ಮಾಡಿದ್ದು ಕೇವಲ ಗೊಂದಲ ಉಂಟು ಮಾಡುವ ಪ್ರಯತ್ನ ಎಂದರು. ಇತ್ತೀಚೆಗೆ ನಡೆದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಚುನಾವಣೆಗಳಲ್ಲಿ ಯಾಕೆ ಇವಿಎಂ ಬಗ್ಗೆ ಆರೋಪ ಮಾಡಲಿಲ್ಲ? ಆಯೋಗ ಹತ್ತಾರು ಬಾರಿ ಪರಿಶೀಲಿಸಿ ದೋಷ ಇಲ್ಲ ಎಂದು ಖಚಿತ ಪಡಿಸಿದೆ. ಫ‌ಲಿತಾಂಶ ಬರೋವರೆಗೂ ಶಾಂತವಾಗಿ ಕಾಯದೇ ಆರೋಪ ಮಾಡುವುದು ಸರಿಯಲ್ಲ. ವಿಪಕ್ಷಗಳಿಂದ ದೇಶದ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಇದಕ್ಕೆಲ್ಲ ಜನತೆ ವಿಚಲಿತರಾಗುವ ಅಗತ್ಯ ಇಲ್ಲ. ಬಿಜೆಪಿ 300 ಸೀಟುಗಳನ್ನು ಗೆಲ್ಲುವುದರಲ್ಲಿ ಅನುಮಾನ ಇಲ್ಲ ಎಂದರು.

ಬಿಜೆಪಿಗೆ ಆತುರವಿಲ್ಲ: ಬಿಜೆಪಿ ನಾಯಕ ಗೋ.ಮಧುಸೂಧನ್‌ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿಗೆ ಯಾವುದೇ ಆತುರವಿಲ್ಲ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗುತ್ತಿದ್ದಂತೆಯೇ ರಾಜ್ಯ ದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ತಿಕ್ಕಾಟ ಹೆಚ್ಚಾಗಿ ಮೈತ್ರಿ ಸರ್ಕಾರ ಪತನವಾಗುತ್ತದೆ. ಅಲ್ಲಿಯವರೆಗೂ ಬಿಜೆಪಿ ಕಾಯುತ್ತದೆ ಎಂದರು.

ರೋಷನ್‌ ಬೇಗ್‌ ಹೇಳಿದ್ದೆಲ್ಲವೂ ಸತ್ಯ. ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದು ಅಹಂಕಾರದ ಪರಮಾವಧಿ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಂದಲೇ ಕಾಂಗ್ರೆಸ್‌ ಅಧಃಪತನವಾಗಲಿದೆ ಎಂದು ಹೇಳಿದರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ