ಅರಸೊತ್ತಿಗೆ ಕಾಲದ ಕೆರೆಗೆೆ ಕಾಯಕಲ್ಪದ ನಿರೀಕ್ಷೆ : ಅಭಿವೃದ್ಧಿಗೆ 3 ಕೋ.ರೂ.
ಸೊರಗಿದೆ ಕೆರೆ, ಅಭಿವೃದ್ಧಿಗೆ 3 ಕೋ.ರೂ. ವೆಚ್ಚದ ನೀಲ ನಕಾಶೆ ಸಿದ್ಧ
Team Udayavani, Mar 16, 2021, 6:30 AM IST
ಕಾರ್ಕಳ : ಅರಸೊತ್ತಿಗೆ ಕಾಲದಿಂದಲೂ ನೈಸರ್ಗಿಕ ಸೌಂದರ್ಯ ವೃದ್ಧಿಸಿರುವ ನಲ್ಲೂರು ನೆಲ್ಲಿಕಾರು ಹರಿಯಪ್ಪನ ಕೆರೆ ಅಭಿವೃದ್ಧಿಯ ನಿರೀಕ್ಷೆಯನ್ನು ಈ ಹೊತ್ತಿನಲ್ಲಿ ಹೆಚ್ಚಿಸಿದೆ. ಇದಕ್ಕೆ ಕಾರಣ ಈ ಕೆರೆಯನ್ನು ಪ್ರವಾಸಿ ತಾಣವಾಗಿಸುವ ಪ್ರಯತ್ನ ಗರಿಗೆದರಿದ್ದು, ಕೆರೆ ಅಭಿವೃದ್ಧಿ ನಿರೀಕ್ಷೆ ಹೆಚ್ಚಾಗಿದೆ.
ತಾಲೂಕಿನ ಪ್ರಸಿದ್ಧ ಕೆರೆಗಳ ಪೈಕಿ ಈ ಕೆರೆಯೂ ಒಂದು. ಒಂದು ಕಾಲಕ್ಕೆ ಕೆರೆಯ ಸುತ್ತಮುತ್ತಲಿನ ಪ್ರದೇಶಗಳ ಕೃಷಿ ಭೂಮಿಗೆ ನೀರುಣಿಸುವ ಪ್ರಮುಖ ಕೆರೆ ಇದಾಗಿತ್ತು. ನಲ್ಲೂರು ಗ್ರಾಮದ 100ಕ್ಕೂ ಅಧಿಕ ಕುಟುಂಬಗಳ ಕೃಷಿ ಕಾರ್ಯಕ್ಕೆ ಹರಿಯಪ್ಪನ ಕೆರೆಯೇ ಮೂಲಾಧಾರವಾಗಿತ್ತು. ಪ್ರಾಣಿ- ಪಕ್ಷಿ ಮೊದಲಾದವುಗಳಿಗೆ ಈ ಕೆರೆಯ ನೀರು ಸಂಜೀವಿನಿಯಾಗಿತ್ತು. ಅನಂತರದ ದಿನಗಳಲ್ಲಿ ಕೆರೆ ನಿರ್ವಹಣೆ ಕೊರತೆ ಎದುರಿಸುತ್ತ ಬಂದಿದೆ. ಪ್ರಸ್ತುತ ಈಗ ಕೆರೆ ನಿರ್ವಹಣೆಯಿಲ್ಲದೆ ಸಂಪೂರ್ಣ ಸೊರಗಿ ಹೋಗಿದೆ.
ಕಾರ್ಕಳದಿಂದ ಧರ್ಮಸ್ಥಳಕ್ಕೆ ತೆರಳುವ ರಸ್ತೆಯಲ್ಲಿ ಬಜಗೋಳಿಯಿಂದ ಮುಂದಕ್ಕೆ ಪಾಜೆಗುಡ್ಡೆ ಎಂಬಲ್ಲಿ ವಿಶಾಲ ಪ್ರದೇಶದಲ್ಲಿದೆ ಹರಿಯಪ್ಪ ಕೆರೆ. ಮುಖ್ಯ ರಸ್ತೆ ಬದಿಯಲ್ಲೆ ಕೆರೆಯಿದೆ. ಕೆರೆಯು ಕಾರ್ಕಳ ಪೇಟೆಯಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ರಾಜ್ಯ ಹೆದ್ದಾರಿ 37ರಲ್ಲಿ ಸುಮಾರು 5.48 ಎಕರೆ ಪ್ರದೇಶದಲ್ಲಿ ಮೀಸಲು ಅರಣ್ಯದಲ್ಲಿ ಈ ಕೆರೆಯಿದೆ. ಯಥೇತ್ಛವಾಗಿ ನೀರು ಸಂಗ್ರಹವಾಗುವ ಈ ಕೆರೆಯಲ್ಲಿ ಹೂಳು ತುಂಬಿ ಒರತೆ ಪ್ರಮಾಣ ಈಗ ಕಡಿಮೆಯಾಗಿದೆ.
ಕಡಿದಾದ ಪ್ರದೇಶದ ತಿರುವಿನಲ್ಲಿರುವ ಈ ಕೆರೆಯನ್ನು 2011ರಲ್ಲಿ ಹೂಳು ತೆಗೆದು ದುರಸ್ತಿ ಮಾಡಲಾಗಿತ್ತು. ಬಳಿಕ ಕೆರೆ ಅಭಿವೃದ್ಧಿಪಡಿಸಿಲ್ಲ. ಕೆರೆಯನ್ನು ಅಭಿವೃದ್ಧಿ ಪಡಿಸಬೇಕು. ಹೆದ್ದಾರಿ ಬದಿಯಲ್ಲಿ ಇರುವುದರಿಂದ ಪ್ರವಾಸಿ ತಾಣವಾಗಿಸಬೇಕು ಎನ್ನುವ ಬೇಡಿಕೆ ಹಿಂದಿನಿಂದಲೂ ಇತ್ತು. ಆದರೆ ಬೇಡಿಕೆಗಳಿಗೆ ಮನ್ನಣೆಯೇ ದೊರೆತಿರಲಿಲ್ಲ. ಕೆರೆ ಅಭಿವೃದ್ಧಿಗೊಂಡು ಪ್ರವಾಸಿ ಕೇಂದ್ರವಾಗಿ ಮಾರ್ಪಾಡು ಮಾಡಿದಲ್ಲಿ ಹರಿಯಪ್ಪ ಕೆರೆ ಪ್ರವಾಸಿಗರನ್ನು ತನ್ನ ಕಡೆ ಸೆಳೆಯಲಿದೆ. ಇದರಿಂದ ಪ್ರವಾಸಿಗರಿಗೂ ಸ್ಥಳೀಯರಿಗೂ ಅನುಕೂಲವಾಗಲಿದೆ.
ಕೆರೆ ಸುತ್ತ ಬೇಲಿ ಅಳವಡಿಕೆ, ಕೆರೆಯ ಹೂಳು ತೆಗೆಯುವುದು, ಹೂದೋಟ, ಸುಂದರ ಪ್ರವೇಶ ದ್ವಾರ ನಿರ್ಮಿಸುವ ಯೋಜನೆಯಲ್ಲಿ ಇದೆ. 2.5 ಕಿ.ಮೀ. ದೂರ ಪ್ರಕೃತಿ ಮಡಿಲಲ್ಲಿ ನಡಿಗೆಗೆ ಅವಕಾಶ ಕಲ್ಪಿಸುವ ಯೋಜನೆಯೂ ಪ್ಲ್ರಾನ್‌ನಲ್ಲಿ ಸೇರಿದೆ.
600 ಮೀ. ವಾಕಿಂಗ್ ಪಾಥ್, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಪ್ಯಾರಾಗೋಲಾ, ಮಕ್ಕಳಿಗೆ ಆಟದ ಮೈದಾನ, 3 ಆರ್ಟ್ ಬ್ರಿಡ್ಜ್, ಮಾಹಿತಿ ಕೇಂದ್ರ, ನೀರಿನ ಸೌಲಭ್ಯ, ಮಕ್ಕಳಿಗಾಗಿ ಆ್ಯಂಪಿ ಥಿಯೇಟರ್, ಕ್ಯಾಂಟಿನ್, ಭದ್ರತಾ ಶೆಡ್, ವೀಕ್ಷಣೆ ಗೋಪುರ, ವಾಹನ ಪಾರ್ಕಿಂಗ್ ವ್ಯವಸ್ಥೆ, ಬೋಟಿಂಗ್ ಹಾಗೂ ಜಿಮ್ ಸಲಕರಣೆ ಅಳವಡಿಸುವ ಕಾರ್ಯವೂ ಯೋಜನೆಯಲ್ಲಿ ಸೇರಿದೆ. ಉದ್ಯಾನದಲ್ಲಿ ಔಷಧ ಗಿಡ ಬೆಳೆಸುವ ಮೂಲಕ ಔಷಧ ವನ ಯೋಜನೆಯೂ ಅರಣ್ಯ ಇಲಾಖೆ ಮುಂದಿದೆ. ಕೆರೆಯ ಹೂಳು ತೆಗೆಯುವ ಮೂಲಕ ಕೆರೆಗೆ ಕಾಯಕಲ್ಪ ನೀಡುವುದು ಮತ್ತು ಈ ಪರಿಸರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕೆನ್ನುವ ಸ್ಥಳಿಯರ ಬೇಡಿಕೆಗೆ ಅನುಗುಣವಾಗಿ ಶಾಸಕರು ಕೂಡ ಅವರ ವಿಶೇಷ ಮುತುವರ್ಜಿ ವಹಿಸಿದ್ದು, ಹರಿಯಪ್ಪನ ಕೆರೆ ಅಭಿವೃದ್ಧಿ ನಿರೀಕ್ಷೆ ಮತ್ತಷ್ಟೂ ಹೆಚ್ಚಿಸಿದೆ. ಅರಣ್ಯ ಇಲಾಖೆ ಮೂಲಕ ಹರಿಯಪ್ಪನ ಕೆರೆ ಅಭಿವೃದ್ಧಿಯಾದಲ್ಲಿ ಕೆರೆ ನೀರು ಒದಗಿಸುವುದರ ಜತೆಗೆ ಕೆರೆಯಿರುವ ಪರಿಸರ ಸುಂದರ ಪ್ರವಾಸಿ ತಾಣವಾಗಿ ಪ್ರಾಕೃತಿಕ ಪ್ರಿಯರ, ಪ್ರವಾಸಿಗರ ನೆಚ್ಚಿನ ತಾಣವಾಗಿ ಹೊರಹೊಮ್ಮಲಿದೆ.
5 ವರ್ಷಗಳ ಯೋಜನೆ
ಕೆರೆ ಅಭಿವೃದ್ಧಿಗೆ ಡಿಪಿಆರ್ ಸರಕಾರಕ್ಕೆ ಸಲ್ಲಿಸಲ್ಪಟ್ಟಿದೆ. ಮಂಜೂರಾತಿ ಆಗುವ ಹಂತದಲ್ಲಿದೆ. ಈಗಾಗಲೇ ಪ್ರಥಮ ಹಂತದಲ್ಲಿ 40 ಲಕ್ಷ ರೂ. ಮಂಜೂರುಗೊಂಡಿದೆ.
5 ವರ್ಷಗಳ ಯೋಜನೆ ಇದಾಗಿದೆ.
-ಪ್ರಕಾಶ್ ಆರ್‌ಎಫ್ಒ, ಅರಣ್ಯ ಇಲಾಖೆ