ಇಂಗ್ಲೀಷ್ ಮಂಜನ ಹೊಸ ಪ್ರಪಂಚ
ಪ್ರೀಮಿಯರ್ ಪದ್ಮನಿ ಹುಡುಗನ ಚಿತ್ರ
Team Udayavani, Jun 28, 2020, 4:43 AM IST
ಜಗ್ಗೇಶ್ ಅವರೊಂದಿಗೆ “ಪ್ರೀಮಿಯರ್ ಪದ್ಮಿನಿ’ ಸಿನಿಮಾದಲ್ಲಿ ಕಾಣಿಸಿಕೊಂಡು ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದ ನಟ ಪ್ರಮೋದ್, ಭರವಸೆಯ ನಟರೆಂದೇ ಕರೆಸಿಕೊಂಡರು. ಆ ಸಿನಿಮಾ ನಂತರ ಯಾವ ಚಿತ್ರ ಒಪ್ಪಿದ್ದಾರೆ ಎಂಬ ಪ್ರಶ್ನೆಗೆ ಅವರೀಗ ಹೊಸ ಸಿನಿಮಾ ಮೂಲಕ ಸುದ್ದಿಯಾಗಿದ್ದಾರೆ. ಹೌದು, ಅವರ ಹೊಸ ಚಿತ್ರಕ್ಕೆ “ಇಂಗ್ಲೀಷ್ ಮಂಜ’ ಎಂದು ನಾಮಕರಣ ಮಾಡಲಾಗಿದೆ.
ಆರ್ಯ ಮಹೇಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದ ಆರ್ಯ ಮಹೇಶ್ “ಕೋಲಾರ’ ಎಂಬ ಸಿನಿಮಾ ಮಾಡಿದ್ದರು. ಇನ್ನು, ಗಿರೀಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ರೌಡಿಸಂ ಹಿನ್ನೆಲೆಯಲ್ಲಿ ಸಾಗುವ ಕಥೆ ಹೊಂದಿದ್ದು, ಪ್ರೀತಿ ಪ್ರೇಮ ಇತ್ಯಾದಿ ಜೊತೆಯಲ್ಲಿ ರೌಡಿಸಂ ಕೂಡ ಹೈಲೈಟ್ ಆಗಿರಲಿದೆ. ಪ್ರಮೋದ್ಗೆ ಕಾಮಿಡಿಗಿಂತ ಪಕ್ಕಾ ಆ್ಯಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇತ್ತು.
ಅದೀಗ “ಇಂಗ್ಲೀಷ್ ಮಂಜ’ ಚಿತ್ರದ ಮೂಲಕ ಈಡೇರಿದೆ. ಲವ್ ಕಮ್ ಆ್ಯಕ್ಷನ್ ಸಿನಿಮಾದ ಕಥೆ ಎದುರು ನೋಡುತ್ತಿರುವಾಗಲೇ ಈ ಕಥೆ ಸಿಕ್ಕಿದ್ದರಿಂದ ನಿರ್ದೇಶಕರೂ ಚೆನ್ನಾಗಿಯೇ ಕಥೆ ಮಾಡಿಕೊಂಡಿದ್ದರಿಂದ ಸಿನಿಮಾ ಒಪ್ಪಿದ್ದಾಗಿ ಹೇಳುತ್ತಾರೆ ಪ್ರಮೋದ್. ಅಂದಹಾಗೆ, ಇಂಗ್ಲೀಷ್ ಮಂಜ ಅನ್ನೋದೇ ಇವರ ಹೆಸರು. ಹಾಗಾಗಿ ಶೀರ್ಷಿಕೆಯ ಹೆಸರ ಚಿತ್ರದಲ್ಲಿ ನಟಿಸುತ್ತಿರುವ ಪ್ರಮೋದ್ಗೆ ಸಹಜವಾಗಿಯೇ ಇದೊಂದು ಚಾಲೆಂಜ್ ಚಿತ್ರವಂತೆ.
ಸದ್ಯಕ್ಕೆ “ಇಂಗ್ಲೀಷ್ ಮಂಜ’ ಸಿನಿಮಾ ಮಾತ್ರ ಕೈಯಲ್ಲಿದೆ. ಇದಾದ ಬಳಿಕ “ಮತ್ತೆ ಉದ್ಭವ’ ಸಿನಿಮಾ ನಿರ್ಮಾಪಕರ ಚಿತ್ರದಲ್ಲೂ ಕಾಣಿಸಿಕೊಳ್ಳುವ ಮಾತುಕತೆ ನಡೆಯುತ್ತಿದೆಯಂತೆ. ಯಶಸ್ವಿ ಬಾಲಾದಿತ್ಯ ನಿರ್ದೇಶನದ ಆ ಚಿತ್ರದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಲಿದೆ ಎಂಬುದು ಪ್ರಮೋದ್ ಮಾತು.