ಕೈ ಜವಾಬ್ದಾರಿಯ ಗೊಂದಲ

Team Udayavani, Jul 7, 2019, 3:10 AM IST

ಬೆಂಗಳೂರು: ಆಪರೇಷನ್‌ ಕಮಲ ಮುಕ್ತಾಯವಾಯಿತು ಎಂದು ನಿಟ್ಟುಸಿರು ಬಿಟ್ಟಿರುವ ಕಾಂಗ್ರೆಸ್‌ ನಾಯಕರಿಗೆ ಏಕಾಏಕಿ ಹನ್ನೆರಡು ಶಾಸಕರು ರಾಜೀನಾಮೆ ನೀಡಿರುವುದು ಒಳಗೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗೆ ಯಾರು ಹೊಣೆ ಎನ್ನುವ ಜಿಜ್ಞಾಸೆಯೂ ನಾಯಕರಲ್ಲಿ ಮೂಡಿದೆ.

ಇದುವರೆಗೂ ಆಪರೇಷನ್‌ ಕಮಲದ ಹಿಂದೆ ಸಿದ್ದರಾಮಯ್ಯ ಅವರ ಕೈವಾಡವೂ ಇದೆ ಎಂಬ ಅನುಮಾನ ಈಗ ರಾಜೀನಾಮೆ ನೀಡಿದವರಲ್ಲಿ ಬಹುತೇಕರು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದರಿಂದ ಪಕ್ಷದ ಸಿದ್ದರಾಮಯ್ಯ ವಿರೋಧಿ ಬಣದಲ್ಲಿ ಮತ್ತಷ್ಟು ಸಂಶಯ ಹೆಚ್ಚಾಗಲು ಕಾರಣವಾಗಿದೆ.

ಪಕ್ಷದಲ್ಲಿ ಆಗಾಗ ಅತೃಪ್ತ ಶಾಸಕರ ರಾಜೀನಾಮೆ ಮಾತುಗಳು ಕೇಳಿ ಬಂದರೂ, ಅವರ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸುವ ಕೆಲಸ ಮಾಡದಿರುವುದು ಇಷ್ಟೆಲ್ಲ ಬೆಳವಣಿಗೆಗೆ ಕಾರಣ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಅಲ್ಲದೇ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಹೀನಾಯ ಸೋಲು ಕಂಡಾಗ ಸರ್ಕಾರ ಪತನವಾಗುತ್ತದೆ ಎಂದು ಮನಗಂಡು ಅತೃಪ್ತ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಮುಂದಾಗಿದ್ದಾಗ ಸಿದ್ದರಾಮಯ್ಯ ಅವರೇ ಸಂಪುಟ ಪುನಾರಚನೆಗೆ ವಿರೋಧ ವ್ಯಕ್ತಪಡಿಸಿ, ಕೇವಲ ಇಬ್ಬರು ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದು ಅತೃಪ್ತ ಶಾಸಕರು ಅಸಮಾಧಾನಗೊಳ್ಳಲು ಕಾರಣ ಎಂಬ ಮಾತು ಕೇಳಿ ಬರುತ್ತಿದೆ.

ಸಂಪುಟ ಪುನಾರಚನೆಯಾದ ನಂತರ 10ಕ್ಕೂ ಹೆಚ್ಚು ಶಾಸಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದಾಗಲೂ ನಾಯಕರು ಅವರ ಮನವೊಲಿಕೆಗೆ ಪ್ರಯತ್ನಿಸಿರಲಿಲ್ಲ. ಈ ನಿರ್ಲಕ್ಷ್ಯ ಧೋರಣೆ ಮತ್ತಷ್ಟು ಅಸಮಾಧಾನಗೊಳ್ಳಲು ಕಾರಣ. ಅಲ್ಲದೇ ಅತೃಪ್ತರ ಸಂಖ್ಯೆ ಹೆಚ್ಚಿಸಿಕೊಳ್ಳಲು ಪೂರಕವಾಯಿತು ಎಂಬ ಮಾತುಗಳೂ ಕೇಳಿ ಬರುತ್ತಿವೆ.

ರಮೇಶ್‌ ಜಾರಕಿಹೊಳಿ ಆರಂಭದಿಂದಲೂ ಸಿದ್ದರಾಮಯ್ಯ ಬಣದಲ್ಲಿಯೇ ಗುರುತಿಸಿಕೊಂಡಿದ್ದರೂ, ಅವರ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸದೇ ಅವರೊಬ್ಬರು ರಾಜೀನಾಮೆ ನೀಡಿದರೆ, ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂಬ ಬಹಿರಂಗ ಹೇಳಿಕೆ ನೀಡುವ ಮೂಲಕ ಪಕ್ಷದ ನಾಯಕರು ಬಂಡಾಯಗಾರರಿಗೆ ಮತ್ತಷ್ಟು ಕೆರಳುವಂತೆ ಮಾಡಿದರು.

ಆದರೆ, ಇನ್ನೊಂದೆಡೆ ಕಾಂಗ್ರೆಸ್‌ ಶಾಸಕರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಂದನೆ ನೀಡದಿರುವುದು ಪ್ರಮುಖ ಕಾರಣ. ಅದೇ ಕಾರಣಕ್ಕೆ ಸಿದ್ದರಾಮಯ್ಯ ಆಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌, ಮುನಿರತ್ನ ಕೂಡ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಅವರನ್ನು ಸಿದ್ದರಾಮಯ್ಯ ಉಳಿಸಿಕೊಳ್ಳಬಹುದಿತ್ತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಆದರೆ, ಸರ್ಕಾರದ ಭಾಗವಾಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪಕ್ಷದ ಶಾಸಕರ ಹಿತವನ್ನು ಸರ್ಕಾರದಲ್ಲಿ ಕಾಯುವಲ್ಲಿ ವಿಫ‌ಲವಾಗಿದ್ದಾರೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್‌ ನಾಯಕರು ಸರ್ಕಾರ ಉಳಿಸಿಕೊಳ್ಳುವುದು ಹೇಗೆ ಎನ್ನುವುದಕ್ಕಿಂತ ಈ ಎಲ್ಲಾ ಬೆಳವಣಿಗೆಗೆ ಯಾರು ಹೊಣೆ ಎನ್ನುವ ಬಗ್ಗೆಯೇ ಹೆಚ್ಚು ಚರ್ಚೆ ನಡೆಸುವಲ್ಲಿ ಮಗ್ನರಾಗಿದ್ದಾರೆನ್ನಲಾಗಿದೆ.

ಅಧ್ಯಕ್ಷರ ವೈಫ‌ಲ್ಯ: ಈ ನಡುವೆ ಆನಂದ್‌ ಸಿಂಗ್‌ ರಾಜೀನಾಮೆ ನೀಡಿದ ಮೇಲೆಯೂ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಉಳಿದ ಶಾಸಕರನ್ನು ಮನವೊಲಿಸುವ ಪ್ರಯತ್ನ ಮಾಡುವ ಬದಲು ವಿದೇಶ ಪ್ರವಾಸ ಕೈಗೊಂಡಿದ್ದು ಪಕ್ಷದ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

* ಶಂಕರ ಪಾಗೋಜಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ